ಜಿಲ್ಲಾ ಸುದ್ದಿತಾಜಾ ಸುದ್ದಿ

ಸಂಭ್ರಮದ ಸಂಕ್ರಾಂತಿ ಹಬ್ಬದ ಆಚರಣೆ…

Share Below Link

ಹರಿಹರ: ಕ್ಯಾಲೆಂಡರ್ ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯನ್ನು ನಗರ ಸೇರಿದಂತೆ ಜಿಯಾದ್ಯಂತ ಭಕ್ತಿಭಾವ ಹಾಗೂ ಸಡಗರದಿಂದ ಆಚರಿಸಲಾಯಿತು. ಸಂಕ್ರಾಂತಿ ಅಂಗವಾಗಿ ಮುಂಜಾನೆಯೇ ತುಂಗಭದ್ರಾ ನದಿ ತೀರದಲ್ಲಿ ಸಾವಿರಾರು ಭಕ್ತರು ಪುಣ್ಯಸ್ನಾನ ಮಾಡಿ ಸೂರ್ಯದೇವನಿಗೆ ನಮಿಸಿ ಶುಭ ಹಾರೈಸಿದರು.
ಸೂರ್ಯನು ಧನು ರಾಶಿ ಯಿಂದ ಮಕರ ರಾಶಿಗೆ ಪ್ರವೇಶಿ ಸುವ ಈ ಪವಿತ್ರ ಸಂದರ್ಭದಲ್ಲಿ ನದಿಸ್ನಾನ ಶ್ರೇಷ್ಠ ಎಂಬ ನಂಬಿಕೆ ಯಂತೆ, ದಾವಣಗೆರೆ, ಹಾವೇರಿ, ವಿಜಯನಗರ ಜಿಗಳೂ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ದಕ್ಷಿಣದ ಕಾಶಿ ಎಂದೇ ಪ್ರಸಿದ್ಧಿಯಲ್ಲಿರುವ ಐತಿ ಹಾಸಿಕ ಶ್ರೀ ಹರಿಹರೇಶ್ವರ ದೇವ ಸ್ಥಾನದ ಹಿಂಭಾಗದಲ್ಲಿರುವ ತುಂಗ ಭದ್ರಾ ನದಿ ತೀರದಲ್ಲಿ ಪುಣ್ಯಸ್ನಾನ ಮಾಡಿದರು.
ಪುಣ್ಯಸ್ನಾನದ ಬಳಿಕ ನದಿ ತೀರದಲ್ಲಿ ನೆರಳನ್ನು ಮಾಡಿಕೊಂಡು ಕುಟುಂಬ ಸಮೇತ ಮನೆಯಿಂದ ತಂದಿದ್ದ ಜೋಳದ ಖಡಕ್ ರೊಟ್ಟಿ, ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಚಪಾತಿ, ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ಮೊಳಕೆ ಕಾಳಿನ ಪಲ್ಯೆ, ಎಣ್ಣೆಗಾಯಿ, ಹೆಸರು ಕಾಳು ಪಲ್ಯೆ, ಪುಂಡಿಪಲ್ಯೆ ಸೇರಿದಂತೆ ವಿವಿಧ ಖಾದ್ಯಗಳಿಂದ ಕೂಡಿದ ಭೂರಿ ಭೋಜನವನ್ನು ಆಸ್ವಾದಿಸಿದರು.
ಎಳ್ಳು ಬೆಲ್ಲ ಹಂಚಿ ಒಳ್ಳೊಳ್ಳೆ ಮಾತನಾಡಿ ಎಂಬ ಸಂದೇಶವನ್ನು ಸಾರುತ್ತಾ ಪರಸ್ಪರ ಎಳ್ಳುಬೆಲ್ಲ ವಿನಿಮಯ ಮಾಡಿಕೊಂಡು ಶುಭಾಶಯಗಳನ್ನು ಕೋರಿದರು.
ನಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು ಶ್ರೀ ಅಯ್ಯಪ್ಪಸ್ವಾಮಿ, ಶ್ರೀ ಹರಿಹರೇಶ್ವರ, ೧೦೮ ಲಿಂಗೇಶ್ವರ, ಶ್ರೀ ರಾಘವೇಂದ್ರಸ್ವಾಮಿ, ಕುಂಭಳೇಶ್ವರ ಸ್ವಾಮಿ, ಕಂಗೇಳೇಶ್ವರ, ಆಂಜನೇಯ ಸ್ವಾಮಿ ಹಾಗೂ ಶ್ರೀ ವೀರಭದ್ರೇಶ್ವರ ದೇವರ ದರ್ಶನ ಪಡೆದು ಹಬ್ಬ ಶ್ರದ್ಧಾಭಕ್ತಿಯಿಂದ ಆಚರಿಸಿದರು.