ಹೆಚ್.ಎಂ.ಸಿ.ರಿಂದ ಕೊರೋನ ನಿಧಿಗೆ ತಿಂಗಳ ಮಾಸಾಶನ

522

ಶಿವಮೊಗ್ಗ : ಮಾಜಿ ಶಾಸಕರುಗಳ ಸಂಘದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಹಾಗೂ ಕಾಂಗ್ರೇಸ್ ಮುಖಂಡ ಹೆಚ್.ಎಂ. ಚಂದ್ರಶೇಖರಪ್ಪ ಅವರು ಇಂದು ಪೊಲೀಸ್ ಕಲ್ಯಾಣ ನಿಧಿಗೆ ತಮ್ಮ ಒಂದು ತಿಂಗಳ ಮಾಸಾಶನ 45,000/-ಗಳ ಚೆಕ್ಕನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರಿಗೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೋನ ಮಹಾಮಾರಿಯಿಂದಾಗಿ ಮನುಕುಲ ನಲಗುತ್ತಿದೆ. ವಿಶ್ವದಾದ್ಯಂತ ಅಪಾರ ಪ್ರಮಾಣದ ಸಾವು-ನೋವುಗಳು ಸಂಭವಿಸುತ್ತಿವೆ. ಈ ಸೋಂಕಿನಿಂದ ಜನ ಮನೆಯಲ್ಲಿರುವಂತಾಗಿದೆ. ಈ ಜನರನ್ನು ಸುರಕ್ಷಿತವಾಗಿರಿಸುವಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಇನ್ನೂ ಅನೇಕ ಇಲಾಖೆಗಳ ಅಧಿಕಾರಿ-ಸಿಬ್ಬಂಧಿಗಳು ಕಾರ್ಯನಿರ್ವಹಿಸುತ್ತಿರುವುದು ಮೆಚ್ಚುವಂತದ್ದಾಗಿದೆ ಎಂದರು.
ಈ ಸೋಂಕನ್ನು ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ಅದರ ನಿಯಂತ್ರಣಕ್ಕಾಗಿ ಅನೇಕ ಪರಿಹಾರ ಕ್ರಮವನ್ನು ಕೈಗೊಂಡಿದೆ. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂಧಿಗಳು ಹಗಲಿರುಳೆನ್ನದೆ ಕಾರ್ಯನಿರ್ವಹಿಸುತ್ತಿರುವುದು ಎಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಅದಕ್ಕಾಗಿ ಅವರ ಕಲ್ಯಾಣಕ್ಕಾಗಿ ಸ್ಥಾಪಿಸಿರುವ ಕಲ್ಯಾಣ ನಿಧಿಗೆ ಸಹಾಯ ನೀಡುತ್ತಿರುವುದಾಗಿ ತಿಳಿಸಿದರು.
ಇದೇ ರೀತಿಯಲ್ಲಿ ರಾಜ್ಯದ ಎಲ್ಲಾ ಮಾಜಿ ಶಾಸಕರು, ಅವರ ಕುಟುಂಬಗಳ ಅವಲಂಬಿತರು ತಮ್ಮ ಒಂದು ತಿಂಗಳ ಮಾಸಾಶನವನ್ನು ಸರ್ಕಾರಕ್ಕೆ ಅಥವಾ ಪೊಲೀಸ್ ಕಲ್ಯಾಣ ನಿಧಿಗೆ ನೀಡುವ ಮೂಲಕ ಮಾನವೀಯತೆ ಮೆರೆಯುವಂತೆ ಕೋರಲಾಗಿದೆ. ಎಲ್ಲಾ ಮಾಜಿ ಶಾಸಕರು ಸಹಕಾರ ನೀಡುವ ಭರವಸೆ ಹೊಂದಿರುವುದಾಗಿ ಅವರು ನುಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಕೆ.ಶಾಂತರಾಜು ಅವರು ಮಾತನಾಡಿ, ಈ ರೀತಿಯಲ್ಲಿ ಪೊಲೀಸ್ ಇಲಾಖೆಯ ಸೇವೆಯನ್ನು ಗುರುತಿಸಿ, ಪ್ರೋತ್ಸಾಹಿಸುತ್ತಿರುವುದು ನಮ್ಮೆಲ್ಲರಿಗೆ ಹೆಚ್ಚಿನ ಉತ್ಸಾಹ ತಂದಿದೆ. ಇದೆ ರೀತಿಯಲ್ಲಿ ಇಲಾಖೆಯ ಸಿಬ್ಬಂಧಿಗಳ ಉತ್ತಮ ಕಾರ್ಯವನ್ನು ಗಮನಿಸಿ, ಪ್ರೋತ್ಸಾಹಿಸಿದಲ್ಲಿ ಇನ್ನಷ್ಟು ಉತ್ತಮ ಕಾರ್ಯ ಮಾಡಲು ಸಾಧ್ಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ವಿಪಕ್ಷ ನಾಯಕ ಯೋಗೀಶ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಡಾ| ಶೇಖರ್ ತಕ್ಕಣ್ಣನವರ್  ಉಪಸ್ಥಿತರಿದ್ದರು.