ಯಾನ ಮುಗಿಸಿದ ಗಾನಯೋಗಿಗೆ ಹೃದಯಸ್ಪರ್ಶಿ ನಮನ…
ವಿಶೇಷ ಲೇಖನ : ಅ. ರಾಕೇಶ್ ಡಿಸೋಜ – ಮೊ: 9448343211
ಧರ್ಮ, ಭಕ್ತಿ ಮತ್ತು ಮಾನವೀಯ ಮಲ್ಯಗಳ ಸಂಗಮವೇ ಕೆಲವು ಅಪರೂಪದ ವ್ಯಕ್ತಿಗಳ ಜೀವನವಾಗಿರುತ್ತದೆ. ಅಂತಹ ಮಹನೀಯರಲ್ಲಿ ಓರ್ವರಾಗಿದ್ದ ಪೂಜನೀಯ ಕಥೋಲಿಕ ಕ್ರೈಸ್ತ ಧರ್ಮಗುರು ಫಾದರ್ ಫೆಲಿಕ್ಸ್ ಜೋಸೆಫ್ ನರೋನ್ಹ ಅವರ ಅಗಲಿಕೆ ಕೇವಲ ಒಂದು ವ್ಯಕ್ತಿಯ ವಿದಾಯವಲ್ಲ, ಅದು ಒಂದು ಯುಗದ ಅಂತ್ಯವನ್ನೇ ಸೂಚಿಸುವ ಘಟನೆ. ಏ.೫ರ ಏಸುಕ್ರಿಸ್ತರ ಪುನರುತ್ಥಾನದ ಪ್ರತೀಕವಾದ ಪವಿತ್ರ ಈಸ್ಟರ್ ದಿನವೇ ಅವರು ಶಾಶ್ವತವಾಗಿ ಇಹಲೋಕ ತ್ಯಜಿಸಿ ಚಿರನಿದ್ರೆಗೆ ಜಾರಿರುವುದು ಅವರ ಜೀವನದ ಆಧ್ಯಾತ್ಮಿಕ ಮಹತ್ವವನ್ನೇ ಮತ್ತಷ್ಟು ಗಾಢಗೊಳಿಸುತ್ತದೆ.
ಕನ್ನಡ ಕ್ರೈಸ್ತ ಧಾರ್ಮಿಕ ಸಾಹಿತ್ಯಕ್ಕೆ ಅತ್ಯದ್ಭುತ ಕೊಡುಗೆ ನೀಡಿದ್ದ ಕನ್ನಡ ಕ್ರೈಸ್ತ ಸಾಹಿತ್ಯಕ್ಕೆ ತಮ್ಮ ಸಂಗೀತ ಮತ್ತು ಗಾಯನದ ಮೂಲಕ ಜೀವ ತುಂಬಿ ಅನೇಕ ದಶಕಗಳವರೆಗೂ ನಾಭೂತೋ ನಾ ಭವಿಷ್ಯತಿ ಎನ್ನುವಂತೆ ರಾರಾಜಿಸಿದ್ದ ಗುರುಶ್ರೇಷ್ಟ ಫಾದರ್ ಫೆಲಿಕ್ಸ್ ನರೊನ್ಹಾ ಅವರು, ಮಾ.೪, ೧೯೫೦ರಂದು ಶ್ರೀಯುತ ಸೈಮನ್ ನರೋನ್ಹ ಮತ್ತು ಶ್ರೀಮತಿ ಫಿಲೋಮಿನಾ ಲೋಬೋ ದಂಪತಿಗಳ ಪುತ್ರನಾಗಿ ಜನಿಸಿ, ಸಾಗರದ ಸಂತ ಜೋಸೆಫ್ ಚರ್ಚ್‌ನಲ್ಲಿ ದೀಕ್ಷಾಸ್ನಾನ ಪಡೆದರು. ಅವರ ಕುಟುಂಬದ ಆಳವಾದ ಭಕ್ತಿ ಮತ್ತು ನಂಬಿಕೆ ಬಾಲಕ -ಲಿಕ್ಸ್ ಅವರನ್ನು ದೈವ ಕರೆಯತ್ತ ಪ್ರೇರೇಪಿಸಿತು.
ತಮ್ಮ ಬಾಲ್ಯದ ಧಾರ್ಮಿಕ ಮಲ್ಯಗಳತ್ತ ಆಕರ್ಷಿತರಾಗಿ, ದೇವರ ಸೇವೆಯ ಮಾರ್ಗವನ್ನು ಆಯ್ಕೆ ಮಾಡಿಕೊಂಡ ಪೂಜ್ಯರು ದೇವಮಾತೆಯ ಅನುಗ್ರಹ ಮತ್ತು ದೇವಪುತ್ರ ಯೇಸುಕ್ರೀಸ್ತರ ಹೆಜ್ಜೆ ಗುರುತುಗಳನ್ನು ಅನುಸರಿಸುತ್ತಾ ಸೆಮಿನಾರಿಗೆ ಸೇರಿ, ೧೯೭೪ರ ಸೆಪ್ಟೆಂಬರ್ ೪ರಂದು ಬೆಂಗಳೂರು ಅಸೆನ್ಶನ್ ಚರ್ಚ್‌ನಲ್ಲಿ ಪರಮಪೂಜ್ಯ ಬಿಷಪ್ ಡಾ.ಅಲೋನ್ಸ್ ಮಾಥಿಯಾಸ್ ಅವರಿಂದ ಯಾಜಕರಾಗಿ ಅಭಿಷೇಕಗೊಂಡು ತಮ್ಮ ಸಂಪೂರ್ಣ ಜೀವನವನ್ನು ದೇವರ ಸೇವೆಗೆ ಅರ್ಪಿಸಿ, ಸುಮಾರು ಐದು ದಶಕಗಳ ಕಾಲ ನಿರಂತರವಾಗಿ ಆಧ್ಯಾತ್ಮಿಕ ಸೇವೆಯಲ್ಲಿ ತೊಡಗಿಸಿಕೊಂಡರು. ಇದು ಕೇವಲ ಒಂದು ಕರ್ತವ್ಯವಲ್ಲ, ಅದು ಅವರ ಜೀವನದ ಧ್ಯೇಯವಾಗಿತ್ತು.
ಬಾಲ್ಯದ ಧಾರ್ಮಿಕವಾಗಿ ಕ್ರಿಸ್ತನ ಪ್ರಭಾವಕ್ಕೆ ಒಳಗಾಗಿದ್ದ ಪೂಜ್ಯರು ಅತ್ಯದ್ಭುತ ಕಂಠವನ್ನು ಹೊಂದಿದ್ದರಿಂದ ಕೆಲವೊಂದು ಹಾಡುಗಳನ್ನು ತಾವೇ ರಚಿಸಿ ಅದಕ್ಕೆ ಸಂಗೀತ ಒದಗಿಸಿ ಹಾಡುತ್ತಿದ್ದರು. ಪುತ್ರನಿಗಿದ್ದ ಧಾರ್ಮಿಕ ಆಕರ್ಷಣೆಯನ್ನು ಅರಿತ ಪೋಷಕರು ದೈವ ಕರೆಯ ನಿಮಿತ್ತ ಅವರನ್ನು ಸೆಮಿನರಿಗೆ ಕಳುಹಿಸಿಕೊಟ್ಟರು. ಸ್ವಇಚ್ಛೆಯಿಂದ ಸೆಮಿನರಿಗೆ ತೆರಳಿದ ಅವರು ವ್ಯಾಸಂಗದ ಜತೆಗೆ ಕ್ರೈಸ್ತ ಧಾರ್ಮಿಕ ಸಾಹಿತ್ಯ, ಹಾಡುಗಾರಿಕೆ, ಸಂಗೀತ ಸಂಯೋಜನೆಯನ್ನು ಜತೆ ಜತೆಯಾಗಿ ಸಂಬಾಳಿಸಿಕೊಂಡು ಹೋದರು. ಅವರಲ್ಲಿದ್ದ ಸಂಗೀತದ ಆಸಕ್ತಿಯನ್ನು ಗುರುತಿಸಿದ ಹಿರಿಯ ಧರ್ಮಗುರುಗಳು ಪೂಜ್ಯರ ಆಸಕ್ತಿಗೆ ನೀರೆರೆದರು. ಇದರ ಪರಿಣಾಮವಾಗಿ ಕ್ರೈಸ್ತ ಧಾರ್ಮಿಕ ಸಾಹಿತ್ಯಕ್ಕೆ ಒಂದು ಆಸ್ತಿ ದೊರೆತಂತಾಯಿತು.ಅದನ್ನೇ ಮುಂದುವರೆಸಿಕೊಂಡು ಹೋದ ಫೆಲಿಕ್ಸ್ ನರೊನ್ಹಾ ಅವರು ಗುರುದೀಕ್ಷೆ ಪಡೆಯುವ ಮುನ್ನವೇ ನೂರಾರು ಹಾಡುಗಳನ್ನು ರಚಿಸಿ, ಅದಕ್ಕೆ ಸಂಗೀತ ನೀಡಿದರು. ಹತ್ತಾರು ದ್ವನಿಸುರುಳಿ ಹೊರತಂದಿದ್ದರು.
ವಿವಿಧ ಧರ್ಮಕ್ಷೇತ್ರ ಹಾಗೂ ಧರ್ಮಕೇಂದ್ರಗಳಲ್ಲಿ ಸೇವಾಕಾರ್ಯ ನಿರ್ವಹಿಸಿದ್ದ -ದರ್ ಫೆಲಿಕ್ಸ್ ನರೊನ್ಹಾ ಅವರು ಓರ್ವ ಪ್ರಬುದ್ಧ ಗುರುವಾಗಿ ತಮ್ಮನ್ನು ಗುರುತಿಸಿ ಕೊಳ್ಳುವ ಜೊತೆಜೊತೆಗೆ ಒಬ್ಬ ಅತ್ಯದ್ಭುತ ಹಾಡುಗಾರರಾಗಿ, ಸಾಹಿತ್ಯಕಾರರರಾಗಿ, ಸಂಯೋಜಕಾರಿ ಕೂಡ ಕೆಲಸ ಮಾಡಿದರು. ಅವರ ಕಂಠಸಿರಿಯಲ್ಲಿ ಮೂಡಿಬಂದ ನೂರಾರು ಹಾಡುಗಳು ಇವತ್ತಿಗೂ ಚರ್ಚ್‌ಗಳಲ್ಲಿ ಪ್ರತಿನಿತ್ಯ ಸುಪ್ರಭಾತದಂತೆ ಮೊಳಗುತ್ತವೆ. ಅವರ ಕಂಠಸಿರಿಯ ಮೋಡಿಗೆ ಒಳಗಾಗದವರೇ ಇರಲಿಲ್ಲವೇನೋ ಅಂಥ ಅತ್ಯದ್ಭುತವಾದ ಕಂಠವನ್ನು ಅವರು ಹೊಂದಿದ್ದರು. ಚಿತ್ರಸಾಹಿತಿ ಆರ್.ಎನ್ ಗೋಪಾಲ್, ಗಾಯಕರಾದ ವಾಣಿಜಯರಾಂ ಸೇರಿದಂತೆ ಅನೇಕ ದಿಗ್ಗಜರುಗಳ ಸೇರಿ ಅವರು ರಚಿಸಿ, ರೂಪಿಸಿ, ಸಂಯೋಜನೆ ಮಾಡಿದ ಹಾಡುಗಳು ಎ ಕಾಲಕ್ಕೂ ಎಲ್ಲರನ್ನು ಕೇಳಿಸಿಕೊಂಡು ಹೋಗುತ್ತವೆ. ಕನ್ನಡ ಕ್ರೈಸ್ತ ಹಾಡುಗಳ ಕ್ಷೇತ್ರದಲ್ಲಿ ಅವರಷ್ಟು ಹೆಸರು ಮಾಡಿದ ಧರ್ಮಗುರು ಇನ್ನೊಬ್ಬರಿಲ್ಲ ಎಂದರೂ ತಪ್ಪಾಗಲಿಕ್ಕಿಲ್ಲ.
ಫಾದರ್ ಫೆಲಿಕ್ಸ್ ಜೋಸೆಫ್ ನರೋನ್ಹ ಅವರ ಸಮರ್ಪಿತ ಸೇವೆ ಚಿಕ್ಕಮಗಳೂರು ಧರ್ಮಕ್ಷೇತ್ರದ ಪ್ರಧಾನಾಲಯದಲ್ಲಿ ಸಹಾಯಕ ಗುರುಗಳಾಗಿ ಆರಂಭಿಸಿ ನಂತರ ಮುಡಿಗೇರೆಯಲ್ಲಿ ಧರ್ಮಕೇಂದ್ರದ ಗುರುಗಳಾಗಿ ಸೇವೆ ಸಲ್ಲಿಸಿದರು. ಬಳಿಕ ಶಿವಮೊಗ್ಗ ಧರ್ಮಕ್ಷೇತ್ರದ ಆಡಳಿತ ವ್ಯಾಪ್ತಿಗೊಳಪಡುವ ಭದ್ರಾವತಿಯ ಪೇಪರ್ ಟೌನ್‌ನ ಸಂತ ಜೋಸೆಫ್ ಚರ್ಚ್, ಶಿವಮೊಗ್ಗ ಶರಾವತಿನಗರದ ಇನ್-ಂಟ್ ಜೀಸಸ್ ಚರ್ಚ್, ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಕ್ಯಾಥೀಡ್ರಲ್, ಸೊರಬದ ಸಂತ ಸೆಬಾಸ್ಟಿಯನ್ ಚರ್ಚ್, ಹರಿಹರದ ಅವರ್ ಲೇಡಿ ಆಫ್ ಹೆಲ್ತ್ ಬಾಸಿಲಿಕಾ, ಗೋಪಾಲದ ಗುಡ್ ಶೆಪರ್ಡ್ ಚರ್ಚ್ ಮತ್ತು ಸಾಗರದ ಸಂತ ಜೋಸೆಫ್ ಚರ್ಚ್ ಹಾಗೂ ಮದರ್ ತೆರೆಸಾ ಚರ್ಚ್‌ಗಳು ಸೇರಿದಂತೆ ವಿವಿಧ ಧರ್ಮಕೇಂದ್ರಗಳು ಮತ್ತು ಶಿವಮೊಗ್ಗ ಧರ್ಮಕ್ಷೇತ್ರದ ಆಡಳಿತ ವಿಭಾಗದಲ್ಲಿ ವಿವಿಧ ಸೇವೆ ಸಲ್ಲಿಸಿದರು.
ಫಾ. ಫೆಲಿಕ್ಸ್ ನರೋನ್ಹ ಅವರು ಕೇವಲ ಧರ್ಮಗುರುಗಳಾಗಿರಲಿಲ್ಲ, ಅವರು ಭಕ್ತಿ ಸಂಗೀತದ ಮೂಲಕ ಜನಮನಗಳನ್ನು ಗೆದ್ದ ಅಪರೂಪದ ಸಂಗೀತ ವಿದ್ವಾಂಸರೂ ಆಗಿದ್ದರು. ಅವರ ಸುಮಧುರ ಕಂಠದಲ್ಲಿ ಮೂಡಿದ ಭಕ್ತಿಗೀತೆಗಳು ಕೇವಲ ಕಿವಿಗೆ ಮಧುರವಾಗಿರಲಿಲ್ಲ, ಅವು ಆತ್ಮವನ್ನು ಸ್ಪರ್ಶಿಸುವ ಪ್ರಾರ್ಥನೆಗಳಾಗಿದ್ದವು. ನೂರಾರು ಭಕ್ತಿಗೀತೆಗಳನ್ನು ರಚಿಸಿ, ಸ್ವತಃ ಹಾಡಿರುವುದು ಅವರ ಅಸಾಧಾರಣ ಪ್ರತಿಭೆಗೆ ಸಾಕ್ಷಿಯಾಗಿದೆ. ಅವರ ಸಂಗೀತದಲ್ಲಿ ದೇವರ ಸಂದೇಶವಿತ್ತು, ಅವರ ಸ್ವರದಲ್ಲಿ ಪ್ರೀತಿ ಮತ್ತು ಶಾಂತಿಯ ಸ್ಪಂದನವಿತ್ತು.
ಅವರ ಸೇವೆಯ ವ್ಯಾಪ್ತಿ ದೇವಾಲಯಗಳ ಗೋಡೆಯೊಳಗೆ ಮಾತ್ರ ಸೀಮಿತವಾಗಿರಲಿಲ್ಲ. ಸಮಾಜದ ವಿವಿಧ ವರ್ಗಗಳ ಜನರೊಂದಿಗೆ ಬೆರೆತು, ಬಡವರು, ಅನಾಥರು ಮತ್ತು ಸಂಕಷ್ಟದಲ್ಲಿರುವವರ ಜೀವನದಲ್ಲಿ ಅವರು ಆಶಾಕಿರಣವಾಗಿ ಪರಿಣಮಿಸಿದರು. ಸೇವೆ ಅವರಿಗಾಗಿ ಒಂದು ಕರ್ಮವಲ್ಲ, ಅದು ಅವರ ಆತ್ಮದ ಸ್ವಭಾವವಾಗಿತ್ತು. ಕರುಣೆ, ಸಹಾನುಭೂತಿ ಮತ್ತು ಸಹಾಯಭಾವ ಇವುಗಳು ಅವರ ಜೀವನದ ಮೂಲ ಮಲ್ಯಗಳಾಗಿದ್ದವು.
ಶಿವಮೊಗ್ಗ ಧರ್ಮಕ್ಷೇತ್ರದಲ್ಲಿ ಶ್ರೇಷ್ಠಗುರುಗಳಾಗಿ ಸೇವೆ ಸಲ್ಲಿಸಿದ ಅವರು, ವಿವಿಧ ಧರ್ಮಕೇಂದ್ರಗಳಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಿ, ಅನೇಕ ಭಕ್ತರ ಬದುಕಿನಲ್ಲಿ ದಾರಿದೀಪರಾಗಿದ್ದರು. ಶಿಸ್ತಿನ ಸಿಪಾಯಿಯಂತಿದ್ದ ಪೂಜ್ಯರ ಸರಳತೆ ಅವರ ಅಲಂಕಾರವಾಗಿದ್ದರೆ, ವಿನಯ ಅವರ ವ್ಯಕ್ತಿತ್ವದ ಆಧಾರವಾಗಿತ್ತು. ಅವರು ಬೋಽಸಿದ ಪ್ರಬೋಧನೆಗಳು ಕೇವಲ ಮಾತುಗಳಲ್ಲಿ ಅಲ್ಲ, ಅವರ ನಡೆ-ನುಡಿಗಳ ಪ್ರತಿಫಲಿಸಿತು.
ಅವರ ಸಂದೇಶ ಸದಾ ಪ್ರೀತಿ, ಕ್ಷಮೆ, ಶಾಂತಿ ಮತ್ತು ಮಾನವೀಯತೆಯ ಸುತ್ತ ತಿರುಗುತ್ತಿತ್ತು. ವಿಭಿನ್ನ ಹಿನ್ನೆಲೆಯ ಜನರನ್ನು ಒಂದೇ ದಾರಿಯಲ್ಲಿ ಕೊಂಡೊಯ್ಯುವ ಸಾಮರ್ಥ್ಯ ಅವರಲ್ಲಿತ್ತು. ಇಂದಿನ ವಿಭಜಿತ ಸಮಾಜದಲ್ಲಿ, ಅವರಂತಹ ವ್ಯಕ್ತಿಗಳ ಅಗತ್ಯ ಇನ್ನಷ್ಟು ಹೆಚ್ಚಾಗಿದೆ ಎಂಬುದನ್ನು ಅವರ ಅಗಲಿಕೆ ಮತ್ತೊಮ್ಮೆ ನೆನಪಿಸುತ್ತದೆ.
ಇಂದು ಅವರು ನಮ್ಮ ನಡುವೆ ಇಲ್ಲದಿದ್ದರೂ, ಅವರ ಸ್ಮರಣೆ ಎಂದಿಗೂ ಮಂಕಾಗುವುದಿಲ್ಲ. ಅವರ ಭಕ್ತಿ ಸಂಗೀತ, ಅವರ ಸೇವಾ ಮನೋಭಾವ ಮತ್ತು ಅವರು ಭಿತ್ತಿದ ಮಲ್ಯಗಳು ಅನೇಕ ಪೀಳಿಗೆಗಳಿಗೆ ಮಾರ್ಗದರ್ಶಿಯಾಗಲಿದೆ. ಅವರು ಬೆಳಗಿಸಿದ ಆಧ್ಯಾತ್ಮಿಕ ದೀಪ ಅನೇಕ ಹೃದಯಗಳಲ್ಲಿ ಇಂದಿಗೂ ಹೊಳೆಯುತ್ತಲೇ ಇದೆ.
ಫಾ. ಫೆಲಿಕ್ಸ್ ಜೋಸೆಫ್ ನರೋನ್ಹ ಅವರ ಅಗಲಿಕೆ ನಿಜಕ್ಕೂ ಭಾರೀ ನಷ್ಟ. ಆದರೆ ಅವರು ಬದುಕಿದ ಜೀವನವೇ ನಮಗೆ ಒಂದು ಪಾಠ . ಭಕ್ತಿ ಎಂದರೆ ಸೇವೆ, ಸೇವೆ ಎಂದರೆ ಪ್ರೀತಿ, ಪ್ರೀತಿ ಎಂದರೆ ದೇವರ ಸಾನ್ನಿಧ್ಯ ಎಂದು ನಮ್ಮೆಲ್ಲರಿಗೆ ತೋರಿಸಿಕೊಟ್ಟಿದ್ದಾರೆ. ಅವರ ನಿಧನದಿಂದ ಅತೀದೊಡ್ಡ ನಷ್ಟ ಕನ್ನಡ ಕ್ರೈಸ್ತ ಧಾರ್ಮಿಕ ಸಾಹಿತ್ಯಕ್ಕಾಗಿದೆ ಎಂದರೆ ತಪಾಗಲಾರದು. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತಾ, ಹೊಸನಾವಿಕ ಪತ್ರಿಕೆಯ ಪರವಾಗಿ ಈ ಮಹಾನ್ ಆತ್ಮಕ್ಕೆ ನಮ್ಮ ಹೃತ್ಪೂರ್ವಕ ನಮನಗಳು.
