ತಾಜಾ ಸುದ್ದಿ

ಇಂದು ಮನೆ ಸೋರುತ್ತಿಲ್ಲ, ಮನಸ್ಸು ಸೋರುತ್ತಿವೆ…!

Share Below Link

ನೆನಪುಗಳ ಪುಟ ತಿರುವಿದರೆ ಅಂದು ಹಂಚಿನ ಮನೆಗಳ ಮಾಳಿಗೆಯಿಂದ ಮಳೆಹನಿಗಳು ಜಿನುಗುತ್ತಿದ್ದವು. ಆ ಜಿನುಗುವ ಹನಿಯನ್ನು ಹಿಡಿಯಲು ಮನೆಯವರೆಲ್ಲ ಪಾತ್ರೆಗಳನ್ನು ಹಿಡಿದು ಓಡುತ್ತಿದ್ದರು.
ಅದೆಂಥ ಸಂಭ್ರಮ! ಅಂದು ಮನೆಯ ಛಾವಣಿ ಸೋರುತ್ತಿತ್ತೇ ಹೊರತು, ಮನುಷ್ಯನ ಮನಸ್ಸುಗಳಲ್ಲ. ಬಡತನದ ಹರಿದ ಚಾಪೆಯ ಮೇಲೆ ಹತ್ತು ಜೀವಗಳು ಅಪ್ಪಿಕೊಂಡು ಮಲಗುತ್ತಿದ್ದ ಆ ದಿನಗಳಲ್ಲಿ ಬಾಂಧವ್ಯದ ಹಸಿವಿರಲಿಲ್ಲ. ಆದರೆ ಇಂದು? ಆಕಾಶಕ್ಕೆ ಮುತ್ತಿಡುವ ಕಾಂಕ್ರೀಟ್ ಅರಮನೆಗಳಿವೆ, ಮಳೆಹನಿ ಇಳಿಯದ ಭದ್ರವಾದ ಛಾವಣಿಗಳಿವೆ. ಆದರೆ ದುರಂತವೆಂದರೆ, ಇಂದು ಮನೆ ಸೋರು ತ್ತಿಲ್ಲ, ಮನುಷ್ಯನ ಮನಸ್ಸುಗಳು ಸೋರು ತ್ತಿವೆ. ಪ್ರೀತಿ-ವಿಶ್ವಾಸದ ಬಿರುಕುಗಳಿಂದ ಅಸೂಯೆ ಮತ್ತು ಒಂಟಿತನ ಸುರಿಯುತ್ತಿದೆ.
ಇಂದಿನ ಮನೆಗಳಲ್ಲಿ ಗೋಡೆಗಳು ಬಲವಾಗಿವೆ. ಆದರೆ ಆ ಗೋಡೆಗಳ ನಡುವೆ ಹರಿಯಬೇಕಾದ ಮಮತೆಯ ಮಾತುಗಳು ಮನಕ್ಕೆ ಶರಣಾಗಿವೆ. ಅಂದು ಎರಡು ಕೋಣೆಯ ಮನೆಯಲ್ಲಿ ಇಡೀ ಕುಟುಂಬವೇ ಹಬ್ಬದಂತೆ ಬಾಳುತ್ತಿತ್ತು. ಇಂದು ಪ್ರತಿಯೊಬ್ಬರಿಗೂ ಪ್ರತ್ಯೇಕ ಕೋಣೆಗಳಿವೆ, ಪ್ರತ್ಯೇಕ ಪ್ರಪಂಚಗಳಿವೆ. ಮನೆಯ ವಿಸ್ತೀರ್ಣ ಹೆಚ್ಚಾದಂತೆ ಮನುಷ್ಯನ ಮನಸ್ಸು ಸಂಕುಚಿತಗೊಳ್ಳುತ್ತಿದೆ. ಅಕ್ಕಪಕ್ಕದ ಮನೆಯವರ ಮಾತಿರಲಿ, ಒಂದೇ ಮನೆಯಲ್ಲಿರುವವರ ನಡುವೆ ಅಂತರದ ಕಂದಕ ನಿರ್ಮಾಣವಾಗಿದೆ. ನಮ್ಮ ಖಾಸಗಿತನದ ವ್ಯಾಮೋಹದಲ್ಲಿ ನಾವು ಪ್ರೀತಿಯ ಪಿಸುಮಾತುಗಳನ್ನು ಕಳೆದುಕೊಳ್ಳುತ್ತಿದ್ದೇವೆ.
ಕಾಲ ಬದಲಾದಂತೆ ಮನುಷ್ಯನ ಯೋಗ್ಯತೆಯನ್ನು ಅವನ ಗುಣದಿಂದಲ್ಲ, ಅವನ ಬ್ಯಾಂಕ್ ಬ್ಯಾಲೆನ್ಸ್‌ನಿಂದ ಅಳೆಯ ಲಾಗುತ್ತಿದೆ. ಸಂಬಂಧಗಳಿಗಿಂತಲೂ ಸಂಚಯಿಸಿದ ಆಸ್ತಿಗೆ ಬೆಲೆ ಹೆಚ್ಚಾಗಿದೆ. ಹಣವಿದ್ದವನೇ ಕುಲವಂತ ಎಂಬ ಭ್ರಮೆ ಸಮಾಜವನ್ನು ಆವರಿಸಿದೆ. ಈ ಹಣದ ಓಟದಲ್ಲಿ ಹಿರಿಯರ ಹಿತವಚನಗಳು ಹಳತಾಗಿವೆ, ತಂದೆ-ತಾಯಿಗಳ ನಿಷ್ಕಲ್ಮಶ ಪ್ರೀತಿ ಹೊರೆಯಾಗಿ ಕಾಣುತ್ತಿದೆ. ಪ್ರೀತಿ ಯೆಂಬ ಅಮೃತಕ್ಕೆ ಹಣದ ವಿಷ ಬೆರೆತು, ರಕ್ತಸಂಬಂಧಗಳೂ ಇಂದು ವ್ಯವಹಾರದ ರೂಪ ಪಡೆದುಕೊಳ್ಳುತ್ತಿರುವುದು ಮನಸ್ಸು ಸೋರುತ್ತಿರುವುದಕ್ಕೆ ಸಾಕ್ಷಿ.
ನಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್ ಇಡೀ ಜಗತ್ತನ್ನೇ ಅಂಗೈಗೆ ತಂದಿದೆ ನಿಜ, ಆದರೆ ಹತ್ತಿರವಿರುವ ಮನುಷ್ಯರನ್ನು ದೂರ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಲೈಕ್‌ಗಳಿರಬಹುದು, ಆದರೆ ಕಣ್ಣೀರು ಒರೆಸಲು ಒಬ್ಬ ಆತ್ಮೀಯನೂ ಇರುವುದಿಲ್ಲ. ಹಬ್ಬ ಹರಿದಿನಗಳು ಈಗ ವಾಟ್ಸಪ್ ಸ್ಟೇಟಸ್‌ಗಳಿಗೆ ಸೀಮಿತವಾಗಿವೆ. ಪರಸ್ಪರರ ಕಣ್ಣಲ್ಲಿ ಕಣ್ಣಿಟ್ಟು ಮಾತಾಡುವ ಕ್ಷಣಗಳನ್ನು ಯಂತ್ರಗಳು ನುಂಗಿಹಾಕುತ್ತಿವೆ. ಈ ಯಾಂತ್ರಿಕತೆಯೇ ಮನಸ್ಸುಗಳ ನಡುವೆ ಶೀತಲ ಸಮರಕ್ಕೆ ಕಾರಣವಾಗಿದೆ.
ಮನಸ್ಸಿನ ಸೋರುವಿಕೆಯನ್ನು ತಡೆಯಲು ಇರುವ ಏಕೈಕ ಔಷಧ ಮನ್ನಿಸುವಿಕೆ. ಹಿಂದೆ ಸಣ್ಣಪುಟ್ಟ ಜಗಳ ಗಳಾದರೂ ಹಿರಿಯರು ಅದನ್ನು ಪ್ರೀತಿ ಯಿಂದ ಸರಿಪಡಿಸುತ್ತಿದ್ದರು. ಇಂದು ಪ್ರತಿಯೊಬ್ಬರಲ್ಲೂ ಅಹಂ ಎನ್ನುವುದು ಬೆಟ್ಟದಂತೆ ಬೆಳೆದಿದೆ. ನಾನೇ ಏಕೆ ತಗ್ಗಬೇಕು ಎಂಬ ಪ್ರಶ್ನೆ ಬಾಂಧವ್ಯದ ಬುಡಕ್ಕೆ ಕೊಡಲಿ ಏಟು ನೀಡುತ್ತಿದೆ. ಸೋಲುವಲ್ಲಿಯೇ ಸುಖವಿದೆ, ಕುಟುಂಬಕ್ಕಾಗಿ ಬಾಗು ವಲ್ಲಿಯೇ ಗೌರವವಿದೆ ಎಂಬ ಸತ್ಯವನ್ನು ಮರೆತು ನಾವು ಗೆಲುವಿನ ಬೆನ್ನತ್ತಿ ಸಂಬಂಧಗಳನ್ನು ಸೋಲಿಸುತ್ತಿದ್ದೇವೆ.
ಪರಿಪೂರ್ಣ ವ್ಯಕ್ತಿ ಈ ಜಗತ್ತಿನಲ್ಲಿ ಯಾರೂ ಇಲ್ಲ. ಕುಟುಂಬವೆಂದರೆ ಭಿನ್ನಾಭಿಪ್ರಾಯಗಳ ನಡುವೆಯೂ ಸಾಗುವ ಸುಂದರ ನೌಕೆ. ನಾವು ಇತರರ ಸಣ್ಣಪುಟ್ಟ ತಪ್ಪುಗಳನ್ನು ಮೆಚ್ಚುವುದನ್ನು, ಮರೆಯು ವುದನ್ನು ಕಲಿಯಬೇಕು. ಹಣ ಇಂದು ಬರುತ್ತದೆ ನಾಳೆ ಹೋಗುತ್ತದೆ, ಆದರೆ ಒಮ್ಮೆ ಕಳೆದುಕೊಂಡ ನಂಬಿಕೆ ಮರಳಿ ಬರದು. ಸಮಾಜದಲ್ಲಿ ನಮಗೆ ಸಿಗುವ ನಿಜವಾದ ಗೌರವ ನಮ್ಮ ಅಂತಸ್ತಿನಿಂದಲ್ಲ, ನಾವು ಇತರರ ಕಣ್ಣೀರಿಗೆ ನೀಡುವ ಬೆಲೆಯಿಂದ ಮಾತ್ರ ಸಾಧ್ಯ.
ಮನಸ್ಸು ಸೋರಲು ಬಿಡಬೇಡಿ. ಕಿಟಕಿಗಳಿಲ್ಲದ ಮನೆಯಲ್ಲಿ ವಾಸಿಸ ಬಹುದು, ಆದರೆ ಪ್ರೀತಿಯಿಲ್ಲದ ಮನೆ ಯಲ್ಲಿ ಬದುಕು ನರಕವಾಗುತ್ತದೆ. ನಿಮ್ಮ ಮನೆಯ ಛಾವಣಿ ಎಷ್ಟೇ ಭದ್ರವಾಗಿದ್ದರೂ, ಪ್ರೀತಿಯೆಂಬ ಸಿಮೆಂಟ್ ಹಚ್ಚದಿದ್ದರೆ ಮನಸ್ಸುಗಳ ನಡುವೆ ಬಿರುಕು ಗ್ಯಾರಂಟಿ. ಹೊತ್ತು ಮೀರುವ ಮುನ್ನ ಹಿರಿಯರ ಕೈಹಿಡಿಯೋಣ, ಮಕ್ಕಳೊಂದಿಗೆ ನಗೋಣ. ನೆನಪಿಡಿ, ಬದುಕಿನ ಸಂಜೆಯ ವೇಳೆಯಲ್ಲಿ ನಮ್ಮ ಜೊತೆಗಿರುವುದು ನಾವು ಗಳಿಸಿದ ಹಣವಲ್ಲ, ನಾವು ಉಳಿಸಿಕೊಂಡ ಸಂಬಂಧ ಗಳ ಬೆಚ್ಚನೆಯ ನೆನಪುಗಳು ಮಾತ್ರ.
ಡಾ.ಸುಧಾಕರ. ಜಿ. ಲಕ್ಕವಳ್ಳಿ.

Leave a Reply

Your email address will not be published. Required fields are marked *