ಕಾಮ ದಹನವು ಅಧ್ಯಾತ್ಮ ಮತ್ತು ಮನಸ್ಸಿನ ಶುದ್ಧೀಕರಣದ ಹಬ್ಬ….
ಮಾರ್ಪಳ್ಳಿ ಆರ್ ಮಂಜುನಾಥ್ – ಮೊ.ನಂ. ೯೯೦೦೨೫೬೦೮೩
ದೇಶಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರಗಳಿಂದ ಆಚರಿಸುವುದ ರೊಂದಿಗೆ ವಿದೇಶಗಳಲ್ಲಿರುವ ಭಾರತೀಯರು ಸಹ ಹೋಳಿ ಹಬ್ಬವನ್ನು ಆಚರಿಸುತ್ತ ವಿಶ್ವಕ್ಕೆ ಹೋಳಿ ಹಬ್ಬದ ಮಹತ್ವವನ್ನು ಸಾರಿzರೆ. ಹೋಳಿ ಹಬ್ಬವು ಬಣ್ಣದ ಹಬ್ಬ ಆದರೂ ಈ ಹಬ್ಬದ ಹಿಂದಿನ ಕಥೆಗಳು ಮಾತ್ರ ವಿಭಿನ್ನ ರೀತಿಯಲ್ಲಿದೆ.
ದಕ್ಷಿಣ ಭಾರತದಲ್ಲಿ ಪ್ರಚಲಿತ ಇರುವಂತೆ ಹೋಳಿ ಹಬ್ಬದ ಕಾಲಕ್ಕೆ ಬರುವ ಮತ್ತು ಆಚರಿಸುವ ಹಬ್ಬದಂತೆ ಕಾಮದೇವ ನನ್ನು ಮಾರನೆಂದು, ಮನ್ಮಥನೆಂದು ಮದನ, ದರ್ಶಕ , ರವಿಕಾಂತ ಕುಸುಮಶರ, ಕಾಮಣ್ಣ ಹೀಗೆ ಅನೇಕ ಹೆಸರುಗಳಿಂದ ಕರೆಯಲಾಗಿದ್ದು ಇವನು ಶ್ರೀಯ ಮಗನಾಗಿ ದೇವತೆಗಳು ಕೋರಿಕೆಯ ಮೇರೆಗೆ ವೈರಾಗ್ಯ ಮೂರ್ತಿ ಯಾದ ತಪಸ್ಸಿನಲ್ಲಿ ತಲ್ಲೀನನಾಗಿದ್ದ ಶಿವನ ತಪಸ್ಸನ್ನು ಭಂಗ ಮಾಡಲು ಹೋಗಿ ಭಸ್ಮವಾದ ಕಥೆಯಾಗಿದೆ.
ಈ ಕಾಮದೇವನು ಭಸ್ಮವಾಗಿ ಅನಾಂಗನಾಗಿ ಪುನರ್ಜನ್ಮ ತಾಳಿದ ದಿನವೇ ಕಾಮದಹನ ಹಬ್ಬವು ಬರುತ್ತದೆ. ಈ ಬಗ್ಗೆ ಪುರಾಣದ ಕಥೆ ಇದೆ.
ಶಿವನ ಪತ್ನಿಯ ಸತಿ ದೇವಿಯ ಅವತಾರವಾಗಾದ್ದು, ಇವಳು ದಕ್ಷನ ಮಗಳಾಗಿದ್ದಳು. ದಕ್ಷನಿಗೆ ಶಿವನನ್ನು ಕಂಡರೆ ಆಗುತ್ತಿರಲಿಲ್ಲ. ದಕ್ಷನು ಮಾಡುವ ಮಹಾ ಯಜ್ಞದಲ್ಲಿ ಶಿವನನ್ನು ಆಹ್ವಾನಿಸದೆ ಇದ್ದರೂ ತಂದೆಯು ಮಾಡುತ್ತಿರುವ ಯಜ್ಞದಲ್ಲಿ ಸತಿ ದೇವಿ ಪ್ರೀತಿ ಗೌರವದಿಂದ ಆಗಮಿಸಿರುತ್ತಾಳೆ.
ಆದರೆ ಯಜ್ಞಕ್ಕೆ ಬಂದ ಸತಿದೇವಿಯ ಎದುರಿಗೆ ದಕ್ಷನು ಶಿವನನ್ನು ಅವಮಾನ ಮಾಡಿ ಹೀಯಾಳಿಸುವುದನ್ನು ಕಂಡು ಸತಿ ದೇವಿಯು ಸಹಿಸದೆ ದಕ್ಷನು ಮಾಡುತ್ತಿದ್ದ ಯಜ್ಞಕ್ಕೆ ಬಿದ್ದು ಆಹುತಿಯಾಗುತ್ತಾಳೆ. ಇದನ್ನು ಕಂಡ ಶಿವನು ದಕ್ಷನ ಯಜ್ಞವನ್ನು ನಾಶ ಮಾಡಿ ಸತಿಯ ದೇಹವನ್ನು ಬ್ರಹ್ಮಾಂಡದ ಹೊತ್ತುಕೊಂಡು ಸುತ್ತಾಡಿದಾಗ ಲೋಕ ಕಲ್ಯಾಣಕ್ಕಾಗಿ ವಿಷ್ಣುವು ಸತಿ ದೇವಿಯ ಶರೀರವನ್ನು ಸುದರ್ಶನ ಚಕ್ರದಿಂದ ಚುರುಚುರಾಗಿ ಮಾಡುತ್ತಾನೆ.
ಇದನ್ನು ಕಂಡ ಶಿವನು ವೈರಾಗ್ಯದಿಂದ ಧ್ಯಾನ ಮಗ್ನನಾಗಿ ತಪಸ್ಸು ಮಾಡುತ್ತಾನೆ. ಅದೇ ಕಾಲಕ್ಕೆ ಸತಿ ದೇವಿಯು ಪಾರ್ವತಿಯಾಗಿ ಹಿಮವಂತನ ಮಗಳಾಗಿ ಶಿವನನ್ನು ಮದುವೆಯಾಗಲು ಕಾತುರಳಾಗಿರುತ್ತಾಳೆ. ಇದಲ್ಲದೆ ಸುರಪದ್ಮನೆಂಬ ರಾಕ್ಷಸನು ಶಿವನ ಮಗನಿಂದಲೇ ತನಗೆ ಸಾವು ಬರಬೇಕೆಂದು ವರವನ್ನು ಪಡೆದಿರುತ್ತಾನೆ. ಹೀಗಾಗಿ ಶಿವನ ತಪಸ್ಸನ್ನು ಭಂಗ ಪಡಿಸಿ ಪಾರ್ವತಿಯನ್ನು ಮದುವೆಯಾಗುವಂತೆ ಮಾಡಲು ದೇವತೆ ಗಳು ಕಾಮದೇವನ ಸಹಾಯ ಬೇಡುತ್ತಾರೆ.
ಕಾಮದೇವನಿಗೆ ಶಿವನ ಮೂರನೇ ಕಣ್ಣಿನ ಬೃಹತ್ ಶಕ್ತಿಯ ಅರಿವಿದ್ದರೂ ತನ್ನ ಮೋಹದ ಬಾಣದಿಂದ ತಪಸ್ಸಿನಲ್ಲಿ ಮಗ್ನನಾಗಿದ್ದ ಶಿವನಮೂರನೇ ಕಣ್ಣಿಗೆ ಬಾಣಪ್ರಯೋಗಿಸಿದಾಗ ಶಿವನು ಕೋಪ ದಿಂದ ಕಣ್ಣನ್ನು ತೆರೆಯುತ್ತಾನೆ. ಕಾಮ ದೇವನು ಭಸ್ಮವಾಗುತ್ತಾನೆ. ಈ ಘಟನೆ ಯನ್ನೇ ಕಾಮದಹನ ಎಂದು ಕರೆಯಲಾಗುತ್ತದೆ .
ಅಂದರೆ ಆಸೆಗಳನ್ನು, ಕಾಮವನ್ನು ಸುಟ್ಟು ಶುದ್ಧೀಕರಣ ಹಾಗೂ ಆಧ್ಯಾತ್ಮಿಕ ಸಾಧನೆ ಮಾಡುವ ಈ ಹಬ್ಬವೆನ್ನಲಾಗಿದೆ. ಕಾಮದೇವನು ಲೋಕಕಲ್ಯಾಣಕ್ಕಾಗಿ ದೇವಾನುದೇವತೆಗಳ ಒಳಿತಿಗಾಗಿ ಭಸ್ಮವಾಗಿದ್ದರಿಂದ ಕರ್ನಾಟಕದ ಅನೇಕ ಕಡೆಯಲ್ಲಿ ಕಾಮದೇವನನ್ನು ಮಾವಿನ ಹೂವುಗಳು ಮತ್ತು ಅಲಂಕಾರಗಳಿಂದ ಪೂಜೆ ಮಾಡಿ ಮಾರನೇ ದಿನ ಕಾಮದಹನ ಮಾಡಿ ಆದ ಭಸ್ಮವನ್ನು ಮನೆಗೆ ತೆಗೆದು ಕೊಂಡು ಹೋಗಿ ಪೂಜಿಸುವ ರೂಢಿಯಿದೆ. ಇದನ್ನು ಜಾತ್ರೆಯು ರೀತಿಯಲ್ಲಿ ಆಚರಿಸುತ್ತಾರೆ. ವಿಶೇಷವಾಗಿ ಉತ್ತರಕರ್ನಾಟಕದಲ್ಲಿ ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ.
ದಕ್ಷಿಣ ಭಾರತದಲ್ಲಿ ಪಾಲ್ಗುಣ ಚತುರ್ದಶಿ ಯಂದು ಅಂದರೆ ಮಾರ್ಚ್ ಮಧ್ಯದಿಂದ ಏಪ್ರಿಲ್ ಮಧ್ಯದಲ್ಲಿ ಈ ಕಾಮದಹನ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಹೋಳಿ ಆಚರಣೆಯ ಸಮಯದಲ್ಲಿ ಬರುತ್ತದೆ. ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಹೋಳಿ ಹಬ್ಬವನ್ನು ಹಾಗೂ ಕಾಮದಹನ ಹಬ್ಬವನ್ನು ಆಚರಿಸಲಾಗುತ್ತದೆ.
ಕಾಮದಹನ ಹಬ್ಬವು ಮನಸ್ಸಿನ ದೇಹದ ಶುದ್ಧೀಕರಣ ಹಾಗೂ ಆಧ್ಯಾತ್ಮಿಕ ಪ್ರಗತಿಯನ್ನು ನೆನಪಿಸುತ್ತದೆ. ಅಲ್ಲದೇ ಕಾಮದಾಹನ ಹಬ್ಬವು ಇಂದ್ರೀಯಗಳ ನಿಯಂತ್ರಣ ಮಾಡಿಕೊಳ್ಳುವುದರೊಂದಿಗೆ ಆಧ್ಯಾತ್ಮಿಕ ಜಗೃತಿಯು ಈ ಕಾಮದಹನ ಹಬ್ಬದಲ್ಲಿದೆ.
