ತಾಜಾ ಸುದ್ದಿ

ಫಾದರ್ ಜೇಕಬ್ ನಿಧನ; ಜ.೧ರಂದು ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಅಂತ್ಯಕ್ರಿಯೆ…

Share Below Link

ಶಿವಮೊಗ್ಗ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಗೆ ಒಳಪಟ್ಟ ಶಿವಮೊಗ್ಗ ಕಥೋಲಿಕ ಕ್ರೈಸ್ತ ಧರ್ಮಕ್ಷೇತ್ರದ ಪೂಜ್ಯ ಧರ್ಮಗುರುಗಳಾಗಿದ್ದ ರೆ|ಫಾ| ಜೇಕಬ್ ಎಂ.ಜೆ. ಅವರು ಡಿ.೨೪ರಂದು ಅಂತ್ಯಸಂಸ್ಕಾರ ಪೂಜೆ ಯೊಂದರಲ್ಲಿ ಪಾಲ್ಗೊಂಡು ಹಿಂತಿರುಗುವಾಗ ಆಕಸ್ಮಾತ್ ಆಯತಪ್ಪಿ ಬಿದ್ದು ಕೋಮಾ ಸ್ಥಿತಿ ತಲುಪಿದ ಪರಿಣಾಮ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್‍ಸ್ ಮೆಡಿಕಲ್ ಕಾಲೇಜ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಡಿ.೨೯ರ ನಿನ್ನೆ ಮಧ್ಯಾಹ್ನ ಸುಮಾರು ೩.೩೦ರ ಸಮಯದಲ್ಲಿ ಕೊನೆಯುಸಿರೆಳೆದರು.
ಪೂಜ್ಯರು ೧೯೬೭ರ ಜೂ.೭ರಂದು ದಿ| ಜಾನ್ ಮತ್ತು ಎಲಿಜಬೆತ್ ಕುಟುಂಬದಲ್ಲಿ ತ್ರಿಸೂರಿನಲ್ಲಿ ಜನಿಸಿದರು. ಬಾಲ್ಯದಲ್ಲೇ ದೈವಿಕ ಕರೆಗೆ ಓಗೊಟ್ಟು ತಮ್ಮ ಸೇವಾ ಜೀವನಕ್ಕೆ ತಮ್ಮನ್ನು ಸಿದ್ದಪಡಿಸಿಕೊಳ್ಳಲು ಗುರುಮಂದಿರ ಸೇರ್ಪಡೆಯಾದರು. ಬೆಂಗಳೂರಿ ನಲ್ಲಿ ತತ್ವಶಾಸ್ತ್ರ ಮತ್ತು ದೈವಶಾಸ್ತ್ರವನ್ನು ಪೂರೈಸಿ ೧೯೯೨ ಏಪ್ರಿಲ್ ೩೦ರಂದು ಶಿವಮೊಗ್ಗ ಧರ್ಮಕ್ಷೇತ್ರದ ಅಂದಿನ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಇಗ್ನೇಷಿಯಸ್ ಪಿಂಟೋ ಅವರಿಂದ ಗುರು ದೀಕ್ಷೆ ಪಡೆದು ಸುಮಾರು ಮೂರು ದಶಕಗಳಿಗೂ ಹೆಚ್ಚಿನ ಕಾಲದಿಂದ ತಮ್ಮ ಯಾಜಕ ಜೀವನವನ್ನು ಶ್ರದ್ಧಾಭಕ್ತಿಯಿಂದ ಮುನ್ನಡೆಸುತ್ತಿದ್ದರು.


ಆರಂಭದಲ್ಲಿ ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಪ್ರಧಾನಾಲಯದಲ್ಲಿ ಸಹಾಯಕ ಗುರುಗಳಾಗಿ ತಮ್ಮ ಸೇವೆ ಆರಂಭಿಸಿದ ಪೂಜ್ಯರು, ನಂತರ ಕಬಳೆಯ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್, ಭದ್ರಾವತಿಯ ವೇಲಾಂಗಣಿ ಮಾತೆ ದೇವಾಲಯ, ಚಿತ್ರದುರ್ಗದ ಪವಿತ್ರ ಕುಟುಂಬ ದೇವಾಲಯ, ಶಿವಮೊಗ್ಗ ಶಾಂತಿನಗರದ ಸಂತ ಅಂತೋಣಿ ಚರ್ಚ್‌ಗಳಲ್ಲಿ ಧರ್ಮಕೇಂದ್ರದ ಗುರುಗಳಾಗಿ ಸೇವೆ ಸಲ್ಲಿಸಿ, ಚನ್ನಗಿರಿ ಮತ್ತು ಹಸೂಡಿಯ ಸಂತ ಪ್ರಾನ್ಸಿಸ್ ಕ್ಸೇವಿಯರ್ ಸುವಾರ್ತಾ ಪ್ರಸಾರ ಕೇಂದ್ರಗಳಲ್ಲಿ ಯಶಸ್ವಿಯಾಗಿ ಕಾರ್ಯ ಕಾರ್ಯನಿರ್ವಹಿಸಿದ್ದರು.
ಅಂತೆಯೇ ಶಿವಮೊಗ್ಗದ ಶಾಂತಿನಗರ ಸಂತ ಅಂತೋಣಿ ಚರ್ಚ್, ಶರಾವತಿನಗರ ಇನ್‌ಫೆಂಟ್ ಜೀಸಸ್ ಚರ್ಚ್ ಮತ್ತು ಬಿ.ಹೆಚ್. ರಸ್ತೆಯ ಸೇಕ್ರೆಡ್ ಹಾರ್ಟ್ ಚರ್ಚ್‌ಗಳಲ್ಲಿ ಧರ್ಮಕೇಂದ್ರದ ಗುರುಗಳಿಗೆ ಬೆಂಬಲವಾಗಿ ಜವಾಬ್ದಾರಿ ನಿರ್ವಹಿಸಿದ್ದರು.
ಸದಾ ಹಸನ್ಮುಖಿಯಾಗಿದ್ದು, ಜಪಸರ ಪ್ರಾರ್ಥನೆಯಲ್ಲಿ ನಿರತರಾಗಿರುತ್ತಿದ್ದ ಪೂಜ್ಯರು ರಾಜ್ಯದ ಕ್ರೈಸ್ತ ಭಕ್ತರಿಗೆ ಅಚ್ಚುಮೆಚ್ಚಿನ ಗುರುಗಳಾಗಿದ್ದರು. ಪೂಜ್ಯ ಗುರುಗಳು ನೀಡುತ್ತಿದ್ದ ಪ್ರಬೋಧನೆಗಳು ಭಕ್ತರ ಮನಮುಟ್ಟುವ ಮೂಲಕ ಅವರಲ್ಲಿ ಭಕ್ತಿಯ ಸಂಚಲನ ಉಂಟುಮಾಡುತ್ತಿದ್ದುದು ವಿಶೇಷವಾಗಿತ್ತು.
ರೆ|ಫಾ| ಜೇಕಬ್ ಅವರ ಪಾರ್ಥಿವ ಶರೀರವನ್ನು ೨೦೨೬ರ ಜ.೧ರಂದು ಮಧ್ಯಾಹ್ನ ೧೨.೩೦ಕ್ಕೆ ನಗರದ ಸೇಕ್ರೆಡ್ ಹಾರ್ಟ್ ಪ್ರಧಾನಾಲಯದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ನಂತರ ಮಧ್ಯಾಹ್ನ ೩.೩೦ಕ್ಕೆ ಪರಮಪೂಜ್ಯ ಬಿಷಪ್ ಡಾ. ಡುಮಿಂಗ್ ಡಯಾಸ್ ಅವರ ದಿವ್ಯಸಾನಿಧ್ಯದಲ್ಲಿ ಪೂಜ್ಯರ ಅಂತಿಮ ಪೂಜಾ ವಿಧಿವಿಧಾನಗಳು ಜರುಗಲಿದ್ದು, ಧರ್ಮಕ್ಷೇತ್ರದ ಗುರುಗಳು, ಕನ್ಯಾಸ್ತ್ರೀಯರು ಪಾಲ್ಗೊಳ್ಳಲಿದ್ದಾರೆ.
ಭಕ್ತರು ಮತ್ತು ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಭಕ್ತಪೂರ್ವಕವಾಗಿ ಪೂಜ್ಯರಿಗೆ ಅಂತಿಮ ಭಕ್ತಿ ನಮನ ಸಲ್ಲಿಸುವ ಮೂಲಕ ಪೂಜಾವಿಧಿಗಳಲ್ಲಿ ಶ್ರದ್ಧೆಯಿಂದ ಪಾಲ್ಗೊಳ್ಳುವಂತೆ ಧರ್ಮಕೇಂದ್ರದ ಗುರುಗಳಾದ ರೆ|ಫಾ| ಸ್ಟ್ಯಾನಿ ಡಿಸೋಜ ಅವರು ತಿಳಿಸಿದ್ದಾರೆ.
ಸಂತಾಪ: ಪೂಜ್ಯಗುರು ರೆ|ಫಾ| ಜೇಕಬ್ ಅವರ ನಿಧನಕ್ಕೆ ಕಾರವಾರ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಹಾಗೂ ಶಿವಮೊಗ್ಗ ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿಗಳಾದ ಪರಮಪೂಜ್ಯ ಬಿಷಪ್ ಡಾ. ಡುಮಿಂಗ್ ಡಯಾಸ್, ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಫ್ರಾನ್ಸಿಸ್ ಸೆರಾವೋ, ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಜೆರಾಲ್ಡ್ ಐಸಾಕ್ ಲೋಬೋ, ಶಿವಮೊಗ್ಗ ಧರ್ಮಕ್ಷೇತ್ರದ ಶ್ರೇಷ್ಠಗುರುಗಳಾದ ರೆ|ಫಾ| ಸ್ಟ್ಯಾನಿ ಡಿಸೋಜ ಸೇರಿದಂತೆ ವಿವಿಧ ಧರ್ಮಕೇಂದ್ರಗಳ ಧರ್ಮ ಗುರುಗಳು, ಕನ್ಯಾಸ್ತ್ರೀಯರು, ವಿವಿಧ ಮಠಾಧೀ ಶರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಡಾ| ಧನಂಜಯ ಸರ್ಜಿ, ಶ್ರೀಮತಿ ಬಲ್ಕಿಷ್ ಬಾನು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಮಾಜಿ ಶಾಸಕರೂ ಆದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನ ಕುಮಾರ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಡಿಸೋಜ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿನ್ಸೆಂಟ್ ರೋಡ್ರಿಗಸ್, ಕಾಂಗ್ರೆಸ್ ಮುಖಂಡರಾದ ಕಿರಣ್ ಫರ್ನಾಂಡಿಸ್, ಮರಿಯಪ್ಪ, ಸ್ಟ್ಯಾನಿ ಮಾರ್ಟಿಸ್, ಪ್ರಮುಖರಾದ ಜೋಸೆಫ್ ಟೆಲ್ಲಿಸ್, ರೇಮಂಡ್ ಡಿಮೆಲ್ಲೋ, ಮಾರ್ಕ್ ಡಿಕಾಸ್ಟ, ಪ್ಯಾಟ್ರಿಕ್ ಲೋಬೋ, ವಿವಿಯನ್ ಪಾಯಸ್, ದೇವಸಗಾಯಿನಾದನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಮತ್ತು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.