ಓಡುವ ಕಾಲಕ್ಕೆ ಯಾರ ತಡೆ..!?
ಎದೆಯ ಪುಸ್ತಕವನ್ನು ತೆರೆದು
ಓದಲೇ ಬೇಕಿದೆ ಅದಕ್ಕಾಗಿ
ವಿದಾಯ ಹೇಳುವೆ ನಿನಗೆ
ನೋವಿನ ದಿನಗಳಲ್ಲಿ
ನಾ ಬರೆದ ಸಾಲುಗಳಿಗೆ
ಹರಿಸಿದ ಕಣ್ಣೀರ ಹನಿಗಳನ್ನು ಅಕ್ಷರಗಳಲ್ಲಿ
ಸ್ವಷ್ಟವಾಗಿ ಕಾಣದಿದ್ದರೂ
ಬರೆಯುವ ಪ್ರಯತ್ನ ಮಾಡಿರುವೆ..!
ಈ ಸೂರ್ಯೋದಯದೊಂದಿಗೆ ನಿನಗೆ ವಿದಾಯ ಹೇಳುವೆ, ಬೆಳ್ಳಂಬೆಳಗ್ಗೆ ಕೂಗುವ ಕೋಳಿಗೂ ಗಡಿಯಾರಕ್ಕೂ ದೇವಾಲಯದ ಗಂಟೆಯ ನಾದಕ್ಕೂ ಈ ಜಗದ ನೋವುಗಳಿಗೂ ರಾಗ , ದ್ವೇಷ , ರೋಷ , ರೋಗಗಳಿಗೂ ವಿದಾಯ ಹೇಳಲೇ ಬೇಕಿದೆ..!
ಸರಿದು ಹೋಗುತಿಹ
ಬೆಳ್ಮುಗಿಲುಗಳೇ ಹೋಗುವಿರೆಲ್ಲಿಗೆ..?
ನಿಲ್ಲಿ ಹೊತ್ತು ಹೋಯಿರಿ
ನಮ್ಮ ಒಂದಷ್ಟು
ಹಳೆಯ ನೋವುಗಳನ್ನು..!
ಬೆನ್ನು ಬಾಗಿದೆ ಭಗ್ನವಾದ
ಕನಸುಗಳನ್ನು ಹೊತ್ತು..!
ಮನಸ್ಸು ಬಯಸುತ್ತಿದೆ ಮತ್ತೊಮ್ಮೆ ಬದಲಾವಣೆಯನ್ನು ಗೊಂದಲ, ಚಿಂತೆ , ಸಂತೋಷ , ದುಃಖಗಳೊಂದಿಗೆ ಓಡುವ ಕಾಲಕ್ಕೆ ಯಾರ ತಡೆ ಎಂಬಂತೆ ಆಗಿದೆ ..
ದೇಹದ ಖಾಯಿಲೆಗೂ ಮನಸ್ಸಿನ ಸ್ಥಿತಿಗೂ ಒಂದಕ್ಕೊಂದು ಸಂಬಂಧವಿದೆ ..
ಬದಲಾವಣೆ ಜಗದ ನಿಯಮ, ಜಗತ್ತು ಬದಲಾಗುತ್ತಲೇ ಇರುತ್ತದೆ ಅದರೊಂದಿಗೆ ನಾವು ಬದಲಾಗಲೇ ಬೇಕು ಮನಸ್ಸು ಬದಲಾಗುತ್ತಾ ಇರುವುದ ರಿಂದಲೇ ಬಹುಶಃ ಈ ಜಗತ್ತು ನಡೆಯುತ್ತಿರಬಹುದು.!
ಆದರೆ ನಾವು ಇಷ್ಟ ಪಟ್ಟಂತೆ ಜಗತ್ತು ಬದಲಾವಣೆ ಆಗದಿದ್ದರೆ ಬೇಸರ ವಾಗುತ್ತದೆ ಅಸಮಾಧಾನ ವಾಗುತ್ತದೆ ಭಾವನೆಗಳು ಕರಗಿ ಕೊರಗುತ್ತದೆ.!

ಪರರಂತಿರ ಬೇಕೆಂದು
ಬದಲಾಗಲು ಬಯಸಬೇಡ
ನಾವು ನಮ್ಮಂತೆ ಇರಬೇಕು
ಬದಲಾಗಲೇ ಬೇಕಾದರೆ
ನೀನು ಬದಲಾಗು
ಬದಲಾಯಿಸುತ್ತೇನೆ ಜಗತ್ತನ್ನು ಅನ್ನೋ ಮೂರ್ಖತನ ಬೇಡ..!
ಈ ಜಗತ್ತು ಬದಲಾಗಬೇಕಾದರೆ ನಾವು ಮೊದಲು ಬದಲಾಗಬೇಕು ಅನ್ನೋ ವೇದಾಂತ ಹೇಳುವುದು ಸುಲಭ ಆದರೆ ನಾವು ಬದಲಾಗುವುದು ಹೇಗೆ..? ಹಲವಾರು ಸಂಗತಿಗಳಲ್ಲಿ ಬದಲಾವಣೆ ಯನ್ನು ಹೊಂದಲೇ ಬೇಕಾಗಿದೆ.!
ತೀರಿಸಬೇಕಾದ ಋಣಗಳಿಗೆ
ಮಾಯದ ನೋವುಗಳಿಗೆ
ನಿಭಾಯಿಸುವ ಕರ್ತವ್ಯಗಳಿಗೆ
ವಿದಾಯ ಹೇಳಲಾದಿತೆ
ನಡೆದ ಹಾದಿಯನ್ನೊಮ್ಮೆ
ಹೊರಳಿ ನೋಡಿ
ಕೈ ಜರಿದ ಕ್ಷಣಗಳಿಗಾಗಿ
ಕೋಪಿಸಿಕೊಂಡವರ
ಮನವೊಲಿಸಲಿಕ್ಕಾಗಿ
ನಮಗಾಗಿ ಕಣ್ಣೀರಿಟ್ಟವರ
ಸಂತೋಷಿಸಲಿಕ್ಕಾಗಿ
ಮನದ ಅಪೂರ್ಣ ಬಯಕೆಗಳನ್ನು
ಪೂರ್ಣ ಮಾಡಲಿಕ್ಕಾಗಿ
ಮುಸುಕಿದ ಕತ್ತಲಲ್ಲಿ
ಹುಡುಕಲೇ ಬೇಕಾಗಿದೆ
ಸೂರ್ಯ ನಿರಂತರವೆಂಬ ಅರಿವು
ರಾತ್ರಿಯ ನೋವಿನಲ್ಲಿ ಹೊರಡುತ್ತದೆ..!
ಕಾದು ಕಾಡುವ ಮುಸುಕಿದ ವರುಷ ತಂಪು ನೆರಳಿಗೂ ಕಂಪು ಸೂಸದಂತೆ ಮತ್ತದೇ ಮರಣ ಹಗಲು ಕಂಡದ್ದು ಸಂಜೆ ಕಾಣದೆ ಮತ್ತದೇ ರಾತ್ರಿಗಳಲ್ಲಿ ಚಡಪಡಿಕೆ..
ಈ ಬದುಕಿಗೆ ನೆನಪುಗಳೇ ಆಧಾರ ಹಳೆಯ ನೆನಪುಗಳೇ ಮಧುರವಾದ ಮುನ್ನುಡಿ ಬರೆಸುವುದು ಈ ವರ್ಷದ ಪುಟಗಳನ್ನೆ ತಿರುವಿದಂತೆ ಈ ವರ್ಷ ವನ್ನಾವರಿಸಿದ ನೋವಿನ ಸರಮಾಲೆಯ ಜೊತೆಗೆ ಪುಸ್ತಕವನ್ನೇ ರದ್ದಿಗೆ ಹಾಕಿ ಹಗು ರಾಗೋಣ ವೆಂದರೆ ಹಳೆಯ ವರ್ಷದ ಪುಟಗಳೊಂದಿಗೆ ಈ ವರ್ಷದ ಪುಟಗಳು ತಳುಕು ಹಾಕಿ ಕೊಂಡಿದೇ ನಾನಂತೂ ಇಣುಕಿ ನೋಡೇ ನೋಡುತ್ತೇನೆ ನೋವು ಗಳನ್ನು ರದ್ದಿಗೆ ಹಾಕಲು ಬಿಡುವುದಿಲ್ಲ ವೆನ್ನುವಂತೆ ಕಾಣುತ್ತಿದೆ ..! ಆದರೂ ಬೇಯುವ ಧಗೆಯಂದಿಷ್ಟು ಬೇಸರ ವಿದ್ದರೂ ಬೊಗಸೆ ತುಂಬುವಷ್ಟು ನಲಿವು ಮುಗುಳ್ನಗೆ ಕೊಟ್ಟಿದ್ದಿಯಾ ..!
ಬಿಸಿಲ ಪಯಣದೊಂದಿಗೆ
ಮೈ ಮನ ಸುಟ್ಟರು
ಬೆಯದೇ ಮನದೊಳಗೆ ಉಳಿದ
ಕಲ್ಪನೆಯ ಚಿತ್ತರಕ್ಕೆ
ಜೀವ ತುಂಬಲು ಹಬಲಿಸಿದ
ಒಲವು ಮನದಲ್ಲಿ ಮಾಯಜಲವನ್ನು
ಸೃಷ್ಠಿಸಿ ಸಿಂಗರಿಸಿ ಸಂಭ್ರಮಿದ ಕ್ಷಣಕ್ಕೆ
ರಂಗು ತುಂಬಿದೆ …!
ಅದೊಂದೇ ನೆಮ್ಮದಿ ಕಾಲ ಕಳೆದಿದೆ ಇಸವಿ ಬದಲಾಗಿದೆಯಷ್ಟೇ ಹಳೆಯ ದಾರಿಯಲ್ಲಿ ನಡೆದು ಹೋಗುವಾಗ ಆಕಸ್ಮಿಕಗಳು ಎದುರಾದರೂ ಒಂದಿಷ್ಟು ಖಾಸಗಿ ವಿಷಯಗಳನ್ನು ಹೊಸದ ರೊಂ ದಿಗೆ ಹಂಚಿಕೊಂಡು ಆತ್ಮ ವಿಶ್ವಾಸದಿಂದ ಹಗುರಾಗಿ ಬಿಡೋಣ ಬನ್ನಿ…
ಕೆ.ಜಿ.ಸರೋಜ ನಾಗರಾಜ್
ಪಾಂಡೋಮಟ್ಟಿ..
