ವಿಶ್ವವನ್ನೇ ಆತಂಕಕ್ಕೆ ದೂಡಿದ್ದ ಕೊರೋನಾವನ್ನೇ ನಡುಗಿಸುತ್ತಿರುವ ಕಾರ್ಡಿಯಾಕ್ ಅರೆಸ್ಟ್…
ಕೋವಿಡ್…!
ಒಮ್ಮೆ ವಿಶ್ವದ ಪ್ರತಿಯೊಂದು ಮನೆಗೂ ಭಯದ ಮತ್ತೊಂದು ಹೆಸರಾಗಿ ಪರಿಣಮಿಸಿದ್ದ ಮಹಾಮಾರಿ. ಆಸ್ಪತ್ರೆಗಳ ಎದುರು ಅಂತ್ಯವಿಲ್ಲದ ಸಾಲುಗಳು, ಆಮ್ಲಜನಕ ಸಿಲಿಂಡರ್ಗಾಗಿ ಅಲೆದಾಡುತ್ತಿದ್ದ ಕುಟುಂಬಗಳು, ಐಸಿಯು ಹಾಸಿಗೆಗಾಗಿ ಹರಸಾಹಸ ಪಡುತ್ತಿದ್ದ ಜನರು. ಆ ಕಾಲವನ್ನು ಮಾನವ ಸಮಾಜ ಎಂದಿಗೂ ಮರೆತಿಲ್ಲ. ಆದರೂ ಕೋವಿಡ್ ಎಂಬ ವೈರಲ್ ಪ್ಯಾಂಡಮಿಕ್ ಒಂದು ರೀತಿಯ ಸಮಯಾವಕಾಶ ನೀಡುತ್ತಿತ್ತು. ಸೋಂಕು ತಗುಲಿದ ನಂತರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಪರೀಕ್ಷೆ ಮಾಡಿಸಿಕೊಳ್ಳಬಹುದು, ಚಿಕಿತ್ಸೆ ಪಡೆಯಬಹುದು, ಕೆಲವೊಮ್ಮೆ ದೇಹ ಹೋರಾಡಲು ಸಮಯ ಕೊಡುತ್ತಿತ್ತು.
ಆದರೆ ಇಂದಿನ ಸಮಾಜವನ್ನು ಸದ್ದಿಲ್ಲದೇ ಆವರಿಸುತ್ತಿರುವ ಮತ್ತೊಂದು ಅಪಾಯ ಆ ಅವಕಾಶವನ್ನೇ ಕಸಿದುಕೊಳ್ಳುತ್ತಿದೆ! ಅದು ಹೃದಯಾಘಾತ… ಅಂದರೆ ಕಾರ್ಡಿಯಾಕ್ ಅರೆಸ್ಟ್ ಮತ್ತು ಅಕ್ಯೂಟ್ ಮೈಕಾರ್ಡಿಯಲ್ ಇನ್ಫಾರ್ಕ್ಷನ್.
ಇದು ಈಗ ಸೈಲೆಂಟ್ ಪ್ಯಾಂಡಮಿಕ್ ಆಗಿ ರೂಪಾಂತರಗೊಳ್ಳುತ್ತಿರುವ ಆತಂಕಕಾರಿ ವಾಸ್ತವ್ಯ. ಬೆಳಿಗ್ಗೆ ನಗುತ್ತಾ ಮಾತನಾಡಿದ ವ್ಯಕ್ತಿಯೊಬ್ಬ ಸಂಜೆಗಾಗಲೇ ಹೃದಯಾಘಾತದಿಂದ ಕುಸಿದು ಬೀಳುತ್ತಿರುವ ಸುದ್ದಿಗಳು ಸಾಮಾನ್ಯವಾಗುತ್ತಿವೆ. ಕ್ಷಣಾರ್ಧದಲ್ಲಿ ಜೀವ ಕಳೆದುಕೊಳ್ಳುತ್ತಿರುವ ಈ ದುರಂತಗಳು ಸಮಾಜದ ಮನಸ್ಸಿನಲ್ಲಿ ಅತೀವ ಭಯವನ್ನು ಬಿತ್ತುತ್ತಿವೆ. ವಿಶೇಷವಾಗಿ ಯುವಜನತೆಯ ಹೆಚ್ಚುತ್ತಿರುವ ಹೃದಯ ಸಂಬಂಧಿ ಸಮಸ್ಯೆಗಳು ಆರೋಗ್ಯ ಕ್ಷೇತ್ರಕ್ಕೆ ಭಾರಿ ಎಚ್ಚರಿಕೆಯ ಗಂಟೆಯಾಗಿವೆ.
ಮೂರು-ನಾಲ್ಕು ದಶಕಗಳ ಹಿಂದೆ ಹೃದಯಾಘಾತವನ್ನು ವೃದ್ಧಾಪ್ಯದ ಕಾಯಿಲೆ ಎಂದು ನೋಡಲಾಗುತ್ತಿತ್ತು. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮಕ್ಕಳು ಸೇರಿದಂತೆ ೨೦ರಿಂದ ೩೫ ವರ್ಷದ ಯುವಕರು ಏಕಾಏಕಿ ಕುಸಿದು ಬೀಳುತ್ತಿರುವ ಘಟನೆಗಳು ದಿನನಿತ್ಯದ ಸುದ್ದಿಯಾಗುತ್ತಿವೆ.

ಜಿಮ್ನಲ್ಲಿ ಟ್ರೆಡ್ಮಿಲ್ ಮೇಲೆ ಓಡುತ್ತಿದ್ದವರು, ಕ್ರಿಕೆಟ್ ಮೈದಾನದಲ್ಲಿ ಆಟವಾಡುತ್ತಿದ್ದವರು, ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು, ಕೋರ್ಟ್ನಲ್ಲಿ ವಾದ ಮಂಡಿಸುತ್ತಿದ್ದ ವಕೀಲರು, ಮದುವೆ ಕಾರ್ಯಕ್ರಮದಲ್ಲಿ ಸಂಭ್ರಮದಿಂದ ನೃತ್ಯ ಮಾಡುತ್ತಿದ್ದ ಯುವಕರು ಕ್ಷಣಾರ್ಧದಲ್ಲಿ ಹೃದಯ ನಿಂತು ಸಾವನ್ನಪ್ಪುತ್ತಿರುವ ದೃಶ್ಯಗಳು ಸಮಾಜವನ್ನು ಬೆಚ್ಚಿಬೀಳಿಸುತ್ತಿವೆ.
ಇದಕ್ಕೆ ಕಾರಣಗಳೂ ಅಲ್ಪವಲ್ಲ. ಆಧುನಿಕ ಜೀವನಶೈಲಿ ಯುವ ಹೃದಯಗಳ ಮೇಲೆ ಕಾಣದ ಒತ್ತಡ ಹೇರುತ್ತಿದೆ. ಕ್ರಾನಿಕ್ ಸ್ಟ್ರೆಸ್, ಅಸಮರ್ಪಕ ಆಹಾರ ಪದ್ಧತಿ, ಹೆಚ್ಚಿದ ಟ್ರಾನ್ಸ್ ಫ್ಯಾಟ್ ಮತ್ತು ಜಂಕ್ ಫುಡ್ ಸೇವನೆ, ವ್ಯಾಯಾಮದ ಕೊರತೆ, ಧೂಮಪಾನ, ಮದ್ಯಪಾನ, ನಿದ್ರಾಹೀನತೆ, ಮಾನಸಿಕ ಒತ್ತಡ, ಡಿಜಿಟಲ್ ಅವಲಂಬನೆ, ಮಾಲಿನ್ಯ ಇತ್ಯಾದಿಗಳು ನಿಧಾನವಾಗಿ ಹೃದಯದ ರಕ್ತನಾಳಗಳನ್ನು ದುರ್ಬಲಗೊಳಿಸುತ್ತಿವೆ.
ಇಂದಿನ ಯುವಕರು ಹೊರಗೆ ಆರೋಗ್ಯವಾಗಿರುವಂತೆ ಕಂಡರೂ ಒಳಗೆ ಹೈಪರ್ ಟೆನ್ಷನ್, ಹೈ ಕೊಲೆಸ್ಟ್ರಾಲ್, ಡಯಾಬಿಟಿಸ್, ಒಬೆಸಿಟಿ, ಆರ್ಟೀರಿಯಲ್ ಬ್ಲಾಕೇಜ್ ಮುಂತಾದ ಸಮಸ್ಯೆಗಳನ್ನು ತಮಗರಿವಿಲ್ಲದೇ ಹೊತ್ತುಕೊಂಡೇ ಬದುಕುತ್ತಿzರೆ. ದೇಹದಲ್ಲಿ ನಿಧಾನವಾಗಿ ಬೆಳೆಯುತ್ತಿರುವ ಅಥೆರೋಸ್ಕ್ಲೆರೋಸಿಸ್ ಒಂದು ದಿನ ಏಕಾಏಕಿ ರಕ್ತಪ್ರವಾಹವನ್ನು ತಡೆದು ಬದುಕಿ ಬಾಳಬೇಕಾದ ಜೀವವನ್ನೇ ಕಸಿದುಕೊಳ್ಳುತ್ತಿದೆ. ಇದರ ಜೊತೆಗೆ ಕೋವಿಡ್ ಬಳಿಕದ ಆರೋಗ್ಯ ಸಮಸ್ಯೆಗಳ ಕುರಿತೂ ವೈದ್ಯಕೀಯ ವಲಯದಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿವೆ. ಹಲವರಲ್ಲಿ ಕೋವಿಡ್ ಸೋಂಕಿನ ನಂತರ ವಾಸ್ಕುಲರ್ ಇನ್ಫ್ಲಮೇಶನ್, ಬ್ಲಡ್ ಕ್ಲಾಟಿಂಗ್, ಮೈಕಾರ್ಡಿಟಿಸ್, ಹೃದಯ ಸ್ನಾಯು ದುರ್ಬಲತೆ ಮುಂತಾದ ಪರಿಣಾಮ ಗಳು ಕಂಡುಬಂದಿವೆ ಎಂದು ಅನೇಕ ಅಧ್ಯಯನಗಳು ಸೂಚಿಸುತ್ತಿವೆ. ಕೋವಿಡ್ ನಂತರದ ಪೋಸ್ಟ್ ವೈರಲ್ ಕಾರ್ಡಿಯಾಕ್ ಕಾಂಪ್ಲಿಕೇಶನ್ಗಳು ಯುವಜನರ ಹೃದಯ ಆರೋಗ್ಯದ ಮೇಲೆ ದೀರ್ಘಕಾಲದ ಪರಿಣಾಮ ಬೀರಿರುವ ಸಾಧ್ಯತೆಯನ್ನೂ ತಜ್ಞರು ವ್ಯಕ್ತಪಡಿಸುತ್ತಿzರೆ.
ಆದರೆ ಸಮಸ್ಯೆಯ ಗಂಭೀರತೆ ಕೇವಲ ರೋಗದ ಮಟ್ಟದ ಸೀಮಿತವಾಗಿಲ್ಲ. ಆರೋಗ್ಯ ವ್ಯವಸ್ಥೆಯಲ್ಲಿಯೂ ದೊಡ್ಡ ಬಿರುಕುಗಳು ಗೋಚರಿಸುತ್ತಿವೆ. ದೊಡ್ಡ ನಗರಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿಯೇ ತಕ್ಷಣ ಕಾರ್ಡಿಯಾಲಜಿಸ್ಟ್ಗಳು ಲಭ್ಯವಾಗದ ಪರಿಸ್ಥಿತಿ ಉಂಟಾಗುತ್ತಿದೆ. ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳ ಪರಿಸ್ಥಿತಿ ಇನ್ನೂ ದುಃಖಕರ.

ಹೃದಯಾಘಾತದ ಮೊದಲ ಒಂದು ಗಂಟೆಯನ್ನು ವೈದ್ಯಕೀಯ ಕ್ಷೇತ್ರದಲ್ಲಿ ಗೋಲ್ಡನ್ ಅವರ್ ಎಂದು ಕರೆಯುತ್ತಾರೆ. ಆ ಸಮಯದಲ್ಲಿ ರೋಗಿಗೆ ಸಿಪಿಆರ್, ಡಿಫಿಬ್ರಿಲೇಷನ್, ಥ್ರಾಂಬೋಲಿಸಿಸ್ ಅಥವಾ ತುರ್ತು ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಸಿಕ್ಕರೆ ಜೀವ ಉಳಿಯುವ ಸಾಧ್ಯತೆ ಬಹಳ ಹೆಚ್ಚಿರುತ್ತದೆ. ಆದರೆ ಆಂಬುಲೆನ್ಸ್ ವಿಳಂಬ, ತುರ್ತು ಚಿಕಿತ್ಸಾ ಘಟಕಗಳ ಕೊರತೆ, ಸಮರ್ಪಕ ವೈದ್ಯಕೀಯ ಮೂಲಸೌಕರ್ಯದ ಅಭಾವದಿಂದಾಗಿ ದುರ್ಭಾಗ್ಯವಶಾತ್ ಅನೇಕರು ಆಸ್ಪತ್ರೆ ತಲುಪುವ ಮುನ್ನವೇ ಜೀವ ಕಳೆದುಕೊಳ್ಳುತ್ತಿzರೆ.
ಕೊರೋನಾ ಸಂದರ್ಭದಲ್ಲಿ ಹೇಗೆ ತಾತ್ಕಾಲಿಕ ಕೋವಿಡ್ ಕೇರ್ ಸೆಂಟರ್ಗಳು, ಟ್ರಯಾಜ್ ವ್ಯವಸ್ಥೆಗಳು ಮತ್ತು ತುರ್ತು ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗಿತ್ತೋ, ಇಂದು ಅದೇ ಮಾದರಿಯ ವ್ಯವಸ್ಥೆ ಹೃದಯ ಸಂಬಂಧಿ ತುರ್ತು ಚಿಕಿತ್ಸೆಗೆ ಅಗತ್ಯವಾಗಿದೆ. ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಇಸಿಜಿ, ತುರ್ತು ಹೃದಯ ಚಿಕಿತ್ಸೆ, ಅಗತ್ಯ ಔಷಧಿಗಳು, ಆಂಬುಲೆನ್ಸ್ ಸೌಲಭ್ಯ ಮತ್ತು ತರಬೇತಿ ಪಡೆದ ಸಿಬ್ಬಂದಿ ಇರಬೇಕು. ತಾಲೂಕು ಆಸ್ಪತ್ರೆಗಳಲ್ಲಿ ೨೪೭ ಕಾರ್ಡಿಯಾಕ್ ಎಮರ್ಜೆನ್ಸಿ ಯೂನಿಟ್ ಕಾರ್ಯನಿರ್ವಹಿಸಬೇಕು.
ಅದರ ಜೊತೆಗೆ ಜೀವ ಉಳಿಸುವAED (Automated External Defibrillator)ಯಂತ್ರಗಳನ್ನು ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ಮಾಲ್ಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಕಚೇರಿಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಅಳವಡಿಸುವ ಕಾಲ ಬಂದಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಸಾರ್ವಜನಿಕರಿಗೆ ಬೇಸಿಕ್ ಲೈಫ್ ಸಪೋರ್ಟ್ ಮತ್ತು ಸಿಪಿಆರ್ ತರಬೇತಿ ಸಾಮಾನ್ಯವಾಗಿರುವಂತೆ ನಮ್ಮ ದೇಶದಲ್ಲಿಯೂ ಶಾಲಾ- ಕಾಲೇಜು ಮಟ್ಟದಿಂದಲೇ ಜೀವ ರಕ್ಷಕ ತರಬೇತಿ ನೀಡಬೇಕಾಗಿದೆ.
ದುರದೃಷ್ಟವಶಾತ್ ಇಂದಿನ ರಾಜಕೀಯ ಚರ್ಚೆಗಳಲ್ಲಿ ಜನರ ಆರೋಗ್ಯಕ್ಕಿಂತ ರಾಜಕೀಯ ಅಜೆಂಡಾಗಳೇ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿರುವಂತಿದೆ. ಜಾತಿ-ಧರ್ಮದ ವಿವಾದಗಳು, ಚುನಾವಣಾ ಲಾಭದ ಲೆಕ್ಕಾಚಾರಗಳು, ಗ್ಯಾರಂಟಿ ಯೋಜನೆಗಳ ಘೋಷಣೆಗಳು, ಹಿಜಾಬ್-ಕೇಸರಿ ಶಾಲುಗಳ ರಾಜಕೀಯ … ಇವೆಲ್ಲದರ ನಡುವೆ ಯುವಜನರ ಜೀವದ ಪ್ರಶ್ನೆ ಎರಡನೇ ಸ್ಥಾನಕ್ಕೆ ಸರಿಯುತ್ತಿರುವುದು ವಿಷಾದನೀಯ.
ಸರ್ಕಾರಗಳು ಜನರ ಮತಗಳಿಗಾಗಿ ಸ್ಪರ್ಧಿಸುವ ಬದಲು ಜನರ ಜೀವ ಉಳಿಸುವ ಸ್ಪರ್ಧೆಗೆ ಇಳಿಯಬೇಕಾದ ಅವಶ್ಯಕತೆ ಇಂದಿನ ಅಗತ್ಯವಾಗಿದೆ. ಆರೋಗ್ಯವನ್ನು ರಾಜಕೀಯದ ಭಾಗವಲ್ಲ ರಾಷ್ಟ್ರದ ಭದ್ರತೆಯ ಭಾಗವೆಂದು ಪರಿಗಣಿಸಬೇಕಾದ ಕಾಲ ಬಂದಿದೆ. ಒಂದು ಕುಟುಂಬದ ಆಧಾರಸ್ತಂಭವಾಗಿರುವ ಯುವಕ- ಯುವತಿ ಏಕಾಏಕಿ ಹೃದಯಾಘಾತ ದಿಂದ ಸಾವನ್ನಪ್ಪಿದಾಗ ಅದರ ನೋವು ಕೇವಲ ಅಂಕಿ-ಅಂಶವಾಗಿರದು. ಅದು ಒಂದು ಮನೆಯ ಕನಸುಗಳ ಕುಸಿತ ವಾಗಿರುತ್ತದೆ. ವೃದ್ಧ ತಂದೆ-ತಾಯಿಗಳ ಆಶ್ರಯ ಕಳೆದುಹೋಗುತ್ತದೆ. ಪತ್ನಿಯ ಭವಿಷ್ಯ ಅಸ್ಪಷ್ಟವಾಗುತ್ತದೆ. ಪುಟ್ಟ ಮಕ್ಕಳ ಜೀವನ ಅನಿಶ್ಚಿತತೆಯ ಕತ್ತಲೆಯೊಳಗೆ ತಳ್ಳಲ್ಪಡುತ್ತದೆ. ಆ ಮನೆಯಲ್ಲಿನ ಶೋಕವನ್ನು ಯಾವುದೇ ಸರ್ಕಾರಿ ಪರಿಹಾರ ಧನ ಅಥವಾ ರಾಜಕೀಯ ಭಾಷಣಗಳು ಭರ್ತಿಮಾಡಲಾರವು.
ಇಂದು ದೇಶಕ್ಕೆ ಅಗತ್ಯವಿರುವುದು ಕೇವಲ ಘೋಷಣೆಗಳಲ್ಲ ಬದಲಿಗೆ ಮಾನವೀಯ ಸ್ಪಂದನೆ. ಜನರ ಆರೋಗ್ಯವನ್ನು ರಾಷ್ಟ್ರೀಯ ಆದ್ಯತೆಯಾಗಿ ಪರಿಗಣಿಸುವ ದೃಢಸಂಕಲ್ಪ. ಹೃದಯಾಘಾತವನ್ನು ಸೈಲೆಂಟ್ ಕಿಲ್ಲರ್ ಎಂದು ಪರಿಗಣಿಸಿ ಅದನ್ನು ತಡೆಯಲು ಸಮಗ್ರ ಆರೋಗ್ಯ ನೀತಿ ರೂಪಿಸುವ ಅಗತ್ಯ ಅತ್ಯಂತ ತುರ್ತಾಗಿದೆ.
ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಬಜೆಟ್, ತುರ್ತು ಚಿಕಿತ್ಸಾ ವ್ಯವಸ್ಥೆಗಳ ಬಲವರ್ಧನೆ, ಸಾರ್ವಜನಿಕರಲ್ಲಿ ಜಾಗೃತಿ ಅಭಿಯಾನ, ಶಾಲಾ-ಕಾಲೇಜು ಮಟ್ಟದಲ್ಲಿ ಆರೋಗ್ಯಕರ ಜೀವನಶೈಲಿಯ ಶಿಕ್ಷಣ, ನಿಯಮಿತ ಆರೋಗ್ಯ ತಪಾಸಣೆ, ಮಾನಸಿಕ ಆರೋಗ್ಯದ ಬಗ್ಗೆ ಅರಿವು ಇವೆಲ್ಲವೂ ತಕ್ಷಣ ಜಾರಿಯಾಗಬೇಕು.
ಏಕೆಂದರೆ ಮನುಷ್ಯನ ಜೀವಕ್ಕಿಂತ ದೊಡ್ಡ ರಾಜಕೀಯ ಯಾವುದೂ ಇಲ್ಲ. ಜನಪ್ರತಿನಿಧಿಗಳು ತಮ್ಮ ರಾಜಕೀಯ ಗೆಲುವಿನ ಸಂಭ್ರಮದಲ್ಲಿ ಮೈಮರೆತಿರುವ ಈ ಸಮಯದಲ್ಲಿ ಮನೆಮನೆಗಳಲ್ಲಿ ಕಣ್ಣೀರು ಹರಿಯುತ್ತಿದೆ. ಆ ಕಣ್ಣೀರಿನ ಮಲ್ಯವನ್ನು ಅರಿಯುವ ದಿನವೇ ನಿಜವಾದ ಮಾನವೀಯ ಆಡಳಿತದ ಆರಂಭವಾಗಲಿದೆ ಅಲ್ಲವೇ…?!

-9482482182
