ವೈದ್ಯರಲ್ಲಿ ಹೃದಯ ವೈಶಾಲ್ಯತೆ ಕಡಿಮೆಯಾಗಿದ್ದು ಜನಸಾಮಾನ್ಯರಿಗೆ ಅವರಲ್ಲಿ ಕಾಣುತ್ತಿದ್ದ ದೇವರು ಇಂದು ಕಾಣುತ್ತಿಲ್ಲ…
ಶಿವಮೊಗ್ಗ : ರಾಜ್ಯದಲ್ಲಿ ಆಸ್ಪತ್ರೆ ತೆರೆಯಲು ಈಗಿರುವ ಕ್ಲಿಷ್ಟಕರ ನೀತಿಯನ್ನು ತೊಡೆದುಹಾಕಲು ತಮ್ಮ ಸರ್ಕಾರ ಏಕಗವಾಕ್ಷಿ ಪದ್ಧತಿ ತರುವ ಚಿಂತನೆ ನಡೆಸಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ| ಶರಣ ಪ್ರಕಾಶ್ ಪಾಟೀಲ್ ಹೇಳಿದರು.
ನಗರದಲ್ಲಿ ಇಂಟರ್ ನ್ಯಾಷನಲ್ ಲಿಂಗಾಯತ ಯುಥ್ ಫೋರಂ ಆಯೋಜಿಸಿದ್ದ ಡಾಕ್ಟರ್ ಎಂಟರಪ್ರೆನ್ಯೂರ್ ಸಮಾವೇಶ-೨೦೨೫ನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಾಲಿ ವೈದ್ಯರು ಆಸ್ಪತ್ರೆ ಅಸರಂಭಿಸಲು ಕನಿಷ್ಟ ೫೨ ಬಗೆಯ ಪರವಾನಿಗೆ ತೆಗೆದುಕೊಳ್ಳ ಬೇಕಾಗಿದೆ. ಇವುಗಳನ್ನು ಪಡೆಯುವಷ್ಟರಲ್ಲಿಯೇ ವೈದ್ಯರು ಸುಸ್ತಾಗುತ್ತಾರೆ. ಇದನ್ನು ತಪ್ಪಿಸಲು ಪರವಾನಿಗೆಗೆ ಸರಳ ವಿಧಾನ ಅನುಸರಿಸ ಲಾಗುವುದು ಎಂದು ಭರವಸೆ ನೀಡಿದರು.

೧೯೬೦-೭೦ರ ದಶಕದ ರಾಜ್ಯದಲ್ಲಿ ದೂರಾಲೋಚನೆ ಹೊಂದಿದ್ದವರು ವೈದ್ಯಕೀಯ ಕಾಲೇಜು ಆಸ್ಪತ್ರೆಗಳನ್ನು ತೆರೆದು ಇಡೀ ದೇಶದ ಜನ ಕರ್ನಾಟಕದತ್ತ ತಮ್ಮ ಚಿತ್ತ ಹರಿಸುವಂತೆ ಮಾಡಿದ್ದರು. ಸರ್ಕಾರ ನೀಡದ ವೈದ್ಯಕೀಯ ಸೇವೆಯನ್ನು ಜನರಿಗೆ ಅವು ನೀಡುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ವೈದ್ಯರಲ್ಲಿ ಹೃದಯ ವೈಶಾಲ್ಯತೆ ಕಡಿಮೆ ಯಾಗಿದೆ. ಒಂದು ಕಾಲದಲ್ಲಿ ಜನಸಾಮಾನ್ಯರು ವೈದ್ಯರಲ್ಲಿ ದೇವರನ್ನು ಕಾಣುತ್ತಿದ್ದರು. ವೈದ್ಯರಿಗೆ ಸಮಾಜದಲ್ಲಿ ವಿಶೇಷ ಸ್ಥಾನವಿದೆ. ಅದನ್ನು ಕಾಪಾಡಿ ಕೊಳ್ಳುವುದು ವೈದ್ಯರ ಜವಾಬ್ದಾರಿ ಎಂದು ಕಿವಿಮಾತು ಹೇಳಿದರು.
ವೈದ್ಯ ವೃತ್ತಿ ಕವಲು ದಾರಿ ಯಲ್ಲಿದೆ. ಕಾಪೋರೇಟ್ ಕಂಪನಿ ಗಳು ಆಸ್ಪತ್ರೆ ತರೆಯಲು ಮುಂದಾಗಿದ್ದು ಅವು ಕೇವಲ ಹಣದಾಸೆಗೆ ವಿನಃ ಜನರ ಸೇವೆಗೆ ಅಲ್ಲ. ಸಾರ್ವಜನಿಕರು ಅದರಲ್ಲಿ ನಂಬಿಕೆ ಕಳೆದುಕೊಳ್ಳುತ್ತಾರೆ ಎಂಬುದನ್ನು ಗಮನದಲ್ಲಿಡಬೇಕು. ವೈದ್ಯರೇ ಒಂದುಗೂಡಿ ಆಸ್ಪತ್ರೆ ಆರಂಭಿಸಿ ಗುಣ ಮಟ್ಟದ ವೈದ್ಯಕೀಯ ಸೇವೆ ನೀಡಬೇಕು ಎಂದು ಕರೆ ನೀಡಿದರು.

ತಾವು ವೈದ್ಯಕೀಯ ಸಚಿವರಾದ ಮೇಲೆ ಪ್ರತಿ ಜಿಗೆ ಒಂದರಂತೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ತೀರ್ಮಾನಿಸಿದೆ. ಈಗಾಗಲೇ ೨೪ ಜಿ ಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಗಳಿವೆ. ಇದು ಖಾಸಗಿ ಆಸ್ಪತ್ರೆಗಳಿಗೆ ಸ್ಪರ್ಧೆ ಒಡ್ಡಲು ಖಂಡಿತ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮುಂದಿನ ೫ ವರ್ಷಗಳಲ್ಲಿ ಪ್ರತಿ ಜಿಯಲ್ಲಿ ಸರ್ಕಾರಿ ಕ್ಯಾನ್ಸರ್, ಹೃದ್ರೋಗ, ಕ್ಷಯ ರೋಗ ಆಸ್ಪತ್ರೆ ತೆರೆಯಲಾಗುವುದು ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತ ನಾಡಿ, ಇಂದು ಆರೋಗ್ಯ ಕ್ಷೇತ್ರದಲ್ಲಿನ ಸೇವೆ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರಿಗೆ ಬಹು ತುಟ್ಟಿಯಾಗಿದೆ. ಕಡಿಮೆ ದರದಲ್ಲಿ ವೈದ್ಯಕೀಯ ಸೇವೆ ಸಿಗುವಂತಾಗ ಬೇಕು. ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಪ್ರತ್ಯೇಕ ಸರ್ಕಾರಿ ಆಸ್ಪತ್ರೆ ಸ್ಥಾಪನೆಗೆ ಕ್ರಮ ವಾಗಬೇಕು. ಈಗಿರುವ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಮನವಿ ಮಾಡಿದರು.

ದಾವಣಗೆರೆ ಸಂಸದೆ ಡಾ| ಪ್ರಭಾ ಮಲ್ಲಿಕಾರ್ಜುನ ಅವರು ಮಾತನಾಡಿ, ನಮ್ಮ ವೃತ್ತಿಗಷ್ಟೇ ನಾವು ಸೀಮಿತವಾಗಬಾರದು. ಸಾರ್ವಜನಿಕ- ಖಾಸಗಿ ಸಹಕಾರ ದೊಂದಿಗೆ ಲಿಂಗಾಯತ ಸಮುದಾ ಯದ ವೈದ್ಯರು ಸಮಾಜದ ಉನ್ನತಿಗೆ ಶ್ರಮಿಸ ಬೇಕು. ನಾನು ಈ ಸಂಘಟನೆಯ ಧ್ವನಿಯಾಗುವೆ ಎಂದು ಭರವಸೆ ನೀಡಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಅನೇಕ ಬದಲಾವಣೆಗೆ ಶಕ್ತಿ ತುಂಬುವ ಕೆಲಸ ಈ ಸಮಾವೇಶದಿಂದಾಗಲಿ ಎಂದು ಆಶಿಸಿದರು.
ಬೆಂಗಳೂರಿನ ರಾಮಯ್ಯ ಸ್ಮಾರಕ ಆಸ್ಪತ್ರೆ ಸಮೂಹದ ಮುಖ್ಯಸ್ಥ ಡಾ.ನಾಗೇಂದ್ರ ಸ್ವಾಮಿ ಆಶಯ ಭಾಷಣ ಮಾಡಿದರು. ವಿಧಾನ ಪರಿಷತ್ ಸದಸ್ಯ ಡಾ. ಸರ್ಜಿ, ನವೀನ್ ಎಸ್.ಕೆ., ಐಲೈಫ್ ರಾಜಧ್ಯಕ್ಷ ಸಂತೋಷ್ ಕೆಂಚಾಂಬಾ, ಶಾಲಿನಿ ನಾಲವಾಡ್, ಡಾ.ಅವಿನಾಶ್ ಬೆನಕಪ್ಪ ಕಿರಣ ಕುಮಾರ್ ಮೊದಲಾದವರಿದ್ದರು.

