ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಬಿವೈಆರ್ ನಾಮಪತ್ರ ಸಲ್ಲಿಕೆ: ಹರಿದು ಬಂದ ಜನಸಾಗರ…

Share Below Link

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೂಲೆ ಮೂಲೆಗಳಿಂದ ಬಂದಿದ್ದ ಅಪಾರ ಜನಸಾಗರದ ನಡುವೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಇಂದು ಎರಡು ಸೆಟ್‌ಗಳಲ್ಲಿ ನಾಮಪತ್ರ ಸಲ್ಲಿಸಿದರು.
ನಗರದ ರಾಘವೇಂದ್ರಸ್ವಾಮಿ ಮಠಕ್ಕೆ ಭೇಟಿ ವಿಶೇಷ ಪೂಜೆ ನೆರವೇರಿಸಿದ ಬಿವೈಆರ್, ನಂತರ ರಾಮಣ್ಣ ಶ್ರೇಷ್ಠಿ ಪಾರ್ಕ್‌ಗೆ ತೆರಳಿ ಗಣಪತಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಆರಂಭವಾದ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆಗೆ ಜಾನಪದ ಕಲಾತಂಡಗಳು ಮೆರುಗು ನೀಡಿದವು.
ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಉಪಸ್ಥಿತರಿದ್ದ ಜೆಡಿಎಸ್- ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಪ್ರಧಾನಿ ಮೋದಿ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಕುಮಾರಸ್ವಾಮಿ ಹಾಗೂ ಅಭ್ಯರ್ಥಿ ರಾಘವೇಂದ್ರ ಅವರ ಪರ ಘೋಷಣೆ ಕೂಗಿದರು.


ಮೆರವಣಿಗೆಯಲ್ಲಿ ಎಂದಿನಂತೆ ಕೇಸರಿ ಧ್ವಜಗಳು ರಾರಾಜಿಸುತ್ತಿದ್ದವು. ಬಿಜೆಪಿ ಜೊತೆಗೆ ಜೆಡಿಎಸ್ ಬಾವುಟಗಳು ಹಾರುತ್ತಿದ್ದದ್ದು ಇಂದಿನ ವಿಶೇಷ ಆಕರ್ಷಣೆಯಾಗಿತ್ತು.
ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು ಸೇರಿದಂತೆ ಎಲ್ಲಾ ತಾಲೂಕು, ಹೋಬಳಿ, ಗ್ರಾಮ ಮಟ್ಟದಿಂದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇಡೀ ಕ್ಷೇತ್ರದಿಂದ ನೂರಾರು ಬಸ್‌ಗಳಲ್ಲಿ ಕಾರ್ಯಕರ್ತತು ಆಗಮಿಸಿದ್ದರು. ಬಿಸಿಲಿನ ಝಳ ಇದ್ದರೂ ಅದನ್ನು ಲೆಕ್ಕಿಸದೇ ಜನ ಮೆರವಣಿಗೆಯಲ್ಲಿ ಸಾಗಿ ಬಂದರು. ನೆರಳಿರುವ ಕಡೆ ಅನೇಕರು ಆಶ್ರಯ ಪಡೆದರು. ಅಲ್ಲಲ್ಲಿ ಮಜ್ಜಿಗೆ, ನೀರಿನ ವ್ಯವಸ್ಥೆ ಮಾಡಲಾಗಿತ್ತು. ಯುವಕರೇ ಅಧಿಕ ಸಂಖ್ಯೆಯಲ್ಲಿ ಸೇರಿದ್ದು ಜಯಘೋಷಗಳು ಮುಗಿಲು ಮುಟ್ಟಿದ್ದವು.
ಗೋಪಿ ಸರ್ಕಲ್ ಬಳಿ ಇರುವ ಕಸ್ತೂರಾಬಾ ಕಾಲೇಜ್ ಮುಂಭಾಗ ದಲ್ಲಿ ಶಾಮಿಯಾನದ ಮೂಲಕ ನೆರಳಿನ ವ್ಯವಸ್ಥೆ ಮಾಡಲಾಗಿತ್ತು ಸಭೆ ಕೂಡ ನಡೆಸಲಾಯಿತು. ಮೆರವಣಿಗೆ ಯಲ್ಲಿ ಭಾರಿ ಸಂಖ್ಯೆಯ ಜನ ಸೇರಿದ್ದರಿಂದ ಸಂಚಾರಕ್ಕೆ ಅಡಚಣೆಯಾಗಿತ್ತು. ಸುಮಾರು ೩೦ರಿಂದ ೪೦ ಸಾವಿರ ಜನ ಸೇರಿದ್ದರೆಂದು ಅಂದಾಜು ಮಾಡಲಾಗಿದೆ.
ಮೆರವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಹೆಚ್.ಡಿ. ಕುಮಾರಸ್ವಾಮಿ, ಬಸವರಾಜ್ ಬೊಮ್ಮಾಯಿ, ಸಂಸದ ಬಿ.ವೈ. ರಾಘವೇಂದ್ರ, ಜೆಡಿಎಸ್ ಶಾಸಕಿ ಶಾರದಾ ಪೂರ್ಯಾನಾಯ್ಕ್, ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ, ಸಿ.ಟಿ. ರವಿ, ಹರತಾಳು ಹಾಲಪ್ಪ, ಶಾಸಕರಾದ ಆರಗ ಜನೇಂದ್ರ, ಎಸ್.ಎನ್. ಚನ್ನಬಸಪ್ಪ, ಎಸ್. ರುದ್ರೇಗೌಡ, ಬೈರತಿ ಬಸವರಾಜ್, ಡಿ.ಎಸ್. ಅರುಣ್, ಭಾರತಿ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳ್ ಗೋಪಾಲ್, ಜಿಲ್ಲಾ ಕಾರ್‍ಯಾಧ್ಯಕ್ಷ ದಾದಾಪೀರ್, ಯುವ ಘಟಕದ ಕಾರ್‍ಯಾಧ್ಯಕ್ಷ ಎಸ್.ಎಲ್. ನಿಖಿಲ್, ಪ್ರಮುಖರಾದ ಎಸ್. ದತ್ತಾತ್ರಿ, ಡಾ| ಧನಂಜಯ ಸರ್ಜಿ ಇನ್ನಿತರರಿದ್ದರು.
ನಮ್ಮ ಕುಟುಂಬ ರಾಘವೇಂದ್ರಸ್ವಾಮಿಯ ಭಕ್ತರು, ಅದಕ್ಕಾಗಿ ನನಗೆ ರಾಘವೇಂದ್ರ ಎಂದು ಹೆಸರಿಟ್ಟಿದ್ದಾರೆ. ಆದ್ದರಿಂದ ನಾನು ಗುರುವಾರದಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ಜಿಲ್ಲೆಯ ಎಲ್ಲ ಜನತೆಯ ಆಶೀರ್ವಾದ ಬೇಡುತ್ತಿದ್ದೇನೆ ಎಂದು ಬಿ.ವೈ. ರಾಘವೇಂದ್ರ ಮಾಧ್ಯಮಗಳಿಗೆ ತಿಳಿಸಿದರು.
ಜಿಲ್ಲಾಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸಂಸದ ರಾಘವೇಂದ್ರ ಅವರೊಂದಿಗೆ ಮಾಜಿ ಶಾಸಕ ಅಶೋಕ್ ನಾಯ್ಕ್, ಎಂಎಲ್‌ಸಿ ಎಸ್. ರುದ್ರೇಗೌಡ, ಶಾಸಕ ಆರಗ ಜನೇಂದ್ರ ಇನ್ನಿತರರಿದ್ದರು.
ಎರಡನೇ ಸೆಟ್ ನಾಮಪತ್ರ ಸಲ್ಲಿಸುವಾಗ ರಾಘವೇಂದ್ರ ದಂಪತಿಯೊಂದಿಗೆ ಜೆಡಿಎಸ್ ಶಾಸಕಿ ಶಾರದಾ ಪೂರ್ಯಾ ನಾಯ್ಕ್, ಮಾಜಿ ಎಂಎಲ್‌ಸಿ ಭಾನುಪ್ರಕಾಶ್, ಮಾಜಿ ಸಚಿವ ಹರತಾಳು ಹಾಲಪ್ಪ ಇದ್ದರು.