ಮನದೊಳಗೆ ಉಳಿದ ಸಾವಿರ ಪ್ರೀತಿಯ ಪಿಸುಮಾತುಗಳು..
ಹೌದು ಗೆಳತಿ…
ನಿನ್ನ ಬಳಿ ಹೇಳದ ಮಾತುಗಳೇ ಹೆಚ್ಚು.
ವಿಚಿತ್ರವೆಂದರೆ,
ಹೇಳಬೇಕಾದ ಮಾತುಗಳು ಹೆಚ್ಚಾದಷ್ಟೂ ಮನಸ್ಸು ಗಾಢವಾಗುತ್ತದೆ.
ಕೆಲವು feelings express ಮಾಡಲು ಭಾಷೆ ಸಾಲುವುದಿಲ್ಲ.
ಕೆಲವು ಸಂಬಂಧಗಳಿಗೆ ವಿವರಣೆಯ ಅಗತ್ಯವೂ ಇರುವುದಿಲ್ಲ.
ಪ್ರೀತಿಯ ಅತ್ಯಂತ ನಿಜವಾದ ಕ್ಷಣಗಳು ಬಹುಶಃ ಮಾತುಗಳ ನಡುವೆ ಹುಟ್ಟುವುದಿಲ್ಲ.
ಮಾತುಗಳು ಮುಗಿದ ನಂತರವೂ ಮನದೊಳಗೆ ಉಳಿಯುವ ಮನದ ಅವು ಹುಟ್ಟುತ್ತವೆ.
ನನ್ನ ಹೃದಯ ನಿನ್ನ ಮುಂದೆ ನಿಧಾನವಾಗಿ ತೆರೆದುಕೊಳ್ಳುತ್ತದೆ.
ಆ ಮನವನ್ನು ಖಾಲಿತನವೆಂದು ಭಾವಿಸಬೇಡ.
ಅದರೊಳಗೆ ಸಾವಿರ ಪಿಸುಮಾತುಗಳಿವೆ,
ಹೇಳಲಾಗದ ಕ್ಷಮೆಗಳಿವೆ,
ಮುಗಿಯದ ಸಂಭಾಷಣೆಗಳಿವೆ,
ಮರೆಯಲಾಗದ ನೆನಪುಗಳಿವೆ.
ಮತ್ತೆ ಸಿಗಬಹುದೆಂಬ ಸಣ್ಣದೊಂದು ನಿರೀಕ್ಷೆಯೂ ಇದೆ.
ಹಿಂದಿ ಸಿನಿಮಾದ ಅಮರ ಗೀತೆಯೊಂದು ಹೀಗೆ ಕೇಳುತ್ತದೆ
ಲಗ್ ಜ ಗಲೇ ಕಿ ಫಿರ್ ಯೇ ಹಸೀನ್ ರಾತ್ ಹೋ ನಾ ಹೋ…
ಆ ಸಾಲುಗಳಲ್ಲಿ ಅಡಗಿರುವುದು ಕೇವಲ ಪ್ರೀತಿಯ ಕೋರಿಕೆಯಲ್ಲ.
ವಿದಾಯದ ಆತಂಕವೂ ಹೌದು.
ಈ ಕ್ಷಣ ಮತ್ತೆ ಸಿಗದಿದ್ದರೆ?
ಈ ಅಪ್ಪುಗೆ ಕೊನೆಯದಾದರೆ?
ಬಹುಶಃ ಪ್ರೀತಿಯ ಪ್ರತಿಯೊಂದು ಹತ್ತಿರವೂ ತನ್ನೊಳಗೆ ಒಂದು ಸಣ್ಣ ವಿಯೋಗದ ಭಯವನ್ನು ಹೊತ್ತುಕೊಂಡಿರುತ್ತದೆ.
ಅದಕ್ಕೇ ಪ್ರೀತಿಯ ಕ್ಷಣಗಳು ಅಷ್ಟೊಂದು ಅಮೂಲ್ಯ.
ಸಂಗಾತಿ ನೀನು ದೂರಾದ ಮೇಲೆ ಬದುಕು ಬರಿದಾಗಿದೆ.
ನನ್ನಿಂದ ನೀನು ಬೇರಾದ ಮೇಲೆ ನೆನಪೊಂದೇ ಬದುಕಾಗಿದೆ.
ಆದರೆ ಕಾಲ ಕಲಿಸುವ ಕಠಿಣ ಸತ್ಯವೊಂದಿದೆ.
ಬರಿದಾದ ಬದುಕು ಎಂದರೆ ಬದುಕು ಮುಗಿದಿದೆ ಎಂದಲ್ಲ.
ಕೆಲವೊಮ್ಮೆ ಖಾಲಿತನವೇ ನಮ್ಮೊಳಗೆ ಹೊಸ ಅರ್ಥಗಳಿಗೆ ಜಗ ಮಾಡುತ್ತದೆ.
ವಿಯೋಗ ಮನುಷ್ಯನನ್ನು ಮುರಿಯುತ್ತದೆ.
ಅದೇ ವಿಯೋಗ ಅವನನ್ನು ತನ್ನೊಳಗೆ ನೋಡಿಕೊಳ್ಳುವುದನ್ನೂ ಕಲಿಸುತ್ತದೆ.
ನೀನು ಇzಗ ನಾನು ನಿನ್ನನ್ನು ಪ್ರೀತಿಸಿದೆ.
ನೀನು ಹೋದ ಮೇಲೆ, ನಾನು ಪ್ರೀತಿಯನ್ನೇ ಅರ್ಥಮಾಡಿಕೊಳ್ಳಲು ಆರಂಭಿಸಿದೆ.
ಇದೇ ವಿಯೋಗದ ವಿಚಿತ್ರ ತತ್ವ.
ಕನ್ನಡದ ಪ್ರೇಮಗೀತೆಯೊಂದು ನೆನಪಿಸುವಂತೆ
ನೀ.. ಸಿಗೊವರೆಗೂ..
ನಗೋವರೆಗೂ ಕಾದಿರುವೇ
ಬಾ ಮನೆವರೆಗೂ..
ಕೊನೆವರೆಗೂ ನಾನಿರುವೇ…
ನಿನ್ನೆ ಮೊನ್ನೆವರೆಗೂ ನಾ ಸೊನ್ನೆಯಾಗಿದ್ದೆನಾ…
ಎಂಬ ಕಾಯುವಿಕೆಯ ಭಾವದಲ್ಲಿ ಪ್ರೀತಿಸುವ ಮನಸ್ಸಿಗೆ ಕೆಲವೊಮ್ಮೆ ನಿರೀಕ್ಷೆಯೇ ಬದುಕಿನ ಅರ್ಥವಾಗುತ್ತದೆ.
ಆದರೆ ನಿರೀಕ್ಷೆ ಎಂದರೆ ಮರಳಿ ಬರುವ ನಿರೀಕ್ಷೆಯಷ್ಟೇ ಅಲ್ಲ.
ಕಳೆದದ್ದನ್ನು ಮತ್ತೆ ಪಡೆಯಲಾಗುವುದಿಲ್ಲ ಎಂಬ ಸತ್ಯವನ್ನು ಒಪ್ಪಿಕೊಂಡು, ಅದರ ಸೌಂದರ್ಯವನ್ನು ಮನಸ್ಸಿನಲ್ಲಿ ಉಳಿಸಿಕೊಳ್ಳುವುದೂ ಒಂದು ಪ್ರೌಢ ನಿರೀಕ್ಷೆ.
ನಾವು ಪ್ರೀತಿಯ ಯಶಸ್ಸನ್ನು ಸಾಮಾನ್ಯವಾಗಿ ಅವರು ನಮ್ಮೊಂದಿಗಿzರೆಯೇ? ಎಂಬ ಪ್ರಶ್ನೆಯಿಂದ ಅಳೆಯುತ್ತೇವೆ.
ಆದರೆ ಪ್ರೀತಿಯ ನಿಜವಾದ ಮಲ್ಯವನ್ನು ಅವರು ನಮ್ಮೊಳಗೆ ಏನು ಬದಲಿಸಿದರು? ಎಂಬ ಪ್ರಶ್ನೆ ನಿರ್ಧರಿಸುತ್ತದೆ.
ನಿನ್ನಿಂದ ನಾನು ಕಲಿತದ್ದು ಇದೇ..
ಕೆಲವರು ನಮ್ಮ ಬದುಕಿಗೆ ನಮ್ಮೊಂದಿಗೆ ನಡೆಯಲು ಬರುತ್ತಾರೆ.
ಕೆಲವರು ನಮ್ಮನ್ನು ಬದಲಿಸಲು ಬರುತ್ತಾರೆ.
ಇನ್ನೂ ಕೆಲವರು,
ನಾವು ಪ್ರೀತಿ ಎಂದರೇನು ಎಂಬುದನ್ನು ತಿಳಿದುಕೊಳ್ಳಲು ಬರುತ್ತಾರೆ.
ಬಹುಶಃ ನೀನು… ಮೂರನೆಯವಳು.
ಈಗಲೂ ಕೆಲವೊಮ್ಮೆ ಹಳೆಯ ಹಾಡೊಂದು ಕೇಳಿದಾಗ,
ಪರಿಚಿತ ದಾರಿಯೊಂದು ಎದುರಾದಾಗ,
ಮಳೆಯ ಹನಿಗಳು ಕಿಟಕಿಯ ಮೇಲೆ ಬಿzಗ ಮನಸ್ಸು ಅನಾಯಾಸವಾಗಿ ನಿನ್ನ ಕಡೆ ತಿರುಗುತ್ತದೆ.
ಆದರೆ ಈಗ ಆ ನೆನಪಿನೊಂದಿಗೆ ಹೋರಾಡುವುದಿಲ್ಲ.
ನೆನಪುಗಳನ್ನು ಕೊಲ್ಲುವುದರಿಂದ ಮರೆವು ಬರುವುದಿಲ್ಲ.
ಅವುಗಳೊಂದಿಗೆ ಶಾಂತಿಯಿಂದ ಬದುಕಲು ಕಲಿತಾಗ ಮಾತ್ರ ಮನಸ್ಸಿಗೆ ಮುಕ್ತಿ ಸಿಗುತ್ತದೆ.
ನೀನು ಮರಳಿ ಬರದೇ ಇರಬಹುದು.
ನಮ್ಮ ದಾರಿಗಳು ಮತ್ತೆ ಒಂದಾಗದೇ ಇರಬಹುದು.
ಆದರೂ…
ನೀನು ನನ್ನ ಬದುಕಿನಲ್ಲಿ ಇದ್ದ ಆ ಕಾಲವನ್ನು ನಾನು ನಿರಾಕರಿಸಲಾರೆ.
ಅದು ನನ್ನ ಬದುಕಿನ ಸುಂದರ ಅಧ್ಯಾಯ.
ಅಧ್ಯಾಯ ಮುಗಿದಿದೆ.
ಆದರೆ ಅದರ ಅರ್ಥ ಮುಗಿದಿಲ್ಲ.
ಹೀಗಾಗಿ ಗೆಳತಿ,
ನಿನ್ನನ್ನು ಮರೆಯುವುದಕ್ಕಿಂತ ನಿನ್ನ ನೆನಪನ್ನು ಗೌರವಿಸುವುದನ್ನೇ ನಾನು ಆರಿಸಿಕೊಂಡಿzನೆ.
ಏಕೆಂದರೆ ನಿಜವಾದ ಪ್ರೀತಿ ಸ್ವಾಮ್ಯವನ್ನು ಕೇಳುವುದಿಲ್ಲ.
ಅದು ಒಬ್ಬರ ಬದುಕಿನಲ್ಲಿ ತಾನು ಬಿಟ್ಟ ಬೆಳಕನ್ನು ಮಾತ್ರ ನೆನಪಿಟ್ಟುಕೊಳ್ಳುತ್ತದೆ.
ನೀನು ನನ್ನ ಜೊತೆಯಲ್ಲಿ ಇಲ್ಲ.
ಆದರೆ ನನ್ನ ಮನದೊಳಗೆ ಇನ್ನೂ ಇದ್ದೀಯ.
ಹೇಳಲಾಗದ ಮಾತುಗಳಾಗಿ,
ಮುಗಿಯದ ನೆನಪುಗಳಾಗಿ
ಮತ್ತು ಎಂದಿಗೂ ಸಂಪೂರ್ಣವಾಗಿ ಅರ್ಥವಾಗದ
ಒಂದು ಸುಂದರ ಪ್ರೀತಿಯಾಗಿ…
