ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿದೇಶರಾಜಕೀಯ

ನಿಂಬೆಗುಂದಿಯಲ್ಲಿ ಮರಳು ದಂದೆಕೋರರ ಅಟ್ಟಹಾಸ; ಟಾಸ್ಕ್‌ಫೋರ್ಸ್ ಅಧಿಕಾರಿಗಳೇ ನಿಮ್ಮ ಪಾಲೆಷ್ಟು…?

Share Below Link

ವಿಶೇಷ ವರದಿ: ರಾಕೇಶ್ ಡಿಸೋಜ
ಶಿವಮೊಗ್ಗ : ಭದ್ರಾವತಿ ತಾಲೂಕಿನ ನಿಂಬೇಗುಂದಿ ಗ್ರಾಮ ಪ್ರಕೃತಿ ಸೌಂದರ್ಯ ಮತ್ತು ನದಿ ತೀರದ ಮುzದ ಪರಿಸರಕ್ಕಾಗಿ ಪ್ರಸಿದ್ಧಿಯಾಗ ಬೇಕಿದ್ದ ಈ ಹಳ್ಳಿ, ಇತ್ತೀಚೆಗೆ ಮರಳು ಮಾಫಿಯಾದ ದುಷ್ಕೃತ್ಯಗಳಿಂದ ನರಳುತ್ತಿದೆ. ನಿಂಬೆಗೊಂದಿ ನದಿ ತೀರಕ್ಕೆ ಹೋದ ಯಾರಿಗಾದರೂ ಮೊದಲಿಗೆ ಕಿವಿಗೆ ಬೀಳುವುದು ಜೆಸಿಬಿ ಘರ್ಜನೆ, ಟಿಪ್ಪರ್ ಲಾರಿಗಳ ಗೇರ್ ಶಬ್ದ, ಡೀಸೆಲ್ ಮೋಟಾರ್ ಯಂತ್ರಗಳ ಗದ್ದಲ. ನದಿ ಯ ನಡೆಯುತ್ತಿದೆ ಓಪನ್ ಮೈನಿಂಗ್. ಇಂಜಿನ್ ಆಫ್ ಮಾಡಿ ದರೂ ಕಿವಿ ಚುಚ್ಚುವ ಗದ್ದಲದಿಂದಾಗಿ ಗ್ರಾಮಸ್ಥರು ಬೆಚ್ಚಿಬಿದ್ದಿಟದ್ದಾರೆ.
ನದಿಯ ಹೊಟ್ಟೆ ಬಗೆದು ಮರಳು ದೋಚುವ ಅಕ್ರಮ ದಂದೆಗಾಗಿ ರಾತ್ರಿ-ಹಗಲು ಎಂಬ ಭೇದವಿಲ್ಲದೆ ಸ್ಥಳೀಯ ಪ್ರಭಾವಿಗಳು ಮತ್ತು ಇಲಾಖಾಧಿಕಾರಿಗಳ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮರಳು ಮಾಫಿಯಾ, ಕಾನೂನಿನ ಕಣ್ಣಿಗೆ ಧೂಳು ಎರಚಿ, ನದಿಯ ಜೀವಾಳವನ್ನೇ ಜೆಸಿಬಿ ಗಳ ರಾಕ್ಷಸಗಾತ್ರದ ಹಲ್ಲುಗಳಿಗೆ ಸಿಲುಕಿಸುತ್ತಿzರೆ.
ಉತ್ತರ ಪ್ರದೇಶದಿಂದ ಸುಮಾರು ೫೦ ಮಂದಿ ಕಾರ್ಮಿಕರನ್ನು ಕರೆತಂದು, ಅವರಿಂದ ಹಗಲು ರಾತ್ರಿ ನದಿಯಿಂದ ನಿರಂತರ ಮರಳು ದೋಚುವಿಕೆ ಹಾಗೂ ದಿನಕ್ಕೆ ೫೦ಕ್ಕೂ ಹೆಚ್ಚು ಲೋಡ್‌ಗಳ ಅಕ್ರಮ ಸಾಗಟ ಈ ಎಲ್ಲವು ಸರ್ಕಾರಿ ಇಲಾಖೆ ಅಧಿಕಾರಿಗಳ ಜಾಣ ಕುರುಡನ್ನು ಪ್ರಶ್ನಿಸುವಂತಿದೆ.
ಗ್ರಾಮಸ್ಥರ ದೂರುಗಳಿಗೆ ಕ್ಯಾರೆ ಎನ್ನದ ಗಣಿ ಇಲಾಖೆ: ಗ್ರಾಮಸ್ಥರು ಹೇಳುವಂತೆ ಗಣಿ ಇಲಾಖೆ ಅಧಿಕಾರಿಗೆ ಮಾಹಿತಿ ನೀಡುವ ಸಲುವಾಗಿ ಎಷ್ಟುಸಲ ಫೋನ್ ಮಾಡಿದರೂ ಅವರು ಸೌಜನ್ಯಕ್ಕೂ ಕೂಡ ಕರೆಯನ್ನು ಸ್ವೀಕರಿಸುವುದಿಲ್ಲ . ಈ ಅಧಿಕಾರಿಗಳು ಕುಂಭಕರ್ಣ ನಿದ್ರೆಯಲ್ಲಿ ಇzರೋ ಅಥವಾ ಮರಳು ಮಾಫಿಯಾ ಜೊತೆ ಸೇರಿ ಕೊಂಡಿ zರೋ ಎಂದು ಪ್ರಶ್ನಿಸತೊಡಗಿದ್ದಾರೆ.
ಕಾನೂನಿಗೆ ಮತ್ತು ಮಾನವೀಯ ತೆಗೆ ನೇರ ಸವಾಲು ಎಸೆದಂತೆ ಇಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂದೆ ಕೇವಲ ಕಳ್ಳಸಾಗಾಣಿಕೆ ಅಲ್ಲ; ಇದು ಸಮೂಹ ದರೋಡೆ, ಪರಿಸರ ಹತ್ಯೆ ಮತ್ತು ವ್ಯವಸ್ಥೆಯ ಮೇಲಿನ ಅತ್ಯಾಚಾರವಾಗಿದೆ.


ತುಂಗಭದ್ರಾ ನದಿಯ ದಂಡೆ ಯಲ್ಲಿರುವ ನಿಂಬೆಗೊಂದಿ ಗ್ರಾಮದಲ್ಲಿ ಸಂಜೆ ೬ರಿಂದ ಮುಂಜಾನೆ ೬ ಗಂಟೆ ವರೆಗೆ ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಇದೀಗ ಹೊಸ ಮುಖ ಪಡೆದುಕೊಂಡಿದೆ. ಅದು ಒಂದಷ್ಟು ಕೂಲಿ ಕಾರ್ಮಿಕರನ್ನು ನೇಮಿಸಿಕೊಂಡು ಮಾಡುವ ಸಣ್ಣ ಮಟ್ಟದ ಕಳ್ಳತನವಲ್ಲ, ಬದಲಿಗೆ ದಿನದ ೨೪ ಗಂಟೆಯೂ ಈಗ ಜೆಸಿಬಿ ಯಂತ್ರಗಳ ಬೃಹತ್ ದವಡೆಗಳು ನದಿಯ ಒಡಲನ್ನು ಹರಿದು ಮರಳನ್ನು ದುರುಳರ ತಂಡ ಲಾರಿಗೆ ತುಂಬಿಸುತ್ತಿವೆ.
ದಿನದ ಬೆಳಕಿನಲ್ಲಿ ಯಾವುದೇ ಭಯವಿಲ್ಲದೆ, ಸಾರ್ವಜನಿಕಲ್ಲಿ ಭಯದ ವಾತಾವರಣ ನಿರ್ಮಿಸಿ, ಪೊಲೀಸರ ಕಣ್ಣರಳಿಕೆಯ, ಇಲಾಖೆಯವರ ಮನದ ಅನುಮತಿಯೊಂದಿಗೆ ನಡೆಯುತ್ತಿರುವ ಅನುಮಾನಗಳಿವೆ.
ನಿಂಬೆಗೊಂದಿ ಗ್ರಾಮದಲ್ಲಿ ಕಣ್ಣಿಗೆ ಕುಕ್ಕುವಂತೆ ಬಹಿರಂಗವಾಗಿ ಜೆಸಿಬಿಗಳು ನದಿಯ ಒಡಲನ್ನು ಬಗೆದು, ನೆಲದಡಿ ಜೀವಾಳವಾಗಿರುವ ಮರಳು ಪದರಗಳನ್ನು ಹೆಕ್ಕಿ ತಗೆಯುತ್ತಿವೆ. ಒಮ್ಮೆ ಜೀವಜಲದ ತೊಟ್ಟಿಲಾಗಿದ್ದ ಜಲಮೂಲಗಳು ಈಗ ಗಾಯಗೊಂಡ ನದಿ ಹೊಟ್ಟೆಯಂತೆ ಬಾಯ್ತೆರೆದು ಬಲಿಗಾಗಿ ಕಾಯುತ್ತಿವೆ. ಇದೊಂದು ರೀತಿಯಲ್ಲಿ ನದಿಯ ದರೋಡೆ. ಆದರೆ ಕಳ್ಳರು ಮಾತ್ರ ಬಂಧಿತರಾಗಿಲ್ಲ. ಆಗುವುದೂ ಇಲ್ಲ ಎಂಬ ಸ್ಪಷ್ಟ ಸಂದೇಶ ಅವರಿಗೆ ನೀಡಿದಂತಿದೆ.
ಅಕ್ರಮ ಮರಳು ಸಾಗಣೆ ನಿಯಂತ್ರಿಸಲು ಸರ್ಕಾರ ರಚಿಸಿದ ಟಾಸ್ಕ್‌ಫೋರ್ಸ್ ಜಿಲ್ಲೆಯಾದ್ಯಂತ ತನ್ನ ಕಾರ್ಯನಿರ್ವಹಿಸದೆ ನೆಪಮಾತ್ರ ಕ್ಕೆಂಬಂತಿದೆ. ಕಂದಾಯ ಇಲಾಖೆ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಪರಸ್ಪರ ಸಹಕಾರ ನೀಡದೆ ಪರೋಕ್ಷವಾಗಿ ಮರಳು ದಂದೆಕೋರರಿಗೆ ಕಾವಲು ನಾಯಿಗಳಂತೆ ವರ್ತಿಸುತ್ತಿದ್ದಾರೆ. ಹಾಗಾದರೆ ಈ ಮರಳು ದಂದೆಯಲ್ಲಿ ಟಾಸ್ಕ್‌ಫೋರ್ಸ್ ಅಧಿಕಾರಿಗಳ ಪಾಲು ಎಷ್ಟು ಎಂದು ಪ್ರಶ್ನಿಸಬೇಕಾಗಿದೆ.
ಅಕ್ರಮ ಮರಳು ದಾಸ್ತಾನು ಮಾಡಲು ತಮ್ಮ ಜಮೀನನ್ನೇ ನೀಡುತ್ತಿ ರುವ ನಿಂಬೆಗೊಂದಿ ಗ್ರಾಮದ ಕೆಲ ಜಮೀನು ಮಾಲೀಕರು ಹಾಗೂ ಮಾಫಿಯಾ ಮುಖ್ಯಸ್ಥರಿಗೆ ರಾಜಕೀಯ ನಾಯಕರ ಮತ್ತು ಅಧಿಕಾರಿಗಳ ಬೆಂಬ ಲವೂ ಇರುವ ಶಂಕೆ ಮೂಡುತ್ತಿದೆ.
ಭಾರತೀಯ ಗಣಿಗಾರಿಕೆ ಕಾಯ್ದೆ, ಪರಿಸರ ಸಂರಕ್ಷಣಾ ಕಾಯ್ದೆ, ಕಂದಾಯಿ ಕಾಯ್ದೆ ಎಲ್ಲದರಲ್ಲೂ ಅಕ್ರಮ ಮರಳು ಗಣಿಗಾರಿಕೆ ಗಂಭೀರ ಅಪರಾಧ ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ಮರಳು ದಂದೆ ಕೋರರಿಗೆ ಕಾನೂನುರೀತಿ ಕಡಿವಾಣ ಹಾಕದೆ ಈ ಕಾನೂನುಗಳನ್ನು ಪುಸ್ತಕದ ಬದನೆಕಾಯಿಯನ್ನಾಗಿ ಮಾಡಿದ್ದಾರೆ.
ನದಿ ತೀರದ ಮುಖ್ಯರಸ್ತೆಯಲ್ಲೇ ಇರುವ ನಾಲ್ಕು ತೋಟಗಳನ್ನು ಅಕ್ರಮ ಸ್ಟಾಕ್ ಯಾರ್ಡ್ ಮಾಡಲಾಗಿದೆ. ಕ್ಷಿಪ್ರ ಲೋಡಿಂಗ್ ವ್ಯವಸ್ಥೆ, ದಿನದ ೨೪ ಗಂಟೆಯೂ ಓಡಾಡುವ ಟಿಪ್ಪರ್‌ಗಳು ಈ ಎಲ್ಲವುಗಳು ದಂಧೆಕೋರರು ಎಷ್ಟೊಂದು ಸಂಘಟಿತವಾಗಿ ಕಾರ್ಯ ನಿರ್ವಹಿಸುತ್ತಿzರೆ ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ.
ತಾಜಾ ಬೆಳವಣಿಗೆಯಾಗಿ ಮರಳು ದಂಧೆಕೋರರು ಇಂದು ನದಿಗೇ ಅಡ್ಡಲಾಗಿ ಸೈಜ್ ಕಲ್ಲುಗಳನ್ನು ಹಾಕಿ ರಸ್ತೆ ನಿರ್ಮಿಸಿರುವುದು ಸಂಬಂಧಿಸಿದ ಇಲಾಖೆಗಳಿಗೆ ಸೆಡ್ಡು ಹೊಡೆದಂತಿದೆ.


ಮರಳು ದಂದೆಕೋರರ ಆರ್ಭಟಕ್ಕೆ ಗಣಿ, ಅರಣ್ಯ, ಕಂದಾಯ, ಪೋಲೀಸ್ ಇಲಾಖೆಗಳು ಕಂಡೂ ಕಾಣದಂತೆ ತಲೆಬಾಗಿ ನಿಂತರುವ ಹಾಗೆ ಕಾಣುತ್ತಿದ್ದು, ದಂದೆಕೋರ ಎಂಜಲು ಕಾಸಿಗೆ ಕೈಚಾಚಿ ಕಾವಲು ಕಾಯುತ್ತಿರುವಂತಿದೆ.
ಕಾನೂನಾತ್ಮಕವಾಗಿ ಒಂದು ತೆಪ್ಪವೂ ತೋಡಿ ಹೊರತಾಗಲು ಅನುಮತಿ ಇಲ್ಲದ ಪ್ರದೇಶದಲ್ಲಿ ದಿನಕ್ಕೆ ೩೦ ತೆಪ್ಪಗಳು ಸಂಚರಿಸುತ್ತಿರುವುದನ್ನು ಕಂಡೂ ಕಾಣದಂತೆ ಕೈಕಟ್ಟಿ ಕುಳಿತಿರುವ ಗಣಿ ಇಲಾಖೆ ಅಧಿಕಾರಿಗಳ ನಡೆ ಹತ್ತು ಹಲವು ಅನುಮಾನಗಳಿಗೆ ಕಾರಣವಾಗಿದೆ.
ನದಿ ತೀರದ ಸಸ್ಯಾವರಣ ನಾಶ, ಯಂತ್ರಗಳ ಓಡಾಟ ಮತ್ತು ಜಲಜೀವಿಗಳಿಗೆ ಉಂಟಾದ ಅಪಾರ ಹಾನಿ ಇವೆಲ್ಲವುಗಳ ಮೇಲೂ ಪರಿಸರ ಕಾವಲುಗಾರರಾದ ಅರಣ್ಯ ಇಲಾಖೆಯವರು ಸೂಕ್ಷ್ಮ ನೋಟ ಹಾಕದಿರುವುದು ಗಂಭೀರ ಪ್ರಶ್ನೆ ಎಬ್ಬಿಸುತ್ತದೆ.
ಸರ್ವೇ, ನಕ್ಷೆ, ಮೇಲು ಸಮೀಕ್ಷೆಗಳ ಜವಾಬ್ದಾರಿ ಹೊತ್ತಿರುವ ಕಂದಾಯ ಅಧಿಕಾರಿಗಳು ಮರಳು ಹೊತ್ತ ಟಿಪ್ಪರ್‌ಗಳು ದಿನಕ್ಕೆ ೨೦ರಿಂದ ೩೦ ಬಾರಿ ಸಂಚರಿಸುತ್ತಿದ್ದರೂ ಕಣ್ಣೆತ್ತಿ ನೋಡುವುದಿಲ್ಲ ಎಂದರೆ ಈ ದಂದೆಯಲ್ಲಿ ಅವರ ಪಾಲೆಷ್ಟು ಎಂದು ಪ್ರಶ್ನಿಸುವಂತಾಗಿದೆ.
ನಗರ ಪ್ರದೇಶದ ಗಲ್ಲಿಗಲ್ಲಿಯಲ್ಲಿ ಅಡಗಿ ನಿಂತು ಹೆಲ್ಮೆಟ್ ಧರಿಸದೇ ಬರುವ ದ್ವಿಚಕ್ರ ವಾಹನ ಸವಾರರು, ಸೀಟ್ ಬೆಲ್ಟ್ ಧರಿಸದ ಕಾರು ಚಾಲಕರು ಮತ್ತು ಭಾಷೆ ಬರದ, ರಸ್ತೆ ಗೊತ್ತಿಲ್ಲದೇ ನಗರದೊಳಗೆ ಬರುವ ಹೊರರಾಜ್ಯಗಳ ಲಾರಿಗಳನ್ನು ಅಡ್ಡಗಟ್ಟಿ ದಂಡದ ರಸೀದಿ ಹರಿಯುವ ಜೊತೆಗೆ ಬೆದರಿಕೆ ಮಾತುಗಳನ್ನಾಡಿ ತಮ್ಮ ಜೇಬನ್ನೂ ತುಂಬಿಸಿಕೊಳ್ಳುವ ಪೊಲೀಸರಿಗೆ ಈ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಣಿಕೆ ಕಾಣದಿರುವುದು ಜನರಲ್ಲಿ ಸಂಶಯ ಹುಟ್ಟಿಸಿದ್ದು, ಪೋಲೀಸರು ಜನರಿಗಾಗಿ ಕೆಲಸ ಮಾಡುತ್ತಾರಾ ಅಥವಾ ದಂಧೆಕೋರರ ಕಾವಲು ನಾಯಿಗಳಾ ಎಂಬ ಪ್ರಶ್ನೆ ಮೂಡುತ್ತಿವೆ.
ಒಟ್ಟಾರೆಯಾಗಿ ಜಿಲ್ಲೆಯಾದ್ಯಂತ ಲೀಲಾಜಾಲವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಇದು ಕೇವಲ ಮರಳು ದಂದೆ ಅಲ್ಲ; ಅಕ್ರಮ ಕ್ವಾರೆಯಲ್ಲಿ ಪ್ರತಿದಿನ ನಡೆಯುವ ೪ ರಿಂದ ೫ ಲಕ್ಷ ರೂಪಾಯಿಯ ಅಕ್ರಮ ವಹಿವಾಟು. ಇಲ್ಲಿ ಹಂಚಿಕೆ ಸ್ಪಷ್ಟ. ಆಡಳಿತ, ರಾಜಕೀಯ, ಸೇರಿದಂತೆ ಮರಳು ದೋಚುವ ಗೂಂಡಾಗಳಿಗೆ ಬೆಂಬಲಿಸುತ್ತಿರುವವರಿಗೆಲ್ಲ ತಮ್ಮ ತಮ್ಮ ಪಾಲು ಇದೆ ಎಂಬುದು ಸ್ಪಷ್ಟವಾಗುತ್ತಿದೆ.