ನಾವೆಲ್ಲ ಒಂದೇ ತಾಯಿಯ ಮಕ್ಕಳೆಂಬ ಭಾವನೆ ಬಂದಾಗ ಮಾತ್ರ ಈ ದೇಶ ಗೆಲ್ಲಲು ಸಾಧ್ಯ: ಶಿಕ್ಷಣ ಸಚಿವ ಮಧು ಬಂಗಾರಪ್ಪ
ಶಿವಮೊಗ್ಗ: ಇದು ನನ್ನ ದೇಶ ಅಲ್ಲ ನಮ್ಮ ದೇಶ ಎಂಬ ಭಾವನೆ ಮಕ್ಕಳಲ್ಲಿ ಬರಬೇಕು. ನಾವೆಲ್ಲರೂ ಒಂದೇ ತಾಯಿ ಮಕ್ಕಳು ಎಂಬ ಭಾವನೆ ಬಂದಾಗ ಮಾತ್ರ ಈ ದೇಶ ಗೆಲ್ಲುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಎನ್‌ಎಸ್‌ಯುಐ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಮ್ಮೂರ ಹೆಮ್ಮೆ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಪುಸ್ತಕ ವಿತರಿಸಿ ಮಾತನಾಡಿದ ಸಚಿವರು, ಮಕ್ಕಳು ದೇವರ ಸಮಾನ. ಅವರ ಮುಂದೆ ಯಾವಾಗಲೂ ಸತ್ಯವನ್ನೇ ನುಡಿಯ ಬೇಕು. ನಮ್ಮ ಪಕ್ಷ ಮಾಡಿದ್ದೆಲ್ಲಾ ಸರಿ ಎಂದು ನಾನು ಹೇಳಬಹುದು. ಆದರೆ ನಿಮಗೆ ಅದನ್ನು ವಿಮರ್ಶೆ ಮಾಡುವ ಶಕ್ತಿ ಬೆಳೆಯಬೇಕು. ಕಾಂಗ್ರೆಸ್ ದೇಶವನ್ನು ಜೋಡಣೆ ಮಾಡುವ ಕೆಲಸ ಮಾಡುತ್ತದೆ. ಒಂದೇ ತಾಯಿಯ ಮಕ್ಕಳು ಎಂಬ ಭಾವನೆಯನ್ನು ನಿರ್ಮಾಣ ಮಾಡುತ್ತದೆ. ನಮ್ಮ ನಾಯಕ ರಾಹುಲ್ ಗಾಂಧಿ ಕೂಡ ದೇಶ ಒಗ್ಗೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹೆಜ್ಜೆ ಹಾಕಿ ಸಂಚಲನ ಮೂಡಿಸಿದ್ದಾರೆ. ಅವರ ಕಾರ್ಯಕ್ಕೆ ವ್ಯಾಪಕ ಬೆಂಬಲವನ್ನು ಕೂಡ ದೇಶವಾಸಿಗಳು ನೀಡಿದ್ದಾರೆ. ಎಂದರು.
ನ್ಯಾಯಾಲಯ ಕೂಡ ಅವರಿಗೆ ಜಮೀನು ನೀಡಿ ಸಂವಿಧಾನ ಎತ್ತಿ ಹಿಡಿದಿದೆ. ನ್ಯಾಯ ಗೆದ್ದಾಗ ಮಾತ್ರ ದೇಶ ಒಂದಾಗುತ್ತದೆ. ಪ್ರತಿಭೆಯನ್ನು ಗುರುತಿಸುವ ಕೆಲಸ ಎನ್‌ಎಸ್‌ಯುಐ ಮಾಡಿದೆ. ಪಕ್ಷ ಹಾಗೂ ಸರ್ಕಾರ ಅವರಿಗೆ ಎಲ್ಲಾ ಸಹಕಾರ ನೀಡುತ್ತದೆ ಎಂದರು.
ಎನ್‌ಎಸ್‌ಯುಐ ರಾಷ್ಟ್ರೀಯ ಅಧ್ಯಕ್ಷ ಕೀರ್ತಿ ಗಣೇಶ್ ಮಾತನಾಡಿ, ರಾಷ್ಟ್ರೀಯ ಭಾವೈಕ್ಯತೆಗೆ ಎನ್‌ಎಸ್‌ಯುಐ ಒತ್ತು ನೀಡುತ್ತದೆ. ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳಲ್ಲಿ ಒಗ್ಗಟ್ಟು ಮೂಡಿಸುವ ಪಠ್ಯಗಳನ್ನು ಅಳವಡಿಸಿದೆ. ವಿದ್ಯಾರ್ಥಿಗಳಲ್ಲಿ ತಮ್ಮ ಸುತ್ತ ಅನ್ಯಾಯವಾದಾಗ ಪ್ರಶ್ನಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ಎನ್‌ಎಸ್‌ಯುಐ ರಾಷ್ಟ್ರ ಮಟ್ಟದಲ್ಲಿ ಜುಡೇಗಾ ವಿದ್ಯಾರ್ಥಿ ಜೀತೇಗಾ ಭಾರತ್ ಕಾರ್ಯಕ್ರಮ ಹಮ್ಮಿಕೊಂಡು ಇಡೀ ದೇಶದ ವಿದ್ಯಾರ್ಥಿಗಳೆಲ್ಲ ಒಂದೇ ಎಂಬ ಕಾರ್ಯಕ್ರಮವನ್ನು ರೂಪಿಸಿದೆ ಎಂದರು.
ಈ ಸಂದರ್ಭದಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಕೋರ್ಸ್‌ಗಳಲ್ಲಿ ರ್‍ಯಾಂಕ್ ಗಳಿಸಿದ ಹಾಗೂ ಯುಪಿಎಸ್‌ಸಿ, ಕೆ.ಎ.ಎಸ್, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದೆ ಜಿಲ್ಲೆಯ ಪ್ರತಿಭಾನ್ವಿತರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಮಾಜಿ ಶಾಸಕ ಆರ್. ಪ್ರಸನ್ನ ಕುಮಾರ್, ಪ್ರಮುಖರಾದ ಎನ್. ರಮೇಶ್, ಪಲ್ಲವಿ, ಯಮುನಾ ರಂಗೇಗೌಡ, ವಿಜಯಕುಮಾರ್, ಗೋಪಾಲಕೃಷ್ಣ, ಗಣೇಶ್, ಹರ್ಷಿತ್, ವಿಜಯ್, ಮಧುಸೂದನ್, ಚಿನ್ನಪ್ಪ, ಚೇತನ್ ಮತ್ತಿತರರಿದ್ದರು.