ನಿಮ್ಮ ಜೊತೆ ನಾವು ಸದಾ ಇರುತ್ತೇವೆ : ಡಾ. ಪ್ರಭಾ…
ದಾವಣಗೆರೆ: ವಿಧಾನಸಭಾ ಚುನಾವಣೆ ಪ್ರಚಾರದ ಸಮಯ ದಲ್ಲಿ ಮಹಿಳೆಯರು, ಸಾರ್ವಜನಿಕರು ಹಾಗೂ ಕಾರ್ಯಕರ್ತರ ಜೊತೆ ಸರಣಿ ಸಂವಾದ ನಡೆಸುವ ಮೂಲಕ, ಅಭಿಪ್ರಾಯ ಸಂಗ್ರಹಿಸುತ್ತಿರುವ ಡಾ. ಪ್ರಭಾ ಮಲ್ಲಿಕಾರ್ಜುನ್ ಇಂದು ಬಾಪೂಜಿ ಆಸ್ಪತ್ರೆಯ ಸಿಬ್ಬಂದಿಗಳ ಜೊತೆ ಸಂವಾದ ನಡೆಸಿದರು.
ಈ ಸಂವಾದದ ಸಮಯದಲ್ಲಿ ೫೫೦ಕ್ಕೂ ಹೆಚ್ಚು ಸಿಬ್ಬಂದಿಗಳು ಉಪಸ್ಥಿತರಿದ್ದು ಅನೇಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಸಿಬ್ಬಂದಿಯೋರ್ವರು ತಮ್ಮ ಅಭಿಪ್ರಾಯ ತಿಳಿಸಿ ಬಾಪೂಜಿ ಸಂಸ್ಥೆಯಂತಹ ಸಂಸ್ಥೆಯಲ್ಲಿ ನಾವು ಕಾರ್ಯನಿರ್ವಹಿಸುತ್ತಿರುವ ಹೆಮ್ಮೆ ನಮಗಿದ್ದು, ನಾವು ಶಾಮನೂರ್ ಕುಟುಂಬಕ್ಕೆ ಚಿರಋಣಿಗಳಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಯುವಕರೊಬ್ಬರು ಮಾತನಾಡಿ ಇಷ್ಟೊಂದು ಅಭಿವೃದ್ಧಿ ಕಾರ್ಯ ಗಳನ್ನು ಮಾಡಿರುವ ನಮ್ಮ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಬೇಕಿತ್ತಾದರೂ, ಚುನಾವಣೆ ಸ್ಪರ್ಧಿಸಿ ಮತಯಾಚನೆ ಮಾಡುತ್ತಿರುವುದು ವಿಪರ್ಯಾಸ. ಅದರಲ್ಲೂ ತಾವುಗಳು ನಮ್ಮ ಬಳಿ ಬಂದು ಮತ ಕೇಳುವ ಅವಶ್ಯಕತೆ ಇರಲಿಲ್ಲ, ನಾವುಗಳೇ ಮನೆ ಮನೆಗೆ ತೆರಳಿ ಇವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ತಿಳಿಸಿ ಮತಯಾಚಿಸುವುದಾಗಿ ಹಾಗೂ ನಮಗೆಲ್ಲ ಜೀವನ ಕಟ್ಟಿಕೊಳ್ಳಲು ಕಾರಣರಾದ ತಾವುಗಳೇ, ಇಂದು ನಮ್ಮ ಬಳಿ ಬಂದು ಮತಯಾಚಿಸಿದ್ದು, ನಮಗೆ ನಿಮ್ಮ ಕುಟುಂಬದ ಮೇಲಿದ್ದ ಗೌರವ ಇನ್ನೂ ಹೆಚ್ಚಾಗುವಂತೆ ಮಾಡಿದೆ ಎಂದು ತಮ್ಮ ಅಭಿಪ್ರಾಯ ಪಟ್ಟರು.
ಎಲ್ಲರ ಅಭಿಪ್ರಾಯ ಕೇಳಿ ನಂತರ ಮಾತನಾಡಿದ ಡಾ. ಪ್ರಭಾ ಮಲ್ಲಿಕಾರ್ಜುನ್, ಆಸ್ಪತ್ರೆಯ ಸಿಬ್ಬಂದಿಗಳು ನಮ್ಮ ಕುಟುಂಬದ ಸದಸ್ಯರಿದ್ದಂತೆ ಎಂದು ನಾವು ಭಾವಿಸಿದ್ದು, ಇಂದು ನಮ್ಮ ಕುಟುಂಬದ ಮೇಲೆ ತಾವು ತೋರಿದ ಪ್ರೀತಿ, ಗೌರವಕ್ಕೆ ನಾವು ಸದಾ ನಿಮ್ಮ ಬೆಂಬಲಕ್ಕೆ ಇರುತ್ತೇವೆ ಎಂದರು.
ನಮ್ಮವರೇ ಅಧಿಕಾರದಲ್ಲಿದ್ದರೆ ಇನ್ನೂ ಹೆಚ್ಚಿನ ಅನುದಾನ ತಂದು ನಗರದ ಅಭಿವೃದ್ಧಿ ಹಾಗೂ ಸಂಸ್ಥೆಯ ಅಭಿವೃದ್ಧಿ ಮಾಡಬಹುದು, ಇದನ್ನು ತಿಳಿದು ಕೇವಲ ನೀವು ಮತದಾನ ಮಾಡುವುದಷ್ಟೇ ಅಲ್ಲದೆ ನಿಮ್ಮ ಕುಟುಂಬದವರ ಹಾಗೂ ಸ್ನೇಹಿತ ರಿಂದ ಮತದಾನ ಮಾಡಿಸುವ ಮೂಲಕ ನಿಮ್ಮದೇ ಕುಟುಂಬದವರ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಾಪೂಜಿ ವೈದ್ಯಕೀಯ ನಿರ್ದೇಶಕ ಡಾ. ಬಿ.ಎಸ್ ಕುಮಾರ್, ಪ್ರಾಂಶುಪಾಲ ಎಸ್.ಬಿ ಮುರುಗೇಶ್, ಆಡಳಿತ ನಿರ್ದೇಶಕ ಪಿ. ಸತ್ಯನಾರಾಯಣ, ಮಕ್ಕಳ ವಿಭಾಗದಲ್ಲಿ ನಿರ್ದೇಶಕ ಡಾ. ಮುಗನ ಗೌಡ ಪಾಟೀಲ್ ಉಪಸ್ಥಿತರಿದ್ದರು. ಡಾ ಅನುರೂಪ ಸ್ವಾಗತಿಸಿ, ಡಾ. ಧನ್ಯ ಕುಮಾರ್ ವಂದಿಸಿದರು.