ಸ್ವಾಭೀಮಾನಿ ಹೋರಾಟ ಹಾದಿ ತಪ್ಪಲು ಪೊಲೀಸ್ ವೈಫಲ್ಯವೇ ಕಾರಣ…
ಶಿಕಾರಿಪುರ: ಸರ್ಕಾರ ಒಳಮೀಸಲಾತಿಗೆ ಶಿಫಾರಸುಗೊಳಿಸಿದ ಹಿನ್ನಲೆಯಲ್ಲಿ ಹಕ್ಕು ಸ್ವಾಭಿಮಾನಕ್ಕೆ ಧಕ್ಕೆಯಾದ ನೊಂದ ಬಣಜಾರ್ ಮತ್ತಿತರ ಸಮುದಾಯದವರು ಅಳಿವು ಉಳಿವಿನ ಪ್ರಶ್ನೆ ಎಂದರಿತು ಹಮ್ಮಿಕೊಂಡ ಪ್ರತಿಭಟನೆಯ ಕಿಚ್ಚು ಗಲಭೆ ರೂಪ ತಾಳಿದ್ದು ಈ ಬಗ್ಗೆ ಸೂಕ್ತ ಮಾಹಿತಿ ಅರಿಯದೆ ಕೇವಲ ವಿರೋಧಿ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ಮುಖ್ಯಮಂತ್ರಿ ಬೊಮ್ಮಾಯಿ ನೀಡಿದ ಹೇಳಿಕೆ ಅವರ ಘನತೆ ಕುಗ್ಗಿಸಲಿದೆ ಎಂದು ಕೆಪಿಸಿಸಿ ಸದಸ್ಯ ಮಾಲತೇಶ್ ಗೋಣಿ ಸುದ್ದಿ ಗೋಷ್ಟಿಯಲ್ಲಿ ಆರೋಪಿಸಿದರು.
ಇತ್ತೀಚೆಗೆ ಒಳಮೀಸಲಾತಿ ಯನ್ನು ವಿರೋಧಿಸಿ ಪಟ್ಟಣದಲ್ಲಿ ಬಣಜಾರ್ ಸಹಿತ ವಿವಿಧ ಜನಾಂಗದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಮಾಜಿ ಸಿಎಂ ಯಡಿಯೂರಪ್ಪನವರ ಮನೆಗೆ ಕಲ್ಲುತೂರಾಟ ಖಂಡನೀಯವಾಗಿದ್ದು, ಕೃತ್ಯವನ್ನು ಖಂಡಿಸುವ ಭರದಲ್ಲಿ ಸಿಎಂ ಬೊಮ್ಮಾಯಿ ಘಟನೆಗೆ ಸ್ಥಳೀಯ ಕಾಂಗ್ರೆಸ್ ಮುಖಂಡರ ಕುಮ್ಮಕ್ಕು ಪ್ರಮುಖ ಕಾರಣ ಎಂಬ ಬಾಲಿಷ ಹೇಳಿಕೆ ಮೂಲಕ ಹುದ್ದೆಯ ಘನತೆ ಗೌರವಕ್ಕೆ ಕುಂದು ತಂದಿದ್ದಾರೆ ಎಂದು ಆರೋಪಿಸಿದರು.
ಸಹೋದರರ ರೀತಿಯಲ್ಲಿದ್ದ ಪರಿಶಿಷ್ಟ ಜಾತಿಯನ್ನು ಒಳಮೀಸಲಾತಿಯ ನೆಪದಲ್ಲಿ ಒಡೆದ ಸರ್ಕಾರ ಘಟನೆಗೆ ಕಾರಣವಾಗಿದ್ದು, ಸಮುದಾಯಕ್ಕೆ ಆದ ಅನ್ಯಾಯವನ್ನು ಖಂಡಿಸಿ ಹಕ್ಕು ಸ್ವಾಭಿಮಾನಕ್ಕೆ ಧಕ್ಕೆಯಾದ ನೊಂದ ಬಣಜಾರ್ ಬೋವಿ ಮತ್ತಿತರ ಸಮುದಾಯ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಪಕ್ಷಾತೀತವಾಗಿ ಸರ್ವರೂ ಪಾಲ್ಗೊಂಡಿದ್ದರು ಎಂದು ತಿಳಿಸಿದ ಅವರು, ಘಟನೆ ಬಗ್ಗೆ ಯಾರ ವಿರುದ್ದ ದೂರು ದಾಖಲಿಸದಂತೆ ಯಡಿಯೂರಪ್ಪ ನವರು ಸೂಚಿಸಿದರೂ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರನ್ನು ಗುರಿಯಾಗಿಸಿ ದೂರು ದಾಖಲಿಸ ಲಾಗಿದೆ. ಕೂಡಲೇ ಈ ದೂರನ್ನು ವಾಪಾಸ್ ಪಡೆಯಬೇಕು, ತಪ್ಪಿದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳ ಲಾಗುವುದು ಎಂದು ಎಚ್ಚರಿಸಿದರು.
ತಾಂಡಾ ಅಭಿವೃದ್ದಿ ನಿಗಮದ ಮಾಜಿ ನಿರ್ದೇಶಕ ಶಿವ್ಯಾನಾಯ್ಕ ಅವರು ಮಾತನಾಡಿ, ಸರ್ಕಾರ ಒಳಮೀಸಲಾತಿಗೆ ಶಿಫಾರಸುಗೊಳಿಸಿದ ಹಿನ್ನಲೆಯಲ್ಲಿ ಭಾನುವಾರ ಸಮುದಾಯದ ಮುಖಂಡರ ಸಹಿತ ಹಲವರು ಸಭೆ ನಡೆಸಿ ಸೋಮವಾರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದ ರೀತಿಯಲ್ಲಿ ಶಾಂತಿಯುತವಾಗಿ ನಡೆದ ಪ್ರತಿಭಟನೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನತೆ ಪಾಲ್ಗೊಂಡಿದ್ದು ತಾಲೂಕು ಕಚೇರಿ ಮುಂಭಾಗದಲ್ಲಿ ತಹಸೀಲ್ದಾರ್ಗೆ ಮನವಿ ಸಲ್ಲಿಸಲು ಧಾವಿಸಿದಾಗ ಎಲ್ಲ ಗೇಟ್ಗಳನ್ನು ಮುಚ್ಚಿ ಬ್ಯಾರಿಕೇಡ್ ಮೂಲಕ ತಡೆಗಟ್ಟಲಾಯಿತು. ರೊಚ್ಚಿಗೆದ್ದ ಜನತೆ ಯಡಿಯೂರಪ್ಪನವರ ಮನೆಗೆ ತೆರಳಿ ಮನವಿ ಸಲ್ಲಿಸಲು ಮುಂದಾದಾಗ ಪೊಲೀಸರು ಅನಗತ್ಯವಾಗಿ ಲಾಠಿ ಪ್ರಹಾರ ನಡೆಸಿ ಪ್ರತಿಭಟನೆ ಸ್ವರೂಪವನ್ನು ಬದಲಿಸಿದರು ಎಂದು ತಿಳಿಸಿದ ಅವರು, ವಿವಿಧ ದೇವಸ್ಥಾನ ಸಮಿತಿ ಮುಖ್ಯಸ್ಥರು, ಮಹಿಳೆಯರ ವಿರುದ್ದದ ಲಾಠಿ ಪ್ರಹಾರವನ್ನು ಕಂಡು ಕಂಗೆಟ್ಟ ಪ್ರತಿಭಟನಾಕಾರ ರಿಂದ ಗಲಭೆ ಉಂಟಾಗಿದ್ದು ಘಟನೆಗೆ ಪೊಲೀಸರ ವೈಫಲ್ಯ ಮುಖ್ಯ ಕಾರಣ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳು ಘಟನೆಗೆ ಕಾಂಗ್ರೆಸ್ ಕುಮ್ಮಕ್ಕು ಕಾರಣ ಎಂದು ರಾಜಕೀಯ ಬಣ್ಣ ಬಳಿಯುತ್ತಿದ್ದು, ಪೊಲೀಸರು ಅಮಾಯಕರ ವಿರುದ್ದ ದೂರು ದಾಖಲಿಸುತ್ತಿದ್ದಾರೆ ಎಂದು ದೂರಿದ ಅವರು, ಕಾನೂನು ಮೂಲಕ ಹಕ್ಕು ಮೊಟಕುಗೊಳಿಸ ದಂತೆ ಎಚ್ಚರಿಸಿ, ತಪ್ಪಿದಲ್ಲಿ ಪಾಲ್ಗೊಂಡ ಎಲ್ಲ ೩-೪ ಸಾವಿರ ಪ್ರತಿಭಟನಾಕಾರರನ್ನು ಬಂಧಿಸುವಂತೆ ಸವಾಲು ಹಾಕಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹುಲ್ಮಾರ್ ಮಾತನಾಡಿ, ಯಡಿಯೂರಪ್ಪನವರ ಆಕ್ರಮ ಗಳನ್ನು ಎತ್ತಿತೋರಿಸುವವರು ರೌಡಿಶೀಟರ್ಗಳಾಗಿದ್ದು ಅಂತಹವರನ್ನು ಮಾತ್ರ ಉದ್ದೇಶ ಪೂರ್ವಕವಾಗಿ ಬಂಧಿಸಿ ದೂರು ದಾಖಲಿಸಲಾಗಿದೆ. ಘಟನೆಗೆ ಕಾಂಗ್ರೆಸ್ ಪಕ್ಷ ಬಗ್ಗೆ ಆರೋಪಿಸಿದಲ್ಲಿ ಸಹಿಸಲು ಸಾಧ್ಯವಿಲ್ಲ. ಬಹುಸಂಖ್ಯಾತ ಸಮಾಜ ತಾಳ್ಮೆ ಕಳೆದುಕೊಂಡಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಲಿದೆ ಎಂಬುದು ಘಟನೆಯಿಂದ ಸಾಬೀತಾಗಿದೆ. ಜನಪರ ಕಾಳಜಿ ಹೊಂದಿದರವರು ಎದುರು ನಿಂತು ಸ್ಪಷ್ಟನೆ ಮೂಲಕ ಪರಿಸ್ಥಿತಿ ನಿಭಾಯಿಸಬೇಕಾಗಿದ್ದು ಹೊರತು ಅಡಗಿ ಕುಳಿತು ಕೊಳ್ಳುವುದು ಜನನಾಯಕರ ಲಕ್ಷಣವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಪುರಸಭಾ ಸದಸ್ಯ ನಾಗರಾಜಗೌಡ, ಉಳ್ಳಿ ದರ್ಶನ್, ಎಸ್ಟಿ ಘಟಕದ ಅಧ್ಯಕ್ಷ ತಿಮ್ಮಣ್ಣ, ಎಸ್ಸಿ ಘಟಕ ಅಧ್ಯಕ್ಷ ಮಂಜಾನಾಯ್ಕ, ಆನಂದಪ್ಪ, ಕುಮಾರನಾಯ್ಕ ಮತ್ತಿತರರು ಉಪಸ್ಥಿತರಿದ್ದರು.