ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಆವಿಷ್ಕಾರಿ ಚಿಂತನೆ ಯಶಸ್ವಿ ಉದ್ಯಮದ ಗುಟ್ಟು…

Share Below Link

ಶಿವಮೊಗ್ಗ : ಯಶಸ್ವಿ ಉದ್ಯಮಿಗೆ ಆವಿಷ್ಕಾರಿ ಚಿಂತನೆಗಳು, ಸಂಪನ್ಮೂಲಗಳ ಕ್ರೋಡೀಕರಣ ಮತ್ತು ನಿರ್ವಹಣಾ ಕೌಶಲ್ಯತೆಗಳು ಅತ್ಯವಶ್ಯಕ ವಿಚಾರ ವಾಗಿದೆ ಎಂದು ಜಿ ವಾಣಿಜ್ಯ ಸಂಘದ ಅಧ್ಯಕ್ಷ ಬಿ.ಗೋಪಿನಾಥ ಅಭಿಪ್ರಾಯಪಟ್ಟರು.
ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಎಂ.ಎಸ್.ಎಂ.ಇ ಕಾರ್ಯಕ್ಷಮತೆ ಹೆಚ್ಚಿಸುವ ಮತ್ತು ವೇಗಗೊಳಿಸುವ ಯೋಜನೆಯಡಿ ಇನ್‌ಕ್ಯುಬೇಷನ್ ಯೋಜನೆ ಕುರಿತು ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ಅವರು, ನಮ್ಮ ಯುವ ಸಮೂಹದಲ್ಲಿರುವ ಸಾಕಷ್ಟು ನಾವಿನ್ಯ ಯೋಜನೆಗಳು ಸಮರ್ಪಕವಾಗಿ ಅನುಷ್ಟಾನ ಗೊಳ್ಳಲು ಸರ್ಕಾರ ಅನೇಕ ಉದ್ಯಮ ಶೀಲ ಯೋಜನೆಗಳನ್ನು ನೀಡುತ್ತಿದ್ದು, ಇಂತಹ ಅವಕಾಶ ವನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಉದ್ಯಮಶೀಲತೆಯ ಪ್ರೇರಣೆ ನೀಡಲು ವಿದ್ಯಾಸಂಸ್ಥೆಗಳಲ್ಲಿ ಇನ್ಕ್ಯುಬೇಷನ್ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿದೆ ಎಂದರು.


ಪ್ರತಿ ಸಣ್ಣ ಪ್ರಯತ್ನಗಳು ಇಂದು ಅತಿ ದೊಡ್ಡ ಉದ್ಯಮವಾಗಿ ಬೆಳೆದು ನಿಂತಿರುವ ಅನೇಕ ಅದ್ಭುತ ಉದಾಹರಣೆಗಳಿವೆ. ಅಂತಹ ಯಶಸ್ಸಿನ ಹಾದಿಗಳಿಂದ ಪ್ರೇರಣೆ ಪಡೆಯಿರಿ. ಅವಕಾಶಗಳನ್ನು ಸಂಶೋಧಿಸಿ ಪರಿಣಾಮಕಾರಿ ಯಾಗಿ ಬಳಸಿಕೊಳ್ಳಿ. ಊರಿನಲ್ಲಿ ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡಿದರೆ ಸಾಕು ಎಂಬ ಸಂಕುಚಿತತೆ ಬೇಡ ಎಂದು ಸಲಹೆ ನೀಡಿದರು.
ಜಿ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಜೋಯಿಸ್ ರಾಮಾಚಾರ್ ಮಾತನಾಡಿ, ವಿದ್ಯಾರ್ಥಿ ಬದುಕಿನಲ್ಲಿಯೆ ನಾಯಕತ್ವದ ಗುಣ, ಉತ್ತಮ ಸಂವಹನ ಕೌಶಲ್ಯತೆಯನ್ನು ಬೆಳೆಸಿ ಕೊಳ್ಳಿ. ಎಲ್ಲರನ್ನೂ ಸಮಾನವಾಗಿ ಪರಿಗಣಿಸುವ ಮನಸ್ಥಿತಿ ಪಡೆಯಿರಿ. ಇದರಿಂದ ಉದ್ಯಮಿಯಾದಾಗ ಎಲ್ಲರನ್ನೂ ವಿಶ್ವಾಸದಿಂದ ನಿಭಾಯಿ ಸುವ ಕಲೆ ನಿಮ್ಮದಾಗುತ್ತದೆ ಎಂದರಲ್ಲದೇ, ಬದುಕಿನ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುವಾಗ ಸಮಯದ ನಿರ್ವಹಣೆ ಎಂಬುದು ಅತಿ ಮುಖ್ಯ. ಕೈಗಾರಿಕೆಗಳಲ್ಲಿರುವ ಸಿಬ್ಬಂದಿಗೆ ಒಡೆತನದ ಅವಕಾಶ ಕೊಡಬೇಕು. ಇದರಿಂದ ಸಿಬ್ಬಂದಿ ಯಲ್ಲಿ ಹೆಚ್ಚು ಸಕ್ರಿಯವಾಗುವಂತಹ ತೊಡಗಿಸಿಕೊಳ್ಳುವ ಮನಸ್ಥಿತಿ ನಿರ್ಮಾಣವಾಗಲಿದೆ ಎಂದರು.
ಕಾಲೇಜಿನ ಸಂಶೋಧನಾ ಡೀನ್ ಡಾ.ಎಸ್.ವಿ. ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಎಂ.ಎಸ್.ಎಂ.ಇ ನಿವೃತ್ತ ಸಹ ನಿರ್ದೇಶಕ ಗೋಪಿನಾಥ ರಾವ್ ಅವರು ಉದ್ಯಮಶೀಲತೆಗೆ ಸರ್ಕಾರದಿಂದ ಲಭ್ಯವಿರುವ ವಿವಿಧ ಆರ್ಥಿಕ ವೇದಿಕೆಗಳ ಕುರಿತು ಮಾಹಿತಿ ನೀಡಿದರು.
ಜಿ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್. ಗಣೇಶ್, ಲೀಡ್ ಬ್ಯಾಂಕ್ ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಹನುಮಂತಪ್ಪ ಪಿ., ಎಂಸಿಎ ವಿಭಾಗದ ಮುಖ್ಯಸ್ಥ ಡಾ. ಹೇಮಂತ್ ಕುಮಾರ್, ಸಹಾಯಕ ಪ್ರಾಧ್ಯಾಪಕ ಕೆ.ಎಲ್. ಅರುಣ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ನಾಗೇಶ್ ನಿರೂಪಿಸಿದರು.