ಯಥಾ ರಾಜ.. ತಥಾ ಪ್ರಜಾ..!!
ಎಲೆಕ್ಷನ್ ಬಂದ್ರೆ ಸಾಕು ಎಲ್ಲೂ ರಾಜಕೀಯ ಸುದ್ದಿಗಳೇ ಉಳಿದ ಸಮಯದ ನಮಗದರ ನೆನಪೇ ಇರೋದಿಲ್ಲ.
ನೀನು ರಾಜಕೀಯ ಮಾಡ್ತಿದೀಯಯೆಂದು ನಾವು ಯಾರಿಗಾದರೂ ಹೇಳಿದರೆ ಅವರು ಸಿಡುಕುವುದನ್ನು ನೋಡಿರ್ತೇವೆ. ಏಕೆಂದರೆ ‘ರಾಜಕಾರಣ ‘ ಅಂದಾಕ್ಷಣ ; ಪೊಳ್ಳು ಆಶ್ವಾಸನೆ, ಭ್ರಷ್ಟಾಚಾರ, ಕುತಂತ್ರ ಎಸಗುವುದು ಹೀಗೆ ಹತ್ತು ಹಲವು ವಿಷಯಗಳು ನಮ್ಮ ತಲೆಗೆ ಬರುತ್ತೆ.
ಹಾಗಂತ ಇದು ರಾಜಕಾರಣಿಗಳ ತಪ್ಪು ಮಾತ್ರವೇ? ಖಂಡಿತ ಇಲ್ಲ . ಯಾವುದಾದರು ವಸ್ತು ಕೊಳ್ಳುವಾಗ ನಾವು ಕೊಡುವ ಗಮನವನ್ನು ನಮ್ಮನ್ನಾಳುವ ರಾಜಕಾರಣಿಗಳನ್ನು ಆಯ್ಕೆ ಮಾಡುವಾಗ ಕೊಡಲು ವಿಫಲರಾಗ್ತೇವೆಯೆಂದು ನೆನೆದರೆ ವಿಪರ್ಯಾಸ ಎನಿಸುತ್ತದೆ. ಯಾವುದೋ ತಾತ್ಕಾಲಿಕ ಆಸೆಗಳಿಗೆ, ಆಮಿಷಗಳಿಗೆ ನಮ್ಮ ಹಕ್ಕನ್ನು ಮಾರಿಕೊಳ್ಳದೆ ಇದ್ದಿದ್ದೇ ಆದಲ್ಲಿ, ಸರ್ಕಾರ ಸುಧಾರಣೆಯಾದಿತು. ಯಾರನ್ನಂಬೋದು ಮಾರ್ರೆ; ಯಾರ್ ಗೆದ್ರೂ ಅಷ್ಟೇ; ಯಾರ್ ಸೋತ್ರು ಅಷ್ಟೇ ಎಂಬ ಉದಾಸೀನಾ ನಮ್ಮಲ್ಲಿ ಬಹುಜನರಿಗೆ ಇರ್ಬಹುದು. ಅದಕ್ಕೆ ಕಾರಣ ಅವರ ಭರವಸೆಯನ್ನು ರಾಜಕಾರಣಿಗಳು ಪೋಲು ಮಾಡಿದ್ದರಿಂದಿರಬಹುದು. ಆದರೇ ನಾವು ಇಷ್ಟೆ ಬೈದು, ತೆಗಳಿ, ಅವರ ತಪ್ಪಿಗೆ ಟೀಕೆ ಹಾಕಲು ನಾವು ಮತ ಚಲಾಯಿಸಿದ್ದರೆ ಮಾತ್ರ ಅದರ ಅರ್ಹತೆ ನಮಗಿರುತ್ತೆ.
ಹಣ, ಜತಿ, ಧರ್ಮ, ಆಮಿಷಗಳಿಗೆ ನಮ್ಮ ಜವಾಬ್ದಾರಿಯನ್ನು ಮಾರಾಟಕ್ಕಿಟ್ಟರೆ ಅಥವಾ ಉದಾಸೀನ ಮಾಡಿದರೆ ಮುಂಬರುವ ಪ್ರತಿ ಕೆಡುಕಲ್ಲೂ ನಮ್ಮ ಪಾಲಿರಬಹುದು.
ನಮ್ಮ ಆಕಾಂಕ್ಷೆಗಳನ್ನು ಬದಲಾಯಿಸಿಕೊಂಡು ನಮ್ಮ ಜವಾಬ್ದಾರಿಯನ್ನು ನಿಭಾಯಿಸಿ ನೋಡೋಣ, ಯಾರಿಗೊತ್ತು ; ಯಥಾ ರಾಜ ; ತಥಾ ಪ್ರಜ ಎನ್ನುವ ಕಾಲ ಹೋಗಿ, ಯಥಾ ಪ್ರಜ ; ತಥಾ ರಾಜ ಎನ್ನುವ ಕಾಲ ಬಂದರೂ ಬರಬಹುದು…
- ಸಿ. ಆರ್. ಶಿಲ್ಪ