ಕಟ್ಟಡ ಕಾರ್ಮಿಕರಿಗೆ ನೀಡುವ ಸೌಲಭ್ಯ ರೈತರಿಗೂ ನೀಡಿ…
ಸಾಗರ: ಸರ್ಕಾರ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ನೀಡುವ ಸವಲತ್ತು ಗಳನ್ನು ಗ್ರಾಮೀಣ ಪ್ರದೇಶದ ಸಣ್ಣ ಮತ್ತು ಅತಿಸಣ್ಣ ರೈತ, ಭೂ ರಹಿತ ರೈತರಿಗೆ ನೀಡಬೇಕು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎಂ.ಬಿ. ಮಂಜಪ್ಪ ಸುದ್ದಿ ಗೋಷ್ಟಿಯಲ್ಲಿ ಒತ್ತಾಯಿಸಿದರು.
ಸಣ್ಣ ಅತಿಸಣ್ಣ ಮತ್ತು ಭೂ ರಹಿತ ಕೃಷಿ ಕಾರ್ಮಿಕರಿಗೆ ಯಾವುದೇ ಜೀವನ ಭದ್ರತೆ ಇಲ್ಲ. ಸ್ವಾತಂತ್ರ್ಯ ಬಂದು ೭೮ ವರ್ಷ ಕಳೆದರೂ ಈ ವರ್ಗಗಳಿಗೆ ನ್ಯಾಯ ಸಿಕ್ಕಿಲ್ಲ ಎಂದ ಅವರು, ಕೃಷಿ ಕಾರ್ಮಿಕರು ಬಲಾಢ್ಯರ ಜಮೀನಿನಲ್ಲಿ ಕೆಲಸ ಮಾಡುತ್ತಿzರೆ. ಹಳ್ಳಿಯಲ್ಲಿ ಕೃಷಿ ಭೂಮಿ ಕೆಲಸಕ್ಕೆ ಆಧುನಿಕ ಯಂತ್ರೋಪಕರಣಗಳು ಬಂದಿರುವುದರಿಂದ ನಿರ್ಧಿಷ್ಟವಾದ ಕೃಷಿ ಕೂಲಿ ಕಾರ್ಮಿಕರಿಗೆ ಕೆಲಸದ ಬೇಡಿಕೆ ಇಲ್ಲ. ಅವರು ಬೇರೆ ಉದ್ಯೋಗ ಮಾಡುವಂತಿಲ್ಲ. ಅವರ ಜೀವನ ಸ್ಥಿತಿ ಕಷ್ಟದಲ್ಲಿದೆ. ಭೂ ರಹಿತ ಕಾರ್ಮಿಕರಿಗೆ ಭೂಮಿ ಇಲ್ಲದೇ ವಾಸದ ಮನೆಗೂ ಹಕ್ಕುಪತ್ರ ಇಲ್ಲವಾಗಿದೆ. ಸರ್ಕಾರ ನೀಡುವ ಆಧಾರ್ ಕಾರ್ಡ್, ಐಡಿ ಕಾರ್ಡ್, ರೇಷನ್ ಕಾರ್ಡ್ ಮೂಲಕ ಸಿಗುವ ಸೌಲಭ್ಯಗಳು ಮಾತ್ರ ಸಿಗುತ್ತಿವೆ. ಬಡ ರೈತನ ಏಳಿಗೆಯಾಗದೆ ದೇಶದ ಅಭಿವೃದ್ಧಿಯಾಗಿದೆ ಎಂಬುದು ಸರಿಯಲ್ಲ. ದೇಶದ ಕಟ್ಟಕಡೆಯ ವ್ಯಕ್ತಿಯ ಸ್ಥಿತಿ ಸ್ವಾತಂತ್ರ್ಯ ಪೂರ್ವಕ್ಕಿಂತ ಭಿನ್ನವಾಗಿಲ್ಲ ಎಂದು ವಿಷಾದಿಸಿದರು.

ನಮ್ಮ ಸಂಘಟನೆಯಿಂದ ಸಣ್ಣ ರೈತರು, ಕೃಷಿ ಕಾರ್ಮಿಕರನ್ನು ಒಗ್ಗೂಡಿಸುವ ಪ್ರಯತ್ನ ನಡೆದಿದೆ. ಈ ನಿಮಿತ್ತ ಆ.೧೫ ಸ್ವಾತಂತ್ರ್ಯ ದಿನಾಚರಣೆಯಂದು ಕಾಗೋಡಿನಲ್ಲಿ ಮಧ್ಯಾಹ್ನ ೨.೩೦ ಗಂಟೆಗೆ ಕೃಷಿ ಕಾರ್ಮಿಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮನೆ ಮನೆಗೆ ಭೇಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ದಿನಕ್ಕೆ ೭-೮ ಗಂಟೆ ದುಡಿಯುವ ಕೃಷಿ ಕಾರ್ಮಿಕನಿಗೆ ಕನಿಷ್ಠ ಕೂಲಿ ೫೦೦ ರೂ. ಗೆ ಏರಿಕೆ ಮಾಡಬೇಕು ಎಂಬ ಒತ್ತಾಯವಿದೆ ಎಂದರು.
ನಮ್ಮ ರೈತ ಸಂಘ ಮತ್ತು ಎಚ್. ಗಣಪತಿಯಪ್ಪ ತಾಲ್ಲೂಕು ರೈತ ಸಂಘ ಜಂಟಿಯಾಗಿ ಸಂಯುಕ್ತ ರೈತ ಸಂಘಟನೆಯಿಂದ ಪ್ರತಿ ಮನೆ ಮನೆ ಭೇಟಿ ನೀಡಿ ಅವರ ಸಮಸ್ಯೆ ತಿಳಿಯಲಾಗುವುದು. ಲಂಚ, ಭ್ರಷ್ಟಾಚಾರದ ವಿರುದ್ಧ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗುವುದು. ಒಂದು ವರ್ಷಗಳ ಕಾಲ ಈ ಜಗೃತಿ ಕಾರ್ಯಕ್ರಮ ನಡೆಸುವ ಯೋಜನೆಯಿದೆ ಎಂದರು.
ಹೊಯ್ಸಳ ವಡ್ನಾಲ ಗಣಪತಿಯಪ್ಪ ಮಾತನಾಡಿ, ಮಂಜಪ್ಪನವರ ನೇತೃತ್ವದ ರೈತ ಸಂಘದ ಚಟುವಟಿಕೆಗಳಿಗೆ ಕಾಗೋಡು ಹೋರಾಟಗಾರ ಎಚ್.ಗಣಪತಿಯಪ್ಪ ಸ್ಥಾಪಿತ ರೈತಸಂಘದ ಬೆಂಬಲವಿದೆ. ಕೃಷಿ ಕಾರ್ಮಿಕರು ಭೂಮಿಯಲ್ಲಿ ಕೃಷಿ ಕೆಲಸ ಮಾಡುತ್ತಿದ್ದು, ಅವರಿಗೂ ಸ್ವಂತ ಭೂಮಿ ಒದಗಿಸುವ ಕೆಲಸವಾಗಬೇಕು. ಸರ್ವರಿಗೂ ಸಮಬಾಳು, ಸಮಪಾಲು ಎಂಬ ಸೂತ್ರ ಜರಿಗೆ ಬರಬೇಕು. ಅವರ ಜೀವನ ಭದ್ರತೆಗೆ ಉದ್ಯೋಗ ಖಾತ್ರಿಯಲ್ಲಿ ೧೦೦ ದಿನಗಳ ಕೆಲಸ ಕೊಡಬೇಕು. ಆಗಸ್ಟ್ ೧೫ ರಿಂದ ರೈತ ಸಂಘಟನೆಯನ್ನು ಬಲಪಡಿಸುವ ಕೆಲಸ ಮಾಡುತ್ತೇವೆ ಎಂದರು.
ರೈತ ಮುಖಂಡರಾದ ಕೆಲವೆ ವೀರಪ್ಪ, ಆಲಳ್ಳಿ ದೇವು ಉಪಸ್ಥಿತರಿದ್ದರು.
