ಸೇಕ್ರೆಡ್ ಹಾರ್ಟ್ ಪ್ರಧಾನಾಲಯ: ಶಿವಮೊಗ್ಗದಲ್ಲಿ ಕಾರ್ಮೆಲ್ ಮಾತೆಯ ಭಕ್ತಿ…
ಪ್ರತಿ ವರ್ಷ, ಜುಲೈ ೧೬ ರಂದು ಕಾರ್ಮೆಲ್ ಮಾತೆಯ ಹಬ್ಬವನ್ನು ಇಡೀ ವಿಶ್ವವೇ ಆಚರಿಸುತ್ತದೆ. ಪಾಲೆಸ್ತಿನ್ ದೇಶದ ಕಾರ್ಮೆಲ್ ಎಂಬ ಬೆಟ್ಟದಲ್ಲಿ ಕೆಲವು ವಿರಕ್ತ ಯತಿಗಳು ವಾಸಿಸುತ್ತಿದ್ದರು. ಈ ಯತಿಗಳು ಕಾಲಕ್ರಮೇಣ ಕಾರ್ಮೆಲ್ ಧಾರ್ಮಿಕ ಸಭೆಯೊಂದನ್ನು (Carmelite Order) ಸ್ಥಾಪಿಸಿದರು. ಈ ಕಾರ್ಮೆಲ್ ಸಭೆಯ ಸದಸ್ಯರಾದ ಸಂತ ಸೈಮನ್ ಸ್ಟಾಕ್ ಎಂಬುವರಿಗೆ ಮೇರಿ ಮಾತೆಯು ೧೨೫೧ರಲ್ಲಿ ಅನೇಕ ಬಾರಿ ದರ್ಶನ ನೀಡಿ, ಕಂದು ಬಣ್ಣದ ಉತ್ತರಿಕೆಯೊಂದನ್ನು ನೀಡಿ, ಯಾರು ಮೇರಿ ಮಾತೆಯಲ್ಲಿ ವಿಶ್ವಾಸವಿರಿಸಿ ವಿಧೇಯ ಭಕ್ತಿಯಿಂದ ವಿಧಿವತ್ತಾಗಿ ಧರಿಸುತ್ತಾರೋ ಅಂಥವರನ್ನು ಮರಣ ಸಮಯದಲ್ಲಿ ಕಾಪಾಡುವ ಭರವಸೆ ನೀಡಿದರು. ಸಂತ ಸೈಮನ್ ಸ್ಟಾಕ್‌ರವರು ಉತ್ತರಿಕೆಯ ಭಕ್ತಿಯನ್ನು ವಿಶ್ವದ ಎಡೆ ಪ್ರಚುರಪಡಿಸಿದರು.

ಶಿವಮೊಗ್ಗದಲ್ಲಿ ಕಾರ್ಮೆಲ್ ಮಾತೆಯ ಸಭೆಯು ಪ್ರತಿವರ್ಷ ಜುಲೈ ೧೬ರಂದು ತನ್ನ ಪಾಲಕಿಯಾದ ಕಾರ್ಮೆಲ್ ಮಾತೆಯ ಈ ವಾರ್ಷಿಕ ಹಬ್ಬವನ್ನು ವಿಜೃಂಭಣೆಯಿಂದ ತಪ್ಪದೆ ಆಚರಿಸಿಕೊಂಡು ಬಂದಿದೆ. ವರ್ಷಗಳು ಉರುಳಿದಂತೆ ಪವಿತ್ರ ಹೃದಯದ ವಾರ್ಷಿಕ ಹಬ್ಬಕ್ಕಿಂತ ಕಾರ್ಮೆಲ್ ಮಾತೆಯ ಹಬ್ಬವೇ ಹೆಚ್ಚಿನ ಪ್ರಾಶಸ್ತ್ರ ಪಡೆಯಿತು. ಕೇವಲ ಕಾರ್ಮೆಲ್ ಸಭೆಯ ಸದಸ್ಯರಿಂದ ಮಾತ್ರ ಆಚರಿಸಲ್ಪಡುತ್ತಿದ್ದ ಈ ಹಬ್ಬವನ್ನು ಶಿವಮೊಗ್ಗ ಇಡೀ ಕ್ರೈಸ್ತ ಜನತೆಯಲ್ಲದೆ ಅಕ್ರೈಸ್ತಬಾಂಧವರೂ ಕೂಡಾ ಸೇರಿ ಆಚರಿಸತೊಡಗಿದರು. ಇದಕ್ಕೆ ಕೆಲವು ಕಾರಣಗಳು ಇವೆ.
ಪವಿತ್ರ ಹೃದಯ ಪ್ರಧಾನಾಲಯದ ಚರಿತ್ರೆ ಮತ್ತು ಕಾರ್ಮೆಲ್ ಮಾತೆಯ ಭಕ್ತಿ: ಶಿವಮೊಗ್ಗ ಕ್ರೈಸ್ತ ಧರ್ಮಸಭೆಯ ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದಾಗ, ಫಾದರ್ ಶೆವೆಲಿಯರ್ ಎಂಬುವರು ಧರ್ಮಗುರುವಾಗಿ (೧೮೪೭-೧೮೪೯) ಬಂದ ಮೇಲೆ ತುಂಗಾ ನದಿಯ ದಡದ ಮೇಲಿದ್ದ ಹಳೇ ಕ್ರೈಸ್ತ ದೇವಾಲಯವನ್ನು ದುರಸ್ಥಿ ಪಡಿಸಿದರು ಎಂದು ತಿಳಿದು ಬರುತ್ತದೆ. ಅಲ್ಲದೆ ಈ ದೇವಾಲಯವನ್ನು ಮೇರಿ ಮಾತೆಯ ಪವಿತ್ರ ನಾಮಕ್ಕೆ (Holy name of Mary) ಸಮರ್ಪಿಸಲಾಯಿತು ಎಂದು ಹೇಳಲಾಗಿದೆ.
ಈಗಿನ ದೇವಾಲಯದ ಜಾಗವನ್ನು ಕ್ರಿ. ಶ. ೧೮೭೧ರಲ್ಲಿ ಫಾದರ್ ಕ್ಲನರ್‌ರವರು ಶ್ರೀ ಕ್ರಿಸ್ಟೋಫರ್ ಸಿಲ್ಕ್ ಎಂಬ ಆಂಗ್ಲ ಇಂಜಿನಿಯರ್ ಅವರಿಂದ ಖರೀದಿಸಿದ ಬಳಿಕ ಒಂದು ಬೃಹತ್ ದೇವಾಲಯವನ್ನು ಕಟ್ಟುವ ಕೆಲಸವನ್ನು ಕೈಗೆತ್ತಿಕೊಂಡರು. ಆಗಿನ ಮೈಸೂರಿನ ಧರ್ಮಾಧ್ಯಕ್ಷರಾಗಿದ್ದ ಮೊ| ಶೆವಲಿಯರ್ (ಹಿಂದಿನ ಶಿವಮೊಗ್ಗದ ಧರ್ಮಗುರು) ಇವರು ಕ್ರಿ. ಶ. ೧೮೭೫ ರಂದು ಈ ನೂತನ ದೇವಾಲಯವನ್ನು ಯೇಸುವಿನ ಪವಿತ್ರ ಹೃದಯಕ್ಕೆ (Sacred Heart of Jesus) ಸಮರ್ಪಿಸಿ ಪವಿತ್ರೀಕರಿಸಿದರು.
ಜನರಲ್ಲಿ ಮೇರಿ ಮಾತೆಯ ಬಗ್ಗೆ ಹೆಚ್ಚಿನ ಭಕ್ತಿ ಬೆಳೆಸುವ ಹಾಗೂ ಜನಸೇವಾ ಕಾರ್ಯಗಳಲ್ಲಿ ಕೆಲ ಜನರನ್ನು ಒಂದು ಸಂಘಟನೆಯ ಮೂಲಕ ತೊಡಗಿಸುವ ಉzಶದಿಂದ ಕ್ರಿ.ಶ. ೧೮೭೦ರಲ್ಲಿ ಫಾದರ್ ಡಾವಿಯೋರವರು ಶಿವಮೊಗ್ಗ ಧರ್ಮಕೇಂದ್ರದ ಗುರುಗಳಾಗಿದ್ದ ಫಾದರ್ ಕ್ರೈನರ್ ಇವರ ಜೊತೆ ಸಮಾಲೋಚಿಸಿ ಕಾರ್ಮೆಲ್ ಮಾತೆಯ ಸಭೆ (Confraternity of our Lady of Mount Carme) ಎಂಬ ಒಂದು ಭ್ರಾತೃತ್ವದ ಸಂಘವನ್ನು ಸ್ಥಾಪಿಸಿದರು.

ಮುಂದೆ ಫಾದರ್ ಬಾರೆ ಎಂಬುದರು ಕ್ರಿ. ಶ. ೧೮೭೭ರಲ್ಲಿ ಪುನರಚಿಸಿ ಅದಕ್ಕೆ ವಿವಿಧ ನಿಯಮಾವಳಿಗಳನ್ನು ರೂಪಿಸಿದರಲ್ಲದೆ ಅಂದಿನ ಧರ್ಮಾಧ್ಯಕ್ಷರಾಗಿದ್ದ ಶೆವಲಿಯರ್ ಅವರಿಂದ ಫೆಬ್ರವರಿ ೧೮೭೯ರಲ್ಲಿ ಈ ನಿಯಮವಳಿಗಳಿಗೆ ಅನುಮೋದನೆ ಪಡೆದುಕೊಂಡರು.
ಫಾವರ್ ಜೆರ್ವಿಯರ್ ರವರು ಎರಡನೇ ಬಾರಿಗೆ ಶಿವಮೊಗ್ಗಕ್ಕೆ ವರ್ಗವಾಗಿ ಬಂದಾಗ (ಜನವರಿ ೧೮೮೬ ರಿಂದ ಆಗಸ್ಟ್ ೧೮೯೧) . ಈ ಸಭೆಯ ಸದಸ್ಯತ್ವವನ್ನು ಪರಿಷ್ಕರಿಸಿದರು. ಕಾರ್ಮೆಲ್ ಮಾತೆಯ ಸಭೆಯ ವಿವಿಧ ಚಟುವಟಿಕೆಗಳು ೧೯೬೦ರವರೆಗೆ ಅತ್ಯುತ್ಸಾಹದಿಂದ ನಡೆದು ಬಂದವು. ಆ ಬಳಿಕ ಅದರ ನಿಯಮಾವಳಿಗಳ ಪಾಲನೆಗೆ ಹೆಚ್ಚು ಮಹತ್ವ ನೀಡದ ಪ್ರಯುಕ್ತ ಕಾರ್ಮೆಲ್ ಸಭೆಯ ಚಟುವಟಿಕೆಯು ವಾರ್ಷಿಕ ಹಬ್ಬಕ್ಕೆ ಮಾತ್ರ ಸೀಮಿತವಾಯಿತು.
ಶಿವಮೊಗ್ಗ ಕ್ರೈಸ್ತ ಹಿರಿಯರು ಈಗಲೂ ಹೇಳುವಂತೆ ಈ ಶತಮಾನದ ಪ್ರಾರಂಭದಲ್ಲಿ (ಸುಮಾರು ೧೯೧೫ ರಿಂದ ೧೯೨೮) ಧಾರಾಕಾರವಾಗಿ ಸುರಿದ ಮಳೆಯ ಪರಿಣಾಮವಾಗಿ, ಇಡೀ ಶಿವಮೊಗ್ಗ ನಗರವೇ ಮುಳುಗಿಹೋಗುವದರಲ್ಲಿತ್ತು. ಆಗ ಕಾರ್ಮೆಲ್ ಸಭೆಯ ಸದಸ್ಯರು ಜುಲೈ ೧೬ರ ಹಬ್ಬದ ಸಿದ್ದತೆಯಲ್ಲಿ ತೊಡಗಿದ್ದರು. ಜತಿ ಮತ ಭೇದವಿಲ್ಲದೆ ಇಡೀ ಶಿವಮೊಗ್ಗ ನಗರದ ಜನತೆ ಸೃಷ್ಟಿಕರ್ತರ ಮೊರೆ ಹೊಕ್ಕಿತು. ಕ್ರೈಸ್ತರು ಅಂದಿನ ಧರ್ಮಗುರುಗಳ ನೇತೃತ್ವದಲ್ಲಿ ಕಾರ್ಮೆಲ್ ಮಾತೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಉತ್ತರಿಕೆಯೊಂದನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹಳೇ ತುಂಗಾ ಸೇತುವೆಯ ಬಳಿಯ ನೀರಿನಲ್ಲಿ ಬಿಟ್ಟರು. ಹೀಗೆ ಪ್ರಾರ್ಥಿಸಿ ವಾಪಾಸಾದ ಕೆಲನಿಮಿಷಗಳ ಮಳೆ ಕಡಿಮೆಯಾಗಿ, ನೀರು ನಿಧಾನವಾಗಿ ಇಳಿಯಲು ಪ್ರಾರಂಭವಾಯಿತಂತೆ.

ಈ ರೀತಿ ಬೆಳೆದು ಬಂದಂತಹ ಕಾರ್ಮೆಲ್ ಮಾತೆಯ ಭಕ್ತಿಯು, ಶಿವಮೊಗ್ಗದಲ್ಲಿ ಈಗ, ಹಿಂದಿನ ಉತ್ತುಂಗದ ಸ್ಥಿತಿಯಲ್ಲಿ ಇದೆ. ಮೇರಿ ಮಾತೆಯ ಮೇಲೆ ಅಪರಿಮಿತ ಭಕ್ತಿ ಗೌರವವನ್ನು ಇರಿಸಿರುವ ಜನರು ಆಕೆಯ ಬಳಿ ಪ್ರಾರ್ಥಿಸಲು ಬರುತ್ತಿzರೆ. ದಯಾಳು ತಾಯಿಯಾದ ಮೇರಿ ಮಾತೆಯು ಭಕ್ತ ಜನರ ಪ್ರಾರ್ಥನೆಗೆ ಖಂಡಿತ ಸ್ಪಂದಿಸಿ. ದೇವರಲ್ಲಿ ವಿನಂತಿಸಿ, ವರಗಳನ್ನು ನೀಡುತ್ತಿzರೆ. ಈ ಪೂಜ್ಯ ಮಾತೆಯನ್ನು ಸ್ಮರಿಸಲೂ ಬೇಕು ಗೌರವಿಸಲೂ ಬೇಕು.
ರೆ|ಫಾ| ಸ್ಟ್ಯಾನಿ ಡಿಸೋಜ
ಸೇಕ್ರೆಡ್ ಹಾರ್ಟ್ ಪ್ರಧಾನಾಲಯದ ಧರ್ಮಕೇಂದ್ರದ ಗುರುಗಳು
ಶ್ರೇಷ್ಠಗುರುಗಳು, ಶಿವಮೊಗ್ಗ ಧರ್ಮಕ್ಷೇತ್ರ

