ತಾಜಾ ಸುದ್ದಿರಾಜಕೀಯ

ವೀರಶೈವ ಪಂಚಮಸಾಲಿ ಪೀಠಕ್ಕೆ ಅಮಿತ್ ಶಾ ಭೇಟಿ…

Share Below Link

ಶಿವಮೊಗ್ಗ: ಕೇಂದ್ರ ಗೃಹ ಸಚಿವ ಅಮಿತ್ ಶಾ ಕೇವಲ ಒಬ್ಬ ರಾಜಕಾರಣಿ ಅಷ್ಟೇ ಅಲ್ಲ, ಸಮ್ಮೋಹಕ ಶಕ್ತಿ ಹೊಂದಿರುವ, ದೈವಿಕ ಚೈತನ್ಯವಿರುವ, ಆಳವಾದ ಆಧ್ಯಾತ್ಮಿಕ ತಳಹದಿ ಹೊಂದಿರುವ ವ್ಯಕ್ತಿ. ಅಖಂಡ ಭಾರತದ ನಿರ್ಮಾಣದಲ್ಲಿ ನಿರತವಾಗಿರುವ ಇವರು ಕೇವಲ ಚುನಾವಣಾ ಚಾಣಕ್ಯ ಮಾತ್ರವಲ್ಲ, ಭಾರತದ ಮಾಣಿಕ್ಯವೆಂದು ವೀರಶೈವ ಪಂಚಮಸಾಲಿ ಪೀಠದ ಪೀಠಾಧಿಪತಿ ಶ್ರೀ ವಚನಾನಂದ ಸ್ವಾಮೀಜಿ ಬಣ್ಣಿಸಿದರು.
ಹರಿಹರ ಬಳಿ ಹನಗವಾಡಿಯ ವೀರಶೈವ ಪಂಚಮಸಾಲಿ ಪೀಠಕ್ಕೆ ನಿನ್ನೆ ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದ್ದ ಸಂದರ್ಭದಲ್ಲಿ ಶ್ರೀಗಳು ಹಲವು ವಿಷಯಗಳ ಕುರಿತು ಅವರೊಂದಿಗೆ ಮಾತುಕತೆ ನಡೆಸಿದರು.
ಅಮಿತ್ ಶಾ, ಅಲ್ಲಿದ್ದ ಶ್ರೀಚಕ್ರದ ಕಲಾಕೃತಿಯನ್ನು ಗಮನವಿಟ್ಟು ನೋಡಿ ಅದು ಅದ್ಭುತ ವಾಗಿದೆ ಎಂದು ಬಣ್ಣಿಸಿದರು. ಲಿಂಗಾಯತ ಧರ್ಮದಲ್ಲಿ ಕುಂಡಲಿನಿ ಯೋಗದ ಕುರಿತಾದ ಮಾಹಿತಿಯ ಬಗ್ಗೆ ವಿಚಾರಿಸಿದರು. ಇದಕ್ಕೆ ವಚನಾನಂದ ಸ್ವಾಮೀಜಿ ನೀಡಿದ ವಿವರವನ್ನು ಗಮನವಿಟ್ಟು ಕೇಳಿದರು. ಹಾಗೇ ಸ್ವಾಮೀಜಿ ಹೃಷಿಕೇಶದಲ್ಲಿ ವಿದ್ಯಾಭ್ಯಾಸ ಮಾಡಿದ್ದನ್ನು ತಿಳಿದು, ಅಲ್ಲಿನ ಸ್ವಾಮಿ ರಾಮರ ಬಗ್ಗೆ ಕೂಡ ಮಾತನಾಡಿದರು.
ತಾವು ಮೂರು ದಿನ ಜೋಷಿ ಮಠದಲ್ಲಿ ತಂಗಿದ್ದು, ಕೇದಾರನಾಥಕ್ಕೆ ಹೋಗಿ ಶಂಕರರ ಪ್ರತಿಮೆ ಸ್ಥಾಪನೆ ಮಾಡಿದ ಬಗ್ಗೆ ಹೇಳಿದರಲ್ಲದೆ ಶಂಕರಾಚಾರ್ಯರ ಸಾಧನೆಗಳನ್ನು ಕೊಂಡಾಡಿದರು. ಸುಮಾರು ೮೦೦ ವರ್ಷಗಳ ಹಿಂದೆ ಶಂಕರರು ಅಲ್ಲಿನ ಹರಿಹರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದನ್ನು ತಿಳಿದುಕೊಂಡು, ತಾವು ಕೂಡ ಹರಿಹರೇಶ್ವರನ ದರ್ಶನ ಪಡೆದರು.
ವಚನಾನಂದ ಸ್ವಾಮೀಜಿ ಯವರು ಭಾರತದ ಭೂಪಟದ ಮುಂದೆ ನಿಂತ ಭಾವಚಿತ್ರವನ್ನು ನೋಡಿ, ಶಾ ಭಾವುಕರಾದರು. ಈ ಕುರಿತು ಸ್ವಾಮೀಜಿ ವಿಚಾರಿಸಲು, ಭಾರತ ವಿಶ್ವಗುರುವಾಗಬೇಕು, ಅಖಂಡ ಭಾರತ ನಿರ್ಮಾಣಕ್ಕೆ ನಿಮ್ಮಂತಹ ಸಂತ-ಮಹಂತರ ಆಶೀರ್ವಾದಗಳು ಬೇಕೆಂದು ನುಡಿದರು.
ಹರಿಹರದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರೂ, ಸ್ವಾಮೀಜಿಯವರೊಂದಿಗೆ ಅಮಿತ್ ಶಾ ರಾಜಕಾರಣದ ಬಗ್ಗೆ ಮಾತನಾಡದೆ, ಯೋಗ, ಆಧ್ಯಾತ್ಮ ಸಾಧನೆ, ಸಿದ್ದಿಗಳ ಕುರಿತಷ್ಟೇ ಮಾತನಾಡಿ, ಧರ್ಮದಲ್ಲಿ ರಾಜಕಾರಣ ಬೆರಸದೆ ಮಾದರಿ ಪ್ರವರ್ತನೆಯನ್ನು ಪ್ರದರ್ಶಿಸಿದರು.