ಸಹಪಠ್ಯ ಚಟುವಟಿಕೆಗಳು ಮಕ್ಕಳ ಶೈಕ್ಷಣಿಕ ಪಠ್ಯಕ್ರಮಕ್ಕೆ ಪೂರಕವಾಗಿವೆ…
ಶಿಕಾರಿಪುರ, (ಹೊಸನಾವಿಕ): ಸಹಪಠ್ಯ ಚಟುವಟಿಕೆಗಳು ಶಾಲಾ ಶಿಕ್ಷಣದ ಪ್ರಮುಖ ಭಾಗವಾಗಿದ್ದು,ಅವು ಶೈಕ್ಷಣಿಕ ಪಠ್ಯಕ್ರಮಕ್ಕೆ ಪೂರಕವಾಗಿವೆ. ಮಗುವಿನ ಪ್ರತಿಭೆ ಮತ್ತು ಕೌಶಲ್ಯಗಳನ್ನು ಪ್ರದರ್ಶಿಸಲು ವೇದಿಕೆ ಒದಗಿಸುವ ಮೂಲಕ ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡಲಿದೆ ಎಂದು ತಾಲೂಕಿನ ಕೆಂಗಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ನೇತ್ರಾವತಿ ಬಿ.ವಿ.ತಿಳಿಸಿದರು.
ಪಟ್ಟಣದ ಭವಾನಿ ರಾವ್ ಕೇರಿಯಲ್ಲಿನ ಮೈತ್ರಿ ಬಾಲವಿಕಾಸ ಶಾಲೆಯ ಎಲ್.ಕೆ.ಜಿ ಮತ್ತು ಯುಕೆಜಿ ತರಗತಿಯ ಮಕ್ಕಳಿಗೆ ಹಮ್ಮಿಕೊಂಡಿದ್ದ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿ ಸುವುದರಿಂದ ಮಗುವಿನ ಆತ್ಮವಿಶ್ವಾಸ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಗಳು ಸುಧಾರಿಸುತ್ತವೆ. ಇದು ಅವರ ಆಸಕ್ತಿಗಳು ಮತ್ತು ಉತ್ಸಾಹಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ, ಸುಸಂಸ್ಕೃತ ವ್ಯಕ್ತಿಯ ಬೆಳವಣಿಗೆಗೆ ಕಾರಣವಾಗುತ್ತದೆ. ಇಂದು ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಹೆಚ್ಚಾಗಿ ಬಳಸುವುದ ರಿಂದ ಅವರ ಕಲಿಕೆಯಲ್ಲಿ ಹಿನ್ನೆಡೆ ಆಗುತ್ತಿದ್ದು ಅದರ ಜೊತೆಗೆ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪೋಷಕರು ಮಕ್ಕಳ ಜತೆ ಇರುವಾಗ ಮೊಬೈಲ್ ಬಳಸದೆ ಮಕ್ಕಳಿಗೆ ಕಲಿಕೆಗೆ ಪೂರಕವಾದ ವಾತಾವರಣ ಸೃಷ್ಟಿಸಬೇಕು.ಮಕ್ಕಳಿಗೆ ಶಾಲಾ ವಾತಾವರಣದಲ್ಲಿ ಅವರ ಪ್ರತಿಭೆಗಳನ್ನು ಗುರುತಿಸಲು ಪಠ್ಯೇತರ ಚಟುವಟಿಕೆಗಳು ಅತೀ ಹೆಚ್ಚು ಮುಖ್ಯವಾಗಿದ್ದು,ಈ ನಿಟ್ಟಿನಲ್ಲಿ ರಸಪ್ರಶ್ನೆ ಕಾರ್ಯಕ್ರಮ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಸಬಾ-೨ ಕೇಂದ್ರದ ಸಂಪನ್ಮೂಲ ವ್ಯಕ್ತಿ ಗಣೇಶ್.ಎಸ್ ಮಾತನಾಡಿ, ವಿದ್ಯಾರ್ಥಿಗಳ ಏಕಾಗ್ರತೆಗೆ ಮಾರಕವಾಗಿರುವ ಮೊಬೈಲ್ ಬಳಕೆಯಿಂದ ದೂರವಿದ್ದು, ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯೆ ಕಲಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು.ಮೊಬೈಲ್ ಬಳಕೆ ವ್ಯಸನವಾಗಿದ್ದು ಅದರಿಂದ ಹೊರಬರಬೇಕು. ಈ ರೀತಿಯ ರಸಪ್ರಶ್ನೆ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಪಠ್ಯದ ಹೊರಗೆ ಇರುವ ಕಲಿಕಾಂಶಗಳ ಪರಿಚಯ ಮಾಡಿಸುತ್ತವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆ ಪ್ರಾಂಶುಪಾಲ ವಿಶ್ವನಾಥ ಪಿ, ಶಿಕ್ಷಕರ ಅವಿರತ ಪರಿಶ್ರಮದಿಂದ ವಿದ್ಯಾರ್ಥಿಗಳು ಉತ್ತಮವಾಗಿ ಕಲಿಯಲು ಕಾರಣವಾಗಿದೆ. ತರಗತಿಯ ನಾಲ್ಕು ಗೋಡೆಯ ಮಧ್ಯೆ ಕಲಿತ eನವನ್ನು ಪರೀಕ್ಷಿಸಲು ಈ ರೀತಿಯ ರಸಪ್ರಶ್ನೆ ಕಾರ್ಯಕ್ರಮಗಳನ್ನು ಶಾಲಾ ಹಂತದಲ್ಲಿ ಏರ್ಪಡಿಸಲಾಗಿದೆ. ಇದರಿಂದ ಪೋಷಕರು ತಮ್ಮ ಮಕ್ಕಳ ಕಲಿಕಾ ಹಂತದಲ್ಲಿನ ಪ್ರಗತಿ ಬಗ್ಗೆ ಸಂತೋಷ ಪಡುತ್ತಾರೆ ಎಂದು ತಿಳಿಸಿದರು.
ಶಾಲಾ ಶಿಕ್ಷಕಿ ವಿದ್ಯಾಕೋರಿ ಶೆಟ್ಟರ್ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಶಾಲಾ ಪ್ರಭಾರಿ ಮುಖ್ಯ ಶಿಕ್ಷಕ ಪ್ರಶಾಂತ ಕುಬಸದ, ಶಿಕ್ಷಕಿ ವಿಜಯಲಕ್ಷ್ಮೀ, ಮಂಜುಳಾ ಪಾಟೀಲ್ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಅನಿಕೇತ, ಅಮೃತ ಬಿಂದು, ಮಾನ್ವಿತಾ, ಅಮೃತ ವಚನ, ಜನನಿ ರವರು ಮಂಕುತಿಮ್ಮನ ಕಗ್ಗ ಮತ್ತು ಪ್ರಭಾವಿ ಕಬೀರ್ ದೋಹೆ ಹೇಳಿದರು.
ಯುಕೆಜಿ ವಿದ್ಯಾರ್ಥಿಗಳು ಪ್ರಾರ್ಥಿಸಿ, ಶಿಕ್ಷಕಿ ಮಮತಾ.ಅರ್ ಸ್ವಾಗತಿಸಿ, ಶಿಲ್ಪ ನಿರೂಪಿಸಿ,ಲಕ್ಷ್ಮಿ ವಂದಿಸಿದರು.

