ನೂರು ಕಣ್ಣು ಸಾಲದು ನಿನ್ನ ಅಂದ ನೋಡಲು …
ಓ ಗೆಳತಿ…
ನೀನೆಷ್ಟು ಚಂದ ಇದ್ದೀಯೆ ಗೊತ್ತಾ…
ನಾ ನಿನ್ನ ಕಂಡ ಪ್ರತಿ ಕ್ಷಣವೂ ನನಗರಿವಿಲ್ಲದೇ
ನನ್ನೊಳಗೆ ಒಂದು ಹೊಸ ಕವಿತೆ ಹುಟ್ಟುತ್ತದೆ.
ನಿನ್ನ ಸುಂದರವಾದ ಮುಖ ನೋಡಿದಾಗ
ಬೆಳದಿಂಗಳು ಏಕೆ ಇಷ್ಟು ಮನವಾಗಿದೆ
ಎಂದು ನನಗೆ ಅರ್ಥವಾಗುತ್ತದೆ.
ನಿನ್ನ ಹೊಳೆಯುವ ಕಣ್ಣುಗಳ ಆ ಮಿಂಚನ್ನು ಕಂಡಾಗ,
ಆಕಾಶದ ನಕ್ಷತ್ರಗಳೆಲ್ಲ ನಿನ್ನ ಕಣ್ಣಂಚಿನಲ್ಲಿ ಬಂದು
ನೆಲೆಸಿವೆಯೇನೋ ಅನ್ನಿಸುತ್ತದೆ.
ಆ ಕಣ್ಣುಗಳ ನೋಟಕ್ಕೆ ಸಿಲುಕಿದ ಮೇಲೆ
ನನಗೆ ಹೊರಬರಲು ಮನಸ್ಸೇ ಆಗುವುದಿಲ್ಲ ಕಣೋ..!
ನಿನ್ನ ಆ ಕಣ್ಣುಗಳು ನನಗೆ ಕೇವಲ ಕಣ್ಣುಗಳಲ್ಲ…
ಅವು ಸಾವಿರ ಮಾತುಗಳನ್ನು
ಮನದ ಹೇಳುವ ಎರಡು ಕವಿತೆಗಳು.
ಒಮ್ಮೆ ನಿನ್ನ ಕಣ್ಣು ನನ್ನ ಕಣ್ಣನ್ನು ಭೇಟಿಯಾದರೆ ಸಾಕು
ನನಗೆ ನನ್ನ ಸುತ್ತಲಿನ ಜಗತ್ತೇ ಕ್ಷಣಕಾಲ ನಿಂತಂತೆ ಭಾಸವಾಗುತ್ತದೆ.
ಆ ನಿನ್ನ ಪುಟ್ಟ ಮೂಗುತಿ ಹೊತ್ತ ಮೂಗು …
ಮುಖದ ಸೌಂದರ್ಯಕ್ಕೆ ಇನ್ನಷ್ಟು
ಅರ್ಥ ತುಂಬುವ ಒಂದು ಸುಂದರ ರೇಖೆ.
ಗಾಳಿಗೆ ತೂಗುವ ನಿನ್ನ ಕೇಶರಾಶಿ ನೋಡಿದಾಗ,
ಕಪ್ಪು ಮೋಡಗಳಿಗೂ ನಾಚಿಕೆಯಾಗಬಹುದು ಅನ್ನಿಸುತ್ತದೆ.
ಮುಂಗುರುಳುಗಳು ಕೆನ್ನೆಯ ಮೇಲೆ ಬಂದು ಆಟವಾಡುವಾಗ,
ಅವುಗಳ ಜೊತೆ ನನ್ನ ಮನಸ್ಸೂ ಮಗುವಾಗಿ ಬಿಡುತ್ತದೆ.
ನಿನ್ನ ಈ ಸೌಂದರ್ಯವನ್ನು ಹೇಗೆ ವರ್ಣಿಸಲಿ
ನೂರಾರು ಪದಗಳನ್ನು ಹುಡುಕಿಕೊಂಡು ಬಂದರೂ,
ಅವೆಲ್ಲವೂ ನಿನ್ನ ಮುಂದೆ ಸೋತು ಹೋಗುತ್ತವೆ.
ಸಾವಿರ ಉಪಮೆಗಳನ್ನು ಜೋಡಿಸಿದರೂ,
ಅವು ನಿನ್ನ ಅಂದದ ಒಂದೇ ಒಂದು ಕಣವನ್ನೂ ಹಿಡಿದಿಡಲಾರವು.
ನಿನ್ನನ್ನು ಬಣ್ಣಿಸಲು ನೂರು ಕವಿತೆಗಳು ಸಾಲದು.
ನಿನ್ನನ್ನು ನೋಡಲು ನೂರು ಕಣ್ಣುಗಳಿದ್ದರೂ ಸಾಲದು.
ಈ ಹೊಳೆವ ಕಣ್ಣಿನ ನೋಟ…
ಮುಂಗುರುಳ ತೂಗುವಾಟ…
ನಗುತಿರುವ ತುಟಿಗಳ ಮಾಟ…
ಚೆಲುವಿನಿಂದ ತುಂಬಿದ ಆ ಮೈಮಾಟ…
ಎಲ್ಲವನ್ನೂ ಕಂಡು ನಾನು ಮೂಕನಾಗಿzನೆ.
ನಿನ್ನನ್ನು ನೋಡಿದಾಗ ಮಾತುಗಳು ನನ್ನ ತುಟಿಗಳ ನಿಂತು ಹೋಗುತ್ತವೆ.
ಹೇಳಬೇಕೆಂದಿರುವ ಸಾವಿರ ಭಾವನೆಗಳು ಹೃದಯದೊಳಗೆ ಅಲೆಗಳಂತೆ ಎದ್ದು ಬರುತ್ತವೆ.
ಆದರೆ ಅವುಗಳಿಗೆ ಭಾಷೆ ಸಿಗುವುದಿಲ್ಲ.
ಬಹುಶಃ ಅದಕ್ಕೇ ಪ್ರೀತಿಗೆ ಮಾತುಗಳಿಗಿಂತ
ಮನವೇ ಹೆಚ್ಚು ಅರ್ಥ ಕೊಡುತ್ತದೆ ಅಲ್ವಾ…!
ನೀ ಬಂಗಾರದ ಸಿಂಗಾರಿಯಂತೆ ನನ್ನ ಕಣ್ಣ ಮುಂದೆ ನಿಂತಾಗ,
ಕಾಲವೇ ಕ್ಷಣಕಾಲ ತನ್ನ ಹೆಜ್ಜೆ ನಿಲ್ಲಿಸಿದಂತೆ ಅನಿಸುತ್ತದೆ.
ನಿನ್ನ ನಗು ನನ್ನ ಬೆಳಗು.
ನಿನ್ನ ನೆನಪು ನನ್ನ ರಾತ್ರಿ.
ನಿನ್ನ ಮಾತು ನನ್ನ ಮನಸ್ಸಿಗೆ ಮಳೆಯ ಹನಿಯಂತೆ.
ನೀ ಹತ್ತಿರವಿದ್ದರೆ ಬದುಕು ಹಬ್ಬದಂತೆ.
ನೀ ದೂರವಿದ್ದರೆ ಅದೇ ಬದುಕು ಏನೋ ಕಳೆದುಕೊಂಡಂತೆ ಅನಿಸುತ್ತದೆ.
ನನ್ನ ಪಾಲಿಗೆ ಪ್ರೀತಿ ಎಂದರೆ ದೊಡ್ಡ ದೊಡ್ಡ ಮಾತುಗಳಲ್ಲ.
ಪ್ರತಿ ಕ್ಷಣವೂ ನಿನ್ನನ್ನು ನೆನಪಿಸಿಕೊಳ್ಳುವುದು.
ನಿನ್ನ ಸಂತೋಷದಲ್ಲಿ ನನ್ನ ಸಂತೋಷ ಹುಡುಕುವುದು.
ನಿನ್ನ ನೋವಿನಲ್ಲಿ ನನ್ನ ಹೃದಯವೂ ಮನವಾಗಿ ನೋಯುವುದು.
ನೀ ನಗಬೇಕು ಎನ್ನುವುದೇ ನನ್ನೊಳಗಿನ ಪುಟ್ಟ ಆಸೆ.
ಜನ್ಮವೆಂಬುದು ನಿಜಕ್ಕೂ ಎಷ್ಟು ವಿಚಿತ್ರ ನೋಡು.
ನನ್ನ ಈ ಜನ್ಮದಲ್ಲಷ್ಟೇ ಅಲ್ಲ…
ಮುಂದಿನ ಜನ್ಮಗಳಲ್ಲೂ ನನ್ನ ಹೃದಯ ಹುಡುಕಬೇಕಾದ
ಒಂದೇ ಮುಖ ನೀನಾಗಿರಲಿ ಎಂಬುದು ಹೃದಯದ ಪ್ರಾರ್ಥನೆ.
ನೀ ಇಲ್ಲದೆ ಬಾಳಲಾರೆ ಎನ್ನುವುದು
ಕೇವಲ ಪ್ರೇಮದ ಮಾತಲ್ಲ.
ನನ್ನ ಬದುಕಿನ ಪ್ರತಿಯೊಂದು ಸಣ್ಣ ಸಂತೋಷದಲ್ಲೂ
ನಿನ್ನ ನೆನಪಿನ ನೆರಳಿದೆ ಎಂಬ ಸತ್ಯ.
ನನ್ನ ಕನಸುಗಳಲ್ಲಿ ನೀ ಇದ್ದೀಯೆ.
ನನ್ನ ನಾಳೆಗಳಲ್ಲಿ ನೀ ಇದ್ದೀಯೆ.
ನನ್ನ ಹೃದಯದ ಪ್ರತಿಯೊಂದು ಬಡಿತದಲ್ಲೂ
ನಿನ್ನ ಹೆಸರಿನ ಪ್ರತಿಧ್ವನಿಯಿದೆ.
ಓ ಗೆಳತಿ…
ನಿನ್ನನ್ನು ಪ್ರೀತಿಸುವುದೆಂದರೆ
ನಿನ್ನ ಸೌಂದರ್ಯವನ್ನು ಮಾತ್ರ ಪ್ರೀತಿಸುವುದಲ್ಲ.
ನಿನ್ನ ನಗು,
ನಿನ್ನ ಮನ,
ನಿನ್ನ ಕೋಪ,
ನಿನ್ನ ಮುನಿಸು,
ನಿನ್ನ ಸರಳತೆ…
ನಿನ್ನನ್ನು ನೀನಾಗಿಸುವ ಪ್ರತಿಯೊಂದು ಅಂಶವನ್ನೂ ಪ್ರೀತಿಸುವುದು.
ಆದ್ದರಿಂದಲೇ ಮನಪೂರ್ವಕವಾಗಿ ಹೇಳುತ್ತೇನೆ…
ನನ್ನ ಜನ್ಮ ಜನ್ಮಾಂತರದಲ್ಲೂ ನೀನೇ ನನ್ನವಳಾಗಿರಬೇಕು. ನಿನ್ನ ಕೈ ಹಿಡಿದು ಸಾಗುವ ದಾರಿಯೇ ನನ್ನ ಬದುಕಿನ ದಾರಿ.
ನಿನ್ನ ನಗು ನನ್ನ ಪಾಲಿನ ಸ್ವರ್ಗ.
ನಿನ್ನ ಪ್ರೀತಿ ನನ್ನ ಜೀವದ ಜೀವ.
ನೂರು ಕಣ್ಣುಗಳಿದ್ದರೂ ಸಾಲದು ನಿನ್ನನ್ನು ನೋಡಲು…
ಆದರೆ ಒಂದೇ ಹೃದಯ ಸಾಕು
ನಿನ್ನನ್ನು ಜೀವಮಾನವಿಡೀ ಪ್ರೀತಿಸಲು.
ಈ ನನ್ನ ಪುಟ್ಟ ಹೃದಯಕ್ಕೆ ಬಂದು
ಅದಕ್ಕೊಂದು ಅರ್ಥ ನೀಡಿದ ನನ್ನ ಬಾಳಿನ ಕವಿತೆ ನೀನು…
ಗೊಂಬೆ ಹೇಳುತೈತೆ… ಮತ್ತೆ ಹೇಳುತೈತೆ…
ನೀನೇ ನನ್ನ ಹೃದಯದ ರಾಜಕುಮಾರಿ.
