ಭಗವದ್ಗೀತೆಯಲ್ಲಿ ವಿಶ್ವ ಜೀವನದ ರಹಸ್ಯ ಅಡಗಿದೆ…
ಶಿವಮೊಗ್ಗ : ಶ್ರೀ ಭಗವದ್ಗೀತೆಯಲ್ಲಿ ವಿಶ್ವ ಜೀವನದ ರಹಸ್ಯ ಅಡಗಿದೆ ಎಂದು ವಾಗ್ಮಿ ಜಿ.ಎಸ್.ನಟೇಶ್ ಹೇಳಿದರು.
ನಗರದ ಪೇಸ್ ಕಾಲೇಜ್‌ನಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶ್ರೀ ಸರ್ವeಂದ್ರ ಸರಸ್ವತಿ ಪ್ರತಿಷ್ಠಾನ ಹಾಗೂ ಸ್ವರ್ಣರಶ್ಮಿ ಟ್ರಸ್ಟ್‌ಗಳ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಭಗವದ್ಗೀತಾ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಭಗವದ್ಗೀತೆಯಲ್ಲಿ ಜೀವನ ಮಲ್ಯಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತಿದ್ದರು.

ಇಡೀ ವಿಶ್ವಕ್ಕೆ ಭಾರತದ ಸತ್ವವನ್ನು ಎತ್ತಿ ತೋರಿಸುವುದೇ ಭಗವದ್ಗೀತೆ. ರಾಮ ನಡೆದ ದಾರಿಯಲ್ಲಿ ನಾವು ನಡೆಯಬೇಕು. ಆದರೆ ಶ್ರೀಕೃಷ್ಣ ನಡೆದ ಹಾದಿಯಲ್ಲಿ ನಡೆಯಲಾಗುವುದಿಲ್ಲ. ಬದಲಾಗಿ ಶ್ರೀಕೃಷ್ಣ ಹೇಳಿದ ಮಾತುಗಳನ್ನು ಕೇಳಿ ಜೀವನ ಪಾವನ ಮಾಡಿ ಕೊಳ್ಳಬೇಕು ಎಂದ ಅವರು ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯನ್ನು ಓದದ ಭಾರತ ಭಾರತವೇ ಅಲ್ಲ. ಭಾರತೀಯರಾಗಲು ಪ್ರತಿಯೊಬ್ಬರೂ ಈ ಮೂರು ಗ್ರಂಥಗಳನ್ನು ಓದಲೇಬೇಕು ಎಂದು ಪ್ರತಿಪಾದಿಸಿದರು.
ದೇಹವನ್ನು ನಾಶಪಡಿಸ ಬಹುದು. ಆದರೆ ಆತ್ಮವನ್ನು ನಾಶಪಡಿಸಲು ಸಾಧ್ಯವಿಲ್ಲ. ಮನಸ್ಸನ್ನು ಹೃದಯ ನಿಯಂತ್ರಿಸ ಬೇಕು. ಪ್ರಾಣಶಕ್ತಿಯನ್ನು ಶಿರಸ್ಸು ನಿಯಂತ್ರಿಸಬೇಕು. ಇದುವೇ ಯೋಗ ಶಕ್ತಿ. ಭಗವದ್ಗೀತೆ ತಿಳಿಸುವುದೇ ಇದನ್ನು ಎಂದರು.

ಗೀತೆ ಭಾರತದ ಸರ್ವಸ್ವ. ಪ್ರತಿಯೊಂದು ಸಂಶಯ, ಸಮಸ್ಯೆ ಗಳಿಗೆ ಪರಿಹಾರ ಭಗವದ್ಗೀತೆ ಯಲ್ಲಿದೆ. ಪೂಜ, ಕರ್ತವ್ಯ ಪಾಲನೆ, ಧ್ಯಾನ, ತ್ಯಾಗ, ತಪಸ್ಸುಗಳ ಬಗ್ಗೆ ಹೇಳುವ ಭಗವದ್ಗೀತೆ ಇಂದ್ರಿಯ ನಿಗ್ರಹ ಶಕ್ತಿಯನ್ನುಹೊಂದಿದೆ. ಅಪ್ಪ, ಅಮ್ಮ, ವಿದ್ಯಾ ಗುರುಗಳಿಗೆ ಗೌರವ ಕಡಿಮೆಯಾಗದಂತೆ ವಿದ್ಯಾರ್ಥಿ ಗಳು ಗಮನಿಸಬೇಕು. ಜೀವನದಲ್ಲಿ ಸರಳವಾಗಿದ್ದವರು, ಅಹಂಕಾರ ರಹಿತರು ಮಾಡಿದಷ್ಟು ಸಾಧನೆ ಯನ್ನು ದುಡ್ಡಿದ್ದವರು ಮಾಡಲು ಸಾಧ್ಯವಿಲ್ಲ ಎಂಬುದನ್ನು ತಿಳಿದು ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಅಭಿಯಾನ ಸಮಿತಿಯ ಡಾ. ಬಾಲಕೃಷ್ಣ ಹೆಗಡೆ, ಕಾಲೇಜಿನ ಪ್ರಾಚಾರ್ಯ ಪ್ರೊ. ವಿಶ್ವನಾಥಯ್ಯ, ಪ್ರಮುಖರಾದ ಡಾ.ಮೈತ್ರೇಯಿ ಆದಿತ್ಯಪ್ರಸಾದ್, ಬಸವರಾಜ್, ಪವನಕುಮಾರ್, ಶಬರೀಶ್ ಕಣ್ಣನ್ ಮೊದಲಾದವರಿದ್ದರು.

