೨೧೯.೭೦ ಲಕ್ಷ ರೂ.ಗಳ ಉಳಿತಾಯ ಬಜೆಟ್ ಮಂಡಿಸಿದ ಶಿವಮೊಗ್ಗ ಮಹಾನಗರಪಾಲಿಕೆ ಅಭಿವೃದ್ಧಿ ಕಾಮಗಾರಿಗಳು- ಹಸಿರೀಕರಣಕ್ಕೆ ಒತ್ತು

510

ಶಿವಮೊಗ್ಗ:  ಶಿವಮೊಗ್ಗ ಮಹಾನಗರ ಪಾಲಿಕೆ ವಿಪಕ್ಷ ಸದಸ್ಯರ ಪ್ರತಿಭಟನೆಯ ನಡುವೆಯೂ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ವಿಶ್ವನಾಥ್ ಅವರು ೨೦೨೦-೨೧ನೇ ಸಾಲಿಗೆ ೨೧೯.೭೦ ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು.

ಆಸ್ತಿ ತೆರಿಗೆಯಿಂದ ೨೦೦೪.೭೬ ಲಕ್ಷರೂ, ಒಳಚರಂಡಿ ಶುಲ್ಕ  ಮತ್ತು ಸಂಪರ್ಕ ಶುಲ್ಕ ೧೫೦ ಲಕ್ಷರೂ, ಉದ್ದಮೆ ಪರವಾನಿಗೆಯಿಂದ ೧೨೦ಲಕ್ಷ, ಅಭಿವೃದ್ಧಿ ಶುಲ್ಕ ೪೨೫ಲಕ್ಷ,  ವಾಣಿಜ್ಯ ಮಳಿಗೆಗಳ ಬಾಡಿಗೆ ೪೫೦ಲಕ್ಷ, ಕಟ್ಟಡ ಪರವಾನಿಗೆಯಿಂದ ೨೮೬ ಲಕ್ಷರೂ., ನೀರು ಸರಬರಾಜು ವಸೂಲಿ ೯೫೫ ಲಕ್ಷರೂ,  ರಾಜಸ್ವ ಅನುದಾನದಿಂದ ೪೯೨೩ ಲಕ್ಷರೂ, ಪಾಲಿಕೆಗೆ ಬರುವ ವಿವಿಧ ನಿರ್ಧಿಷ್ಟ ಅನುದಾನಗಳಿಂದ ಒಟ್ಟು ೫೪೪೪ಲಕ್ಷರೂ. ಆದಾಯ ನಿರೀಕ್ಷಿಸಲಾಗಿದೆ ಎಂದು ವಿವರಿಸಿದರು.

ಇಂದಿನ ಬಜೆಟ್ ಪ್ರಕಾರ ಪ್ರಮುಖ ವೆಚ್ಚಗಳು: ನೌಕರರ ವೇತನಕ್ಕಾಗಿ ೨೩೦೩ ಲಕ್ಷರೂ, ವಿದ್ಯುತ್ ಬಿಲ್ ಪಾವತಿಗೆ ೧೭೧೭ ಲಕ್ಷ, ಘನತ್ಯಾಜ್ಯ ನಿರ್ವಹಣೆ ೧೯೪೭ ಲಕ್ಷ, ನೀರು ಸರಬರಾಜು ನಿರ್ವಹಣೆ ೬೦೦ಲಕ್ಷರೂ,  ಒಳಚರಂಡಿ ೨೦೦ಲಕ್ಷ, ಬೀದಿ ದೀಪ ನಿರ್ವಹಣೆ ೩೪೫ ಲಕ್ಷರೂ. ಇಂದಿರಾ ಕ್ಯಾಂಟೀನ್ ನಿರ್ವಹಣಾ ವೆಚ್ಚ ೧೫೦ ಲಕ್ಷ, ಹೊಸ ಯೋಜನೆಗಳಿಗಾಗಿ ೩೦೫ಲಕ್ಷರೂ. ಒಟ್ಟು ರಾಜಸ್ವ ವೆಚ್ಚಗಳು ೯೫೬೭.೨೪ ಲಕ್ಷರೂ. ಎಂದು ಅಂದಾಜಿಸಲಾಗಿದೆ.

ಅಭಿವೃದ್ಧಿ ಕಾಮಗಾರಿ ವೆಚ್ಚ: ಕಟ್ಟಡಕ್ಕಾಗಿ ೧೫೫೦ಲಕ್ಷ, ರಸ್ತೆ ೩೨೦೦ಲಕ್ಷ, ಫುಟ್‌ಪಾತ್ ಪಾರ್ಕಿಂಗ್‌ಗೆ ೭೦೦ಲಕ್ಷ, ಬೀದಿ ದೀಪ ವ್ಯವಸ್ಥೆಗೆ ೫೩೦ಲಕ್ಷ, ಚರಂಡಿ ನಿರ್ಮಾಣಕ್ಕೆ  ೩,೪೦೦ಲಕ್ಷ, ಸ್ಮಶಾನಗಳ ಅಭಿವೃದ್ಧಿಗೆ ೭೫ಲಕ್ಷ, ಕಸಾಯಿ ಖಾನೆ ಅಭಿವೃದ್ಧಿಗೆ ೨೫ ಲಕ್ಷ, ನೀರು ಸರಬರಾಜಿಗೆ ೩೭೩ಲಕ್ಷ, ಘನತ್ಯಾಜ್ಯ ವಸ್ತು ವಿಲೇವಾರಿಗೆ ೨೦೨೫ಲಕ್ಷ, ಪಾಲಿಕೆ ಆಸ್ತಿಗಳಿಗೆ ಫೆನ್ಸಿಂಗ್ ಅಳವಡಿಕೆಗೆ ೧೧೦ಲಕ್ಷರೂ. ಒಟ್ಟು ಕಾಮಗಾರಿ ವೆಚ್ಚಗಳು ೧೬೫೯೮.೬೨ ಲಕ್ಷರೂಗಳು ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ಪಾಲಿಕೆ ಬಜೆಟ್‌ನಲ್ಲಿ ಪ್ರಮುಖವಾಗಿ ಹಸಿರು ಶಿವಮೊಗ್ಗ ರೂಪಿಸುವ ಘೋಷಣೆಯನ್ನು ಮೇಯರ್ ಸುವರ್ಣ ಶಂಕರ್ ಮಾಡಿದ್ದಾರೆ.

ಪಾಲಿಕೆ ವ್ಯಾಪ್ತಿಯ ಕೆರೆಗಳಿಗೆ ಕಾಯಕಲ್ಪ ನೀಡಲಾಗುವುದು. ಪೌರ ಕಾರ್ಮಿಕರ ಕಲ್ಯಾಣ ಯೋಜನೆಗಳ ಜಾರಿ ಮಾಡಲಾಗುವುದು. ಪಾಸ್ಟಿಕ್ ಮುಕ್ತ ಶಿವಮೊಗ್ಗ ಮಾಡಲು ಅರಿವು ಮೂಡಿಸಲು ೧೦ ಲಕ್ಷರೂ. ಮೀಸಲಿಡಲಾಗಿದೆ.

ಸ್ತ್ರೀ ಸಬಲೀಕರಣಕ್ಕೆ ವಿಶ್ವ ಮಹಿಳಾ ದಿನಾಚರಣೆಯಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ೩ ಮಹಿಳೆಯರಿಗೆ ತಲಾ ೧೦ ಸಾವಿರ ನಗದು ಬಹುಮಾನದೊಂದಿಗೆ ಕೆಳದಿ ಚನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ನಗರದ ವಿವಿಧೆಡೆ ನೂತನ ವಾಣಿಜ್ಯ ಸಂಕಿರ್ಣ: ನಗರದ ಗಾಂಧಿಬಜಾರ್, ಸೀಗೇಹಟ್ಟಿ, ಮಂಡಕ್ಕಿ ಭಟ್ಟಿ, ವಿನಾಯಕ ಟಾಕೀಸ್ ಪಕ್ಕದ ಪಾಲಿಕೆ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ೧೦ಕೋಟಿರೂ. ಮೀಸಲಿರಿಸಲಾಗಿದೆ.

ನಗರ ರಸ್ತೆಗಳ ಅಭಿವೃದ್ಧಿ: ನಗರದ ಸರ್ಕಾರಿ ಬಸ್ ನಿಲ್ದಾಣದಿಂದ ಮಲವಗೊಪ್ಪದ ಪಾಲಿಕೆ ಗಡಿವರೆಗೆ ಬಿ.ಹೆಚ್. ರಸ್ತೆಯನ್ನು ಅಭಿವೃದ್ಧಿ ಪಡಿಸಲವು ೫೦ಲಕ್ಷ  ರೂ. ಮೀಸಲಿಡಲಾಗಿದೆ.

ಸಂತೆ ಮೈದಾನ ಅಭಿವೃದ್ಧಿ: ಕೆಎಸ್‌ಆರ್‌ಟಿಸಿ ಬಸ್ ಡಿಪ್ಪೋ ಪಕ್ಕದ ಪಾಲಿಕೆ ಜಾಗದಲ್ಲಿ ಸುಸರ್ಜಿತ ಸಂತೆ ಮೈದಾನ ಅಭಿವೃದ್ಧಿ ಪಡಿಸಲು ೩ಕೋಟಿರೂ. ಮೀಸಲಿಟ್ಟಿದ್ದಾರೆ ಎಂದ ಅವರು, ಡಾ. ಅಬ್ದುಲ್ ಕಲಾಂ ವಿಶಿಷ್ಟ ಚೇತನ ಕ್ಷೇಮಾಭಿವೃದ್ಧಿ,  ಸಮಾಜದ ದುರ್ಬಲರಿಗಾಗಿ ಪಂಡಿತ್ ದಿನ ದಯಾಳು ಹೃದಯ ಸ್ಪರ್ಶಿ ಯೋಜನೆ, ಸ್ಲಂ ಸ್ವಚ್ಛತೆಗೆ ಅಜಿತ್‌ಶ್ರೀ ಸೇವಾ ಯೋಜನೆ, ಬಾಲವಿಕಾಸ ಕೇಂದ್ರಗಳ ಚಟುವಟಿಕೆಗೆ ಲವಕುಶ ಮಕ್ಕಳ ಕಲ್ಯಾಣ ಯೋಜನೆ, ಡಾ. ಸಿದ್ದಗಂಗಾ ಶ್ರೀಗಳ ಹೆಸರಿನಲ್ಲಿ  ಶಾಲೆಗಳ ಅಭಿವೃದ್ಧಿ ಯೋಜನೆ ಬಜೆಟ್‌ನ ಪ್ರಮುಖ ಅಂಶಗಳಾಗಿವೆ ಎಂದರು.

ಈ ಬಾರಿ ಜಿಲ್ಲಾ  ಪತ್ರಕರ್ತರ  ಮನವಿ ಮೇರೆಗೆ ಜಿಲ್ಲೆಯ ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ೧೫ಲಕ್ಷರೂಗಳ ವಿಶೇಷ ನಿಧಿಯನ್ನು ಪಾಲಿಕೆ ಬಜೆಟ್‌ನಲ್ಲಿ ಮೀಸಲಿರಿಸಲಾಗಿದೆ.

ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ಅವರು ಸಭೆಯಲ್ಲಿ ಮಾತನಾಡಿ, ಈ ಬಾರಿ ಅತ್ಯುತ್ತಮ ಹಾಗೂ ಜನಪರ ವಾದ ಬಜೆಟ್‌ನ್ನು ನೀಡಲಾಗಿದೆ ಎಂದರು.

ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರುಳೀಧರ್, ಆಯುಕ್ತ ಚಿದಾನಂದ ವಟಾರೆ ಉಪಸ್ಥಿತರಿದ್ದರು.