ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಯುಗಗಳು ಬದಲಾದರೂ ಮಲ್ಯಗಳು ಮರಳಿಬರುವ ಪವಿತ್ರ ಸಂಭ್ರಮ…

Share Below Link

ಯುಗಾದಿ ಎಂದರೆ ಕೇವಲ ಹೊಸ ವರ್ಷದ ಆರಂಭವಲ್ಲ. ಅದು ಬದುಕಿನ ಚಕ್ರ ದಲ್ಲಿ ಹೊಸ ಜಾಗೃತಿಯ ಮೆಟ್ಟಿಲು. ಕಾಲದ ಹೊಳೆಯಂತೆ ಯುಗಗಳು ಹರಿದು ಹೋಗುತ್ತವೆ. ಆದರೆ ಯುಗಾದಿ ಮತ್ತೆ ಮತ್ತೆ ಮರಳಿ ಬಂದು ನಮಗೆ ಹೊಸ ಆಶಯ, ಹೊಸ ಆತ್ಮವಿಶ್ವಾಸ ಮತ್ತು ಹೊಸ ದಿಕ್ಕನ್ನು ನೀಡುತ್ತದೆ. ಪ್ರಕೃತಿಯ ಚಿಗುರಿನಲ್ಲಿ ಕಂಡುಬರುವ ಪುನರ್ಜನ್ಮದ ಸಂದೇಶವೇ ಯುಗಾದಿಯ ಆತ್ಮ.
ಸಂಸ್ಕೃತದ ಯುಗ ಎಂದರೆ ಕಾಲ ಮತ್ತು ಆದಿ ಎಂದರೆ ಆರಂಭ. ಹೀಗಾಗಿ ಯುಗಾದಿ ಎಂದರೆ ಕಾಲದ ಹೊಸ ಆರಂಭದ ಸಂಭ್ರಮ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ಕೆಲವು ಯುಗಗಳು ಮುಗಿದು ಹೊಸ ಯುಗಗಳು ಆರಂಭ ವಾಗುತ್ತವೆ. ಹಳೆಯ ನೋವುಗಳು, ಕಳವಳಗಳು, ಅಸಮಾಧಾನಗಳು ಒಂದು ಯುಗವಾಗಿದ್ದರೆ, ಹೊಸ ಆಶೆಗಳು, ಗುರಿಗಳು ಮತ್ತು ಕನಸುಗಳು ಮತ್ತೊಂದು ಯುಗದ ಉದಯ.
ಪೌರಾಣಿಕವಾಗಿ ಚೈತ್ರ ಮಾಸದ ಶುಕ್ಲ ಪಾಡ್ಯಮಿಯಂದು ಬ್ರಹ್ಮದೇವನು ಸೃಷ್ಟಿ ಕಾರ್ಯವನ್ನು ಆರಂಭಿಸಿzನೆ ಎನ್ನುವ ನಂಬಿಕೆ ಇದೆ. ಈ ನಂಬಿಕೆ ಕೇವಲ ಕಥೆಯಲ್ಲ, ಅದು ಮನುಷ್ಯನಿಗೆ ಒಂದು ಆಧ್ಯಾತ್ಮಿಕ ಸಂದೇಶ. ಪ್ರತಿ ದಿನವೂ ಸೃಷ್ಟಿಯ ದಿನವಾಗಬಹುದು, ಪ್ರತಿ ಕ್ಷಣವೂ ಹೊಸ ಆರಂಭವಾಗಬಹುದು ಎಂಬ ಅರಿವು ಇದರಿಂದ ಮೂಡುತ್ತದೆ.
ವಿಷ್ಣುವಿನ ಮತ್ಸ್ಯಾವತಾರವೂ ಇದೇ ದಿನ ನಡೆದದ್ದು ಎಂಬ ಪುರಾಣಪ್ರಸಂಗವು, ಧರ್ಮವನ್ನು ರಕ್ಷಿಸಲು ಕಾಲಕಾಲಕ್ಕೆ ದೇವತ್ವವೇ ಹೊಸ ರೂಪದಲ್ಲಿ ಪ್ರತ್ಯಕ್ಷವಾ ಗುತ್ತದೆ ಎಂಬ ಸಂದೇಶವನ್ನು ಸಾರುತ್ತದೆ.
ಯುಗಾದಿಯ ಆಚರಣೆಗಳಲ್ಲಿ ಅಡಗಿರುವ ಆಧ್ಯಾತ್ಮಿಕತೆ ಅತ್ಯಂತ ಗಂಭೀರ. ಅಭ್ಯಂಜನ ಸ್ನಾನ, ದೇವರ ಪೂಜೆ, ಪಂಚಾಂಗ ಶ್ರವಣ ಇವೆಲ್ಲವೂ ಬಾಹ್ಯ ವಿಧಿಗಳಂತೆ ಕಾಣಿಸಿದರೂ, ಅವುಗಳ ಉದ್ದೇಶ ಮನಸ್ಸಿನ ಶುದ್ಧೀಕರಣ ಮತ್ತು ಜೀವನದ ಸಮತೋಲನ.
ಹೊಸ ಪಂಚಾಂಗವನ್ನು ಕೇಳುವುದು ಭವಿಷ್ಯದ ಕುತೂಹಲಕ್ಕಲ್ಲ. ಅದು ಪ್ರಕೃತಿ ಯೊಂದಿಗೆ ಹೊಂದಿಕೊಂಡು ಬದುಕುವ ಭಾರತೀಯ eನ ಪರಂಪರೆಯ ಸಂಕೇತ. ಋತು ಬದಲಾವಣೆ, ಆಹಾರ ಪದ್ಧತಿ, ಕೃಷಿ ಚಕ್ರ, ಗ್ರಹಗತಿಗಳ ಪ್ರಭಾವ ಇವೆಲ್ಲವೂ ಮಾನವನ ಬದುಕಿನ ಭಾಗವೆಂಬ ಅರಿವು ಇಲ್ಲಿ ಅಡಗಿದೆ.
ಯುಗಾದಿಯ ಅತ್ಯಂತ ಸುಂದರ ಸಂದೇಶ ಬೇವು-ಬೆಲ್ಲ ಸೇವನೆಯಲ್ಲಿ ವ್ಯಕ್ತವಾಗುತ್ತದೆ. ಜೀವನದಲ್ಲಿ ಕಹಿಯೂ ಇದೆ, ಸಿಹಿಯೂ ಇದೆ. ಸೋಲಿನ ಕ್ಷಣಗಳೂ ಇವೆ, ಯಶಸ್ಸಿನ ಹಬ್ಬಗಳೂ ಇವೆ. ಆದರೆ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುವ ಮನೋಭಾವವೇ ನಿಜವಾದ ಆಧ್ಯಾತ್ಮ.
ಸುಖ ಬಂದಾಗ ಅತಿಯಾದ ಉಸ ಬೇಡ. ದುಃಖ ಬಂದಾಗ ಆತ್ಮವಿಶ್ವಾಸ ಕಳೆದು ಕೊಳ್ಳಬೇಡ. ಸಮದೃಷ್ಟಿಯೇ ಯುಗಾದಿಯ ಸಾರ.
ಆಧುನಿಕ ಜೀವನದ ವೇಗದಲ್ಲಿ ಹಬ್ಬಗಳು ಕೇವಲ ಆಚರಣೆಗಳಾಗಿ ಉಳಿಯಬಾರದು. ಮಕ್ಕಳಿಗೆ ಯುಗಾದಿಯ ಆಧ್ಯಾತ್ಮಿಕ ಮತ್ತು ವೈeನಿಕ ಅರ್ಥವನ್ನು ತಿಳಿಸುವುದು ನಮ್ಮ ಹೊಣೆ.
ಮಾನವನ ಬದುಕು ಕೂಡ ಯುಗಗಳ ಸರಮಾಲೆ. ಬಾಲ್ಯ ಒಂದು ಯುಗ, ಯುವಸ್ಥೆ ಮತ್ತೊಂದು ಯುಗ, ವೃದ್ಧಾಪ್ಯ ಇನ್ನೊಂದು ಯುಗ. ಆದರೆ ಪ್ರತಿ ಯುಗದಲ್ಲೂ ಹೊಸ ಆರಂಭದ ಅವಕಾಶ ಇರುತ್ತದೆ. ಕಳೆದ ನೋವುಗಳು ಬೇವಿನಂತೆ ಉದುರಲಿ. ಉಳಿಯುವ ನೆನಪುಗಳು ಬೆಲ್ಲದ ಸಿಹಿಯಂತೆ ಹೃದಯದಲ್ಲಿ ತುಂಬಲಿ. ಹೊಸ ವರ್ಷವು ಹೊಸ ಬೆಳಕಿನೊಂದಿಗೆ ನಮ್ಮನ್ನು ಮುನ್ನಡೆಸಲಿ.


ಬ್ರಾಹ್ಮಿ ಮುಹೂರ್ತದಲ್ಲಿ ಧ್ಯಾನ ಮತ್ತು ಅಭ್ಯಂಜನ:
ಹಬ್ಬದ ದಿನ ಸೂರ್ಯೋದಯಕ್ಕೂ ಮುನ್ನ ಬ್ರಾಹ್ಮಿ ಮುಹೂರ್ತದಲ್ಲಿ ಏಳಬೇಕು. ಮೈಗೆ ಎಳ್ಳೆಣ್ಣೆ ಹಚ್ಚಿ ಶಾಸ್ತ್ರೋಕ್ತ ವಾಗಿ ಅಭ್ಯಂಜನ ಸ್ನಾನ ಮಾಡಬೇಕು. ಸ್ನಾನದ ನೀರಿನಲ್ಲಿ ಅರಿಶಿನ ಅಥವಾ ಗಂಗೆಯ ಸ್ಮರಣೆ ಮಾಡುವುದು ಪುಣ್ಯ ದಾಯಕ. ಇದು ದೇಹದ ಆಲಸ್ಯವನ್ನು ದೂರಮಾಡಿ ಹೊಸ ವರ್ಷದ ಚೈತನ್ಯವನ್ನು ತುಂಬುತ್ತದೆ.
ತಳಿರು-ತೋರಣ ಮತ್ತು ರಂಗೋಲಿ:
ಮನೆಯ ಬಾಗಿಲಿಗೆ ಹಸಿರು ಮಾವಿನ ಎಲೆ ಹಾಗೂ ಬೇವಿನ ಸೊಪ್ಪಿನ ತೋರಣ ಕಟ್ಟಬೇಕು. ಮಾವಿನ ಎಲೆಗಳು ಶುಭ್ರ ಗಾಳಿಯನ್ನು ನೀಡಿದರೆ, ಬೇವಿನ ಸೊಪ್ಪು ಕ್ರಿಮಿನಾಶಕವಾಗಿ ಕೆಲಸ ಮಾಡುತ್ತದೆ. ಮನೆಯ ಮುಂಭಾಗದಲ್ಲಿ ಶ್ರದ್ಧೆಯಿಂದ ರಂಗೋಲಿ ಹಾಕಿ, ಹೊಸ್ತಿಲಿಗೆ ಪೂಜೆ ಸಲ್ಲಿಸಬೇಕು.
ದೇವರ ಪೂಜೆ ಮತ್ತು ಸಂಕಲ್ಪ:
ದೇವರ ಮನೆಯನ್ನು ಹೂವುಗಳಿಂದ ಅಲಂಕರಿಸಿ ದೀಪಾರಾಧನೆ ಮಾಡಬೇಕು. ಮೊದಲು ಗಣಪತಿಯನ್ನು ಸ್ಮರಿಸಿ ನಂತರ ಕುಲದೇವತೆ ಮತ್ತು ಇಷ್ಟದೇವತೆಗಳ ಪೂಜೆ ಮಾಡಬೇಕು. ಈ ವರ್ಷ ನಮಗೆ ಮತ್ತು ಸಮಾಜಕ್ಕೆ ಶುಭವಾಗಲಿ ಎಂದು ಸಂಕಲ್ಪ ಮಾಡುವುದು ಪೂಜೆಯ ಮುಖ್ಯ ಭಾಗ.
ನೈವೇದ್ಯ ಮತ್ತು ಬೇವು-ಬೆಲ್ಲ ಅರ್ಪಣೆ:
ಹೊಸ ವರ್ಷದ ಮೊದಲ ನೈವೇದ್ಯ ವಾಗಿ ಬೇವು-ಬೆಲ್ಲವನ್ನು ದೇವರಿಗೆ ಸಮರ್ಪಿಸಬೇಕು. ಇದರೊಂದಿಗೆ ಹೋಳಿಗೆ, ಪಾಯಸ ಅಥವಾ ಸಾಂಪ್ರದಾಯಿಕ ಅಡುಗೆಗಳನ್ನು ನೈವೇದ್ಯ ಮಾಡಬೇಕು.
ಪಂಚಾಂಗ ಪೂಜೆ ಮತ್ತು ಶ್ರವಣ:
ಪೂಜೆಯ ಸಮಯದಲ್ಲಿ ಹೊಸ ವರ್ಷದ ಪಂಚಾಂಗವನ್ನು ದೇವರ ಮುಂದಿಟ್ಟು ಗಂಧ-ಅಕ್ಷತೆ ಏರಿಸಬೇಕು. ಪೂಜೆಯ ನಂತರ ಮನೆಯ ಹಿರಿಯರು ಅಥವಾ ಪುರೋಹಿತರಿಂದ ಪಂಚಾಂಗದ ಫಲಗಳನ್ನು ಕೇಳಬೇಕು.
ಹಿರಿಯರ ಆಶೀರ್ವಾದ:
ಪೂಜೆಯ ನಂತರ ಮನೆಯ ಹಿರಿಯರ ಪಾದಕ್ಕೆ ನಮಸ್ಕರಿಸಿ ಆಶೀರ್ವಾದ ಪಡೆಯುವುದು ಭಾರತೀಯ ಸಂಸ್ಕೃತಿಯ ದೊಡ್ಡ ಸಂಸ್ಕಾರ. ಇದು ಮುಂದಿನ ಪೀಳಿಗೆಗೆ ನಮ್ರತೆ ಮತ್ತು ಗೌರವದ ಪಾಠ ಕಲಿಸುತ್ತದೆ.
ಬೇಂದ್ರೆಯವರ ಕಾವ್ಯದಲ್ಲಿ ಯುಗಾದಿ ಎಂದರೆ ಕೇವಲ ಹಬ್ಬವಲ್ಲ, ಅದು ಮನಸ್ಸಿನ ಪುನರುತ್ಥಾನ. ಕಾಲವು ಹಳೆಯ ನೋವು ಗಳನ್ನು ತೆಗೆದುಕೊಂಡು ಹೋಗುತ್ತದೆ, ಆದರೆ ಹೊಸ ಬೆಳಕು, ಹೊಸ ಕನಸುಗಳನ್ನು ಮತ್ತೆ ತರುತ್ತದೆ ಎಂಬ ನಂಬಿಕೆ ಕವಿತೆಯಲ್ಲಿ ವ್ಯಕ್ತವಾಗುತ್ತದೆ. ಜೀವನದ ಋತುಗಳು ಬದಲಾಗುತ್ತಾ ಬಂದರೂ ಮನುಷ್ಯನ ಆಶಾ ಭಾವನೆ ಮಾತ್ರ ಎಂದಿಗೂ ಕೊನೆ ಗೊಳ್ಳುವುದಿಲ್ಲ. ಯುಗಾದಿ ಅಂದರೆ ಒಳಗಿನ ಚಿಗುರನ್ನು ಜಾಗೃತಗೊಳಿಸುವ ಉತ್ಸವ ಎಂಬುದೇ ಕವಿಯ ಸಾರ.
ಆಧ್ಯಾತ್ಮಿಕವಾಗಿ ಯುಗಾದಿ ಪೂಜೆಯು ಕೇವಲ ಬಾಹ್ಯ ಅಲಂಕಾರ ವಲ್ಲ; ಅದು ಅಂತರಂಗದ ಶುದ್ಧೀಕರಣದ ಮಹೋತ್ಸವ. ಹಳೆಯ ದ್ವೇಷ ಮತ್ತು ಅಸೂಯೆಗಳನ್ನು ಬೇವಿನಂತೆ ಕಿತ್ತೆಸೆದು, ಪ್ರೀತಿ ಮತ್ತು ತಾಳ್ಮೆಯನ್ನು ಬೆಲ್ಲದಂತೆ ಹೃದಯದಲ್ಲಿ ತುಂಬಿಕೊಳ್ಳುವ ದಿನವಿದು.
ಹೊಸ ಸಂವತ್ಸರವು ನಮ್ಮೆಲ್ಲರ ಬದುಕಿಗೆ ಶಾಂತಿ, ಸಮೃದ್ಧಿ ಮತ್ತು ಸಮತೋಲನ ತರಲಿ. ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಲೇಖನ : ಸಿ. ಎನ್. ಮಶ್, ವಕೀಲರು, ಶಿವಮೊಗ್ಗ .

Leave a Reply

Your email address will not be published. Required fields are marked *