ತಾಜಾ ಸುದ್ದಿಲೇಖನಗಳು

ಏರ್‌ಪೋರ್ಟ್‌ನಲ್ಲಿ ಕಣ್ಣಿಗೆ ಬಿದ್ದ ಹೃದಯವಂತೆ ನೀನು…

Share Below Link

ಜೀವನವೆಂದರೆ ಕೇವಲ ನಗುವಿನ ಹಾದಿಯಲ್ಲ.
ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆ ಕಣ್ಣಂಚು ಒzಯಾಗುತ್ತದೆ.
ಯಾರಿಗೂ ಹೇಳಲಾಗದ ನೋವುಗಳು ಮನಸ್ಸಿನ ಯಾವುದೋ ಮೂಲೆಯಲ್ಲಿ ಮನವಾಗಿ ಕುಳಿತುಕೊಳ್ಳುತ್ತವೆ.
ಅದೇಕೋ ಆ ಕ್ಷಣಗಳಲ್ಲಿ ಮಾತುಗಳಿಗಿಂತಲೂ ನಮ್ಮ ಮನವನ್ನು ಅರ್ಥಮಾಡಿಕೊಳ್ಳುವ ಒಬ್ಬಳು ಗೆಳತಿ ಬೇಕೆನಿಸುತ್ತದೆ.
ಇರಬೇಕು ಒಬ್ಬಳು ಗೆಳತಿ…
ನಮ್ಮ ನೋವುಗಳನ್ನೆಲ್ಲ ಹಂಚಿಕೊಳ್ಳಲು,
ಮನಸ್ಸಿನ ಭಾಷೆಯನ್ನು ಮನಸಿನಿಂದಲೇ ಅರ್ಥೈಸಿಕೊಳ್ಳಲು.
ಕಣ್ಣೀರು ಕೆನ್ನೆಯ ಮೇಲೆ ಜಾರುವ ಮೊದಲೇ ಅದನ್ನು ತಡೆಯುವ ಕೈಯಾಗಬೇಕು.
ಹೇಳದ ಮಾತುಗಳನ್ನೂ ಕೇಳಿ ತಿಳಿಯುವ ಕಿವಿಯಾಗಬೇಕು.
ನಗುವಿನ ಹಿಂದೆ ಮರೆಮಾಚಿದ ದುಃಖವನ್ನು ಕಣ್ಣ ಓದಿಬಿಡುವ ಮನಸ್ಸಾಗಬೇಕು.
ಅಂಥವಳ ಮುಂದೆ ಏನನ್ನೂ ವಿವರಿಸಬೇಕಾಗಿಲ್ಲ.
ಯಾಕೆ.. ಏನಾಯಿತು…? ಎನ್ನುವ ಪ್ರಶ್ನೆಗಳಿಗಿಂತ,
ಸುಮ್ಮನೆ ಪಕ್ಕದಲ್ಲಿ ಕುಳಿತುಕೊಳ್ಳುವ ಅವಳ ಸಾನ್ನಿಧ್ಯವೇ ಸಾವಿರ ಮಾತುಗಳ ಸಾಂತ್ವನವಾಗುತ್ತದೆ.
ಜಗತ್ತೇ ನಮ್ಮನ್ನು ಬಿಟ್ಟು ದೂರ ಸರಿದಂತೆ ಅನಿಸಿದಾಗ,
ನಾನು ಇದ್ದೀನಿ ಕಣೋ..
ಎನ್ನುವ ಒಂದೇ ಒಂದು ಮಾತು ಎದೆಯೊಳಗೆ ಮತ್ತೆ ಬದುಕುವ ಧೈರ್ಯ ತುಂಬುತ್ತದೆ.
ಅವಳ ಜೊತೆಯಿದ್ದರೆ ಬದುಕಿನ ಕಠಿಣ ಹಾದಿಗಳೂ ಕೊಂಚ ಸುಲಭವೆನಿಸುತ್ತವೆ.
ನಮ್ಮ ನೋವನ್ನು ತನ್ನದೇ ನೋವಿನಂತೆ ತಬ್ಬಿಕೊಂಡು,
ಎಲ್ಲವೂ ಸರಿಯಾಗುತ್ತದೆ ಎಂದು ಹೃದಯವನ್ನು ಮುದ್ದಿಸುವ ಗೆಳತಿ ಸಿಕ್ಕರೆ ಅದಕ್ಕಿಂತ ದೊಡ್ಡ ಅದೃಷ್ಟ ಮತ್ತೇನಿದೆ.
ಅದೇನೋ ಮನಸ್ಸಿನ ಯಾವುದೋ ಮೂಲೆಯಲ್ಲಿ
ಮೃದುವಾಗಿ ಕೇಳಿಬರುವಂತೆ
ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು
ಎಂಬ ಹಾಡಿನ ಸಾಲುಗಳು ಅವಳನ್ನು ಕಂಡ ಕ್ಷಣಕ್ಕೆ ಹೊಸ ಅರ್ಥ ಪಡೆದುಕೊಳ್ಳುತ್ತವೆ.
ಅವಳು ಕೇವಲ ಪರಿಚಯವಲ್ಲ.
ಪರಿಚಯದಾಚೆಗಿನ ಒಂದು ಆತ್ಮೀಯತೆ.
ಹೆಸರಿಡಲಾಗದ, ಆದರೆ ಹೃದಯಕ್ಕೆ ಮಾತ್ರ
ಸ್ಪಷ್ಟವಾಗಿ ಅರ್ಥವಾಗುವ ಒಂದು ಸತ್ಸಂಬಂಧ.
ಅಂದು ಉದ್ಯೋಗದ ನಿಮಿತ್ತ ದೂರದ ದೇಶಕ್ಕೆ ಪ್ರಯಾಣ ಹೊರಟಾಗ, ಏರ್‌ಪೋರ್ಟ್‌ನ ಬೆಂಚಿನ ಮೇಲೆ ಏಕಾಂಗಿಯಾಗಿ ಕುಳಿತಿz.
ಮನಸ್ಸಿನಲ್ಲಿ ಒಂದು ರೀತಿಯ ಆತಂಕ…, ಭಯ…
ಸುತ್ತಲೂ ಎಷ್ಟೋ ಮುಖಗಳು.
ಎಷ್ಟೋ ಜನರ ಓಡಾಟ.
ಎಷ್ಟೋ ಹೆಜ್ಜೆಗಳು ಬಂದು ಹೋಗುತ್ತಿದ್ದವು.
ಆದರೆ ಅವುಗಳ ನಡುವೆ ನನ್ನ ಕಣ್ಣಿಗೆ ಬಿದ್ದದ್ದು ಕೇವಲ
ಒಂದು ಮುಖವಲ್ಲ, ಅದೊಂದು ಭರವಸೆ.
ಒಂಟಿತನದ ನಡುವೆ ನನಗೆ ಸಿಕ್ಕ ಸಣ್ಣ ಬೆಳಕು.
ಹೇಳದೆ ಹೇಳುವ ಸ್ನೇಹ. ಹೃದಯಕ್ಕೆ ಹತ್ತಿರವಾದ ಒಂದು ಜೀವ.
ಮೊದಲ ಭೇಟಿಯ ಹೃದಯಕ್ಕೆ ಇಷ್ಟು ಹತ್ತಿರವಾಗುವವರು ಕೆಲವರೇ.
ಅವರೊಂದಿಗೆ ಕಳೆದ ಕ್ಷಣಗಳು ಕಡಿಮೆಯಾದರೂ,
ನೆನಪುಗಳು ಮಾತ್ರ ದೀರ್ಘವಾಗಿರುತ್ತವೆ.
ಮಾತುಗಳು ಮರೆತುಹೋದರೂ,
ಅವರು ಕೊಟ್ಟ ನೆಮ್ಮದಿ ಮಾತ್ರ ಎಂದಿಗೂ ಮರೆಯಾಗುವುದಿಲ್ಲ.
ಕೆಲವೊಮ್ಮೆ ಅವಳ ನಗು ನೋಡಿದಾಗ
ಕೈಫಿ ಅಜ್ಮಿ ಅವರು ರಚಿಸಿದ,
ಖ್ಯಾತ ಗಾಯಕ ಜಗಜಿತ್ ಸಿಂಗ್ ಅವರು ಹಾಡಿದ
ಅರ್ಥ್ ಸಿನಿಮಾದ ಹಾಡು ನೆನಪಿಗೆ ಬರುತ್ತದೆ.
ತುಮ್ ಇಟ್ನಾ ಜೋ ಮುಸ್ಕುರಾ ರಹೇ ಹೋ,
ಕ್ಯಾ ಘಮ್ ಹೈ ಜಿಸ್ಕೋ ಛುಪಾ ರಹೇ ಹೋ..
ನಗುವಿನ ಹಿಂದೆ ಏನಿದೆ ಎಂದು ತಿಳಿಯಬೇಕೆನಿಸುತ್ತದೆ.
ಅವಳ ನೋವುಗಳನ್ನೂ ನನ್ನದಾಗಿಸಿಕೊಳ್ಳಬೇಕೆನಿಸುತ್ತದೆ.
ಏಕೆಂದರೆ ನಿಜವಾದ ಸ್ನೇಹವೆಂದರೆ ಕೇವಲ ಸಂತೋಷದಲ್ಲಿ ಜೊತೆಯಾಗಿರುವುದಲ್ಲ.
ಒಬ್ಬರ ಕಣ್ಣೀರಿನ ತೂಕವನ್ನು ಮತ್ತೊಬ್ಬರು ಅರಿತುಕೊಳ್ಳುವುದೂ ಹೌದು.
ಜೀವನದ ಪುಸ್ತಕದಲ್ಲಿ ಕೆಲವು ಪುಟಗಳು ನಮಗೆ ಇಷ್ಟವಾಗದಿದ್ದರೂ,
ಅವುಗಳ ನಡುವೆ ಒಂದು ಸುಂದರ ಸಾಲಿನಂತೆ ಬರುವವರು ಇಂಥ ಗೆಳತಿಯರು.
ಅವರು ಬಂದ ಮೇಲೆ ಸಮಸ್ಯೆಗಳು ಮಾಯವಾಗುವುದಿಲ್ಲ.
ಆದರೆ ಅವುಗಳನ್ನು ಎದುರಿಸುವ ಮನಸ್ಸು ಮಾತ್ರ ಬಲವಾಗುತ್ತದೆ.
ಒಂಟಿತನದ ಮಧ್ಯೆ ಮನಸ್ಸು ಹಗುರವಾಗುತ್ತದೆ.
ನೋವಿನ ನಡುವೆ ನಗು ಅರಳುತ್ತದೆ.
ಕತ್ತಲೆಯ ಹಾದಿಯಲ್ಲೂ ಜೊತೆಯಾಗಿ ನಡೆಯುವ ಹೆಜ್ಜೆಯೊಂದು ಸಿಕ್ಕಂತಾಗುತ್ತದೆ.
ಅದಕ್ಕೇ ಅನಿಸುತ್ತದೆ,
ಬಾಳಿನಲ್ಲಿ ಎಲ್ಲರೂ ಬೇಕೆಂದಿಲ್ಲ.
ನಮ್ಮ ಮನಸ್ಸನ್ನು ಕೇಳುವ ಒಬ್ಬಳು,
ಕಣ್ಣೀರನ್ನು ಅರ್ಥಮಾಡಿಕೊಳ್ಳುವ ಒಬ್ಬಳು,
ಕುಸಿದಾಗ ಕೈ ಹಿಡಿಯುವ ಒಬ್ಬಳು,
ಜಗವೇ ದೂರವಾದರೂ ನಾನು ಇದ್ದೀನಿ
ಎಂದು ಹೇಳುವ ಒಬ್ಬಳು ಗೆಳತಿ ಇದ್ದರೆ ಸಾಕು.
ಆಗ ಬದುಕು ಕೇವಲ ಬದುಕಾಗಿರುವುದಿಲ್ಲ.
ಒಂದು ಸುಂದರ ಕವಿತೆಯಾಗುತ್ತದೆ.
ಆ ಕವಿತೆಯ ಮೊದಲ ಸಾಲು ಮಾತ್ರ ನನಗೆ ಇನ್ನೂ ಸ್ಪಷ್ಟವಾಗಿ ನೆನಪಿದೆ.
ಏರ್‌ಪೋರ್ಟ್‌ನಲ್ಲಿ ನನ್ನ ಕಣ್ಣಿಗೆ ಬಿದ್ದ ಹೃದಯವಂತೆ ನೀನು…

Leave a Reply

Your email address will not be published. Required fields are marked *