ಹೊರರಾಜ್ಯದ ಅಸಂಘಟಿತ ಕಾರ್ಮಿಕರಿಗೆ ನೆರವು : ಆಯನೂರು

504

ಶಿವಮೊಗ್ಗ: ಬಿಹಾರ, ಆಂದ್ರ, ಮಹಾರಾಷ್ಟ್ರ ಮತ್ತಿತರ ನೆರೆಯ ರಾಜ್ಯಗಳಿಂದ ಕೆಲಸವನ್ನರಸಿ ಕುಂಸಿ ಸಮೀಪದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿಸಲಾಗುತ್ತಿರುವ ಮೊರಾರ್ಜಿ ದೇಸಾಯಿ ವಸತಿಶಾಲಾ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಭಾಗವಹಿಸಿದ್ದ ಅಸಂಘಟಿತ ಕಾರ್ಮಿಕರಿಗೆ ಗೋಧಿಹಿಟ್ಟು, ಬೇಳೆ, ಆಲೂಗೆಡ್ಡೆ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ಮಜ್ದೂರ್ ಸಂಘದ ಸದಸ್ಯ ಸದಾಶಿವ ಅವರು ಮಾತನಾಡಿ, ಭಾರತೀಯ ಮಜ್ದೂರ್ ಸಂಘದ ಬಿಹಾರ ಪ್ರತಿನಿಧಿಗಳಿಂದ ಮಾಹಿತಿ ದೊರೆತ ನಂತರ ಕೊರೋನ ಸೋಂಕು ಹರಡುವುದನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್‍ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಉದ್ಯೋಗವಿಲ್ಲದೆ ಜೀವನ ನಿರ್ವಹಣೆ ದುಸ್ತರವಾಗಿದೆ. ವಾಸ್ತವ ಸಂಗತಿಯನ್ನು ಅರಿತÀ ಸ್ಥಳೀಯ ಮಜ್ದೂರು ಸಂಘದ ಪದಾಧಿಕಾರಿಗಳು, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಸ್ಥಳೀಯ ಪ್ರತಿನಿಧಿಗಳ ಸಹಕಾರದೊಂದಿಗೆ ಅವರ ರಕ್ಷಣೆಗೆ ಮುಂದಾಗಿರುವುದಾಗಿ ತಿಳಿಸಿದರು.
ಕಾರ್ಮಿಕರು ಕೆಲಸವನ್ನು ಮಾಡಲಾಗದೆ, ಸ್ವಂತ ಊರುಗಳಿಗೂ ತೆರಳಲಾಗದೆ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಇದರಿಂದಾಗಿ ವಲಸೆ ಕಾರ್ಮಿಕರ ಹಾಗೂ ಅವರ ಕುಟುಂಬದ ಅವಲಂಬಿತರ ಜೀವನ ನಿರ್ವಹಣೆ ಇನ್ನಷ್ಟು ಚಿಂತಾಜನಕವಾಗಿದೆ. ಇಂತಹ ಸಂದರ್ಭದಲ್ಲಿ ಮಾನವೀಯ ನೆಲೆಯಲ್ಲಿ ಅವರನ್ನು ಮನೆಯ ಸದಸ್ಯರಂತೆ ನೋಡಿಕೊಳ್ಳುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ಮಾತನಾಡಿ, ಕರ್ನಾಟಕದ ಬಳ್ಳಾರಿ-ಹೊಸಪೇಟೆ, ಬಿಹಾರ, ಪಶ್ಚಿಮಬಂಗಾಳ ಸೇರಿದಂತೆ ಕೆಲವು ಹೊರರಾಜ್ಯಗಳ ನೂರಾರು ಕುಟುಂಬಗಳ ಅಸಂಘಟಿತ ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಕಟ್ಟಡದ ಗುತ್ತಿಗೆದಾರರು ಅವರ ರಕ್ಷಣೆಯ ಜವಾಬ್ದಾರಿ ಹೊರಬೇಕು. ಅಲ್ಲದೇ ಅವರು ಸುರಕ್ಷಿತವಾಗಿ ಊರು ತಲುಪುವವರೆಗೆ ನೋಡಿಕೊಳ್ಳಬೇಕು. ಅದಕ್ಕಾಗಿ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ ಎಂದವರು ನುಡಿದರು.
ಇಲ್ಲಿರುವ ಕಾರ್ಮಿಕರು ಸೋಂಕಿಗೆ ಒಳಗಾಗದಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಅಪರಿಚಿತರೊಂದಿಗೆ ವ್ಯವಹರಿಸುವ ಮುನ್ನ ಎಚ್ಚರಿಕೆಯಿಂದಿರಬೇಕು. ಕಾರ್ಮಿಕರ ರಕ್ಷಣೆಗಾಗಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಈಗಾಗಲೆ ಸೂಚನೆ ನೀಡಲಾಗಿದೆ ಎಂದವರು ನುಡಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಅಧಿಕಾರಿ ಎಂ.ಪಿ.ವಿಶ್ವನಾಥ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕುಮಾರ್, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಚಂದ್ರಶೇಖರ್, ಮುಖಂಡರಾದ ಬಸವರಾಜ್, ಮಹೇಂದ್ರನಾಥ್, ಕುಪೇಂದ್ರ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ರೆಡ್‍ಕ್ರಾಸ್ ಸಂಸ್ಥೆಯ ಡಾ|| ದಿನೇಶ್ ಅವರು ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.