೧೫೦೦ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

392

ಸಾಗರ : ರಾಜ್ಯ ಸರ್ಕಾರ ಒಂದು ವರ್ಷವನ್ನು ಅನೇಕ ಸವಾಲುಗಳ ನಡುವೆ ಅತ್ಯಂತ ಯಶಸ್ವಿಯಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಪೂರೈಸಿದೆ. ಈ ಹಿನ್ನೆಲೆಯಲ್ಲಿ ನಗರ ಬಿಜೆಪಿ ಘಟಕ ಮತ್ತು ಹಿಂದುಳಿದ ಮೋರ್ಚಾ ವತಿಯಿಂದ ನಗರವ್ಯಾಪ್ತಿಯಲ್ಲಿ ಸುಮಾರು ೧೫೦೦ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್ ತಿಳಿಸಿದರು.
ಇಲ್ಲಿನ ವರದಹಳ್ಳಿ ರಸ್ತೆಯಲ್ಲಿರುವ ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯ ಆವರಣದಲ್ಲಿ ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ವತಿಯಿಂದ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ, ಹಿಂದುಳಿದ ವರ್ಗಗಳ ಹಾಸ್ಟೆಲ್ ಆವರಣದಲ್ಲಿ ನೆಡಲು ಸಸಿ ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು.
ನಗರಾದ್ಯಂತ ೩೧ ವಾರ್ಡ್‌ಗಳಲ್ಲಿ ನಗರ ಘಟಕ ಹಾಗೂ ವಿವಿಧ ಮೋರ್ಚಾ ವತಿಯಿಂದ ಸಸಿ ನೆಡುವ ಜೊತೆಗೆ ಸ್ಥಳೀಯರು ನೆಟ್ಟ ಗಿಡ ಸಂರಕ್ಷಣೆ ಮಾಡುವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಪ್ರತಿ ವಾರ್ಡ್ ನಲ್ಲಿ ಕನಿಷ್ಟ ೫೦ ಗಿಡ ನೆಟ್ಟು ಅದನ್ನು ಸಂರಕ್ಷಣೆ ಮಾಡುವ ಹೊಣೆಗಾರಿಕೆ ಕೆಲವರಿಗೆ ನೀಡಲಾಗಿದೆ. ಈಗಾಗಲೆ ೨೫ ವಾರ್ಡ್‌ಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್ ಆವರಣದಲ್ಲಿ ಸಹ ಗಿಡ ನೆಡುವ ಜೊತೆಗೆ ಅಧಿಕಾರಿಗಳಿಗೆ ಗಿಡವನ್ನು ಹಸ್ತಾಂತರ ಮಾಡಿ ಅವರನ್ನು ಸಹ ವನಮಹೋತ್ಸವ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿಂದುಳಿದ ವರ್ಗ ಮೋರ್ಚಾದ ನಗರ ಅಧ್ಯಕ್ಷ ಡಿ.ತುಕಾರಾಮ್, ಪ್ರಸ್ತುತ ದಿನಮಾನಗಳಲ್ಲಿ ಪರಿಸರ ನಾಶ ಹೆಚ್ಚುತ್ತಿದೆ. ರಾಜ್ಯ ಸರ್ಕಾರ ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿರುವ ಹಿನ್ನೆಲೆಯಲ್ಲಿ ಅದನ್ನು ಸ್ಮರಣೀಯಗೊಳಿಸಲು ಸಸಿ ನೆಡುವ ಕಾರ್ಯಕ್ರಮವನ್ನು ಹಿಂದುಳಿದ ವರ್ಗದ ಮೋರ್ಚಾ ವತಿಯಿಂದ ಬೇರೆಬೇರೆ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಪುಷ್ಪಲತಾ, ವಿದ್ಯಾರ್ಥಿ ನಿಲಯದ ಜಯಶೀಲ, ಬಿಜೆಪಿ ಪ್ರಮುಖರಾದ ಶ್ರೀಧರ್ ಜೋಗಿ, ಸಂತೋಷ್, ಪ್ರವೀಣ ಬೆಳಲಮಕ್ಕಿ, ಶ್ರೀರಾಮು, ಭಾವನಾ ಸಂತೋಷ್, ರಾಜೇಶ್ ಇನ್ನಿತರರು ಹಾಜರಿದ್ದರು.