೨೫೨ ಕೋಟಿ ವೆಚ್ಚದಲ್ಲಿ ಅಂತರ್ಜಲ ಚೇತನ ಯೋಜನೆ: ಮೇ ೬ರಂದು ಚಾಲನೆ

535

ಹೊಸನಾವಿಕ ಪತ್ರಿಕೆಗೆ ಚಂದಾದಾರರಾಗಲು ಮತ್ತು ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ: +91 948 248 2182, e-mail:hosanavika@gmail.com

ಶಿವಮೊಗ್ಗ: ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯಲ್ಲಿ ಅಂತರ್ ಜಲವನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆಯ `ಅಂತರ್ಜಲ ಚೇತನ ಯೋಜನೆಗೆ ಮೇ ೬ರಂದು ಚಾಲನೆ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಯೋಜನೆಯ ವಿವರಗಳನ್ನು ನೀಡಿದ ಅವರು, ಪ್ರಥಮ ಹಂತದಲ್ಲಿ ಒಟ್ಟು ೯ಜಿಲ್ಲೆಗಳಲ್ಲಿ ಅಂತರ್ಜಲ ಚೇತನ ಯೋಜನೆ ಅನುಷ್ಟಾನಗೊಳಿಸಲಾಗುತ್ತಿದ್ದು, ಶಿವಮೆಗ್ಗ ಜಿಲ್ಲೆಯಿಂದ ಚಾಲನೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಸುಮಾರು ೨೩ಕೆರೆಗಳಿದ್ದು, ಅವುಗಳ ಪೈಕಿ ೫೩೦೦ಕೆರೆಗಳು ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಇವೆ. ಶ್ರೀ ರವಿಶಂಕರ್ ಗುರೂಜಿ ಅವರ ಸಂಸ್ಥೆಯ ಸಹಯೋಗದಲ್ಲಿ ಯೋಜನೆ ಅನುಷ್ಟಾನಗೊಳಿಸಲಾಗುತ್ತಿದ್ದು, ಸಂಸ್ಥೆಯು ತಾಂತ್ರಿಕ ನೆರವು ಹಾಗೂ ಮೇಲುಸ್ತುವಾರಿಯನ್ನು ವಹಿಸಿಕೊಳ್ಳಲಿದೆ ಎಂದು ಹೇಳಿದರು.
ಒಂದು ವರ್ಷದ ಅವಧಿಯಲ್ಲಿ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಟಾನಗೊಳಿಸಲಾಗುವುದು. ಯೋಜನೆಯಡಿ ಜಿಲ್ಲೆಯ ೧೬೫೦ ಗ್ರಾಮಗಳ ವ್ಯಾಪ್ತಿಯಲ್ಲಿ ೩೪೫ ಕಿರು ಜಲಾನಯನಗಳ ಸುಮಾರು ೫ಸಾವಿರ ಚದರ ಕಿಮಿ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗುವ ಗುರಿ ಹೊಂದಲಾಗಿದೆ. ಜಿಲ್ಲೆಯ ಎಲ್ಲಾ ೨೭೧ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಈ ಅಂತರ್ಜಲ ಸಂರಕ್ಷಣೆ ಯೋಜನೆ ಅನುಷ್ಟಾನಗೊಳಿಸಲಾಗುತ್ತಿದ್ದು, ಸುಮಾರು ೮.೮೨ ಲಕ್ಷ ಜನರಿಗೆ ಸದುಪಯೋಗವಾಗಲಿದೆ ಎಂದು ಸಚಿವರು ತಿಳಿಸಿದರು.
ಕಾಮಗಾರಿ ವಿವರ: ಯೋಜನೆಯಡಿ ೧೬೨೫೫ ಬೋಲ್ಡರ್ ಚೆಕ್ (ಕಲ್ಲುಗುಂಡು ತಡೆ) ನಿರ್ಮಾಣ, ೧೫೯೪೮ ಇಂಗುಬಾವಿ, ೩೦೭ ಇಂಗು ಕೊಳವೆ, ೨೨೧ ಕೆರೆ ಹೊಂಡ ಸೇರಿದಂತೆ ಒಟ್ಟು ೩೨೭೩೧ ಕಾಮಗಾರಿಗಳಿವೆ. ಶಿವಮೆಗ್ಗ ತಾಲೂಕು ೪೭೭೫, ತೀರ್ಥಹಳ್ಳಿ ೭೩೫೧, ಭದ್ರಾವತಿ ೩೧೨೮, ಸೊರಬ ೬೭೬೫, ಶಿಕಾರಿಪುರ ೫೬೧೦, ಹೊಸನಗರ ೨೧೬೫, ಸಾಗರ ೨೯೩೭ ಕಾಮಗಾರಿ ಅನುಷ್ಟಾನಗೊಳಿಸಲಾ ಗುವುದು. ಮೇ ತಿಂಗಳಲ್ಲಿ ೪ಸಾವಿರ ಕಾಮಗಾರಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಏಕಕಾಲದಲ್ಲಿ ಉದ್ಘಾಟನೆ: ಮೇ ೬ರಂದು ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತ್‌ಗಳಲ್ಲಿ ಯೋಜನೆಗೆ ಚಾಲನೆ ದೊರೆಯಲಿದೆ. ಶಿವಮೊಗ್ಗ ತಾಲೂಕಿನ ಸೂಗೂರಿನಲ್ಲಿ ಜಿಲ್ಲಾಮಟ್ಟದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ತೀರ್ಥಹಳ್ಳಿ ತಾಲೂಕಿನ ಅರಗ, ಭದ್ರಾವತಿ ತಾಲೂಕಿನ ದೊಡ್ಡೇರಿ, ಸೊರಬ ತಾಲೂಕಿನ ಬಾರಂಗಿ, ಶಿಕಾರಿಪುರ ತಾಲೂಕಿನ ತರಳಘಟ್ಟ, ಹೊಸನಗರ ತಾಲೂಕಿನ ಮೇಲಿನ ಬೆಸಿಗೆ, ಸಾಗರ ತಾಲೂಕಿನ ಕೆಳದಿಯಲ್ಲಿ ತಾಲೂಕು ಮಟ್ಟದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಹೇಳಿದರು.
ಜಲಾಮೃತ ಯೋಜನೆ: ಶಿವಮೊಗ್ಗ ನಗರದಲ್ಲಿ ೭೦ಕೆರೆಗಳಿದ್ದು, ಅವುಗಳ ಪೈಕಿ ೨೫ಕೆರೆಗಳ ಅಭಿವೃದ್ಧಿಯನ್ನು ಜಲಾಮೃತ ಯೋಜನೆಯಡಿ ಕೈಗೊಳ್ಳಲಾಗುವುದು. ಇದಕ್ಕಾಗಿ ಸಣ್ಣ ನೀರಾವರಿ ಯೋಜನೆಯಡಿ ೧೬ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ವೇದ ವಿಜಯಕುಮಾರ್, ಜಿಪಂ ಸಿಇಓ ವೈಶಾಲಿ, ಯೋಜನಾ ನಿರ್ದೇಶಕ ವೀರಾಪುರ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ನಾರಾಯಣ ಗಂಗೊಳ್ಳಿ ಉಪಸ್ಥಿತರಿದ್ದರು.