ಸಮಸ್ತ ಲೋಕಪೂಜಾ ಭಾಜನ ಶ್ರೀರಾಮ ಜನ್ಮದಿನ…
(ಹೊಸ ನಾವಿಕ)
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ |
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ||
ಎಂಬ ಸಾಲುಗಳ ಮೂಲಕ ಭಕ್ತರ ಜೀವನದಲ್ಲಿನ ದುಃಖಗಳನ್ನು ಕೊನೆಗೊಳಿಸಿ, ಸಂತೋಷವನ್ನು ಕರುಣಿಸಲೆಂದು ಪ್ರಾರ್ಥಿಸೋಣ. ನಮ್ಮ ಬಾಳಿಗೆ ಆ ಭಗವಂತ ಶ್ರೀರಾಮನು ಸದಾ ಆಯುರಾರೋಗ್ಯ ವನ್ನು, ಸಿರಿ ಸಂಪದವನ್ನು ಕರುಣಿಸಲಿ ಎಂದು ಬೇಡಿಕೊಳ್ಳೋಣ. ಲೋಕದ ಸಮಸ್ತ ಜನರಿಗೂ ಶ್ರೀರಾಮ ನವಮಿಯ ಶುಭಾಶಯಗಳನ್ನು ತಿಳಿಸೋಣ.
ಬೃಹತ್ ಭವ್ಯ ಭಾರತದ ಮಹಾಕಾವ್ಯ ರಾಮಾಯಣವು ಸರ್ವಕಾಲಕ್ಕೂ ಪೂಜನೀಯ ಹಾಗೂ ಮನನೀಯ ವೆನಿಸಿದೆ. ಲೋಕಾಪೂಜ ಭಾಜನನಾದ ಶ್ರೀರಾಮನ ಜೀವನ ವೃತ್ತಾಂತವನ್ನು ತಿಳಿಸುವ ಕವಿಗಳ ಕವಿ ಮಹಾಕವಿ ವಿರಚಿತ ಮಹಾಕಾವ್ಯ ರಾಮಾಯಣವು ಹಿಂದೂ ಧರ್ಮದ ಸರ್ವಶ್ರೇಷ್ಠ ಧರ್ಮಗ್ರಂಥವಾಗಿದೆ.
ಭಾರತ ದೇಶ ವಿಭಿನ್ನ , ವಿಶಿಷ್ಠ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ನೆಲೆವೀಡಾಗಿದೆ. ಇಲ್ಲಿಯ ಆಚಾರ- ವಿಚಾರ, ರೀತಿ – ರಿವಾಜು ಸಂಸ್ಕೃತಿ – ಸಂಪ್ರದಾಯ, ನೀತಿ – ನಿಯಮಗಳು ನಿಜಕ್ಕೂ ವಿಶೇಷವೇ ಆಗಿವೆ. ಈ ನಿಟ್ಟಿನಲ್ಲಿ ಭಾರತದ ಹಬ್ಬ ಹರಿದಿನಗಳು , ಜತ್ರೆ ಉತ್ಸವಗಳು ಬಹಳಷ್ಟು ವಿಶೇಷತೆ ಪಡೆದಿದ್ದು, ಶ್ರೀರಾಮ ನವಮಿ ಅಂತಹ ಉತ್ಸವಗಳಲ್ಲಿ ಒಂದಾಗಿದ್ದು ಭಾರತ ದೇಶಾದ್ಯಂತ ಭಕ್ತಿಯಿಂದ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.
ಯುಗಾದಿಯಿಂದ ಎಂಟು ದಿನಗಳ ನಂತರ ಬರುವ ಒಂಬತ್ತನೇ ದಿನವೇ ಚೈತ್ರ ಶುಕ್ಲ ನವಮಿ ಆಗಿದ್ದು , ಭಗವಾನ್ ಮಹಾವಿಷ್ಣುವಿನ ಅತ್ಯಂತ ಜನಪ್ರಿಯವೂ ಬಹಳ ಗೌರವಾನ್ವಿತವೂ ಆದ ಅವತಾರ, ರಾಜ ದಶರಥ ಮತ್ತು ಮಾತೆ ಕೌಸಲ್ಯತನಯ ಶ್ರೀ ರಾಮನ ಜನ್ಮದಿನವಾಗಿದೆ. ಅಂದು ಬೇಸಿಗೆಯ ಧಗೆ ಬಹಳಷ್ಟು ಇರುವುರಿಂದ ತಂಪಾದ ಆಹಾರ ಸೇವನೆಗೆ ಹೆಚ್ಚು ಗಮನಹರಿಸಲಾಗುತ್ತದೆ. ಆ ದಿನ ಜನ ಒಬ್ಬರನ್ನೊಬ್ಬರು ತಮ್ಮ ಮನೆಗಳಿಗೆ ಕರೆದು ಪಾನಕ, ನೀರು, ಮಜ್ಜಿಗೆ, ಕೋಸಂಬರಿಗಳನ್ನು ನೀಡಿ ಆತಿಥ್ಯ ಮಾಡುತ್ತಾರೆ. ಅವು ದೇಹಕ್ಕೂ ಮನಸ್ಸಿಗೂ ತಂಪುಂಟು ಮಾಡಿ, ಬದುಕಿನಲ್ಲಿ ಶಾಂತಿ ನೆಮ್ಮದಿಯನ್ನು ನೀಡುತ್ತದೆ ಎಂಬುದು ಜನರ ನಂಬಿಕೆ ಮತ್ತು ಅಭಿಪ್ರಾಯವಾಗಿದೆ. ಜನರನ್ನು ಪರಸ್ಪರ ಹತ್ತಿರ ತರುವ ಮೂಲಕ ಶ್ರೀ ರಾಮ ನವಮಿಯಂದು ಬಹಳಷ್ಟು ಊರುಗಳಲ್ಲಿ ರಾಮೋತ್ಸವ ನಡೆಯುತ್ತದೆ. ರಾಮಾಯಣ ಪಾರಾಯಣ, ಸಂಗೀತ , ಕೀರ್ತನೆಗಳು, ಹರಿಕಥೆ, ಶ್ರೀರಾಮ ಭಜನೆ ಮೆದಲಾದ ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯುತ್ತವೆ.
ಧರ್ಮ ಶಾಸ್ತ್ರಗಳ ಪ್ರಕಾರ, ಅಯೋಧ್ಯಾಪುರದ ಕೋಸಲ ನಗರದ ಚಕ್ರವರ್ತಿ ದಶರಥನಿಗೆ ಕೌಸಲ್ಯಾ, ಕೈಕೇಯೀ ಹಾಗೂ ಸುಮಿತ್ರೆ ಮೂರು ಜನ ಪತ್ನಿಯರಿದ್ದರು. ಆದರೆ ಯಾರಿಗೂ ಪುತ್ರ ಸಂತಾನವಾಗಿರಲಿಲ್ಲ. ನಂತರ ದಶರಥನು ಋಷಿಮುನಿಗಳ ಸಲಹೆಯಂತೆ ಮಹರ್ಷಿ ವಸಿಷ್ಠರ ಮಾರ್ಗದರ್ಶನದಲ್ಲಿ ಪುತ್ರಕಾಮೇಷ್ಠಿ ಯಾಗವನ್ನು ಮಾಡಿಸಿದನು. ಈ ಯಜ್ಞದಿಂದ ಸಂತುಷ್ಟನಾದ ಪ್ರಜಪತಿಯು ದಶರಥನಿಗೆ ದಿವ್ಯಪಾಯಸವನ್ನು ನೀಡಿದನು. ಈ ದಿವ್ಯ ಪಾಯಸವನ್ನು ದಶರಥನು ತನ್ನ ಮೂವರು ಪತ್ನಿಯರಿಗೂ ಹಂಚಿ ಸೇವಿಸಲು ತಿಳಿಸುತ್ತಾನೆ. ಇದರಂತೆ ಚೈತ್ರ ಮಾಸದ ಶುಕ್ಲಪಕ್ಷದ ನವಮಿ ತಿಥಿಯಂದು ಮಧ್ಯಾಹ್ನ ಪುನರ್ವಸು ನಕ್ಷತ್ರದಲ್ಲಿ ಕೌಸಲ್ಯೆಗೆ ರಾಮನೂ, ಪುಷ್ಯನಕ್ಷತ್ರದ ದಶಮಿಯಂದು ಸೂರ್ಯೋದಯಕ್ಕೆ ಮುನ್ನ ಕೈಕೇಯಿಗೆ ಭರತನೂ, ಅದೇ ದಿನ ಆಶ್ಲೇಷಾ ನಕ್ಷತ್ರದಲ್ಲಿ ಮಧ್ಯಾಹ್ನ ಲಕ್ಷ್ಮಣ, ಶತ್ರುಘ್ನರೂ ಜನಿಸುತ್ತಾರೆ. ಹೀಗೆ ರಾಮನು ಜನಿಸಿದ ನವಮಿಯಂದು ರಾಮನವಮಿಯನ್ನಾಗಿ ಆಚರಿಸುತ್ತಾರೆ.
ನೀತಿವಂತನೂ, ಶೂರನೂ ‘ ಧರ್ಮವನ್ನು ತಿಳಿದವನು, ಮಾಡಿದ ಉಪಕಾರವನ್ನು ನೆನಪಿನಲ್ಲಿಟ್ಟು ಕೊಳ್ಳುವವನು, ಸತ್ಯವನ್ನು ನುಡಿಯುವವನು, ಮನೋನಿಶ್ಚಯಕ್ಕೆ ಒಳಗಾದವನು, ಒಳ್ಳೆಯ ನಡತೆಯುಳ್ಳವನು, ಎಲ್ಲ ಜೀವಿಗಳ ಹಿತವನ್ನು ಬಯಸುವವನು, ಎಲ್ಲ ವಿದ್ಯೆಗಳನ್ನು ಬಲ್ಲವನು, ಸಮರ್ಥನೂ, ನೋಡಲು ಕಣ್ಣುಗಳಿಗೆ ಸದಾ ಸುಖಕರನು, ಆತ್ಮವಂತನೂ, ಧೈರ್ಯಸ್ಥನೂ, ಕೋಪವನ್ನು ಗೆದ್ದವನು, ಕಾಂತಿಯುಳ್ಳವನು, ಅಸೂಯೆ ಇಲ್ಲದವನು, ಯಾರ ಕೋಪಕ್ಕೆ ದೇವತೆಗಳೂ ಹೆದರುವರೋ ಅಂಥವನು ಇಕ್ಷಾಕು ಕುಲ ಸಂಜತ ಸುಪುತ್ರನೂ ಆದ ಶ್ರೀರಾಮನು ತ್ರೇತಾಯುಗಾಮತಾರಿ.
ರಾಮನಿಗೆ ಹದಿಹರೆಯ ಬಂದಾಗ ಮಹರ್ಷಿ ವಿಶ್ವಾಮಿತ್ರರು ಬಂದು ಅವನನ್ನೂ, ಲಕ್ಷ್ಮಣನನ್ನೂ ತಮ್ಮೊಟ್ಟಿಗೆ ಕಳಿಸಿಕೊಡ ಬೇಕೆಂದು ರಾಜ ದಶರಥನನ್ನು ಕೇಳಿದರು. ರಾಮ, ಲಕ್ಷ್ಮಣ ಇಬ್ಬರೂ ಅಣ್ಣ ತಮ್ಮಂದಿರೂ ಮಹರ್ಷಿ ವಿಶ್ವಾಮಿತ್ರರಿಂದ ವಿದ್ಯೆಯನ್ನು ಕಲಿತು, ದಿವ್ಯಾಸ್ತ್ರಗಳನ್ನು ಸಂಪಾದಿಸಿದರು. ಮಹರ್ಷಿ ವಿಶ್ವಾಮಿತ್ರರ ತಪಸ್ಸಿಗೆ ಅಡ್ಡಿಯುಂಟುಮಾಡುತ್ತಿದ್ದ ರಕ್ಕಸರನ್ನು ರಾಮನು ಕೊಂದನು. ಆಮೇಲೆ ಗುರು ವಿಶ್ವಾಮಿತ್ರರೊಂದಿಗೆ ಮಿಥಿಲೆಗೆ ಹೋದರು. ಅಲ್ಲಿ ಶಿವಧನುಸ್ಸನ್ನು ಮುರಿದು ರಾಮನು ಸೀತೆಯನ್ನು ವಿವಾಹವಾದನು.
ರಾಜ ದಶರಥನು ರಾಮನಿಗೆ ರಾಜ್ಯ ಪಟ್ಟಾಭಿಷೇಕ ಮಾಡಲು ಏರ್ಪಾಟು ಮಾಡಿದನು. ಆದರೆ ತಾನೇ ಕೈಕೇಯಿಗೆ ವಚನಬದ್ದನಾಗಿ ದಶರಥನು ಸಂಕಟಪಡಬೇಕಾಯಿತು. ರಾಮನ ಪಟ್ಟಾಭಿಷೇಕದ ಸಂದರ್ಭದಲ್ಲಿ ಮಂಥರೆಯ ದುರ್ಭೋದನೆಗೆ ಒಳಗಾದ ರಾಣಿ ಕೈಕೇಯಿಯು ದಶರಥನಲ್ಲಿ ಕೇಳಿದ ಎರಡು ವರ ಅಂದರೆ ಒಂದು, ರಾಮನು ಹದಿನಾಲ್ಕು ವರ್ಷಗಳ ವನವಾಸ ಹೋಗಬೇಕು. ಮತ್ತೊಂದು ತನ್ನ ಪುತ್ರ ಭರತನಿಗೆ ಪಟ್ಟಾಭಿಷೇಕವಾಗಬೇಕು ಎಂದು ಕೈಕೇಯಿ ಹಠ ಹಿಡಿದಳು. ಸಿಂಹಾಸನದ ಮೇಲೆ ಕೂರಬೇಕಾಗಿದ್ದ ರಾಮನು ನಾರುಬಟ್ಟೆಯನ್ನು ಉಟ್ಟು ತಮ್ಮ ಲಕ್ಷ್ಮಣ ಮತ್ತು ಪತ್ನಿ ಸೀತೆಯರೊಂದಿಗೆ ನಗುನಗುತ್ತಾ ಕಾಡಿಗೆ ತೆರಳಿದನು. ಪಿತೃ ವಾಕ್ಯ ಪರಿಪಾಲನೆಯೇ ತನಗೆ ಪರಮಧರ್ಮವೆಂದು ಆ ಧರ್ಮಮೂರ್ತಿ ನಡೆದನು. ಕಾಡಿನಲ್ಲಿ ಲಕ್ಷ್ಮಣನಿಂದ ಅವಮಾನಿತೆಯಾದ ಶೂರ್ಪನಖಿಯು ಲಂಕೆಯ ಅರಸನಾದ ತನ್ನ ಅಣ್ಣ ರಾವಣನನ್ನು ಪ್ರಚೋದಿಸಿ ಸೀತೆಯನ್ನು ಅಪಹರಿಸಿ ತರಲು ಪ್ರೇರೇಪಿಸಿದಳು. ಚಿನ್ನದ ಜಿಂಕೆಯ ನೆಪದಲ್ಲಿ ಸೀತಾಪಹರಣ ನಡೆದೇ ಹೋಯಿತು. ಪತ್ನಿವಿಯೋಗದಿಂದ ದುಃಖಿತನಾದ ರಾಮನು ಅವಳನ್ನು ಹುಡುಕುತ್ತಾ ಋಷ್ಯಮೂಕ ಪರ್ವತಕ್ಕೆ ಬಂದನು. ಅಲ್ಲಿ ಅವನಿಗೆ ಸುಗ್ರೀವ ಮತ್ತು ಹನುಮಂತರ ಪರಿಚಯವಾಯಿತು. ಅವರೊಂದಿಗೆ ಗಾಢ ಸ್ನೇಹ ಬೆಳೆಯಿತು. ರಾಮನು ವಾಲಿಯನ್ನು ವಧಿಸಿ ಸುಗ್ರೀವನಿಗೆ ನ್ಯಾಯ ದೊರಕಿಸಿಕೊಟ್ಟನು. ರಾಜ ಸುಗ್ರೀವನ ಆದೇಶದಂತೆ ಕಪಿವೀರರು ಅಂಗದ, ಆಂಜನೇಯ, ಜಂಬವಂತ ಮೊದಲಾದ ಧೀರರ ನೇತೃತ್ವದಲ್ಲಿ ಸೀತಾಮಾತೆಯನ್ನು ಹುಡುಕಲು ಹೋದರು. ಕೊನೆಗೆ ದಕ್ಷಿಣ ದಿಕ್ಕಿಗೆ ಹೋಗಿದ್ದ ಹುನುಮಂತನು ಸಾಗರವನ್ನು ಹಾರಿ ಲಂಕೆಗೆ ಹೋಗಿ ಸೀತಾ ದೇವಿಯನ್ನು ಕಂಡನು. ಅವಳಿಗೆ ಸಮಾಧಾನ ಉಂಟು ಮಾಡಿ ಚೂಡಾಮಣಿಯನ್ನು ಕುರುಹಾಗಿ ಅವಳಿಂದ ತಂದನು. ಲಂಕೆಗೆ ಬೆಂಕಿಯಿಟ್ಟು ಅನೇಕ ರಕ್ಕಸ ವೀರರನ್ನು ಸಂಹರಿಸಿ ರಾವಣನೆದೆಯಲ್ಲಿ ತಲ್ಲಣ ಉಂಟುಮಾಡಿ ಆಂಜನೇಯನು ಹಿಂದಿರುಗಿದನು.
ರಾಮ, ಲಕ್ಷ್ಮಣ ಮತ್ತು ಸುಗ್ರೀವರ ಮುಂದಾಳತ್ವದಲ್ಲಿ ಸಮಸ್ತ ಕಪಿವೀರರೂ ಯುದ್ಧಕ್ಕೆ ಹೊರಟರು. ಸಮುದ್ರಕ್ಕೆ ಸೇತುವೆ ಕಟ್ಟಿದರು. ಎರಡೂ ಪಕ್ಷಗಳಿಗೆ ಘನ ಘೋರ ಯುದ್ಧವಾಯಿತು.
ಗಗನಂ ಗಗನಾಕಾರಂ ಸಾಗರಂ ಸಾಗ ರೋಪಮಂ| ರಾಮರಾವಣಯೋರ್ಯುದ್ಧಂ ರಾಮರಾವಣಯೋರಿವ ಎನ್ನುತ್ತಾರೆ ವಾಲ್ಮೀಕಿ.
ಹೋಲಿಕೆಗೆ ಇನ್ನೊಂದಿಲ್ಲವೆಂಬಂತೆ ಯುದ್ಧ ನಡೆಯಿತು. ರಾವಣ, ಕುಂಭಕರ್ಣ, ಮೇಘನಾದ ಮೊದಲಾದವರೆಲ್ಲರೂ ಹತರಾದರು. ವಿಭೀಷಣನಿಗೆ ಲಂಕೆಯ ಪಟ್ಟಕಟ್ಟಿಸಿ, ಅಗ್ನಿ ಪರೀಕ್ಷೆಯಿಂದ ಸೀತೆಯನ್ನು ನಿಷ್ಕಳಂಕವೆಂದು ಜಗತ್ತಿಗೆ ಸಾರಿ ಪುಷ್ಪಕ ವಿಮಾನದಲ್ಲಿ ಕುಳಿತು ರಾಮನು ಪರಿವಾರದೊಂದಿಗೆ ಅಯೋಧ್ಯೆಗೆ ಹಿಂದಿರುಗಿದನು.
ನಾರುಮಡಿಯನ್ನುಟ್ಟು ಇವನ ಆಗಮನವನ್ನೇ ನಿರೀಕ್ಷಿಸಿ ಹಾರೈಸುತ್ತಿದ್ದ ಭರತನಿಗೆ ಆನಂದವಾಯಿತು. ಸಕಲ ವೈಭವಗಳಿಂದ ಶ್ರೀರಾಮನ ಪಟ್ಟಾಭಿಷೇಕವಾಯಿತು. ಸಂಕ್ಷಿಪ್ತವಾಗಿ ಇದು ರಾಮಾಯಣದ ಕತೆ.
ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಂಧಾಕಾಂಡ, ಸುಂದರಕಾಂಡ, ಯುದ್ಧಕಾಂಡ ಎಂಬ ಆರು ಕಾಂಡಗಳಲ್ಲಿ ಕಾವ್ಯ ಬೆಳೆದಿದೆ. ಕೊನೆಯಲ್ಲಿ ಉತ್ತರಕಾಂಡವಿದೆ. ಅದು ಆಮೇಲೆ ಸೇರಿದ್ದು ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
ಲೋಕಪೂಜಭಾಜನ, ರಘುಕುಲತಿಲೋತ್ತಮ, ಇಕ್ಷ್ವಾಕು ಕುಲ ಶ್ರೇಷ್ಠ , ದಶರಥ ನಂದನ, ಜನಕಿವಲ್ಲಭ, ಪ್ರಶಾಂತ ಮೂರ್ತಿ, ಸರ್ವವಿದ್ಯಾಪ್ರವೀಣ, ಯುಗಪುರುಷಶ್ರೇಷ್ಠ , ಪರಮ ಪುರುಷೋತ್ತಮನಾದ ಶ್ರೀರಾಮನ ಆದರ್ಶ ವ್ಯಕ್ತಿತ್ವ , ಸೇವೆಗೆ ಆದರ್ಶಮೂರ್ತಿಯಾದ ಲಕ್ಷ್ಮಣ, ಸೋದರತ್ವಕ್ಕೆ ಮಾದರಿಯಾದ ಭರತ, ದಾಸ್ಯಭಾವದ ಪರಮೊನ್ನತ ಪ್ರತೀಕವಾದ ಹನುಮಂತ, ಈ ಮೊದಲಾದ ಪಾತ್ರಗಳಿಂದ ರಾಮಾಯಣ ಕಾವ್ಯ ಮುಂದಿನ ಅನೇಕಾನೇಕ ಕವಿಗಳಿಗೆ ನಾಟಕಕಾರರಿಗೆ ಸ್ಫೂರ್ತಿಕೊಟ್ಟಿದೆ. ಪ್ರೇರಕವಾಗಿದೆ. ಆಧಾರ ಗ್ರಂಥವಾಗಿದೆ. ಇಂದಿಗೂ ಅದರ ಪರಮೊತ್ಕೃಷ್ಟ ಸ್ಥಾನಕ್ಕೆ ಸ್ವಲ್ಪವೂ ಚ್ಯುತಿ ಬಂದಿಲ್ಲ. ಅದು ಎಂದೆಂದಿಗೂ ಭಾರತದೇಶದ ಆದಿಕಾವ್ಯ.
ವಾಲ್ಮೀಕಿ ಆದಿಕವಿ. ರಾಮನು ನಮ್ಮ ಆತ್ಮವಾದರೆ, ಸೀತೆಯು ನಮ್ಮ ಮನಸ್ಸು, ಹನುಮಂತ ನಮ್ಮ ಜೀವಶಕ್ತಿಯಾದರೆ ರಾವಣನು ನಮ್ಮ ಅಹಂ. ಅಹಂ ಮನಸ್ಸನ್ನು ಆವರಿಸಿಕೊಂಡಾಗ ನಮ್ಮ ಆತ್ಮವು ಪ್ರಕ್ಷುಬ್ಧಗೊಳ್ಳುತ್ತದೆ. ಕೆಟ್ಟ ಕೆಲಸಗಳಿಗೆ ಪ್ರೇರಣೆ ನೀಡುತ್ತದೆ. ಮನಸ್ಸು ಮತ್ತು ಆತ್ಮವನ್ನು ಸಮನತ್ವಯಗೊಳಿಸಲು, ಧ್ಯಾನ ಮಾಡಿ, ಉಸಿರಾಟದ ಮೂಲಕ ನಮ್ಮ ಮನಸ್ಸು ಮತ್ತು ಆತ್ಮವನ್ನು ನಿಯಂತ್ರಿಸಬಹುದು. ರಾಮ ಮತ್ತು ಸೀತೆ ಒಂದಾದರೆ ಅಹಂ ನಾಶವಾಗುತ್ತದೆ ಎಂಬುದನ್ನು ರಾಮಾಯಣವು ನಮಗೆ ಕಲಿಸುತ್ತದೆ.
ಈ ರಾಮನವಮಿ ಹಬ್ಬದ ಮಹತ್ವವೇನೆಂದರೆ ಕೆಟ್ಟತನದ ಮೇಲೆ ಒಳ್ಳೆಯದಕ್ಕೆ ಜಯ ಮತ್ತು ಅಧರ್ಮವನ್ನು ಸೋಲಿಸಲು ಧರ್ಮ ಸ್ಥಾಪನೆಯನ್ನು ಸೂಚಿಸುತ್ತದೆ .
ರಾಮನವಮಿ ಹಬ್ಬದ ಆಚರಣೆಯು ಸೂರ್ಯ (ಸೂರ್ಯ ದೇವರು) ನಿಗೆ ಪ್ರಾಯಶ್ಚಿತ್ತ ಮಾಡಲು ಮುಂಜನೆ ಜಲಂ (ನೀರು) ಅರ್ಪಣೆಯೊಂದಿಗೆ ಪ್ರಾರಂಭವಾಗುತ್ತ ದೆ. ಸೂರ್ಯನ ವಂಶಸ್ಥರು ರಾಮನ ಪೂರ್ವಜರು ಎಂಬ ನಂಬಿಕೆ ಇದಕ್ಕೆ ಕಾರಣ. ಈ ಹಬ್ಬಕ್ಕೆ ರಾಮನ ಹೆಸರನ್ನು ಇಡಲಾಗಿದ್ದರೂ, ಹಬ್ಬವು ವಿಶಿಷ್ಟವಾಗಿ ಸೀತೆ, ಲಕ್ಷ್ಮಣ ಮತ್ತು ಹನುಮಂತನಿಗೆ ಗೌರವವನ್ನು ಒಳಗೊಂಡಿರುತ್ತದೆ, ರಾಮನ ಜೀವನ ಕಥೆಯಲ್ಲಿ ಅವರಿಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ.
ರಾಮ ನವಮಿ ಹಬ್ಬದ ಪವಿತ್ರ ಸಮಯದಲ್ಲಿ ಜನರು ಭಗವಾನ್ ರಾಮನಿಗೆ ಸಂಬಂಧಿಸಿದ ಪವಿತ್ರ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಅಯೋಧ್ಯೆ, ಉಜ್ಜಯಿನಿ ಮತ್ತು ರಾಮೇಶ್ವರಂ ಮುಂತಾದ ಸ್ಥಳಗಳು ದೇಶಾದ್ಯಂತ ಸಾವಿರಾರು ಭಕ್ತರನ್ನು ಆಕರ್ಷಿಸುತ್ತವೆ. ರಾಮೇಶ್ವರಂನಲ್ಲಿ, ರಾಮನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡುವ ಮೆದಲು ಸಾವಿರಾರು ಜನರು ಸಮುದ್ರದಲ್ಲಿ ಧಾರ್ಮಿಕ ಸ್ನಾನ ಮಾಡುತ್ತಾರೆ. ಉತ್ತರ ಭಾರತದ ಅನೇಕ ಸ್ಥಳಗಳು ಹಬ್ಬಕ್ಕೆ ಸಂಬಂಧಿಸಿದಂತೆ ಮೇಳಗಳನ್ನು ಆಯೋಜಿಸುತ್ತವೆ.
ಸತ್ಯಯುಗದಲ್ಲಿ ವಿವಿಧ ಗ್ರಹಗಳ ದೇವರುಗಳು ಹಾಗೂ ರಾಕ್ಷಸರ ಮಧ್ಯೆ ಯುದ್ಧ ನಡೆದವು. ತ್ರೇತಾಯುಗದಲ್ಲಿ ಒಂದೇ ಗ್ರಹದಲ್ಲಿ ವಾಸಿಸುತ್ತಿದ್ದ ದೇವರು ಮತ್ತು ಅಸುರರ ಮಧ್ಯೆ ಯುದ್ಧ ನಡೆದವು. ಅಂದರೆ ಅಯೋಧ್ಯೆಯಿಂದ ರಾಮ ಹಾಗೂ ಲಂಕೆಯ ರಾವಣನ ಮಧ್ಯೆ ಯುದ್ಧ ನಡೆಯಿತು. ದ್ವಾಪರ ಯುಗದಲ್ಲಿ ಒಂದೇ ಕುಟುಂಬದಲ್ಲಿರುವ ಜನರ ಮಧ್ಯೆ ಯುದ್ಧಗಳು ನಡೆದವು. ಅಂದರೆ ಪಾಂಡವರು ಮತ್ತು ಕೌರವರ ಮಧ್ಯೆ. ಕಲಿಯುಗದಲ್ಲಿ ಯುದ್ಧಗಳು ನಮೆಳಗೇ ನಡೆಯುತ್ತಿವೆ. ಇಂದು ಮಾನವರಾದ ನಮ್ಮ ಮನಸ್ಸಿನೊಳಗೇ ಅಲ ಕಲ, ತುಮುಲಗಳು, ದ್ವಂದ್ವಗಳು, ಗೊಂದಲಗಳಿಗೆ ಬಹಳಷ್ಟು ಅವಕಾಶಗಳಿವೆ. ಶ್ರೀರಾಮ ನವಮಿಯು ಎ ಕಷ್ಟಗಳನ್ನು ದೂರ ಮಾಡಿ ಸರ್ವರಿಗೂ ಒಳ್ಳೆಯದನ್ನು ಮಾಡಲಿ.
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ||
ಎಂಬ ರಾಮ ನಾಮದ ಮೂಲಕ ಸರ್ವೇ ಜನಾಃ ಸುಖಿನೋ ಭವಂತು | ಲೋಕಾ ಸಮಸ್ತ ಸುಖಿನೋ ಭವಂತು | ಸಕಲ ಸನ್ಮಂಗಳಾನಿ ಭವಂತು||
ಎನ್ನುತ್ತಾ ಸರ್ವರಿಗೂ ಮತ್ತೊಮ್ಮೆ ಶ್ರೀರಾಮ ನವಮಿಯ ಶುಭಾಷಯಗಳು.