ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ ೨೮೯ ಮಂದಿಗೆ ಕ್ವಾರೆಂಟೈನ್..

588

ಶಿವಮೊಗ್ಗ: ಕಳೆದೊಂದು ವಾರದ ಅವಧಿಯಲ್ಲಿ ಜಿಲ್ಲೆಗೆ ಹೊರ ರಾಜ್ಯಗಳಿಂದ ಅಗಮಿಸಿರುವ ೨೮೯ ಮಂದಿಯ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದ್ದಾರೆ.
ಇವರ ಪೈಕಿ ಕಳೆದ ಎರಡು ದಿನಗಳಲ್ಲಿ ವಿವಿಧ ೭ರಾಜ್ಯಗಳಿಂದ ಒಟ್ಟು ೧೪೮ಮಂದಿ ಜಿಲ್ಲೆಗೆ ಆಗಮಿಸಿದ್ದಾರೆ. ಇವರಲ್ಲಿ ತೆಲಂಗಾಣ ದಿಂದ ೧೩, ಕೇರಳದಿಂದ ೨, ಗೋವಾದಿಂದ ೭೩, ಮಹಾರಾಷ್ಟ್ರ ೧೨, ತಮಿಳುನಾಡು ೨೩, ರಾಜಸ್ತಾನ ೧೬, ಗುಜರಾತ್ ೯ಮಂದಿ ಇದ್ದಾರೆ.
ಜಿಲ್ಲೆಗೆ ಆಗಮಿಸುವ ಪ್ರತಿಯೊಬ್ಬರನ್ನೂ ಕುವೆಂಪು ವಿಶ್ವವಿದ್ಯಾಲಯದ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ಸಮಗ್ರವಾಗಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಅತಿ ಹೆಚ್ಚಿನ ಕರೋನಾ ಪ್ರಕರಣಗಳು ಕಂಡು ಬಂದಿರುವ ಹೈರಿಸ್ಕ್ ರಾಜ್ಯಗಳಿಂದ ಅಗಮಿಸಿರುವವರನ್ನು ಸಾಂಸ್ಥಿಕ ಕ್ವಾರೆಂಟೈನ್‌ಗೆ ಒಳಪಡಿಸಲಾಗುತ್ತಿದೆ ಎಂದರು.
ಇನ್ನುಳಿದ ರಾಜ್ಯಗಳಿಂದ ಆಗಮಿಸಿದವರನ್ನು ಹೋಂ ಕ್ವಾರೆಂಟೈನ್‌ಗೆ ಕಳುಹಿಸಲಾಗಿದ್ದು, ಪ್ರತಿಯೊಬ್ಬರ ಮೇಲೆ ನಿರಂತರ ನಿಗಾ ಇರಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಎಚ್ಚರಿಕೆ: ಹೊರ ರಾಜ್ಯಗಳಿಂದ ಆಗಮಿಸಿರುವವರನ್ನು ಸೂಕ್ತ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಅವರ ಆರೋಗ್ಯ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ಇರಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಬೇರೆ ರಾಜ್ಯಗಳಿಂದ ಅಗಮಿಸಿರುವವರ ಕುರಿತು ಸಾಮಾಜಿಕ ಜಲತಾಣಗಳಲ್ಲಿ ಗೊಂದಲವನ್ನು ಹುಟ್ಟಿಸುವಂತಹ, ಸಮಾಜದಲ್ಲಿ ಒಡಕನ್ನು ಉಂಟು ಮಾಡುವಂತಹ, ವದಂತಿಗಳನ್ನು ಹರಡುವ ಸಂದೇಶಗಳನ್ನು ಹಾಕುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.