ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಅರ್ಹ ಫಲಾನುಭವಿಗಳಿಂದ ಹಣ ಪಡೆದರೆ ಕಠಿಣ ಕ್ರಮ: ಸಂಸದ ಬಿವೈಆರ್ ಎಚ್ಚರಿಕೆ…

Share Below Link

ಶಿಕಾರಿಪುರ: ಸರ್ಕಾರದ ಸೌಲಭ್ಯ ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪಬೇಕು ಅಧಿಕಾರಿಗಳು, ಮದ್ಯವರ್ತಿಗಳು ಈ ಬಗ್ಗೆ ಮುಗ್ದ ಫಲಾನುಭವಿ ಗಳಿಂದ ಹಣ ದೋಚಿದ ಬಗ್ಗೆ ಸೂಕ್ತ ಮಾಹಿತಿ ನೀಡಿದಲ್ಲಿ ಅಂತಹ ಹಣವನ್ನು ವಾಪಾಸ್ ಕೊಡಿಸಿ ತಪ್ಪಿತಸ್ಥರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣ ದಲ್ಲಿ ಡಾ. ಅಂಬೇಡ್ಕರ್ ಅಭಿವೃದ್ದಿ ನಿಗಮ,ಆದಿ ಜಾಂಬವ ಅಭಿವೃದ್ದಿ ನಿಗಮ, ತಾಂಡಾ ಅಭಿವೃದ್ದಿ ನಿಗಮದ ವತಿಯಿಂದ ನಡೆದ ಬಾಬು ಜಗಜೀವನರಾಂ ದ್ವಿಚಕ್ರ ವಾಹನ ಯೋಜನೆ ಮತ್ತು ಸಾಲ ಸೌಲಭ್ಯ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಡವರು ದೀನದಲಿತರು ಶೋಷಿತರ ಕಲ್ಯಾಣಕ್ಕಾಗಿ ಹಾಗೂ ಸ್ವಾವಲಂಭನೆಯ ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಗೊಳಿಸಿದೆ ಎಂದು ತಿಳಿಸಿದರು.
ವಿವಿಧ ನಿಗಮದಡಿಯಲ್ಲಿ ನೀಡಲಾಗುತ್ತಿರುವ ಸಾಲ ಸೌಲಭ್ಯ ವನ್ನು ಫಲಾನುಭವಿಗಳು ಪಡೆದ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳು ವಂತೆ ತಿಳಿಸಿದರು. ಸಾಲ ಸೌಲಭ್ಯಕ್ಕಾಗಿ ಮದ್ಯವರ್ತಿಗಳು ಅಧಿಕಾರಿಗಳು ಲಂಚ ಪಡೆದು ಫಲಾನುಭವಿಗಳನ್ನು ವಂಚಿಸಿದ್ದಲ್ಲಿ ಅಂತಹವರ ಬಗ್ಗೆ ಸೂಕ್ತತಿ ಮಾಹಿತಿ ನೀಡಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ವಿತರಿಸುತ್ತಿರುವ ಗ್ಯಾರೆಂಟಿ ಕಾರ್ಡ್ ಬಗ್ಗೆ ಮೋಸ ಹೋಗದಂತೆ ಎಚ್ಚರಿಸಿದ ಅವರು, ಈಗಾಗಲೇ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ವಿವಿಧ ನಿಗಮದ ಮೂಲಕ ಸರ್ಕಾರದ ಸೌಲಭ್ಯವನ್ನು ಎಲ್ಲ ವರ್ಗಕ್ಕೆ ದೊರಕಿಸಿಕೊಟ್ಟು ಆರ್ಥಿಕ ಭದ್ರತೆಯನ್ನು ಕಲ್ಪಿಸಿಕೊಟ್ಟಿದ್ದಾರೆ ಸ್ವಾತಂತ್ರ ದೊರಕಿದ ೭೦ ವರ್ಷ ದೇಶದ ಆಡಳಿತ ಚುಕ್ಕಾಣಿ ಹಿಡಿದು ಜನತೆಗೆ ಯಾವುದೇ ಸೌಲಭ್ಯ ದೊರಕಿಸಿಕೊಡದ ಕಾಂಗ್ರೆಸ್ ಪಕ್ಷ ಇದೀಗ ಗ್ಯಾರೆಂಟಿ ಕಾರ್ಡ್ ಎಂದು ಹೇಳಿ ಜನತೆಯನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಆರೋಪಿಸಿದ ಅವರು ಈ ಬಗ್ಗೆ ಮತದಾರರು ಜಾಗೃತರಾಗಬೇಕು ಇದೀಗ ಸರ್ಕಾರ ನೀಡುತ್ತಿರುವ ಸೌಲಭ್ಯದ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಸಾಲದ ಚೆಕ್ ಹಾಗೂ ಬೈಕ್ ವಿತರಿಸಲಾಯಿತು. ಎಂಎಡಿಬಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ, ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಉಪಾಧ್ಯಕ್ಷ ರೇವಣಪ್ಪ ಕೊಳಗಿ, ಪುರಸಭಾಧ್ಯಕ್ಷೆ ರೇಖಾಬಾಯಿ, ತಾ.ಪಂ ಇಒ ಪರಮೇಶ್, ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.