ತಾಜಾ ಸುದ್ದಿಲೇಖನಗಳು

ಮಾ.೧೯: ಹಿಂದೂಗಳ ಪವಿತ್ರ ಹಾಗೂ ಶಕ್ತಿಯಾದ ಯುಗಾದಿ ಹಬ್ಬ…

Share Below Link

ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗು ತ್ತದೆ. ಯುಗಾದಿ ಪದದ ವ್ಯುತ್ಪತ್ತಿ ಯುಗ +ಆದಿ. ಹೊಸ ಯುಗದ ಆರಂಭ ಎಂದು.
ಸಾಂಪ್ರದಾಯಿಕ ಆಚರಣೆಗಳು :
ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವೆಂದರೆ ಸೂರ್ಯ ನಮಸ್ಕಾರ, ಪಂಚಾಂಗದ ಪೂಜೆ ಹಾಗೂ ಸರ್ವೇ ಸಾಮಾನ್ಯವಾಗಿ ಬೇವು- ಬೆಲ್ಲ. ಜೀವನದ ಸಿಹಿ-ಕಹಿ ಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ. ಯುಗಾದಿಯೆಂದರೆ, ಹೊಸ ವರ್ಷದ ಆರಂಭದ ದಿನವಾದರೂ ಭಾರತದಲ್ಲಿ ಈ ದಿನವನ್ನು ನಿರ್ಧರಿಸುವ ರೀತಿ ಹಲವಾರಿವೆ. ಮುಖ್ಯವಾಗಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು, ಹಿಂದೂ ಧರ್ಮದ ವೇದಾಂಗ ಜ್ಯೋತಿಷ್ಯ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ.
ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಕರ್ನಾಟಕ ದಲ್ಲಿ ಚಾಂದ್ರಮಾನಪದ್ಧತಿ ಮೊದಲಿನಿಂದ ರೂಢಿಯಲ್ಲಿದೆ.
ಭೂಮಿಯಿಂದ ನೋಡಿದಾಗ, ಸೂರ್ಯ, ಚಂದ್ರ, ಗ್ರಹಗಳು ನಕ್ಷತ್ರ ಮಂಡಲದಿಂದಾದ ರಾಶಿಚಕ್ರದಲ್ಲಿ ದಿನೇ ದಿನೇ ಸ್ವಲ್ಪಸ್ವಲ್ಪವಾಗಿ ಸಂಚರಿಸಿದಂತೆ ಕಾಣುತ್ತವೆ. ವೇದಾಂಗ ಜ್ಯೋತಿಷ್ಯದಂತೆ, ಮೊದಲ ನಕ್ಷತ್ರ ಅಶ್ವಿನಿ, ಅಂದರೆ, ಮೇಷ ರಾಶಿಯ ೧-೧೩:೨೦ ಭಾಗ (ಡಿಗ್ರಿ). ಅಲ್ಲಿ ಸೂರ್ಯನಿzಗ ಭೂಮಿಯ ಉತ್ತರಾರ್ಧಗೋಳ ದಲ್ಲಿ ಸಸ್ಯಗಳಲ್ಲಿ ಚಿಗುರು ಕಾಣುತ್ತದೆ. ಅಂದರೆ ಹೊಸಹುಟ್ಟು. ಆದ್ದರಿಂದ ಅಶ್ವಿನಿ ನಕ್ಷತ್ರಕ್ಕೆ ರವಿಯು ಪ್ರವೇಶಿ ಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ.
ಇದೇ ಸೌರಮಾನ ಯುಗಾದಿ. ಸಾಮಾನ್ಯವಾಗಿ ಈಗ ಇದು ಏ.೧೪ನೇ ತಾರೀಖಿಗೆ ಬಂದಿದೆ. ಆದರೆ ಚಂದ್ರನ ಗತಿ ಅತಿ ವೇಗವಾದ್ದರಿಂದ ಪ್ರತಿ ಪ್ರದಕ್ಷಿಣೆಗೂ ಒಂದೊಂದು ತಿಂಗಳಾಗಿ, ಹನ್ನೆರಡು ಪ್ರದಕ್ಷಿಣೆಗಳಿಗೆ ಸರಿಯಾಗಿ ಒಂದು ಚಾಂದ್ರಮಾನ ಸಂವತ್ಸರವಾಗುತ್ತದೆ.


ಯುಗಾದಿ ಹಬ್ಬದ ಆಚರಣೆ:
ಈ ಹಬ್ಬವನ್ನು ಹೆಚ್ಚಾಗಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುವರು. ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾ ರಾಷ್ಟ್ರದಲ್ಲಿ ಗುಡಿಪಡ್ವ. ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೇ ಗುಡಿಪಡ್ವ ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ ಗುಡಿ ಎಂದು ಮೂಲೆಯಲ್ಲಿ ಇರಿಸುವರು. ಇದು ಹೊಸ ವರುಷದ ಆಗಮನಕ್ಕೆ ಬಾವುಟ ವನ್ನು ಹಾರಿಸುವುದರ ಸಂಕೇತ.
ಆಂಧ್ರ ಪ್ರದೇಶದಲ್ಲಿ ಹುಣಿಸೇ ಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಇತ್ಯಾದಿ ಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಹೆಸರಿನ ಪದಾರ್ಥ ವನ್ನು ಸೇವಿಸುವರು. ಅಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರುವುದು. ತಳಿರು ತೋರಣವನ್ನು (ಎಳೆಯ ಹಸಿರು ಮಾವಿನೆಲೆ ಮಧ್ಯೆ ಮಧ್ಯೆ ಬೇವಿನ ಎಲೆ ಹೂಗಳ ಗೊಂಚಲು) ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಮನೆಯ ಬಾಗಿಲಿಗೆ ತಳಿರು ತೋರಣವಾಗಿ ಕಟ್ಟುವರು.
ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನು ಹಾಕುತ್ತಾರೆ. ಮುಂಜನೆ ಬೇಗನೆ ಎದ್ದು ಅಭ್ಯಂಜನ (ಎಣ್ಣೆ ಸೀಗೇಕಾಯಿಯಿಂದ ತಲೆಯನ್ನು ತೊಳೆದುಕೊಳ್ಳುವುದು) ಮಾಡಿ ಪುಣ್ಯಾಹ ಮಂತ್ರಗಳನ್ನು ಉಚ್ಚರಿಸಿ ಮಾವಿನೆಲೆಯಿಂದ ಮನೆಯ ಎಲ್ಲ ಕಡೆ ಕಳಶದ ನೀರನ್ನು ಸಿಂಪಡಿಸು ವರು. ನಂತರ ಹೊಸ ಬಟ್ಟೆ ಧರಿಸಿ, ಪಂಚಾಂಗವನ್ನು ಮನೆಯ ಹಿರಿಯರು ಓದುವರು. ಮತ್ತೆಲ್ಲರೂ ಅದನ್ನು ಕೇಳುವರು.
ಪಂಚಾಂಗ ಹಿಂದೂ ಸಂಪ್ರದಾಯದ ಕ್ಯಾಲೆಂಡರ್. ಇದು ದಿನಸೂಚಿಯಷ್ಟೇ ಅಲ್ಲದೇ ಆ ವರ್ಷದಲ್ಲಿ ಮಳೆ, ಬೆಳೆ ಹೇಗಿದೆ, ರಾಶಿ ಫಲ, ಮದುವೆ, ಉಪನಯನಗಳಿಗೆ ಒಳ್ಳೆಯ ಮುಹೂರ್ತಗಳು, ಒಟ್ಟಾರೆ ಜನಜೀವನದ ಸ್ಥಿತಿಯನ್ನು ಸೂಚಿಸಿ ರುವುದು. ಅಂದು ಹಿರಿಯ ಕಿರಿಯರೆಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಸಂತೋಷದಿಂದ ಹಾಡಿ ನಲಿಯುವರು. ಅಂದಿನ ವಿಶೇಷ ತಿನಿಸು ಒಬ್ಬಟ್ಟು ಅಥವಾ ಹೋಳಿಗೆ. ತೆಂಗಿನಕಾಯಿ ಹೂರಣದಲ್ಲಿ ಮಾಡಿದ ಹೋಳಿಗೆ ಬಹಳ ದಿನ ಇರದೇ ಕೆಡುವುದೆಂದು ಬೇಳೆಯ ಹೂರಣದಲ್ಲಿ ಮಾಡುವರು. ಇದನ್ನೇ ಮರಾಠಿಯಲ್ಲಿ ಪೂರಣ ಪೋಳಿ ಎಂದು ಕರೆಯುವರು. ಸಂಜೆಯ ವೇಳೆಯಲ್ಲಿ ಗುರು -ಹಿರಿಯರ ಮನೆಗಳಿಗೆ ಹೋಗಿ ಅವರಿಗೆ ಕಾಲು ಮುಟ್ಟಿ ನಮಸ್ಕರಿಸಿ ಅವರ ಆಶೀರ್ವಾದ ಪಡೆಯುವರು.
ಇನ್ನೊಂದು ವಿಶೇಷವೆಂದರೆ, ಇದೇ ಸಮಯದಲ್ಲಿ ಮಕ್ಕಳಿಗೆ ಪರೀಕ್ಷೆಗಳಿರುವುದರಿಂದ, ಈ ನೆಪದದರೂ ಹಿರಿಯರಿಗೆ ಬಗ್ಗಿ ನಮಸ್ಕರಿಸಿ ಅವರಿಂದ ಒಳ್ಳೆಯದಾಗಲೆಂಬ ಮಾತುಗಳನ್ನು ಸ್ವೀಕರಿಸುವ ಸಂದರ್ಭ ಒದಗಿ ಬರುವುದು. ಮನೆಯ ಹೆಂಗಸರು ಹೊಸದಾಗಿ ಬರುವ ಮಾವಿನ ಕಾಯಿಯಿಂದ ಉಪ್ಪಿನಕಾಯಿ ಯನ್ನು ಮಾಡುವರು.
ಬೇವು-ಬೆಲ್ಲ : ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲ ವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸು ವರು. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯ ಶಮನಕಾರಿ. ಬೇವು -ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಶ್ಲೋಕ ಹೀಗಿದೆ:
ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ|
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ||
ಅದರರ್ಥ ಹೀಗಿದೆ : ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ.
ಸರ್ವರಿಗೂ ಮತ್ತೊಮ್ಮೆ ಹೊಸ ವರ್ಷದ ಮತ್ತು ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ಮುರುಳೀಧರ್ ಹೆಚ್ ಸಿ
ಪತ್ರಕರ್ತರು, ಶಿವಮೊಗ್ಗ.

Leave a Reply

Your email address will not be published. Required fields are marked *