ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿದೇಶಶಿಕ್ಷಣ

ಯುಪಿಎಸ್ಸಿಯಲ್ಲಿ ರ್ಯಾಂಕ್ ಪಡೆದ ಮೇಘನಾ ಅವರಿಗೆ  ಜಿಲ್ಲಾ ಯುವ ಜೆಡಿಎಸ್ ನಿಂದ ಆತ್ಮೀಯ ಸನ್ಮಾನ 

Share Below Link

ಶಿವಮೊಗ್ಗ (ಹೊಸ ನಾವಿಕ): ಇಲ್ಲಿನ ಬಸವೇಶ್ವರ ನಗರದ ನಿವಾಸಿ ಹಾಗೂ ವಕೀಲರಾದ  ಮೋಹನ್ ಕುಮಾರ್  ಹಾಗೂ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಶ್ರೀಮತಿ ವತ್ಸಲ ಅವರ ಸುಪುತ್ರಿ ಕು. ಮೇಘನಾ ಅವರು ಯೂನಿಯನ್ ಪಬ್ಲಿಕ್ ಸರ್ವೀಸ್‌ ಕಮಿಷನ್‌(UPSC) ಪರೀಕ್ಷೆಯಲ್ಲಿ 425ನೇ ರ್ಯಾಂಕ್ ಗಳಿಸುವ ಮೂಲಕ ಪೋಷಕರಿಗೆ ಮತ್ತು ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಪ್ರತಿಭಾವಂತೆ ಮೇಘನಾ ಅವರ ಈ ಸಾಧನೆಯನ್ನು ಗುರುತಿಸಿ ಜೆಡಿಎಸ್ ವತಿಯಿಂದ ಅವರ ಮನೆ ಬಾಗಿಲಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದಾ ಪೂರ್ಯನಾಯ್ಕ್ ಹಾಗೂ ಭದ್ರಾವತಿಯ ಜೆಡಿಎಸ್ ನಾಯಕರಾದ ಶ್ರೀಮತಿ ಶಾರದಾ ಅಪ್ಪಾಜಿ ಅವರ ನೇತೃತ್ವದಲ್ಲಿ ಸನ್ಮಾನ ಹಮ್ಮಿಕೊಳ್ಳಲಾಗಿತ್ತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮೇಘನಾ ಅವರು, ಯುಪಿಎಸ್ಸಿ ಪರೀಕ್ಷೆಯಲ್ಲಿ ಐಚ್ಛಿಕ ವಿಷಯವನ್ನಾಗಿ ಕನ್ನಡ ಭಾಷೆಯನ್ನು ತೆಗೆದುಕೊಂಡಿದ್ದು ಕೂಡ ನನಗೆ ಸಹಕಾರಿಯಾಯಿತು. facebook, whatsapp, twitterಗಳ ಬಳಕೆಯಿಂದ ದೂರ ಉಳಿದು ಪ್ರತಿ ದಿನ 8 ರಿಂದ 10 ಗಂಟೆಗಳ ಸತತ ಅಭ್ಯಾಸವನ್ನು ಮಾಡುತ್ತಿದ್ದೆ, ನನ್ನ ಯಶಸ್ಸಿಗೆ ಪೋಷಕರು ಸಹಕಾರ ಅತ್ಯಂತ ಅಮೂಲ್ಯವಾಗಿತ್ತು ಎಂದರಲ್ಲದೆ, ಮುಂದಿನ  ನನ್ನ ವೃತ್ತಿ ಜೀವನದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ನನ್ನ ಪೋಷಕರು ಹಾಗೂ ಜಿಲ್ಲೆಗೆ ಕೀರ್ತಿ ತರಲು ಪ್ರಯತ್ನಿಸುವೆ ಎಂದರು. 

ವಿವಿಧ ಸಂಘಸಂಸ್ಥೆಗಳ ಪ್ರಮುಖರು, ಜನಪ್ರತಿನಿಧಿಗಳು ನನ್ನ ಸಾಧನೆಯನ್ನು ಗುರುತಿಸಿ, ನಮ್ಮ ಮನೆ ಬಾಗಿಲಿಗೆ ಬಂದು ನನ್ನನ್ನು ಸನ್ಮಾನಿಸುತ್ತಿರುವುದು ಅತ್ಯಂತ ಸಂತಸದ ವಿಷಯವಾಗಿದೆ. ತಮ್ಮೆಲ್ಲರಿಗೂ ನನ್ನ ಹಾಗೂ ನನ್ನ ಕುಟುಂಬದ ಪರವಾಗಿ ಅನಂತಾನಂತ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಯುವ ಜನತಾ ದಳದ ಅಧ್ಯಕ್ಷ ಮಧುಕುಮಾರ್, ಜೆಡಿಎಸ್ ರಾಜ್ಯ ಕಾರ್ಯದರ್ಶಿ ರಾಕೇಶ್ ಡಿಸೋಜಾ, ಜಿಲ್ಲಾ ಯುವ ಜನತಾ ದಳದ ಕಾರ್ಯಾಧ್ಯಕ್ಷ ಎಸ್. ಎಲ್. ನಿಖಿಲ್ ಮತ್ತು ಕಾರ್ಯದರ್ಶಿ ಪ್ರೇಮ್ ಕುಮಾರ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದು ಪ್ರತಿಭಾನ್ವಿತ ಎಂ ಮೇಘನಾ ಅವರನ್ನು ಗೌರವಿಸಿ ಅಭಿನಂದಿಸಿದರು.