ಐತಿಹಾಸಿಕ ಪ್ರಸಿದ್ಧ ಚಂದ್ರಗುತ್ತಿ ದೇವಳಕ್ಕೆ ಸೂಕ್ತ ಭದ್ರತೆಗೆ ಆಗ್ರಹಿಸಿ ಸರ್ಕಾರಕ್ಕೆ ಮನವಿ
ಶಿಕಾರಿಪುರ: ಇತಿಹಾಸ ಪ್ರಸಿದ್ದ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ನಡೆದ ಕಳ್ಳತನ ಕೃತ್ಯದಲ್ಲಿ ಪಾಲ್ಗೊಂಡ ಆರೋಪಿ ಗಳನ್ನು ಕೂಡಲೇ ಪತ್ತೆಹಚ್ಚಿ ಕಠಿಣ ಕಾನೂನು ಕ್ರಮದ ಜತೆಗೆ ದೇವಸ್ಥಾನಕ್ಕೆ ಬಿಗಿ ಬಂದೋಬಸ್ತ್ ಕಲ್ಪಿಸುವಂತೆ ಇಲ್ಲಿನ ದೇವಿಯ ಭಕ್ತ ಸಮೂಹ ಆಗ್ರಹಿಸಿದೆ.
ಪಟ್ಟಣದ ತಾಲೂಕು ಕಚೇರಿ ಮುಂಭಾಗ ಪುರಾಣ ಪ್ರಸಿದ್ದ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಯತ್ನ ಸಹಿತ ಗರ್ಭಗುಡಿಗೆ ಅಕ್ರಮವಾಗಿ ಪ್ರವೇಶಿಸಿ ದೇವಿಯ ಮೂರ್ತಿಯನ್ನು ಕಿತ್ತೆಸೆದು ಪೂಜಾ ಸಾಮಗ್ರಿಗಳನ್ನು ಛಿದ್ರಗೊಳಿಸಿ ದೇವಾಲಯವನ್ನು ಅಪವಿತ್ರ ಗೊಳಿಸಿದ ಕೃತ್ಯ ಖಂಡಿಸಿ ಇಲ್ಲಿನ ಚಂದ್ರಗುತ್ತಿ ರೇಣುಕಾಂಬ ಭಕ್ತ ವೃಂದದ ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಬಿ.ಸಿ ವೇಣುಗೋಪಾಲ್ ಅವರು ಮಾತನಾಡಿ, ಚಂದ್ರಗುತ್ತಿಯ ಇತಿಹಾಸ ಪ್ರಸಿದ್ದ ಶ್ರೀ ರೇಣುಕಾಂಬ ದೇವಸ್ಥಾನ ಸಮಿತಿ ಮುಜರಾಯಿ ವ್ಯಾಪ್ತಿಗೊಳಪಟ್ಟಿದ್ದು ನಾಡಿನ ಮೂಲೆಮೂಲೆಯಲ್ಲಿ ಅಪಾರ ಭಕ್ತ ವೃಂದವನ್ನು ಹೊಂದಿರುವ ದೇವಸ್ಥಾನದಲ್ಲಿ ಇದೇ ಪ್ರಥಮ ಬಾರಿಗೆ ಕಳ್ಳರು ಅಕ್ರಮವಾಗಿ ದೇವಾಲಯವನ್ನು ಪ್ರವೇಶಿಸಿ ದೇವಿಯ ಮೂರ್ತಿಯನ್ನು ಕಿತ್ತೆಸೆದು ಪೂಜಾ ಸಾಮಗ್ರಿಗಳನ್ನು ಛಿದ್ರ ಗೊಳಿಸಿ ದೇವಾಲಯವನ್ನು ಅಪವಿತ್ರಗೊಳಿಸಿದ್ದಾರೆ. ನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಧಾವಿಸುವ ಭಕ್ತ ವೃಂದಕ್ಕೆ ಕೃತ್ಯದಿಂದ ಧಾರ್ಮಿಕ ಭಾವನೆಗೆ ದಕ್ಕೆಯಾಗಿ ಭಯ ಆತಂಕಕ್ಕೆ ಕಾರಣವಾಗಿದೆ ಎಂದರು.
ನಾಡಿನಲ್ಲಿಯೇ ಅತ್ಯಂತ ಪ್ರಸಿದ್ದ ವಾಗಿ ಕೋಟ್ಯಾಂತರ ಆದಾಯ ವನ್ನು ಹೊಂದಿರುವ ದೇವಾಲಯಕ್ಕೆ ಸೂಕ್ತ ಭದ್ರತೆಯನ್ನು ಕಲ್ಪಿಸುವಲ್ಲಿ ಇಲಾಖೆ ವಿಫಲವಾಗಿದ್ದು ಘಟನೆಗೆ ನೇರ ಕಾರಣವಾಗಿದೆ ಎಂದು ಆರೋಪಿಸಿದ ಅವರು, ಈ ಕೂಡಲೇ ದೇವಾಲಯಕ್ಕೆ ಸೂಕ್ತ ಭದ್ರತೆ ಜತೆಗೆ ಘಟನೆಗೆ ಕಾರಣಕರ್ತರಾದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಘಟನೆ ಪುನರಾವರ್ತನೆಯಾಗದ ರೀತಿಯಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳುವಂತೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಭಕ್ತ ಜೋಗಪ್ಪ ಸೇವಾ ಸಮಿತಿ ಅಧ್ಯಕ್ಷ ಚೌಟಗಿ ಪರಶುರಾಮ, ಮೋಹನ ಚೌಟಗಿ, ತ್ಯಾಗರ್ತಿ ರವಿ, ಗುಡುದಯ್ಯ, ಮಾರುತಿ, ಬಡಗಿ ಪಾಲಾಕ್ಷಪ್ಪ, ಅಜಯ್, ಹರೀಶ್, ಸುದೀಂದ್ರ, ರಮೇಶ್, ಮಲ್ಲಪ್ಪ, ಗಿಡ್ಡಪ್ಪ ಹೂಗಾರ್, ಪ್ರಶಾಂತ್ ಮತ್ತಿತರರು ಹಾಜರಿದ್ದರು.