ಯಾರು ಏನೇ ಹೇಳಲಿ… ನಿಮ್ಮ ಮಲ್ಯವನ್ನು ನೀವು ಕಳೆದುಕೊಳ್ಳಬೇಡಿ…! ಆತ್ಮವಿಶ್ವಾಸದಿಂದ ಮುನ್ನಡೆಯಿರಿ..
ಕೆಲವೊಮ್ಮೆ ಬದುಕಿನಲ್ಲಿ ಎದುರಾಗುವ ಕೆಲವು ಸಣ್ಣ ಘಟನೆಗಳು ನಮ್ಮ ಮನಸ್ಸಿನ ಮೇಲೆ ಅಚ್ಚಳಿಯದ ಗುರುತು ಮೂಡಿಸುತ್ತವೆ. ಇನ್ನೊಬ್ಬರ ಜೀವನದಲ್ಲಿ ನಾವು ಹೇಳುವ ಒಂದೇ ಒಂದು ಮಾತು, ತುಂಬಿ ತುಳುಕುತ್ತಿರುವ ಅವರ ನೋವಿಗೆ ಸಾಂತ್ವನವಾಗಬಹುದು. ಬದುಕು ಮುಗಿದಿದೆ ಎಂದುಕೊಂಡ ಕ್ಷಣದಲ್ಲಿ ಹೊಸ ಭರವಸೆಯ ಕಿರಣವಾಗಬಹುದು.
ಅಂದು ಭಾನುವಾರ, ಸೆ.೧೩ರಂದು ಬೆಳಗ್ಗೆ ಸುಮಾರು ೧೧.೪೫ರ ಸಮಯ. ಸವಳಂಗ ರಸ್ತೆಯಲ್ಲಿರುವ ಸರ್ಜಿ ಕನ್ವೆನ್ಷನ್ ಹಾಲ್ನಲ್ಲಿ ನಡೆಯುತ್ತಿದ್ದ ಗ್ರಾಜ್ಯುಯೇಟ್ಸ್ ಸೊಸೈಟಿಯ ಜನರಲ್ ಬಾಡಿ ಮೀಟಿಂಗ್ನಲ್ಲಿ ಭಾಗವಹಿಸಲು ಕಾರಿನಲ್ಲಿ ತೆರಳುತ್ತಿz. ಮಹಾವೀರ ಸರ್ಕಲ್ ದಾಟಿ ಜಯನಗರ ಪೊಲೀಸ್ ಠಾಣೆಯ ಬಸ್ ನಿಲ್ದಾಣದ ಬಳಿ ಸಾಗುತ್ತಿzಗ, ಬಸ್ಗಾಗಿ ಕಾಯುತ್ತಿದ್ದ ವ್ಯಕ್ತಿಯೊಬ್ಬರು ಕಣ್ಣಿಗೆ ಬಿದ್ದರು. ಅವರ ಮುಖದಲ್ಲಿ ಏನೋ ಆತಂಕ, ಭಯ ಎದ್ದು ಕಾಣುತ್ತಿತ್ತು. ಪರಿಚಿತ ಮುಖವೊಂದು ಎಂಬ ಭಾವನೆ ಮೂಡಿತು. ಆದರೆ ಕಾರು ಮುಂದೆ ಸಾಗಿತ್ತು. ಮನಸ್ಸು ಮಾತ್ರ ಅಲ್ಲಿಯೇ ನಿಂತಿತ್ತು.
ಅವರೇ ಇರಬಹುದೇ?! ಎಂಬ ಅನುಮಾನ ಕಾಡಿತು. ಮುಂದೆ ಸ್ಟೇಡಿಯಂ ಬಳಿ ಯು-ಟರ್ನ್ ಮಾಡಿಕೊಂಡು, ಮಹಾವೀರ ವೃತ್ತದ ಮೂಲಕ ಮತ್ತೆ ಬಸ್ ನಿಲ್ದಾಣದ ಬಳಿ ಬಂದೆ. ನನ್ನ ಊಹೆ ಸರಿಯಾಗಿತ್ತು. ಅವರು ನನಗೆ ಪರಿಚಯಸ್ಥರೇ ಆಗಿದ್ದರು. ಒಂದೆರಡು ವರ್ಷಗಳಿಂದ ಅವರನ್ನು ನೋಡಿರಲಿಲ್ಲ.
ಕಾರು ನಿಲ್ಲಿಸಿ ಬಲಭಾಗದ ಕಿಟಕಿಯನ್ನು ಸ್ವಲ್ಪ ಕೆಳಗಿಳಿಸಿದೆ. ಅವರು ನನ್ನನ್ನು ಗಮನಿಸಲಿಲ್ಲ. ಆದರೆ ಅವರ ಮುಖವನ್ನು ಮತ್ತೊಮ್ಮೆ ನೋಡಿದಾಗ ನನ್ನ ಅನುಮಾನ ಮತ್ತಷ್ಟು ಗಟ್ಟಿಯಾಯಿತು. ಕಣ್ಣಂಚಿನಲ್ಲಿ ನೀರು. ಮುಖದಲ್ಲಿ ಆತಂಕ. ಮನಸ್ಸಿನಲ್ಲಿ ಯಾವುದೋ ದೊಡ್ಡ ನೋವು.
ಹಾಯ್… ಎಂದು ಕರೆದಾಗ ಅವರು ತಕ್ಷಣ ಸಾವರಿಸಿಕೊಂಡು, ನಮಸ್ತೆ ಸಾರ್ ಎಂದರು.
ಹೇಗಿದ್ದೀರಿ? ಏನಿದು ಇಲ್ಲಿ? ಎಂದು ಕೇಳಿದೆ.
ಏನಿಲ್ಲ ಸಾರ್.. ಬಸ್ಗಾಗಿ ಕಾಯುತ್ತಿzನೆ ಎಂದರು.
ಅವರ ಧ್ವನಿಯ ನೋವು ಅಡಗಿತ್ತು. ತಡ ಮಾಡದೆ, ಬನ್ನಿ, ನಾನು ಆ ಕಡೆಯೇ ಹೋಗುತ್ತಿzನೆ. ಡ್ರಾಪ್ ಮಾಡುತ್ತೇನೆ ಎಂದೆ.
ಪರವಾಗಿಲ್ಲ ಸಾರ್, ನಾನು ಹೋಗುತ್ತೇನೆ ಎಂದರು.
ಅಯ್ಯೋ, ಬನ್ನಿ ಮಾರ್ರೆ… ನಾನು ಇದೇ ದಾರಿಯಲ್ಲಿ ಹೋಗುತ್ತಿzನೆ ಎಂದು ಒತ್ತಾಯಿಸಿದೆ. ಕೊನೆಗೆ ಅವರು ಕಾರು ಹತ್ತಿದರು. ಕಾರು ನಿಧಾನವಾಗಿ ಸಾಗುತ್ತಿತ್ತು. ಅವರು ಮಾತ್ರ ಮನವಾಗಿ ಕುಳಿತಿದ್ದರು. ಮಾತೇ ಇರಲಿಲ್ಲ. ಅವರ ಮುಖವನ್ನು ಗಮನಿಸುತ್ತಿದ್ದ ನನಗೆ, ಅವರೊಳಗೆ ಯಾವುದೋ ದೊಡ್ಡ ಸಂಘರ್ಷ ನಡೆಯುತ್ತಿದೆ ಎಂಬುದು ಸ್ಪಷ್ಟವಾಗುತ್ತಿತ್ತು.
ತುಂಬಾ ದಿನ ಆಯಿತು ನಿಮ್ಮನ್ನು ನೋಡಿ ಎಂದು ಮಾತು ಆರಂಭಿಸಿದೆ.
ಹೂಂ ಸಾರ್.. ಎಂಬ ಸಣ್ಣ ಉತ್ತರ.
ಯಾಕೆ ಡಲ್ ಆಗಿ ಇದ್ದೀರಿ? ಏನಾಯ್ತು? ಎಂದು ಮತ್ತೆ ಕೇಳಿದೆ.
ಹಾಗೇನಿಲ್ಲ ಬಿಡಿ ಸಾರ್ ಎಂದರು.
ಹೇಳಿ, ಪರವಾಗಿಲ್ಲ. ಮನಸ್ಸಿನಲ್ಲಿ ತುಂಬಾ ನೋವನ್ನು ಇಟ್ಟುಕೊಳ್ಳಬಾರದು. ಯಾರ ಹತ್ತಿರವಾದರೂ ಹೇಳಿಕೊಳ್ಳಬೇಕು ಎಂದು ಹೇಳಿದೆ.
ಅಷ್ಟರಲ್ಲಿ ಅವರು ನಿಟ್ಟುಸಿರು ಬಿಟ್ಟು,
ಏನು ಹೇಳೋದು ಸಾರ್… ಎಲ್ಲವೂ ನನ್ನ ಕರ್ಮ… ಎಂದರು.
ಅವರ ಮಾತು ನನ್ನ ಮನಸ್ಸನ್ನು ಮತ್ತಷ್ಟು ಕಾಡಿತು.
ಸಿಗ್ನಲ್ನಲ್ಲಿ ಕಾರು ನಿಂತಾಗ ಅವರು, ಸಾರ್… ನೀವು ನೇರವಾಗಿ ಹೋಗೋದಲ್ವೇ, ನಾನು ಇ ಇಳಿಯುತ್ತೇನೆ. ಬಸ್ನಲ್ಲಿ ಹೋಗುತ್ತೇನೆ ಎಂದರು.
ಪರವಾಗಿಲ್ಲ. ನಾನು ನಿಮ್ಮನ್ನು ಮನೆ ಬಳಿ ಬಿಟ್ಟು ಹೋಗುತ್ತೇನೆ. ನನಗೇನೂ ಅರ್ಜೆಂಟ್ ಇಲ್ಲ ಎಂದು ಹೇಳಿ ಕಾರನ್ನು ೧೦೦ ಅಡಿ ರಸ್ತೆಯತ್ತ ತಿರುಗಿಸಿದೆ. ಸ್ವಲ್ಪ ದೂರದಲ್ಲಿ ಗಣಪತಿ ದೇವಸ್ಥಾನದ ಸಮೀಪದ ಮರದ ಬಳಿ ಕಾರು ನಿಲ್ಲಿಸಿದೆ.
ಹೇಳಿ… ಈಗ ಯಾಕೆ ಇಷ್ಟೊಂದು ಆತಂಕದಲ್ಲಿದ್ದೀರಿ? ಏನಾಯಿತು? ಎಂದು ನೇರವಾಗಿ ಕೇಳಿದೆ.
ಮೆಲ್ಲನೆ ಕಣ್ಣೀರು ಸುರಿಸುತ್ತಾ ಅವರು ಮಾತನಾಡತೊಡಗಿದರು.
ನಾನು ತುಂಬಾ ನಂಬಿದವರೇ ನನ್ನ ಕುತ್ತಿಗೆಗೆ ಚೂರಿ ಹಾಕಿಬಿಟ್ಟರು ಸಾರ್. ಜೀವನವೇ ಬೇಡ ಅನ್ನಿಸುತ್ತಿದೆ. ಸತ್ತು ಹೋಗಿಬಿಡೋಣ ಅನ್ನಿಸಿತ್ತು ಎಂದರು.
ಆ ಮಾತು ಕೇಳಿ ಒಂದು ಕ್ಷಣ ನಾನೇ ಬೆಚ್ಚಿಬಿz.
ಅಯ್ಯೋ… ಹಾಗೆಲ್ಲ ಯೋಚಿಸಬಾರದು. ಏನಾಯಿತು? ಎಲ್ಲವನ್ನೂ ಹೇಳಿ ಎಂದು ಧೈರ್ಯ ತುಂಬಿದೆ.
ಅವರು ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ಒಂದೊಂದಾಗಿ ವಿವರಿಸುತ್ತಾ ಹೋದರು. ಅವರು ಹೇಳಿದ್ದನ್ನು ಕೇಳುತ್ತಿದ್ದಂತೆ, ಅವರ ನೋವಿನ ಆಳ ನನಗೆ ಅರ್ಥವಾಗತೊಡಗಿತು.
ಅವರ ಆತ್ಮವಿಶ್ವಾಸವನ್ನು ಕುಗ್ಗಿಸುವ ಪ್ರಯತ್ನಗಳು, ತಮ್ಮ ಬಗ್ಗೆ ನಡೆಯುತ್ತಿರುವ ಅಪಪ್ರಚಾರ ಮತ್ತು ತೇಜೋವಧೆಯಿಂದ ಅವರು ಮಾನಸಿಕವಾಗಿ ಸಂಪೂರ್ಣ ಕುಸಿದಿದ್ದರು.
ನಾನು ಅವರಿಗೆ ಹೇಳಿದೆ…
ನೋಡಿ.. ನಿಮ್ಮ ಪ್ರತಿಭೆ, ಆತ್ಮವಿಶ್ವಾಸ ಮತ್ತು ನಿಮ್ಮ ಸಾಮರ್ಥ್ಯವನ್ನು ಕಂಡು, ನಾಳೆ ನೀವು ತಮಗೆ ಸ್ಪರ್ಧಿಯಾಗ ಬಹುದು ಎಂಬ ಭಯ ಕೆಲವರಲ್ಲಿ ಇರಬಹುದು. ನೀವು ಎದೆಗುಂದದೆ ಮುಂದೆ ಸಾಗುತ್ತಿದ್ದಂತೆ, ಅಂಥವರು ಹತಾಶರಾಗಬಹುದು. ಹತಾಶರಾದವರು ವ್ಯಕ್ತಿಯ ಸಾಮರ್ಥ್ಯವನ್ನು ಎದುರಿಸಲು ಸಾಧ್ಯವಾಗದಾಗ, ಕೆಲವೊಮ್ಮೆ ಅವರ ತೇಜೋವಧೆಗೆ ಮುಂದಾಗುತ್ತಾರೆ. ಅಂತಹ ಮೆಂಟ್ಯಾಲಿಟಿ ಹೊಂದಿರುವ ವ್ಯಕ್ತಿಗಳ ಕಟ್ಟ ಕಡೆಯ ಅಸ್ತವೇ ಅದು ಎಂದೆ.
ಮುಂದುವರೆದು ಯಾರೋ ಏನೋ ಮಾತನಾಡಿದರು ಎಂಬ ಕಾರಣಕ್ಕೆ ನೀವು ನಿಮ್ಮನ್ನೇ ಯಾಕೆ ಕಳೆದುಕೊಳ್ಳಬೇಕು?
ಅವರು ಮನವಾಗಿದ್ದರು.
ಸಾರ್… ನಾವು ಮರ್ಯಾದಸ್ಥ ಕುಟುಂಬದಿಂದ ಬಂದವರು. ಒಂದು ವೇಳೆ ಉಪವಾಸದಿಂದ ಸಾಯುತ್ತೇವೆ. ಆದರೆ ಮರ್ಯಾದೆ ಬಿಟ್ಟು ಬದುಕಲು ಸಾಧ್ಯವೇ? ಎಂದು ನೋವಿನಿಂದ ಪ್ರಶ್ನಿಸಿದರು.
ನೀವು ಹೇಳುವುದು ಸರಿ. ಆದರೆ ನಿಮ್ಮ ಬಗ್ಗೆ ಯಾರೋ ಏನೋ ಹೇಳಿದರು ಎಂಬ ಕಾರಣಕ್ಕೆ ನೀವು ಯಾಕೆ ಭಯಪಡಬೇಕು? ನೀವು ಯಾರು, ನಿಮ್ಮ ವ್ಯಕ್ತಿತ್ವ ಏನು ಎಂಬುದು ನಿಮಗೆ ಗೊತ್ತಲ್ಲವೇ? ಎಂದು ಹೇಳಿದೆ.
ಅಷ್ಟರಲ್ಲಿ ಅವರು ತಮ್ಮ ಮೊಬೈಲ್ ತೆಗೆದು ಕೆಲವು ಸಂದೇಶಗಳು ಮತ್ತು ಬರಹಗಳನ್ನು ತೋರಿಸಿದರು.
ಸಾರ್.. ನೋಡಿ, ಹೇಗೆಲ್ಲ ನನ್ನ ತೇಜೋವಧೆ ಮಾಡುತ್ತಿzರೆ ಎಂದರು.
ಮೊಬೈಲ್ನಲ್ಲಿ ಕಂಡ ಕೆಲವು ದೃಷ್ಯಗಳು, ಬರಹಗಳ ಭಾಷೆ ಅತ್ಯಂತ ಕೀಳುಮಟ್ಟzಗಿತ್ತು. ಅದನ್ನು ಕಂಡ ನನಗೂ ಕ್ಷಣಕಾಲ ಏನು ಹೇಳಬೇಕು ಎಂಬುದು ತೋಚಲಿಲ್ಲ.
ಆದರೆ ಆ ಕ್ಷಣದಲ್ಲಿ ಅವರಿಗೆ ಬೇಕಾಗಿದ್ದದ್ದು ಉಪದೇಶವಲ್ಲ. ಧೈರ್ಯ ಎಂಬುದು ನನಗೆ ತಿಳಿದಿತ್ತು.
ಬನ್ನಿ, ಮೊದಲು ಸ್ವಲ್ಪ ಕಾಫಿ ಕುಡಿಯೋಣ ಎಂದು ಹೇಳಿ ಅವರನ್ನು ಕಾರಿನಿಂದ ಇಳಿಸಿದೆ.
ಅಲ್ಲಿಯೇ ಸಮೀಪದ ಕ್ಯಾಂಟೀನ್ಗೆ ತೆರಳಿ ಇಬ್ಬರೂ ಕಾಫಿ ಕುಡಿದೆವು. ಕಾಫಿ ಕುಡಿಯುತ್ತಾ ಅವರು ತಮ್ಮ ನೋವನ್ನು ಹೇಳಿಕೊಳ್ಳುತ್ತಲೇ ಇದ್ದರು.
ನಂತರ ಅಲ್ಲಿದ್ದ ಕಲ್ಲಿನ ಕುರ್ಚಿಯ ಮೇಲೆ ಕುಳಿತು ಮಾತನಾಡುತ್ತಿzಗ, ನನ್ನ ಜೇಬಿನಿಂದ ನೂರು ರೂಪಾಯಿಯ ನೋಟೊಂದನ್ನು ತೆಗೆದು ಉzಶಪೂರ್ವಕವಾಗಿ ಕೆಳಗೆ ಬಿಟ್ಟೆ.
ಅದನ್ನು ಗಮನಿಸಿದ ಅವರು ತಕ್ಷಣ, ಸಾರ್, ನಿಮ್ಮ ನೂರು ರೂಪಾಯಿ ನೋಟು ಕೆಳಗೆ ಬಿತ್ತು ಎಂದು ಎತ್ತಿ ನನ್ನ ಕೈಗೆ ಕೊಟ್ಟರು.
ನಾನು ನಗುತ್ತಾ ಕೇಳಿದೆ:
ನೋಡಿ, ಈ ನೂರು ರೂಪಾಯಿ ನೋಟು ನನ್ನ ಕೈಯಿಂದ ಕೆಳಗೆ ಬಿದ್ದಿದೆ. ಹೀಗೆ ಕೆಳಗೆ ಬಿದ್ದ ಕೂಡಲೇ ಇದರ ಬೆಲೆ ಏನಾದರೂ ಕಡಿಮೆಯಾಯಿತೇ? ಎಂದು ಕೇಳಿದೆ.
ಏನ್ಸಾರ್… ಅದ್ಹೇಗೆ ಕಡಿಮೆಯಾಗುತ್ತದೆ? ಅದು ನೂರು ರೂಪಾಯಿ ನೋಟೇ ಅಲ್ಲವೇ? ಎಂದರು.
ನಂತರ ಅದೇ ನೋಟನ್ನು ಕೈಯಲ್ಲಿ ಚೆನ್ನಾಗಿ ಮುದುಡಿ ಅವರ ಕೈಗಿಟ್ಟು,
ಈಗ ಕಡಿಮೆಯಾಯಿತೇ? ಎಂದು ಕೇಳಿದೆ.
ನನ್ನ ವರ್ತನೆ ನೋಡಿ ಅವರ ಮುಖದಲ್ಲಿ ಮೊದಲ ಬಾರಿಗೆ ಸಣ್ಣ ನಗು ಮೂಡಿತು.
ಅಯ್ಯೋ ಸಾರ್.. ಅದ್ಹೇಗೆ ಕಡಿಮೆಯಾಗುತ್ತದೆ? ಅದು ನೂರು ರೂಪಾಯಿ ನೋಟು. ಅದನ್ನು ಐರನ್ ಮಾಡಿ ಇಟ್ಟರೂ ನೂರು ರೂಪಾಯಿ. ಮಡಚಿ ಇಟ್ಟರೂ ನೂರು ರೂಪಾಯಿ. ಹೊಸದಾಗಿದ್ದರೂ ನೂರು ರೂಪಾಯಿ. ಚಲಾವಣೆಯಲ್ಲಿ ಓಡಾಡಿ ಹಳೆಯದಾದರೂ ಅದರ ಮುಖಬೆಲೆ ನೂರು ರೂಪಾಯಿಯೇ? ಎಂದರು.
ಅವರ ಮಾತನ್ನು ಹಿಡಿದುಕೊಂಡೇ ನಾನು ಹೇಳಿದೆ…
ಹೌದು, ಇದೇ ನಿಮ್ಮ ಜೀವನದ ಸತ್ಯ. ಈ ನೋಟಿನ ಮಲ್ಯವನ್ನು ಅದು ಎಷ್ಟು ಬಾರಿ ನೆಲಕ್ಕೆ ಬಿದ್ದಿದೆ ಎಂಬುದು ನಿರ್ಧರಿಸುವುದಿಲ್ಲ. ಅದೇ ರೀತಿ ನಿಮ್ಮ ಮಲ್ಯವನ್ನು ಯಾರೋ ನಿಮ್ಮ ಬಗ್ಗೆ ಏನು ಮಾತನಾಡುತ್ತಾರೆ ಎಂಬುದು ನಿರ್ಧರಿಸುವುದಿಲ್ಲ.
ಯಾರೋ ಕಿಡಿಗೇಡಿಗಳು ಏನೋ ಹೇಳಿದರು ಎಂಬ ಕಾರಣಕ್ಕೆ ನಿಮ್ಮ ಮಲ್ಯ ಹೇಗೆ ಕಡಿಮೆಯಾಗುತ್ತದೆ? ನಿಮ್ಮ ಸ್ಥಾನಮಾನ ಏನು, ನಿಮ್ಮ ಸಾಮರ್ಥ್ಯ ಏನು ಎಂಬುದು ನಿಮಗೆ ಗೊತ್ತಿದೆ. ನಿಮ್ಮ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುವವರು, ನಾಳೆ ನೀವು ಸಂಕಷ್ಟದಲ್ಲಿzಗ ನಿಮ್ಮ ನೆರವಿಗೆ ಬರುತ್ತಾರೆಯೇ? ಇಲ್ಲ.?
ಹಾಗಾಗಿ ನಿಮ್ಮ ಮಲ್ಯವನ್ನು ಇತರರ ಮಾತುಗಳಿಂದ ಅಳೆಯಬೇಡಿ. ನಿಮ್ಮ ಬಗ್ಗೆ ನಿಮ್ಮ ಆತ್ಮಸಾಕ್ಷಿಗೆ ಸತ್ಯ ಗೊತ್ತಿದ್ದರೆ ಸಾಕು. ಜೀವನದಲ್ಲಿ ಎಷ್ಟೇ ಬಾರಿ ಕೆಳಗೆ ಬಿದ್ದರೂ, ನಿಮ್ಮ ಮಲ್ಯವನ್ನು ನೀವು ಕಳೆದುಕೊಳ್ಳಬೇಡಿ ಎಂದು ಧೈರ್ಯ ತುಂಬಲು ಪ್ರಯತ್ನಿಸಿದೆ.
ನನ್ನ ಮಾತುಗಳನ್ನು ಅವರು ತದೇಕಚಿತ್ತದಿಂದ ಕೇಳುತ್ತಿದ್ದರು.
ಸ್ವಲ್ಪ ಹೊತ್ತಿನ ನಂತರ ಅವರ ಮುಖದಲ್ಲಿ ಆತಂಕದ ಬದಲು ಆತ್ಮವಿಶ್ವಾಸ ಕಾಣಿಸತೊಡಗಿತು.
ಹೌದು ಸಾರ್… ನೀವು ಹೇಳೋದು ಸರಿ ಇದೆ. ಇಂದು ನೀವು ನನಗೆ ಸಿಕ್ಕಿದ್ದು ತುಂಬಾ ಒಳ್ಳೆಯದಾಯಿತು. ನನ್ನ ಜೀವನದಲ್ಲಿ ನಡೆದ ಘಟನೆಗಳಿಂದ ಬೇಸತ್ತು, ಜೀವನವೇ ಬೇಡ ಅನ್ನಿಸಿತ್ತು. ಆದರೆ ಇನ್ನು ಮುಂದೆ ಯಾವತ್ತೂ ಧೈರ್ಯ ಕಳೆದುಕೊಳ್ಳುವುದಿಲ್ಲ. ಎಂತಹ ಸಂದರ್ಭ ಬಂದರೂ ಧೈರ್ಯದಿಂದ ಎದುರಿಸುತ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳಿದರು.
ಗುಡ್, ಜೀವನ ಎಂದ ಮೇಲೆ ಏಳು-ಬೀಳುಗಳು ಸಹಜ. ಕೆಲವರು ತಮ್ಮ ಅಸೂಯೆ ಮತ್ತು ಹತಾಶೆಯನ್ನು ತೀರಿಸಿಕೊಳ್ಳಲು ಯಾವ ಮಟ್ಟಕ್ಕೂ ಇಳಿಯಬಹುದು. ಆದರೆ ನಾವು ಅವರ ಮಟ್ಟಕ್ಕೆ ಇಳಿಯಬೇಕಿಲ್ಲ. ನಮ್ಮ ಸತ್ಯ, ನಮ್ಮ ಆತ್ಮವಿಶ್ವಾಸ ಮತ್ತು ನಮ್ಮ ಮಲ್ಯವನ್ನು ಕಾಪಾಡಿಕೊಂಡು ಮುಂದೆ ಸಾಗಬೇಕು ಎಂದು ಹೇಳಿದೆ.
ನಂತರ ಅವರನ್ನು ಮತ್ತೆ ಕಾರಿನಲ್ಲಿ ಕೂರಿಸಿಕೊಂಡು ಅವರ ಮನೆಯ ಬಳಿ ಸುರಕ್ಷಿತವಾಗಿ ಬಿಟ್ಟು, ಸಭೆಗೆ ತೆರಳಿದೆ.
ಆದರೆ ಆ ದಿನದ ಘಟನೆ ಮಾತ್ರ ಮನಸ್ಸಿನಿಂದ ಮರೆಯಾಗಲಿಲ್ಲ.
ಒಬ್ಬ ವ್ಯಕ್ತಿ ಆತ್ಮಹತ್ಯೆಯಂತಹ ನೆಗಿಟಿವ್ ಯೋಚನೆಯ ಅಂಚಿನಲ್ಲಿzಗ, ಅವನಿಗೆ ಬೇಕಾಗಿದ್ದು ನಮ್ಮ ಉಪನ್ಯಾಸವಲ್ಲ. ಒಬ್ಬರು ನಿಂತು ಕೇಳುವ ಮನಸ್ಸು, ಒಂದು ಸಾಂತ್ವನದ ಮಾತು ಮತ್ತು ನೀವು ಒಬ್ಬರಲ್ಲ ಎಂಬ ಭರವಸೆ. ಜೀವನದಲ್ಲೂ ಇದೇ ಸತ್ಯ.
ನೂರು ರೂಪಾಯಿ ನೋಟು ನೆಲಕ್ಕೆ ಬಿದ್ದರೂ, ಮಡಚಿದರೂ, ಹಳೆಯದಾದರೂ ಅದರ ಮಲ್ಯ ಕಡಿಮೆಯಾಗುವುದಿಲ್ಲ. ಹಾಗೆಯೇ ನಮ್ಮ ಜೀವನದ ಮಲ್ಯವನ್ನು ಇತರರ ಚುಚ್ಚು ಮಾತು, ಅಪಪ್ರಚಾರ, ಅವಮಾನ ಅಥವಾ ವೈಫಲ್ಯಗಳು ನಿರ್ಧರಿಸುವುದಿಲ್ಲ.
ನಮ್ಮ ನಿಜವಾದ ಮಲ್ಯ ನಮಗೆ ಗೊತ್ತಿದ್ದರೆ ಸಾಕು.
ಬದುಕು ಎಷ್ಟೇ ಬಾರಿ ನಮ್ಮನ್ನು ನೆಲಕ್ಕುರುಳಿಸಿದರೂ, ಮತ್ತೆ ಎದ್ದು ನಿಲ್ಲುವ ಧೈರ್ಯವನ್ನು ಮಾತ್ರ ನಾವು ಕಳೆದುಕೊಳ್ಳಬಾರದು. ಅಲ್ಲವೇ..?
ಅ. ರಾಕೇಶ್ ಡಿಸೋಜ – ೯೪೪೮೩೪೩೨೧೧
