ಅವಳು… ನನ್ನ ಬದುಕಿನ ಅರ್ಥವಾದ ಒಂದು ಪ್ರಪಂಚ…
ಅವಳು ಅವಳೇ…
ಹೆಸರಿನಿಂದ ಕರೆಯುವಷ್ಟರಲ್ಲಿ ಮುಗಿದು ಹೋಗದ ಒಬ್ಬಳು. ಒಂದು ಪದದಲ್ಲಿ ಸೀಮಿತಗೊಳ್ಳದ, ಒಂದು ಪರಿಚಯದಲ್ಲಿ ಹಿಡಿದುಕೊಳ್ಳಲಾಗದ, ಮನಸ್ಸಿನೊಳಗೆ ನಿಧಾನವಾಗಿ ಬೆಳೆಯುತ್ತಾ ಬೇರು ಬಿಟ್ಟಂತೆ ಉಳಿಯುವ ಒಂದು ವಿಶಿಷ್ಟ ಸನ್ನಿಧಿ. ಅವಳನ್ನು ಅರ್ಥಮಾಡಿಕೊಳ್ಳಲು ಸಮಯ ಬೇಕು… ಆದರೆ ಒಮ್ಮೆ ಅರ್ಥವಾದರೆ, ಮರೆಯಲು ಜೀವನವೇ ಸಾಲದು.
ಅವಳ ನಗು…
ಅದು ಸಾಮಾನ್ಯ ನಗುವಲ್ಲ. ಅದು ಕೇವಲ ತುಟಿಗಳ ಮೇಲೆ ಮೂಡುವ ಅಭಿವ್ಯಕ್ತಿ ಅಲ್ಲ. ಅದು ಮನಸ್ಸಿಗೆ ತಾಕಿ, ದಿನವನ್ನೇ ಬೆಳಗಿಸುವ ಒಂದು ಮೃದುವಾದ ಬೆಳಕು. ಕತ್ತಲೆಯ ಮಧ್ಯೆ ಹಾದಿ ತೋರಿಸುವ ದೀಪದಂತೆ. ಕೆಲವೊಮ್ಮೆ ಆ ನಗುವಿನಲ್ಲಿ ಒಂದು ನಿರಾಳತೆ ಕಾಣುತ್ತದೆ… ಇನ್ನೊಮ್ಮೆ ಅದು ಒಂದು ಮನ ಗುಟ್ಟು ಹಿಡಿದಂತೆ ಕಾಣುತ್ತದೆ… ಮತ್ತೊಮ್ಮೆ ಅರ್ಥವಾಗದ ಒಂದು ಆಕರ್ಷಣೆ, ಮನಸ್ಸನ್ನು ಅವಳತ್ತ ಸೆಳೆಯುವ ಒಂದು ಅದೃಶ್ಯ ಶಕ್ತಿ.
ಅವಳು ಮಾತನಾಡಿದಾಗ…
ಪದಗಳು ಕೇವಲ ಶಬ್ದಗಳಾಗಿ ಕೇಳಿಸುವುದಿಲ್ಲ. ಅವು ಮನಸ್ಸಿನಲ್ಲಿ ನೆಲಸುವ ಭಾವಗಳಾಗಿ ರೂಪಾಂತರ ಗೊಳ್ಳುತ್ತವೆ. ಅವಳ ಮಾತುಗಳಲ್ಲಿ ಏನೋ ಒಂದು ಅಚ್ಚರಿ ಇದೆ, ಕೇಳುವವನನ್ನು ಕಟ್ಟಿ ಹಾಕುವ… ಮತ್ತೆ ಮತ್ತೆ ಕೇಳಿಸಿಕೊಳ್ಳಬೇಕೆನಿಸುವ ಒಂದು ಮಂತ್ರ. ಅವಳ ಧ್ವನಿಯಲ್ಲಿ ಒಂದು ಶಾಂತಿ… ಅವಳ ಪದಗಳಲ್ಲಿ ಒಂದು ತೂಕ… ಅವಳ ಮಾತಿನೊಳಗೆ ಒಂದು ಸತ್ಯ…
ಅವಳ ನಡೆ…
ಅದು ಕೇವಲ ಹೆಜ್ಜೆಗಳ ಸಾಗುವಿಕೆಯಲ್ಲ… ಅದು ಆತ್ಮವಿಶ್ವಾಸದ ಕಥೆ ಹೇಳುತ್ತದೆ. ಅವಳು ನಡೆದಾಡುವು ದಲ್ಲ, ಅವಳು ತನ್ನದೇ ದಾರಿಯನ್ನು ನಿರ್ಮಿಸಿಕೊಂಡು ಮುಂದೆ ಸಾಗುವಳು.
ಅವಳ ಮುನಿಸು…
ಅದು ಕೋಪವಲ್ಲ… ಅದು ಪ್ರೀತಿಯ ಇನ್ನೊಂದು ರೂಪ… ಮಾತಿಲ್ಲದೇ ಹೇಳುವ ಅರ್ಥ. ದೂರವಿದ್ದರೂ ಹತ್ತಿರವಾಗಿಸುವ ಒಂದು ಸೂಕ್ಷ್ಮ ಬಂಧ.
ಅವಳು ಕಷ್ಟದಲ್ಲಿದ್ದರೂ… ತೋರುವ ಆ ಧೈರ್ಯ, ಅದು ಎದೆಗುಂದುವವರಿಗೆ ಪಾಠ. ನಂಬಿಕೆಯನ್ನು ಕಳೆದುಕೊಂಡವರಿಗೆ ದಾರಿ. ಜೀವನ ಎಷ್ಟು ಕಠಿಣವಾಗಿದ್ದರೂ, ಅವಳ ಮನಸ್ಸು ಮುರಿಯುವುದಿಲ್ಲ. ಬದಲಿಗೆ ಅದು ಇನ್ನಷ್ಟು ಗಟ್ಟಿ ಆಗುತ್ತದೆ. ಪ್ರತಿಯೊಂದು ನೋವನ್ನೂ ಶಕ್ತಿಯನ್ನಾಗಿ ಮಾಡುವ ಅಸಾಧಾರಣ ಶಕ್ತಿ ಅವಳಲ್ಲಿದೆ.
ಸೌಂದರ್ಯ… ಕಾಲ ಕಳೆದಂತೆ ಮಂಕಾಗುತ್ತದೆ. ಕಣ್ಣುಗಳಿಗೆ ಕಾಣುವ ಸೊಬಗು ಒಂದು ದಿನ ಮರೆಯಾಗಬಹುದು. ಆದರೆ ಅವಳಲ್ಲಿರುವ ಆ ವ್ಯಕ್ತಿತ್ವ… ಅದು ಕಣ್ಣುಗಳಿಂದ ಕಾಣುವುದಲ್ಲ, ಹೃದಯದಿಂದ ಅನುಭವಿಸುವ ಸೌಂದರ್ಯ. ಅದು ಕಾಲಕ್ಕೂ ಮೀರಿದುದು.. ಕ್ಷಣಿಕವಲ್ಲ… ಶಾಶ್ವತ…
ಅವಳಂತೆ ಮತ್ತೊಬ್ಬಳಿಲ್ಲ…
ಹೋಲಿಕೆ ಮಾಡುವುದೇ ಅನ್ಯಾಯ. ಏಕೆಂದರೆ ಅವಳು ಯಾವುದಕ್ಕೂ ಸಮನಾಗುವುದಿಲ್ಲ. ಅವಳು ಸ್ವತಂತ್ರವಾದ ಒಂದು ಪ್ರಪಂಚ. ತನ್ನದೇ ನಿಯಮಗಳೊಂದಿಗೆ, ತನ್ನದೇ ಭಾವಗಳೊಂದಿಗೆ, ತನ್ನದೇ ವಿಶಿಷ್ಟತೆಯೊಂದಿಗೆ ಜೀವಿಸುವ ಒಂದು ಅನನ್ಯತೆ.
ಅವಳು ಅವಳೇ… ಆದರೆ ನನ್ನ ಮನಸ್ಸಿನಲ್ಲಿ, ಅವಳು ಕೇವಲ ಅವಳು ಅಲ್ಲ.
ಅವಳೇ ನನ್ನೋಳು… ಮನಸ್ಸು ಆರಿಸಿಕೊಂಡ… ಹೃದಯ ಒಪ್ಪಿಕೊಂಡ… ಜೀವನಕ್ಕೆ ಅರ್ಥ ನೀಡಿದ ಒಬ್ಬಳು. ಅವಳು ಇದ್ದರೆ ಸಾಕು ಅನ್ನಿಸುವ ಒಂದು ಭಾವನೆ… ಅವಳು ಇಲ್ಲದಿದ್ದರೆ ಖಾಲಿಯಾಗುವ ಒಂದು ಪ್ರಪಂಚ…
ಅವಳು ಅವಳೇ… ಆದರೆ ನನಗೆ ಅವಳೇ ಎಲ್ಲವೂ…
