ತಾಜಾ ಸುದ್ದಿ

ಹಸುವಿನ ಕೆಚ್ಚಲಿಗೆ ಗಂಭೀರ ಗಾಯ: ಎಫ್ಐಆರ್ ದಾಖಲು

Share Below Link

ಹೊಸನಗರ: ತಾಲೂಕಿನ ತೋಟದ ಕೊಪ್ಪ ಗ್ರಾಮದ ವಿಜಾಪುರ ವಿಜಯ್ ಶೆಟ್ಟಿ  ಎನ್ನುವರಿಗೆ ಸೇರಿದ ಹಸುವಿನ ಕೆಚ್ಚಲಿಗೆ ಗಂಭೀರ ಗಾಯಗಳಾಗಿದ್ದು ಇದು ದುಷ್ಕರ್ಮಿಗಳ ಅಟ್ಟಹಾಸವೋ ಅಥವಾ ತರುಚಿದ ಗಾಯವೋ ಎಂಬ ಕುರಿತು ತನಿಖೆ ಆರಂಭಿಸಲಾಗಿದೆ.
ವಿಜಯ್ ಶೆಟ್ಟಿ  ಅವರು ಎಂದಿನಂತೆ ತಮ್ಮ ಜಾನುವಾರುಗಳನ್ನು ಮೇಯಿಸಲಿಕ್ಕೆ ಬಿಟ್ಟಿರುತ್ತಾರೆ. ಆದರೆ ಸಂಜೆ ಮನೆಗೆ ಹಿಂದಿರುವಾಗ ಹಸುವಿನ ಕೆಚ್ಚಲು ಕೊಯ್ದಿರುವ ರೀತಿಯಲ್ಲಿ ಕಂಡ ಅಕ್ಕ ಪಕ್ಕದವರು ವಿಜಯ್ ಅವರಿಗೆ ಮಾಹಿತಿಯನ್ನು ನೀಡಿರುತ್ತಾರೆ.
ತಕ್ಷಣವೇ ಸಂಬಂಧಪಟ್ಟ ಪಶು ವೈದ್ಯರನ್ನು ಕರೆಸಿ ಪ್ರಾರ್ಥಮಿಕ ಚಿಕಿತ್ಸೆಯನ್ನು ನೀಡಿ ನಂತರ ಹೊಸನಗರ ಪೊಲೀಸ್ ಠಾಣೆಯಲ್ಲಿ ಅನುಮಾನ ಬಂದ ವ್ಯಕ್ತಿಯ ವಿರುದ್ಧ ದೂರನ್ನು ನೀಡಿರುತ್ತಾರೆ. ಇದರನ್ವಯ  ಹೊಸನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿರುತ್ತದೆ.
ಆದರೆ ಸ್ಥಳೀಯರು ಹೇಳುವ ಮಾಹಿತಿ ಪ್ರಕಾರ ಮಲೆನಾಡಿನಲ್ಲಿ ಹಸುಗಳನ್ನು ಮೇಯಿಸಲಿಕ್ಕೆ ಬಿಡುವುದು ಸರ್ವೇಸಾಮಾನ್ಯ ಮಲೆನಾಡಿನಲ್ಲಿ ಕಾಡು  ಅವಲಂಬಿತ ಪ್ರದೇಶವಾಗಿರುವುದರಿಂದ ಬಿದುರುಗಳು. ಕುರುಚಲು ಮುಳ್ಳಿನ ಗಿಡಗಳು ಯಥೇಚ್ಛವಾಗಿ ಇರುತ್ತವೆ. ಹಾಗೆಯೇ ರೈತರು ತಮ್ಮ ಹೊಲವನ್ನು ರಕ್ಷಿಸಿಕೊಳ್ಳಲು ಮುಳ್ಳು ತಂತಿಯ ಬೇಲಿಯನ್ನು ಕೂಡ ಮಾಡಿರುತ್ತಾರೆ. ಜಾನುವಾರುಗಳು ಇವುಗಳ ಮಧ್ಯೆ ನುಸಳುವಾಗ ಎಲ್ಲಾದರೂ ತರ್ಚಿಕೊಂಡಿರಬಹುದು ಎಂದು ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಯಾರಾದರೂ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಕೆಚ್ಚಲು ಕೊಯ್ದಿದ್ದಾರೋ ಅಥವಾ ಮುಳ್ಳು ಅಥವಾ ತಂತಿ ಬೇಲಿಗೆ ತಗುಲಿ ತರಚಿರುವುದೋ? ಎಂಬ ಖಚಿತ ಮಾಹಿತಿ ತನಿಕೆಯಿಂದಷ್ಟೇ ಬೆಳಕಿಗೆ ಬರಬೇಕಾಗಿದೆ.
ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ದುಷ್ಕರ್ಮಿಗಳು ಹಸುವಿನ ಕೆಚ್ಚಲಿಗೆ ಅಮಾನುಷವಾಗಿ ಮಚ್ಚಿನಿಂದ ಹೊಡೆದು ಗಾಯಗೊಳಿಸಿರುವ ಘಟನೆಗಳು ಹೆಚ್ಚಾಗುತ್ತಿದ್ದು, ರೈತರು ಮತ್ತು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.