ಪ್ರೇಮಿಗಳ ದಿನ ಬೇಕಾ…ಬೇಡ್ವಾ…: ಒಂದು ಚಿಂತನೆ…
ವಿಶ್ವದಾದ್ಯಂತ ಇಂದು ಪ್ರೇಮಿಗಳ ದಿನ. ಪ್ರತಿ ಪ್ರೇಮಿಯ ಮನದಲ್ಲೂ ಅದೇನೋ ಹೇಳಿಕೊಳ್ಳಲಾಗದ ಪುಳಕ. ತನ್ನೆದೆಯಲ್ಲಿ ಬೆಚ್ಚಗೆ ಕಾಪಿಟ್ಟುಕೊಂಡಿದ್ದ ಪ್ರೀತಿಯ ವ್ಯಾಪಕತೆಯನ್ನು ತನ್ನೊಲವಿನೆದುರು ಉಸುರುವ ತವಕ. ಅದಕ್ಕಾಗಿ ಫೆ.೧೪ನೇ ತಾರೀಕಿಗಾಗಿ ಕಾತುರದಿಂದ ಎದುರು ನೋಡುತ್ತಿರುತ್ತಾರೆ. ಹಲವರು ತಮ್ಮ ಪ್ರೇಮ ನಿವೇದನೆಗೆ ಇದೇ ಸೂಕ್ತ ದಿನ ಎಂದು ಕೊಂಡಿದ್ದರೆ, ಇನ್ನೂ ಕೆಲವರು ತಮ್ಮೊಲವಿನ ಸಂಗಾತಿಯೊಂದಿಗೆ ಕಾಲ ಕಳೆಯಲು, ಉಡುಗೊರೆ ನೀಡಿ ಸಂಭ್ರಮಿಸಲು ಈ ದಿನಕ್ಕಾಗಿ ಎದುರು ನೋಡುತ್ತಿರುತ್ತಾರೆ.
ಪ್ರೇಮಿಗಳು ತಮ್ಮ ಸಂಗಾತಿಯನ್ನು ಪ್ರಪೋಸ್ ಮಾಡಲು ಕಾಯುವುದೇ ಈ ದಿನಕ್ಕಾಗಿ! ಅದುವೇ ವ್ಯಾಲೆಂಟೈನ್ಸ್ ಡೇ. ಈ ದಿನದಂದು ರೋಮ್ಯಾಂಟಿಕ್ ಡೇಟ್ಸ್, ಉಡುಗೊರೆಗಳು ಮತ್ತು ಸರ್ಪ್ರೈಸ್ಗಳಿಗೆ ಕಮ್ಮಿ ಏನಿಲ್ಲ. ಪ್ರೇಮಿಗಳ ದಿನಾಚರಣೆಯನ್ನು ವಿಶ್ವದಾದ್ಯಂತ ಫೆ.೧೪ರಂದು ವ್ಯಾಲೆಂಟೈನ್ಸ್ ಡೇ ರೂಪದಲ್ಲಿ ಆಚರಿಸಲಾಗುತ್ತದೆ. ನೋಡಲು ಪಾಶ್ಚಾತ್ಯ ಸಂಸ್ಕೃತಿ ಎನಿಸಿದರೂ ಕೂಡ ಪ್ರೀತಿಯನ್ನು ಅನುಭವಿಸಲು ಮತ್ತು ಆಚರಿಸಲು ಈ ದಿನ ಪ್ರೇಮಿಗಳಿಗಾಗಿ ಮೀಸಲಾಗಿದೆ. ಸಿಂಗಲ್ ಆಗಿರುವವರು ಕೂಡ ಯಾರ ಜೊತೆಯಾದರೂ ಮಿಂಚಬೇಕು ಎಂದು ಇದೇ ದಿನವನ್ನು ಕಾದು ನೋಡುತ್ತಿರುತ್ತಾರೆ. ಇನ್ನು ಕೆಲವರು ಈ ದಿನದಂದು ತಮ್ಮ ಬಗ್ಗೆ ಕಾಳಜಿ ವಹಿಸಿ ತಾವು ಮಾಡುವ ಕೆಲಸಗಳ ಕಡೆಗೆ ಹೆಚ್ಚು ಒಲವು ತೋರುತ್ತಾರೆ. ಒಟ್ಟಿನಲ್ಲಿ ವ್ಯಾಲೆಂಟೈನ್ಸ್ ಡೇ ಎಂದರೆ ಪ್ರೀತಿ, ಪ್ರೇಮ, ಕಾಳಜಿ.
ಯುವ ಪ್ರೇಮಿಗಳು ಮತ್ತು ಕಪಲ್ಸ್ ಈ ದಿನವನ್ನು ಅತ್ಯಂತ ಖುಷಿಯಾಗಿ ಆಚರಿಸುತ್ತಾರೆ. ಕೆಲವರು ಮನೆಯಲ್ಲಿ ಸಮಯ ಕಳೆಯಲು ಮುಂದಾದರೆ; ಇನ್ನು ಕೆಲವರು ಹೊರಗಡೆ ಹೋಟೆಲ್, ಪಾರ್ಟಿ, ಕ್ಯಾಂಡಲ್ ಲೈಟ್ ಡಿನ್ನರ್ ಹೀಗೆ ಸುತ್ತಾಡಿ ಖುಷಿ ಕಾಣುತ್ತಾರೆ.
ಪ್ರೇಮ ಎಂದರೆ ಒಂದು ದಿನದ ಸಂಭ್ರಮವಲ್ಲ, ಪ್ರೇಮವನ್ನು ಪ್ರತಿದಿನ, ಪ್ರತಿಕ್ಷಣ ಅನುಭವಿಸಬೇಕು. ಒಂದು ದಿನದ ಆಚರಣೆಯ ಪ್ರೀತಿ-ಪ್ರೇಮಕ್ಕೆಲ್ಲ ಅರ್ಥವಿಲ್ಲ ಎಂದು ಹೇಳುವವರೂ ನಮ್ಮ ನಡುವೆ ಇzರೆ. ಪ್ರೇಮಿಗಳ ದಿನದ ಆಚರಣೆಯ ಬಗ್ಗೆ ಇಂದಿಗೂ ದ್ವಂದ್ವವಿದೆ. ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸುವವರ ಪ್ರಕಾರ ಈ ದಿನದ ಆಚರಣೆಗೆ ಅರ್ಥವಿಲ್ಲ. ಆದರೆ ಪ್ರೇಮಿಗಳ ಪ್ರಕಾರ ಈ ದಿನ ಅವರಿಗೆ ಪ್ರಾಮುಖ್ಯವಾದ ದಿನ. ಅದೇನೇ ಬೇಕು-ಬೇಡಗಳಿದ್ದರೂ ಪ್ರೇಮಿಗಳ ದಿನದ ಸಂಭ್ರಮ ಮಾತ್ರ ಎಂದಿಗೂ ಮಾಸಿಲ್ಲ.
ಪ್ರೇಮ ಸಂಭ್ರಮಕ್ಕೂ ಒಂದು ದಿನ ಮೀಸಲಿಟ್ಟರೆ ಚೆನ್ನ ಎಂಬ ಭಾವನೆಯೇ ಎದೆಯಲ್ಲಿ ಕಚಗುಳಿ ಇಡುತ್ತದೆ. ಆದರೆ ಇತ್ತೀಚೆಗೆ ಪ್ರೇಮದ ಸ್ವರೂಪ ಬದಲಾಗಿದೆ. ಪ್ರೇಮವೂ ವ್ಯಾಪಾರವಾಗಿದೆ. ದುಡ್ಡು, ಹಣ ಅಂತಸ್ತು, ಆಸ್ತಿ, ರೂಪ ಇವುಗಳ ಹಿಂದೆ ಓಡುವ ಮನುಷ್ಯ, ಪ್ರೇಮದ ಆಳವನ್ನು ಅರಿಯಲು ಪ್ರಯತ್ನಿಸುತ್ತಿಲ್ಲ. ಆದರೆ ಈ ಪ್ರೇಮಿಗಳ ದಿನದ ಹಿಂದಿನ ಕತೆ ಮಾತ್ರ ರೋಚಕವಾಗಿದೆ. ಸಂತರೊಬ್ಬರು ಪ್ರೇಮಕ್ಕೆ ನೀಡಿದ ಕಾಣಿಕೆಯ ಫಲವೇ ಈ ಪ್ರೇಮಿಗಳ ದಿನ ಎಂಬುದು ಹಲವರಿಗೆ ತಿಳಿದಿಲ್ಲ.
ಪ್ರೇಮಿಗಳ ದಿನಾಚರಣೆ ವಿಶ್ವದೆಡೆ ಆಚರಿಸಲಾಗುವ ಒಂದು ಹಬ್ಬ. ಇದನ್ನು ಪ್ರತಿ ವರ್ಷ ಫೆಬ್ರವರಿ ೧೪ ರಂದು ಆಚರಿಸುತ್ತಾರೆ. ಈ ದಿನ ಪ್ರೇಮಿಗಳು ತಮ್ಮ ಪ್ರೀತಿಯ ಸಂಕೇತವಾಗಿ ಕೆಂಪು ಬಣ್ಣದ ಬಟ್ಟೆಯನ್ನು ತೊಡುತ್ತಾರೆ.
ಪ್ರೇಮಿಗಳ ದಿನದ ಇತಿಹಾಸ ಮತ್ತು ಮಹತ್ವ:
ವಾಲೈಂಟೈನ್ ಎಂಬ ಸಂತರು ಮರಣ ಹೊಂದಿದ ದಿನವನ್ನು ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಸಂತ ವ್ಯಾಲೆಂಟೈನ್ ಅವರು ಸಂತರಾಗಿದ್ದರೂ ಕೂಡ ಪ್ರೇಮಿಗಳನ್ನು ಒಗ್ಗೂಡಿಸಲು ಜೀವವನ್ನೇ ಪಣಕಿಟ್ಟವರು. ಅವರ ಕಾಲದಲ್ಲಿ ರೋಮ್ ಸಾಮ್ರಾಜ್ಯವನ್ನು ಎರಡನೇ ಕ್ಲಾಡಿಯಸ್ ಎಂಬ ರಾಜ ಆಳುತ್ತಿದ್ದ. ಸರ್ವಾಧಿಕಾರಿ ಧೋರಣೆ ಹೊಂದಿದ್ದ ಅವನು, ತನ್ನ ಸೈನಿಕರಿಗೆ ಯುದ್ಧ ಮುಗಿಯುವವರೆಗೂ ಮದುವೆಯಾಗಲು ಬಿಡುತ್ತಿರಲಿಲ್ಲ. ಯುದ್ಧದ ಸಂದರ್ಭದಲ್ಲಿ ಯುವಕರು ಮದುವೆಯಾಗ ಬಾರದು ಎಂದು ಕಟ್ಟಪ್ಪಣೆಯನ್ನು ಹೊರಡಿಸಿದ್ದ. ಆದರೆ ವ್ಯಾಲೆಂಟೈನ್ ಅವರು ರಾಜನ ಧೋರಣೆಗೆ ವಿರುದ್ಧವಾಗಿದ್ದರು. ಅಲ್ಲದೇ ಅವರು ಮದುವೆಯಾಗಲು ಇಚ್ಛಿಸುವ ಹಾಗೂ ಪ್ರೀತಿಯಲ್ಲಿ ಬಿದ್ದಿರುವ ಸೈನಿಕರಿಗೆ ಗುಟ್ಟಾಗಿ ಮದುವೆ ಮಾಡಿಸುತ್ತಿದ್ದರು. ಈ ವಿಷಯ ರಾಜನಿಗೆ ತಿಳಿದು ವ್ಯಾಲೆಂಟೈನ್ ಅವರನ್ನು ಫೆ.೧೪ ರಂದು ಸೆರೆಮನೆಗೆ ತಳ್ಳುತ್ತಾನೆ. ಅವರು ಸೆರೆಮನೆಯ ಮರಣ ಹೊಂದುತ್ತಾರೆ. ಹಾಗಾಗಿ ಆ ದಿನವನ್ನು ರೋಮ್ ಪಾದ್ರಿಗಳು ಪ್ರೇಮಿಗಳ ದಿನವನ್ನಾಗಿ ಆಚರಿಸಲು ನಿರ್ಧರಿಸುತ್ತಾರೆ. ಹೀಗಾಗಿ ಪ್ರೇಮಿಗಳು ಹಾಗೂ ಸೈನಿಕರ ಪಾಲಿಗೆ ಪ್ರೇಮ ಗುರುವಾಗಿದ್ದ ವಾಲೈಂಟೈನ್ ಅವರ ಮರಣ ದಿನವನ್ನು ವಾಲೆಂಟೈನ್ಸ್ ದಿನ ಎಂದು ಆಚರಿಸಲಾಗುತ್ತದೆ.
ಏತನ್ಮಧ್ಯೆ, ವ್ಯಾಲೆಂಟೈನ್ಸ್ ಡೇ ಜನಪ್ರಿಯವಾಗಿ ಪ್ರೀತಿಯ ದೇವತೆ ಕ್ಯುಪಿಡ್ ಕಾರಣದಿಂದಲೂ ಆಚರಿಸಲಾಗುತ್ತದೆ ಎನ್ನಲಾಗುತ್ತದೆ. ರೋಮನ್ ಪುರಾಣದ ಪ್ರಕಾರ, ಕ್ಯುಪಿಡ್ ಶುಕ್ರನ ಮಗ. ಪ್ರೀತಿ ಮತ್ತು ಸೌಂದರ್ಯದ ದೇವತೆ. ಕ್ಯುಪಿಡ್ನ ಬಿಲ್ಲು ಮತ್ತು ಬಾಣ ಹೃದಯಕ್ಕೆ ಚುಚ್ಚಿ ಪ್ರೀತಿಯ ಕಾಗುಣಿತವನ್ನು ಬಿತ್ತರಿಸುತ್ತದೆ ಎಂಬ ನಂಬಿಕೆ ಇದೆ.
ಇತ್ತೀಚೆಗೆ ಪ್ರೇಮವೂ ಒಂದು ವ್ಯಾಪಾರವಾಗಿದೆ. ಹಣ, ಆಸ್ತಿ, ಅಂತಸ್ತು, ರೂಪ ಇವುಗಳ ಹಿಂದೆ ಓಡುವ ಮನುಷ್ಯ ಪ್ರೇಮದ ಆಳವನ್ನು ಅರಿಯಲು ಪ್ರಯತ್ನಿಸುತ್ತಿಲ್ಲ. ಪ್ರೇಮಿಗಳ ದಿನ ಎಂಬುದು ನೆಪ ಮಾತ್ರವಾಗಿದೆ.
ಅದೇನೇ ಇರಲಿ ಪ್ರೀತಿ ಎಂಬುದನ್ನು ಆಚರಿಸಲು, ಸಂಭ್ರಮಿಸಲು ದಿನವೊಂದಿದೆ ಎಂದುಕೊಂಡು ನಮ್ಮ ಸಂಸ್ಕೃತಿ, ಆಚಾರ- ವಿಚಾರವನ್ನು ಮರೆತು ವರ್ತಿಸುವುದೂ ಸರಿಯಲ್ಲ. ಪ್ರೇಮ ನಿವೇದನೆಯ ಹೆಸರಿನಲ್ಲಿ ಹುಚ್ಚು ಹುಚ್ಚಾಗಿ ವರ್ತಿಸುವುದೂ ಸಲ್ಲ. ಪ್ರೇಮಿ ತನ್ನ ಪ್ರೇಮವನ್ನು ಒಪ್ಪಿಲ್ಲ ಎನ್ನುವ ಕಾರಣಕ್ಕೆ ಆತುರದ ನಿರ್ಧಾರಕ್ಕೆ ಬರುವುದು ಪ್ರೇಮಕ್ಕೆ ನೀಡುವ ಗೌರವವಲ್ಲ. ಪ್ರೀತಿ-ಪ್ರೇಮದಲ್ಲಿ ಪ್ರತಿಯೊಬ್ಬರಿಗೂ ಗೌರವವಿರಲಿ.
ಈಗ ಹೇಳಿ, ಪ್ರೇಮಿಗಳ ದಿನ ನಮಗೆ ಬೇಕಾ…? ಬೇಡ್ವಾ…?