ಜಿಲ್ಲಾ ಸುದ್ದಿತಾಜಾ ಸುದ್ದಿ

ಸಾಂಪ್ರದಾಯಿಕ ಉಡುಗೆಗಳು ಭಾರತೀಯ ಸಂಸ್ಕೃತಿಯ ಪ್ರತಿಬಿಂಬ: ಡಾ| ಅರುಣ್

Share Below Link

ಶಿವಮೊಗ್ಗ: ಆಧುನಿಕತೆಯ ಅಬ್ಬರದಲ್ಲಿ ಸಾಂಪ್ರದಾಯಿಕ ಆಚಾರ ವಿಚಾರ, ಉಡುಗೆ ತೊಡುಗೆಗಳು ಕಣ್ಮರೆ ಆಗುತ್ತಿವೆ. ಸಾಂಪ್ರದಾಯಿಕ ಉಡುಗೆಗಳು ದೇಶದ ಸಂಸ್ಕೃತಿಯ ಪ್ರತಿಬಿಂಬಿ ಸುತ್ತವೆ ಎಂದು ಐಎಂಎ ಶಿವಮೊಗ್ಗ ಅಧ್ಯಕ್ಷ ಡಾ. ಅರುಣ್ ಹೇಳಿದರು.
ಶಿವಮೊಗ್ಗ ನಗರದ ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ದಿಂದ ಆಯೋಜಿಸಿದ್ದ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ರಾಜ್ಯ, ರಾಷ್ಟ್ರದ ಸಂಸ್ಕೃತಿ ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.


ಕರ್ನಾಟಕ ರಾಜ್ಯವು ಸಾಂಸ್ಕೃತಿಕತೆಗಳ ತವರೂರು. ನಮ್ಮ ಸಂಸ್ಕೃತಿ ವಿದೇಶದಲ್ಲಿಯೂ ವಿಶೇಷ ಸ್ಥಾನಮಾನ ಗೌರವ ಇದೆ. ನಮ್ಮ ಸಂಸ್ಕೃತಿಯನ್ನು ಉಳಿಸುವ ಬೆಳೆ ಸುವ ಜವಾಬ್ದಾರಿಯು ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ಸಾಂಸ್ಕೃತಿಕ ಕಲೆಗಳು ನಮ್ಮಲ್ಲಿ ಸಂಸ್ಕಾರ ಬೆಳೆಸುವುದರ ಜತೆಗೆ ಶಾಶ್ವತ ನೆಲೆಗಳನ್ನು ನೀಡುತ್ತವೆ. ನಮ್ಮ ನೆಲದ ಗೌರವ ಕಾಪಾಡುತ್ತವೆ. ನಮ್ಮ ಉಡುಗೆ ತೊಡುಗೆಗಳೂ ಗೌರವ ತರುವಂತಿg ಬೇಕು ಎಂದು ಹೇಳಿದರು.
ಸಾಂಸ್ಕೃತಿಕ ಸ್ಪರ್ಧೆಗಳು ಬಾಲ್ಯದ, ಶಾಲೆಯ ದಿನಗಳನ್ನು ನೆನಪು ತರುವಲ್ಲಿ ಹೆಚ್ಚು ಅವಕಾಶ ನೀಡುತ್ತವೆ. ಕುಟುಂಬದ ಸದಸ್ಯರು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿ ಮಕ್ಕಳಿಗೆ ಸಂಸ್ಕೃತಿ ಪರಂಪರೆಯ ಅರಿವು ಮೂಡಿಸಬೇಕು ಎಂದರು.
ಕಿರುತೆರೆ ಕಲಾವಿದ ನಿರೂಪಕ ಪೃಥ್ವಿಗೌಡ ಅವರಿಂದ ವಿವಿಧ ತಮಾಷೆಯ ಗೇಮ್ಸ್ ಹಾಗೂ ಆಟೋಟಗಳು ಅಪಾರ ಸದಸ್ಯರ ಮೆಚ್ಚುಗೆ ಗಳಿಸಿದವು. ಹಳೇಯ ಚಿತ್ರಗೀತೆಗಳು ಎಲ್ಲರಿಗೂ ಇಷ್ಟ ಆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ರೋಟರಿ ಸಂಸ್ಥೆಯು ಸೇವೆಯ ಜತೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೂ ವಿಶೇಷ ಆದ್ಯತೆ ನೀಡುತ್ತದೆ. ಎಲ್ಲ ಸದಸ್ಯರಿಗೂ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ದೊರೆಯುತ್ತದೆ ಎಂದು ತಿಳಿಸಿದರು.
ಸಾಂಪ್ರದಾಯಿಕ ಉಡುಗೆ ಸ್ಪರ್ಧೆಯಲ್ಲಿ ಡಾ. ಕೌಸ್ತುಭ ಅರುಣ್ ದಂಪತಿ ಪ್ರಥಮ, ಬಿಂದು ವಿಜಯ್‌ಕುಮಾರ್ ದ್ವಿತೀಯ, ಗೀತಾ ತೃತೀಯ ಸ್ಥಾನ ಪಡೆದರು. ೨೦ಕ್ಕೂ ಹೆಚ್ಚು ದಂಪತಿ ಭಾಗವಹಿಸಿದ್ದರು. ಡಾ. ಕಡಿದಾಳ್ ಗೋಪಾಲ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕಿಶೋರ್ ಕುಮಾರ್, ಡಾ. ಗುಡದಪ್ಪ ಕಸಬಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.