ದಾಸರು ನೀಡಿದ ಸಾಹಿತ್ಯ ರತ್ನವನ್ನು ನಾವೆಲ್ಲ ಹಂಚುವ ಕೆಲಸ ಮಾಡುತ್ತಿದ್ದೇವೆ..
ಶಿವಮೊಗ್ಗ:- ದಾಸರು ನೀಡಿದ ಸಾಹಿತ್ಯ ರತ್ನವನ್ನು ನಾವುಗಳೆಲ್ಲಾ ಹಂಚುವ ಕೆಲಸ ಮಾಡುತ್ತಿದ್ದೇವೆ ಎಂದು ಸಂಗೀತ ಸಂಯೋಜಕರು, ಹರಿದಾಸ ಸಂಗೀತ ರತ್ನ ಪುತ್ತೂರು ನರಸಿಂಹ ನಾಯಕ್ ಹೇಳಿದರು.
ಇಂದು ನಗರದ ಸಾಗರ ರಸ್ತೆಯ ಪುಟ್ಟರಾಜ ಗವಾಯಿಗಳ ಸಂಗೀತ ವಿದ್ಯಾಲಯದಲ್ಲಿ ಸಂಗೀತ್ ಸಮರ್ಪಣ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಸುಗಮ ಸಂಗೀತ ಹಾಗೂ ದಾಸರ ಪದಗಳ ಕಲಿಕಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿಶ್ವದಾದ್ಯಂತ ದಾಸ ಸಾಹಿತ್ಯದ ಕಂಪನ್ನು ಪಸರಿಸುತ್ತಿ ರುವ ನಮ್ಮ ನಾಡಿನ ಪ್ರಖ್ಯಾತ ಗಾಯಕರನ್ನು ನಾವೆಲ್ಲರೂ ಶ್ಲಾಘಿಸಬೇಕಿದೆ. ದಾಸರ ಭಕ್ತರಾದ ನಾವುಗಳು, ಪರಮಾತ್ಮನನ್ನು, ದಾಸರನ್ನು, ಗುರುಗಳನ್ನು ಪ್ರೀತಿಸುತ್ತೇವೆ, ಗೌರವಿಸುತ್ತೇವೆ. ದಾಸರು ಎಂದು ಹೇಳಿದರೆ ದೀಕ್ಷೆ ಪಡೆದವರಾಗಿದ್ದು, ಅವರ ಅನುಯಾಯಿಗಳಾಗಿ ನಾವಿದ್ದೇವೆ. ಆಧ್ಯಾತ್ಮದ ಚಿಂತನೆಯಲ್ಲಿ ಪರಮಾತ್ಮ ನನ್ನು ಕಾಣುತ್ತೇವೆ. ವಚನಕಾರರು, ಶರಣರು, ಮಧ್ವಾಚಾರ್ಯರು ತೋರಿದ ದಾರಿಯಲ್ಲಿ, ಭಗವಂತನನ್ನು ಕಾಣುವ ದಾರಿಯಲ್ಲಿ ದಾಸರ ಪದಗಳು ಸೃಷ್ಟಿಯಾಗಿವೆ ಎಂದು ಹೇಳಿದರು.
ಸುಲಭವಾದ ದಾಸ ಸಾಹಿತ್ಯ ಎಲ್ಲರಿಗೂ ವಿಚಾರಗಳನ್ನು ಹಂಚಿಕೊಳ್ಳಲು ಸಹಕಾರಿಯಾಗಿದ್ದು, ಪ್ರಸ್ತುತ ೨೮೦ ದಾಸರು ಇಂದು ಇದ್ದಾರೆ. ದಾಸರ ಪದಗಳು ಹೇಗೆ, ಏಕೆ ಬಂತು ಎಂಬುದು ಕೂಡ ಮುಖ್ಯವಾಗುತ್ತದೆ. ನಾವು ಹೇಗೆ ಬದುಕಬೇಕು ಎಂಬುದು ದಾಸ ಸಾಹಿತ್ಯದಲ್ಲಿದೆ. ನಮ್ಮ ಒಳ ಅರ್ಥ, ಹೊರ ಅರ್ಥ, ಗೂಢಾರ್ಥಗಳನ್ನು ತಿಳಿಸುವುದೇ ದಾಸ ಸಾಹಿತ್ಯ ಹಾಗೂ ದಾಸ ಪದಗಳ ಮೂಲ ಉದ್ದೇಶವಾಗಿದ್ದು ಎಂದರು.
ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಾಡಿನ ಹಿರಿಯ ತಬಲ ವಾದಕ ಪಂ. ತುಕರಾಮ್ ರಂಗಧೋಳ್, ಎಲ್ಲರೂ ಒಂದಾಗಿ ನಮ್ಮ ಮನಸ್ಸನ್ನು ಪ್ರಥಮ ಭಾವ ಶುದ್ಧ ರಾಗ ಹಾಡಿದಾಗ ಬ್ರಹ್ಮರಸ, ಬ್ರಹ್ಮ ರಾಗ ತಿಳಿಯಲು ಸಹಕಾರಿಯಾಗುತ್ತದೆ. ನಮ್ಮ ಜನ್ಮ ಸಾರ್ಥಕಗೊಳಿಸಿಕೊಳ್ಳಲು ಈ ಭಕ್ತಿ ಮಾರ್ಗ ಸಹಕಾರಿ ಎಂದರು.
ಆಧ್ಯಾತ್ಮ ಚಿಂತಕರಾದ ಶಬರೀಶ್ ಕಣ್ಣನ್ ಉಪಸ್ಥಿತರಿದ್ದರು. ಅಧ್ಯಕ್ಷತೆ ಯನ್ನು ಸಂಗೀತ್ ಸಮರ್ಪಣ್ ಟ್ರಸ್ಟ್ ಅಧ್ಯಕ್ಷೆ ಸುರೇಖಾ ಹೆಗಡೆ ಉಪಸ್ಥಿತರಿದ್ದರು. ಆರಂಭದಲ್ಲಿ ವಿನಯ್ ಸ್ವಾಗತ ಕೋರಿದರು.