ಜಿಲ್ಲಾ ಸುದ್ದಿತಾಜಾ ಸುದ್ದಿ

ಬಿಎಸ್‌ವೈ ಕುಟುಂಬ ರಾಜಕಾರಣ ಮೋದಿಗೇಕೆ ಕಾಣುತ್ತಿಲ್ಲ: ಈಶ್ವರಪ್ಪ ಪ್ರಶ್ನೆ

Share Below Link

ಶಿಕಾರಿಪುರ : ಸಹಕಾರಿ ಕ್ಷೇತ್ರದ ಜತೆಗೆ ರೈತಪರ ಹೋರಾಟಗಳಲ್ಲಿ ತೊಡಗಿಸಿಕೊಂಡ ಪರಿಣಾಮ ಇದೀಗ ಜಿಲ್ಲಾ ಸಹಕಾರ ಯೂನಿಯನ್‌ಗೆ ನಾಮನಿರ್ದೇಶನ ಗೊಳಿಸಲಾಗಿದ್ದು ಈ ದಿಸೆಯಲ್ಲಿ ಸಹಕರಿಸಿದ ಎಲ್ಲ ಸಹಕಾರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಇಲ್ಲಿನ ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ, ತಾಲೂಕು ಕೃಷಿಕ ಸಮಾಜದ ನಿರ್ದೇಶಕ, ಕಸಬಾ ಬ್ಯಾಂಕ್ ಉಪಾಧ್ಯಕ್ಷ ಡಿ.ಎಸ್ ಈಶ್ವರಪ್ಪ ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖುದ್ದು ಕೃಷಿಕನಾಗಿ ಕಳೆದ ಹಲವು ವರ್ಷ ಗಳಿಂದ ಕೃಷಿಕರ ಸಮಸ್ಯೆಗಳಿಗೆ ಹಲವು ಹೋರಾಟ, ಪ್ರತಿಭಟನೆ ಮೂಲಕ ನ್ಯಾಯ ದೊರಕಿಸಲು ಶ್ರಮಿಸಿದ್ದು ರೈತ ಪರವಾದ ಎಲ್ಲ ಹೋರಾಟಗಳನ್ನು ಗುರುತಿಸಿ ಜಿಲ್ಲಾ ಸಹಕಾರ ಯೂನಿಯನ್ (ನಿ)ಗೆ ಕೋ-ಆಪ್ ಮಾಡಿಕೊಳ್ಳಲಾಗಿದೆ ಕಾಂಗ್ರೆಸ್ ಮುಖಂಡ ಮರಿಯಪ್ಪ ಸೂಚನೆ ಮೇರೆಗೆ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ರತ್ನಾಕರ್ ಅನುಮೋದಿಸಿದ್ದು ಡಿಸಿಸಿ ಬ್ಯಾಂಕ್ ಪ್ರಭಾರ ಅಧ್ಯಕ್ಷ ಷಡಾಕ್ಷರಿ ಆಯ್ಕೆಗೊಳಿಸಿದ್ದಾರೆ. ಈ ದಿಸೆಯಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ನೀಡಿದ ೫ ಗ್ಯಾರೆಂಟಿಗಳಲ್ಲಿ ಈಗಾಗಲೇ ಪ್ರಮುಖವಾದ ಉಚಿತ ವಿದ್ಯುತ್, ಪಡಿತರ ಅಕ್ಕಿ, ಮಹಿಳೆಯರಿಗೆ ಮಾಸಿಕ ರೂ.೨ ಸಾವಿರ ನೀಡುವ ಯೋಜನೆಗೆ ಚಾಲನೆ ನೀಡಲಾಗಿದ್ದು ಈ ದಿಸೆಯಲ್ಲಿ ನೀಡಿದ ವಾಗ್ದಾನ ಪೂರೈಸಿದ ಸಿಎಂ ಸಿದ್ದರಾಮಯ್ಯ ನವರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಕಳೆದ ಜು.೧೯ ರಂದು ರೈಲು ಯೋಜನೆ-೨ ವಿರೋಧಿಸಿ ಸಂತ್ರಸ್ಥ ರೈತ ಕುಟುಂಬ ಪ್ರತಿಭಟಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಯೋಜನೆಯನ್ನು ರದ್ದು ಗೊಳಿಸುವಂತೆ ಮನವಿ ಸಲ್ಲಿಸಲಾ ಗಿದ್ದು ಈ ಬಗ್ಗೆ ಇದುವರೆಗೂ ಯಾವುದೇ ಸ್ವೀಕೃತಿ ಪತ್ರ ದಾಖಲೆ ಬಂದಿಲ್ಲ ಇದಕ್ಕೆ ಬಿಎಸ್‌ವೈ ಕುಟುಂಬದ ಶಾಸಕರು, ಸಂಸದರ ತಡೆಹಿಡಿದಿರುವ ಅನುಮಾನ ದಟ್ಟವಾಗಿದೆ. ತಕ್ಷಣ ಯೋಜನೆ ರದ್ದುಪಡಿಸಿದ ಆದೇಶವನ್ನು ಸರ್ಕಾರಿ ಅಧಿಸೂಚನೆಯಾಗಿ ಘೋಷಿಸುವಂತೆ ಅವರು ಒತ್ತಾಯಿಸಿದರು.
ಇತ್ತೀಚೆಗೆ ಕ್ಷೇತ್ರದ ನೂತನ ಶಾಸಕರು ಆಡಳಿತ ಕಚೇರಿಯಲ್ಲಿ ಶಾಸಕರ ನೂತನ ಕಚೇರಿ ಉದ್ಘಾಟಿಸಿಕೊಂಡಿದ್ದು ಐಶಾರಾಮಿ ಕುರ್ಚಿ, ಹವಾನಿಯಂತ್ರಿತ ಕೊಠಡಿ ನಿರ್ಮಾಣದ ಮೂಲಕ ಕ್ಷೇತ್ರದ ಸಾಮಾನ್ಯ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ತಾಲೂಕು ಕಚೇರಿಗೆ ನಿತ್ಯ ಧಾವಿಸುವ ಜನಸಾಮಾನ್ಯರಿಗೆ ಕುಳಿತುಕೊಳ್ಳಲು ಕನಿಷ್ಠ ಕಲ್ಲಿನ ಬೆಂಚು ಇಲ್ಲವಾಗಿದೆ. ತಿಂಗಳಿಗೆ ಒಮ್ಮೆ ಭೇಟಿ ನೀಡುವ ಶಾಸಕರಿಗೆ ಇಂತಹ ಕೊಠಡಿಯ ಅಗತ್ಯ ವಿದೆಯೇ ಎಂದು ಪ್ರಶ್ನಿಸಿದರು.
ಕುಟುಂಬ ರಾಜಕಾರಣದಿಂದ ಹೊರಬರುವಂತೆ ಪ್ರದಾನಿ ಮೋದಿ ಪದೇಪದೇ ಹೇಳುತ್ತಿದ್ದು ಬಿಎಸ್‌ವೈ ಕುಟುಂಬದ ಸದಸ್ಯರು ಪ್ರತಿ ಚುನಾವಣೆಯಲ್ಲಿ ಹೊಸಬರು ಪ್ರವೇಶಿಸುತ್ತಿದ್ದಾರೆ ಎಂದ ಅವರು ಗುಮಾಸ್ತರಾಗಿ ಬಂದು ಇದೀಗ ವಿದೇಶದಲ್ಲಿ ಐಶಾರಾಮಿ ಹೋಟೆಲ್ ಕೈಗಾರಿಕೋದ್ಯಮಿ ಯಾಗಿರುವ ಬಗ್ಗೆ ಇಡಿ ಐಟಿ ಕಣ್ಣು ಮುಚ್ಚಿ ಕುಳಿತಿದೆ ಎಂದು ಕುಟುಕಿದರು.
ಗೋಷ್ಠಿಯಲ್ಲಿ ರೈತ ಮುಖಂಡ ಸಂತೋಷ ಈಸೂರು, ಮಮತಾ, ನೀಲಮ್ಮ, ಖುಷಿರಾಜ, ಗೋಕುಲ್‌ರಾಜ್ ಮತ್ತಿತರರು ಉಪಸ್ಥಿತರಿದ್ದರು.