ಶಿಕಾರಿಪುರ; ವಾರದ ಮೂರ್‍ನಾಲ್ಕು ದಿನ ಸ್ಥಳೀಯರ ಅಹವಾಲು ಸ್ವೀಕಾರ…
ಶಿಕಾರಿಪುರ: ತಾಲೂಕಿನ ಮತದಾರರು ಕಾರ್ಯಕರ್ತರು ಕಳೆದ ೪ ದಶಕದಿಂದ ಯಡಿಯೂರಪ್ಪನವರನ್ನು ಸತತ ಬೆಂಬಲಿಸಿ ರಾಜ್ಯ ರಾಜಕಾರಣದಲ್ಲಿ ಪ್ರಬಲ ಶಕ್ತಿಯಾಗಿ ಗುರುತಿಸಿ ಕೊಳ್ಳುವ ರೀತಿಯಲ್ಲಿ ಪ್ರೋತ್ಸಾಹಿ ಸಿದ್ದು ಈ ದಿಸೆಯಲ್ಲಿ ಕ್ಷೇತ್ರದ ಜನತೆ ಸಹಿತ ವಿರೋಧ ಪಕ್ಷದವರಿಗೂ ಹೆಚ್ಚಿನ ಗೌರವ ನೀಡಲಾಗುತ್ತಿದೆ ಇದನ್ನು ದೌರ್ಬಲ್ಯ ಎಂದು ಭಾವಿಸದಂತೆ ವಿರೋಧಿಗಳಿಗೆ ಕ್ಷೇತ್ರದ ನೂತನ ಶಾಸಕ ಬಿ.ವೈ ವಿಜಯೇಂದ್ರ ಎಚ್ಚರಿಕೆ ನೀಡಿದರು.
ತಾಲೂಕು ಬಿಜೆಪಿ ವತಿಯಿಂದ ಆಯೋಜಿಸಿದ್ದ ಮತದಾರರು, ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆರಂಭದಲ್ಲಿಯೇ ಕ್ಷೇತ್ರದಲ್ಲಿ ಗೆಲ್ಲುವ ಬಹು ದೊಡ್ಡ ವಿಶ್ವಾಸವನ್ನು ಹೊಂದಿದ್ದಾಗಿ ತಿಳಿಸಿದ ಅವರು, ೭೦ರ ದಶಕದಿಂದ ಯಡಿಯೂರಪ್ಪನವರಿಗೆ ರಾಜಕೀಯವಾಗಿ ಬೆಂಬಲಿಸಿ ಪ್ರೋತ್ಸಾಹಿಸಿದ ಕ್ಷೇತ್ರದ ಜನತೆ ಕಾರ್ಯಕರ್ತರ ಪರಿಶ್ರಮದಿಂದ ಈ ಬಾರಿ ಪುನಃ ಜಯಗಳಿಸುವ ವಿಶ್ವಾಸ ಹುಸಿಯಾಗಲಿಲ್ಲ. ಈ ದಿಸೆಯಲ್ಲಿ ವಿಧಾನಸೌಧದ ಮೆಟ್ಟಿಲು ಹತ್ತುವ ಮುನ್ನಾ ಕ್ಷೇತ್ರದ ಮತದಾರರು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ಸಂಕಲ್ಪ ಕೈಗೊಂಡಿದ್ದಾಗಿ ತಿಳಿಸಿದರು.
ಬಿಜೆಪಿ ಉಪಾಧ್ಯಕ್ಷನಾಗಿ ರಾಜ್ಯದಲ್ಲಿ ಪಕ್ಷ ಸಂಘಟಿಸುವ ಬಹು ದೊಡ್ಡ ಜವಾಬ್ದಾರಿಯನ್ನು ಹೊಂದಿದ್ದು ಈ ದಿಸೆಯಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದ ಅವರು, ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ತಾಲೂಕು ಕಚೇರಿ ಆವರಣದಲ್ಲಿ ಶಾಸಕರ ಕಚೇರಿ ಯನ್ನು ಆರಂಭಿಸಿ ವಾರದ ೩-೪ ದಿನ ಸ್ಥಳೀಯರ ಕುಂದುಕೊರತೆ ಆಲಿಸಿ ಪರಿಹರಿಸಲು ಹೆಚ್ಚಿನ ನಿಗಾವಹಿಸುತ್ತೇನೆ. ಹಗಲು ರಾತ್ರಿ ಗೆಲುವಿಗಾಗಿ ಶ್ರಮಿಸಿದ ಮತದಾರರು, ಕಾರ್ಯಕರ್ತರನ್ನು ನೇರವಾಗಿ ಭೇಟಿಯಾಗುವುದಾಗಿ ತಿಳಿಸಿದರು.
ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷದವರು ಯಡಿಯೂರಪ್ಪನವರು, ಸಂಸದ ರಾಘವೇಂದ್ರ ಸಹಿತ ಹಿರಿಯ ಮುಖಂಡರ ಬಗ್ಗೆ ಅತ್ಯಂತ ಹಗುರವಾಗಿ ಟೀಕಿಸಿದ್ದು ಯಡಿಯೂರಪ್ಪನವರು ಕಾರ್ಯಕರ್ತರು ಮುಖಂಡರ ಸಹಿತ ಪ್ರತಿಯೊಬ್ಬರಿಗೂ ನೀಡುವ ಗೌರವವನ್ನು ವಿರೋಧಿಗಳು ದೌರ್ಬಲ್ಯ ಎಂದು ಭಾವಿಸದಂತೆ ಎಚ್ಚರಿಕೆ ನೀಡಿದ ಅವರು, ಅಭಿವೃದ್ದಿ ಕಾರ್ಯದ ಜತೆಗೆ ಬಗರ್‌ಹುಕುಂ, ಇ ಸ್ವತ್ತು, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ನ್ಯೂನತೆ ಹೋಗಲಾಡಿಸಿ ಯುವಕರಿಗೆ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ ಭ್ರಷ್ಟಾಚಾರ ರಹಿತ ಆಡಳಿತದ ಮೂಲಕ ಎಲ್ಲರ ವಿಶ್ವಾಸಗಳಿಸಿ ಭಗವಂತ ಮೆಚ್ಚುವ ರೀತಿ ಸಾಮಾನ್ಯ ರಲ್ಲಿ ಸಾಮಾನ್ಯನಾಗಿ ಸೇವೆ ಸಲ್ಲಿಸುವುದಾಗಿ ತಿಳಿಸಿದರು.
ಕ್ಷೇತ್ರದ ಜನತೆ ೧೧ ಸಾವಿರ ಅಧಿಕ ಮತಗಳ ಅಂತರದಿಂದ ನಿರೀಕ್ಷಿಸದ ರೀತಿಯಲ್ಲಿ ಆಶೀರ್ವದಿಸಿದ್ದು, ಕ್ಷೇತ್ರದ ಜನತೆ ಗಾಗಿ ಪ್ರತ್ಯೇಕ ಮೊಬೈಲ್ ಸಂಖ್ಯೆಯ ಮೂಲಕ ಎಲ್ಲರಿಗೂ ನೇರ ಸಂಪರ್ಕಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಂಸದ ರಾಘವೇಂದ್ರ ಅವರು ಮಾತನಾಡಿ, ಯಡಿಯೂರಪ್ಪ ನವರ ೪೦ ವರ್ಷದ ರಾಜಕೀಯ ಜೀವನದಲ್ಲಿ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದಾರೆ ಕಾರ್ಯಕರ್ತರಿಗೆ ಎಂದೂ ಕಣ್ಣೀರು ಹಾಕಿಸಿಲ್ಲ. ಅದೇ ರೀತಿಯಲ್ಲಿ ಬೆರಳು ತೋರಿಸದಂತೆ ಸಮಾಜ ಕಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಈ ಬಾರಿ ಚುನಾವಣೆಯಲ್ಲಿ ಭಯ ಪಡುವ ರೀತಿಯಲ್ಲಿ ವಿರೋಧಿಗಳು ಸುಳ್ಳು ಪ್ರಚಾರ ಮಾಡಿದ್ದು ಬಣಜಾರ್ ಸಮಾಜದ ಅಭಿವೃದ್ದಿ ಗಾಗಿ ಪ್ರತ್ಯೇಕ ನಿಗಮ ರಚಿಸಿ ಕಷ್ಟಸುಖಕ್ಕೆ ಸ್ಪಂದಿಸಿದ್ದೇವೆ ವೀರಭದ್ರನ ಈ ಕ್ಷೇತ್ರದಲ್ಲಿ ಸುಳ್ಳು ಹೇಳಿದಲ್ಲಿ ದೇವರು ನೋಡಿಕೊ ಳ್ಳುತ್ತಾನೆ ಎಂದು ತಿಳಿಸಿದರು.
ಮುಂದಿನ ವರ್ಷ ಲೋಕಸಭಾ ಚುನಾವಣೆಯ ಅಂತಿಮ ಪರೀಕ್ಷೆ ಇದ್ದು, ಮೋದಿಗಾಗಿ ಕೈ ಎತ್ತಬೇಕಾಗಿದೆ. ಆ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಜಯಗಳಿಸಲು ಯತ್ನಿಸುವಂತೆ ಕರೆ ನೀಡಿದ ಅವರು, ಇದೇ ೩೦ಕ್ಕೆ ಕೇಂದ್ರ ಸರ್ಕಾರಕ್ಕೆ ೯ ವರ್ಷ ಭರ್ತಿ ಯಾಗಲಿದ್ದು ಈ ದಿಸೆಯಲ್ಲಿ ಸಂಘಟನೆಗೆ ಶಕ್ತಿ ತುಂಬಲು ಪಕ್ಷ ವಿವಿಧ ಕಾರ್ಯಕ್ರಮವನ್ನು ಆಯೋಜಿಸಿದೆ. ಸರ್ಕಾರ ಬದಲಾದರೂ ಅಭಿವೃದ್ದಿ ಕಾರ್ಯಕ್ಕೆ ಹಿನ್ನಡೆಯಾಗದಂತೆ ಜಾಗ್ರತೆ ವಹಿಸುವುದಾಗಿ ತಿಳಿಸಿ ಜಿಲ್ಲೆಗೆ ಹೊಸದಾಗಿ ಬಿಎಸ್‌ಎನ್‌ಎಲ್ ರೂ.೨೨೦ ಕೋಟಿ ವೆಚ್ಚದಲ್ಲಿ ೨೮೦ ಟವರ್ ಮಂಜೂರಾಗಿದ್ದು ಬೈಂದೂರು, ಹೊಸನಗರ, ತೀರ್ಥಹಳ್ಳಿ ಸಮಸ್ಯೆ ಪರಿಹಾರ ವಾಗಲಿದೆ ತಾಲೂಕಿಗೆ ೩೦ ಟವರ್ ಮಂಜೂರಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತನಾಡಿ, ಕಾರ್ಯಕರ್ತರು, ಮುಖಂಡರು ಹಗಲು ರಾತ್ರಿ ಶ್ರಮವಹಿಸಿದ ಪರಿಣಾಮ ವಿಜಯೇಂದ್ರ ದೊಡ್ಡ ಅಂತರದಲ್ಲಿ ಜಯಸಾಧಿಸಿದ್ದು, ಶೀಘ್ರದಲ್ಲಿಯೇ ತಾಲೂಕು ಕಚೇರಿ ಆವರಣದಲ್ಲಿ ಶಾಸಕರ ಕಚೇರಿ ತೆರೆದು ಸ್ಥಳದಲ್ಲಿಯೇ ಆಹವಾಲು ಸ್ವೀಕರಿಸಿ ಪರಿಹರಿಸಲಿದ್ದಾರೆ. ಬರಲಿರುವ ತಾ.ಪಂ, ಜಿ.ಪಂ ಚುನಾವಣೆ ಯನ್ನು ಸವಾಲಾಗಿ ಸ್ವೀಕರಿಸಿ ಪಕ್ಷ ಹೆಚ್ಚಿನ ಸ್ಥಾನಗಳಿಸುವ ರೀತಿ ಕಾರ್ಯನಿರ್ವಹಿಸುವಂತೆ ಕಿವಿಮಾತು ಹೇಳಿದರು.
ಕಾರ್ಯಕರ್ತರು ಮುಖಂಡರು ಚುನಾವಣೆಯಲ್ಲಿ ಗೆಲುವಿಗೆ ದೊಡ್ಡ ಶಕ್ತಿಯಾಗಿದ್ದು, ಯಾರು ಏನೇ ಟೀಕೆ ಮಾಡಲಿ ಗುರುಮೂರ್ತಿ ಶ್ರಮ ಅಪಾರವಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್, ತಾಲೂಕು ಅಧ್ಯಕ್ಷ ವೀರೇಂದ್ರ, ಮುಖಂಡ ಚನ್ನವೀರಪ್ಪ, ರೇವಣಪ್ಪ, ಬಿ.ಡಿ ಭೂಕಾಂತ್, ಎಚ್.ಟಿ ಬಳಿಗಾರ್, ವಸಂತಗೌಡ, ಹಾಲಪ್ಪ, ರಾಜಶೇಖರ್, ಹನುಮಂತಪ್ಪ, ಗಿರೀಶ್ ಧಾರವಾಡದ ಮತ್ತಿತರರು ಉಪಸ್ಥಿತರಿದ್ದರು.