ನಶಮುಕ್ತ ಸಮಾಜ: ಕಾನೂನು, ಕರುಣೆ ಮತ್ತು ಕರ್ಮದ ನಡುವಿನ ಹೊಣೆಗಾರಿಕೆ…
ಲೇಖನ: ರೊ| ಸಿ. ಎನ್. ಮಶ್, ಮಾಜಿ ವಲಯ ಸೇನಾನಿ
ಮಾದಕ ವಸ್ತು ಕುರಿತು ನಡೆಸಲಾಗುತ್ತಿರುವ ಮಹತ್ವದ ಜನಜಗೃತಿ ಅಭಿಯಾನಕ್ಕೆ ನಾಯಕತ್ವ ನೀಡಿರುವ ರೋಟರಿ ಮಿಡ್ಟೌನ್ ಅಧ್ಯಕ್ಷ ಹರ್ಷ ಕಾಮತ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಇದು ಕೇವಲ ಒಂದು ಕಾರ್ಯಕ್ರಮದ ಆಯೋಜನೆಯಲ್ಲ. ಸಮಾಜದ ಒಳನೋವನ್ನು ಅರಿತು, ಯುವಜನತೆಯ ಭವಿಷ್ಯದ ಬಗ್ಗೆ ಹೊಣೆ ಹೊತ್ತ ನಾಯಕತ್ವದ ಸ್ಪಷ್ಟ ಅಭಿವ್ಯಕ್ತಿ. ಆಡಳಿತ ವ್ಯವಸ್ಥೆ, ಪೊಲೀಸ್ ಇಲಾಖೆ, ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕರನ್ನು ಒಂದೇ ವೇದಿಕೆಗೆ ತರುವ ಅವರ ಪ್ರಯತ್ನ ಸಮಾಜಮುಖಿ ಚಿಂತನೆಯ ಜೀವಂತ ಉದಾಹರಣೆ. ನಶಮುಕ್ತ ಶಿವಮೊಗ್ಗ ಎಂಬ ಸಂಕಲ್ಪಕ್ಕೆ ಸಂಘಟಿತ ರೂಪ ಕೊಟ್ಟಿರುವುದು ಅವರ ಬದ್ಧತೆ ಮತ್ತು ಕಾರ್ಯಕ್ಷಮತೆಯ ಸಾಕ್ಷಿ.
ಮಾದಕ ವಸ್ತುಗಳ ಬಳಕೆ ಇಂದು ವೈಯಕ್ತಿಕ ಆಯ್ಕೆಯ ಪ್ರಶ್ನೆಯಲ್ಲ. ಅದು ಸಾರ್ವಜನಿಕ ಆರೋಗ್ಯ, ಕಾನೂನು ವ್ಯವಸ್ಥೆ ಮತ್ತು ಮಾನವ ಮಲ್ಯಗಳಿಗೆ ನೇರ ಸವಾಲಾಗಿ ಪರಿಣಮಿಸಿದೆ. ಡ್ರಗ್ಸ್ ಎಂಬ ವಿಷ ದೇಹವನ್ನು ಮಾತ್ರವಲ್ಲ, ಮನಸ್ಸನ್ನು, ಸಂಬಂಧಗಳನ್ನು ಮತ್ತು ಸಮಾಜದ ನೈತಿಕ ಬೇರುಗಳನ್ನೇ ನಿಧಾನವಾಗಿ ಕೊರೆದುಹಾಕುತ್ತದೆ.
ಭಾರತದಲ್ಲಿ ಮಾದಕ ವಸ್ತುಗಳ ನಿಯಂತ್ರಣಕ್ಕೆ ಕಠಿಣ ಕಾನೂನುಗಳಿವೆ. ಬಳಕೆ, ಸಾಗಣೆ, ಮಾರಾಟ, ಸಂಗ್ರಹಣೆ ಎಲ್ಲವೂ ಅಪರಾಧ. ಈ ಕಾನೂನುಗಳ ಉzಶ ಕೇವಲ ದಂಡನೆ ಅಲ್ಲ. ಅಪಾಯವನ್ನು ತಡೆಯುವುದು ಮತ್ತು ಯುವಜನತೆಯನ್ನು ರಕ್ಷಿಸುವುದು. ಆದರೆ ಜಗತ್ತಿನ ಅನುಭವ ಹೇಳುವುದೇನೆಂದರೆ ಕೇವಲ ಶಿಕ್ಷೆ ಸಾಕಾಗದು. ಪುನರ್ವಸತಿ, ಚಿಕಿತ್ಸಾ ಸಹಾಯ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆ ಸೇರಿದಾಗಲೇ ಪರಿಣಾಮಕಾರಿಯಾದ ಬದಲಾವಣೆ ಸಾಧ್ಯ.
ಶಾಲಾ ಹಂತದ ಡ್ರಗ್ಸ್ ವಿರೋಧಿ ಶಿಕ್ಷಣ, ಮೊದಲ ಬಾರಿಗೆ ತಪ್ಪು ಮಾಡಿದ ಯುವಕರಿಗೆ ಕೌನ್ಸೆಲಿಂಗ್ ಮತ್ತು ಚಿಕಿತ್ಸೆ, ಸಮುದಾಯ ಆಧಾರಿತ ನಿಗಾ ವ್ಯವಸ್ಥೆ, ವೇಗದ ನ್ಯಾಯ ಮತ್ತು ತಕ್ಷಣದ ಕ್ರಮಗಳು ಹಲವಾರು ರಾಷ್ಟ್ರಗಳಲ್ಲಿ ಫಲ ನೀಡಿವೆ. ಇದರ ಸಾರ ಸ್ಪಷ್ಟ. ಕಾನೂನುಗೆ ಜೊತೆಯಾಗಿ ಅರಿವು ಮತ್ತು ಮಾನವೀಯತೆ ಬಂದಾಗ ಮಾತ್ರ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.
ದೀರ್ಘಕಾಲದ ನಶೆ ಬಳಕೆ ಕ್ಯಾನ್ಸರ್ ಸೇರಿದಂತೆ ಅನೇಕ ಗಂಭೀರ ರೋಗಗಳಿಗೆ ದಾರಿ ಮಾಡಿಕೊಡುತ್ತದೆ ಎಂಬುದು ವೈದ್ಯಕೀಯವಾಗಿ ಸಾಬೀತಾದ ಸತ್ಯ. ಬಾಯಿ, ಶ್ವಾಸಕೋಶ, ಯಕೃತ್ತು ಸಂಬಂಧಿತ ಕ್ಯಾನ್ಸರ್ಗಳು ಸಾಮಾನ್ಯ. ಕ್ಯಾನ್ಸರ್ ಎಂದರೆ ಕೇವಲ ಒಂದು ರೋಗವಲ್ಲ. ಅದು ನಿರಂತರ ನೋವು, ಉಸಿರಾಟದ ತೊಂದರೆ, ಆಹಾರ ಸೇವಿಸಲಾರದ ಸ್ಥಿತಿ, ನಿದ್ರೆಯಿಲ್ಲದ ರಾತ್ರಿ ಮತ್ತು ಮಾನಸಿಕ ಕುಸಿತ. ಈ ನೋವು ರೋಗಿಗೆ ಮಾತ್ರ ಸೀಮಿತವಾಗುವುದಿಲ್ಲ. ಕುಟುಂಬದವರು ಪ್ರತಿದಿನ ಭಯ ದೊಂದಿಗೆ ಬದುಕಬೇಕಾಗುತ್ತದೆ. ಆರ್ಥಿಕ ಒತ್ತಡ, ಭಾವನಾತ್ಮಕ ನೋವು ಮತ್ತು ಸಮಾಜದಿಂದ ದೂರವಾಗುವ ನೋವು ಒಂದೇ ಸಮಯದಲ್ಲಿ ಎದುರಾಗುತ್ತದೆ. ಒಂದು ಕ್ಷಣದ ತಪ್ಪು ಆಯ್ಕೆ ಇಷ್ಟು ದೊಡ್ಡ ನೋವಿನ ಸರಪಳಿಗೆ ಬೀಗ ಬೀಳುತ್ತದೆ.
ಭಾರತೀಯ ಚಿಂತನೆ ಕರ್ಮವನ್ನು ಕೇವಲ ಧಾರ್ಮಿಕ ಪದವಾಗಿ ನೋಡದು. ಅದು ಜೀವನದ ಲೆಕ್ಕ. ಇಂದು ಮಾಡುವ ಪ್ರತಿಯೊಂದು ಆಯ್ಕೆಯೂ ನಾಳೆಯ ಫಲ. ನಶೆ ಎನ್ನುವುದು ಕೇವಲ ದೇಹದ ಮೇಲಿನ ಅನ್ಯಾಯವಲ್ಲ. ಅದು ಕುಟುಂಬದ ಮೇಲೆ, ಸಮಾಜದ ಮೇಲೆ ಮತ್ತು ನಮ್ಮ ಕರ್ತವ್ಯದ ಮೇಲೆ ಮಾಡಿದ ಕರ್ಮ. ಶುದ್ಧ ಜೀವನ, ಸಂಯಮ ಮತ್ತು ಜಗೃತಿ ಇವೆಲ್ಲವೂ ಪುಣ್ಯಕರ್ಮದ ಭಾಗ. ನಶೆಯನ್ನು ತಿರಸ್ಕರಿಸುವುದು ಸ್ವಂತ ಜೀವನದ ಮೇಲಿನ ಗೌರವದ ಘೋಷಣೆ.
ಯುವಜನತೆಗೆ ಉಪದೇಶಕ್ಕಿಂತ ಸತ್ಯ ಬೇಕು. ನಶೆ ಹೇಗೆ ಕನಸುಗಳನ್ನು ಕೊಲ್ಲುತ್ತದೆ ಎಂಬುದನ್ನು ನೇರವಾಗಿ ತೋರಿಸಬೇಕು. ಸ್ವಾತಂತ್ರ್ಯ ಎಂದರೆ ಮಿತಿ ಇಲ್ಲದ ಬದುಕಲ್ಲ. ತಪ್ಪು ಆಯ್ಕೆಗೆ ಇಲ್ಲ ಎನ್ನುವ ಧೈರ್ಯವೇ ನಿಜವಾದ ಸ್ವಾತಂತ್ರ್ಯ ಎಂಬುದನ್ನು ತಿಳಿಸಬೇಕು. ಕ್ರೀಡೆ, ಕಲೆ, ಸೇವೆ ಮತ್ತು ಸಮಾಜಮುಖಿ ಚಟುವಟಿಕೆ ಗಳತ್ತ ಅವರ ಶಕ್ತಿಯನ್ನು ಹರಿಸಲು ದಾರಿ ತೋರಿಸಬೇಕು.
ರೋಟರಿ ಸಂಸ್ಥೆ ಇಂತಹ ಸಮಾಜ ಮುಖಿ ಕಾರ್ಯಕ್ರಮಗಳ ಮೂಲಕ ಆರೋಗ್ಯ ಜಗೃತಿ, ಯುವ ಸಬಲೀಕರಣ, ಶಿಕ್ಷಣ, ವ್ಯಸನಮುಕ್ತ ಜೀವನ ಮತ್ತು ಸಮುದಾಯ ಸೇವೆಯನ್ನು ನಿರಂತರವಾಗಿ ಮುಂದುವರಿಸುತ್ತಿದೆ. ಜನಜಗೃತಿ ರಥಯಾತ್ರೆಗಳು, ಶಾಲಾ ಮತ್ತು ಕಾಲೇಜು ಮಟ್ಟದ ಸಂವಾದಗಳು, ಪುನರ್ವಸತಿ ಬೆಂಬಲ ಕಾರ್ಯಕ್ರಮಗಳು ರೋಟರಿಯ ಸೇವಾ ಮನೋಭಾವದ ಭಾಗ. ನಶಮುಕ್ತ ಸಮಾಜ ಒಂದು ದಿನದ ಗುರಿಯಲ್ಲ. ಅದು ನಿರಂತರ ಪ್ರಯತ್ನ. ಕಾನೂನು, ಜಗೃತಿ, ಕರುಣೆ ಮತ್ತು ಕರ್ಮ ಒಂದಾಗಿ ನಡೆದಾಗ ಮಾತ್ರ ಅದು ಸಾಧ್ಯ. ಈ ಜನಜಗೃತಿ ಅಭಿಯಾನ ನಮಗೆ ನೆನಪಿಸುತ್ತದೆ. ನಶೆಯನ್ನು ತಿರಸ್ಕರಿಸುವುದು ಕೇವಲ ನಿರಾಕರಣೆ ಅಲ್ಲ. ಅದು ಜೀವನವನ್ನು ಆಯ್ಕೆ ಮಾಡುವ ಧೈರ್ಯ.

