ಪತ್ರಕರ್ತರೇ ಸಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ: ಡಾ| ಚಂದ್ರಶೇಖರ್
ಶಿವಮೊಗ್ಗ : ಸದಾ ಕಾಲ ಒತ್ತಡದ ನಡುವೆಯೇ ಕೆಲಸ ನಿರ್ವಹಿಸುವ ಪತ್ರಕರ್ತರು ತಮ್ಮ ಆರೋಗ್ಯದೆಡೆ ನಿಗಾ ವಹಿಸಿ ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳು ತ್ತಿರಬೇಕು ಎಂದು ಖ್ಯಾತ ಕಿಡ್ನಿ ಮತ್ತು ಮೂತ್ರಕೋಶ ರೋಗಗಳ ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯರಾದ ಡಾ. ಎಸ್. ಚಂದ್ರಶೇಖರ್ ಹೇಳಿದರು.
ಶಿವಮೊಗ್ಗದ ದುರ್ಗಿಗುಡಿ ಮುಖ್ಯರಸ್ತೆಯಲ್ಲಿರುವ ತೃಪ್ತಿ ಹೆಲ್ತ್ ಕೇರ್‌ನಲ್ಲಿ ಇಂದು ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಿಡ್ನಿ ಮತ್ತು ಮೂತ್ರಕೋಶದ ಬಗ್ಗೆ ಬಹಳಷ್ಟು ಜನರಲ್ಲಿ ಅರಿವಿನ ಪ್ರಮಾಣ ಕಡಿಮೆ ಇರುತ್ತದೆ. ನಮ್ಮ ಆರೋಗ್ಯ ಉತ್ತಮವಾಗಿರಲು ಕಿಡ್ನಿ ಸಹ ಬಹಳ ಪ್ರಮುಖವಾದ ಅಂಗವಾಗಿದ್ದು, ಇಡೀ ದೇಹ ಉತ್ತಮವಾಗಿ ಕಾಪಾಡಿಕೊಳ್ಳಲು ನಮ್ಮ ಕಿಡ್ನಿ ಹಾಗೂ ಮೂತ್ರಕೋಶ ಚೆನ್ನಾಗಿ ಕಾಪಾಡಿಕೊಳ್ಳಬೇಕು ಎಂದರು.
ಅನೇಕ ಜನರು ಆರೋಗ್ಯ ಕೆಡಿಸಿಕೊಂಡ ಬಳಿಕ ಆಸ್ಪತ್ರೆಗಳಿಗೆ ಅಲೆಯುವ ಬದಲು ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಸೂಕ್ತ ಸಲಹೆ ನೀಡಿದರಲ್ಲದೇ, ಅದರಲ್ಲೂ ೪೫ ವರ್ಷದ ಬಳಿಕ ನಿರಂತರ ಆರೋಗ್ಯ ತಪಾಸಣೆ ಹಾಗೂ ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ ಆರೋಗ್ಯಕ್ಕೆ ಸಹಕಾರಿ ಎಂದರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಅವರು ಮಾತನಾಡಿ, ವಿದೇಶದಲ್ಲಿ ವೈದ್ಯರಾಗಿ ಹಣ ಗಳಿಸಬೇಕಾದ ವೈದ್ಯ ಡಾ|ಎಸ್. ಚಂದ್ರಶೇಖರ್, ಹಣ ಗಳಿಕೆಯ ಆಸೆಯಿಲ್ಲದೇ, ಸೇವಾ ಮನೋಭಾವದಿಂದ ಉಚಿತ ಶಿಬಿರಗಳನ್ನು ಆಯೋಜಿ ಸುವ ಮೂಲಕ ನಡೆಸುತ್ತಿರುವ ಸೇವೆ ಸಮಾಜಕ್ಕೆ ಅರ್ಥಪೂರ್ಣ ವಾಗಿದೆ ಎಂದು ಶ್ಲಾಘಿಸಿದರು.
ನಗರದಲ್ಲಿ ಪತ್ರಕರ್ತರ ಟ್ರಸ್ಟ್ ಅಸ್ತಿತ್ವಕ್ಕೆ ಬಂದ ಬಳಿಕ ನಿರಂತರವಾಗಿ ಪತ್ರಕರ್ತರಿಗೆ ವಿವಿಧ ರೀತಿಯಲ್ಲಿ ನೆರವಾಗುತ್ತಿದ್ದು, ಆರೋಗ್ಯ ಶಿಬಿರಗಳ ಮೂಲಕ ಪತ್ರಕರ್ತರ ಆರೋಗ್ಯದ ಬಗ್ಗೆಯೂ ಗಮನ ಹರಿಸಲಾಗುತ್ತಿದೆ ಎಂದರು.
ಪ್ರಮುಖರಾದ ರಾಕೇಶ್ ಡಿಸೋಜ, ಗಜೇಂದ್ರ ಸ್ವಾಮಿ, ನಾಗರಾಜ್ ನೇರಿಗೆ, ಪಿ. ಜೇಸುದಾಸ್, ಶಿ.ಜು. ಪಾಷಾ, ಸ್ಪಂದನ ಚಂದ್ರು, ಚನ್ನಬಸಪ್ಪ, ತಿಮ್ಮಪ್ಪ, ಆರಗ ರವಿ, ಮೋಹನ್, ಸ್ಪಂದನ ಚಂದ್ರು, ನವೀನ್, ಕಿರಣ್, ಸಂದೀಪ್ ಇನ್ನಿತರರಿದ್ದರು

