ವೃತ್ತಿಯ ಜೊತೆಗೆ ಮನುಕುಲದ ಸೇವೆಯು ಜೀವನದ ಶ್ರೇಷ್ಠ ಕಾರ್ಯ: ಪ್ರಭುಗೌಡ
ಶಿವಮೊಗ್ಗ: ವೃತ್ತಿಯ ಜತೆಯಲ್ಲಿ ಮನುಕುಲದ ಸೇವೆ ಮಾಡುವುದು ತುಂಬಾ ಶ್ರೇಷ್ಠ ಕಾರ್ಯ. ಮನುಷ್ಯರಾಗಿ ನಾವು ಸಮಾಜದ ಋಣ, ತಂದೆ ತಾಯಿ ಋಣ ತೀರಿಸಲು ಮುಂದಾಗಬೇಕು. ಸಮಾಜಮುಖಿ ಸೇವೆಗಳನ್ನು ನಡೆಸಬೇಕು ಎಂದು ಇಂಡಿಯನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಶಾಖಾ ವ್ಯವಸ್ಥಾಪಕ ಪ್ರಭುಗೌಡ ಹೇಳಿದರು.
ಶಿವಮೊಗ್ಗ ನಗರದ ನೆಹರು ರಸ್ತೆಯಲ್ಲಿರುವ ಇಂಡಿಯನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಆವರಣದಲ್ಲಿ ಸಂಸ್ಥೆಗೆ ೨೫ ವರ್ಷ ಪೂರೈಸಿರುವ ಸಂದರ್ಭದಲ್ಲಿ ಸಿಬ್ಬಂದಿ ಹಾಗೂ ಸಾರ್ವಜನಿಕರಿಂದ ಹಮ್ಮಿಕೊಳ್ಳಲಾದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ರಕ್ತದಾನ ಮಾಡಿ ಮಾತನಾಡಿದರು.
ಸಮಾಜಕ್ಕೆ ಉಪಯೋಗ ಆಗುವ ರೀತಿಯಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು, ರಕ್ತದಾನ ಮಾಡುವುದರಿಂದ ಜೀವ ಉಳಿಸಿದ ಶ್ರೇಷ್ಠ ಕಾರ್ಯ ಆಗುತ್ತದೆ. ಆರೋಗ್ಯವಂತರಾಗಿರುವ ಪ್ರತಿಯೊಬ್ಬರು ರಕ್ತದಾನ ಮಾಡಬೇಕು ಎಂದು ತಿಳಿಸಿದರು.
ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆಯ ಮಾಜಿ ಅಧ್ಯಕ್ಷ ಜಿ. ವಿಜಯ್ಕುಮಾರ್ ಮಾತನಾಡಿ, ಎಲ್ಲ ದಾನಗಳಿಗಿಂತ ರಕ್ತದಾನ ಶ್ರೇಷ್ಠ. ರಕ್ತದಾನ ಮಾಡುವುದರಿಂದ ನಮ್ಮ ದೇಹದ ಆರೋಗ್ಯ ಸದೃಢ ಆಗುತ್ತದೆ. ಅನೇಕ ರೀತಿಯಲ್ಲಿ ಉಪಯೋಗವಾಗುತ್ತದೆ. ಆರೋಗ್ಯವಂತ ಯುವಜನರು ರಕ್ತದಾನ ಮಾಡಲು ಮುಂದಾಗ ಬೇಕು ಎಂದು ಹೇಳಿದರು.
ರಕ್ತದಾನಿ ಧರಣೇಂದ್ರ ದಿನಕರ್ ಮಾತನಾಡಿ, ಪ್ರತಿ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತದ ಬೇಡಿಕೆ ಹೆಚ್ಚಿದ್ದು, ರಕ್ತದಾನ ಶಿಬಿರಗಳಿಂದ ಹೆಚ್ಚಿನ ಉಪಯೋಗ ಆಗುತ್ತಿದೆ. ಹೆಚ್ಚು ಬಾರಿ ರಕ್ತದಾನ ಮಾಡ ಬೇಕು. ತುರ್ತು ಸಂದರ್ಭಗಳಲ್ಲಿ ಅವಶ್ಯಕತೆ ಇರುವವರಿಗೆ ಸಹಕಾರಿ ಆಗುತ್ತದೆ ಎಂದು ತಿಳಿಸಿದರು.
ಸೊಸೈಟಿಯ ವಿರೇಶ್, ಅನಿಲ್ ಕುಂಚಿ, ಕೃಷ್ಣಮೂರ್ತಿ, ಅಶೊಕ್ ಬಾರಿ ಮತ್ತಿತರರು ಉಪಸ್ಥಿತರಿದ್ದರು.