ಹಿರಿಯ ನಟ ರಿಷಿ ಕಪೂರ್ ಯುಗಾಂತ್ಯ..

605

ಮುಂಬೈ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ, ನಿರ್ಮಾಪಕ ಮತ್ತು ನಿರ್ದೇಶಕ ರಿಷಿ ಕಪೂರ್ (೬೭) ಅವರು ಇಂದು ಬೆಳಗ್ಗೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಮೃತರು ಪತ್ನಿ ಮತ್ತು ನಟಿ ನೀತು ಕಪೂರ್ ಹಾಗೂ ಮಗ ಸೂಪರ್‌ಸ್ಟಾರ್ ರಣಬೀರ್ ಕಪೂರ್ ಮತ್ತು ಪುತ್ರಿ ರಿದ್ದಿಮಾ ಕಪೂರ್ ಹಾಗೂ ಅಸಂಖ್ಯಾತ ಅಭಿಮಾನಿಗಳನ್ನು ಅಗಲಿದ್ದಾರೆ.
ನಿನ್ನೆ ಅದ್ಭುತ ನಟ ಇರ್ಫಾನ್ ಖಾನ್(೫೩) ವಿಧಿವಶದಿಂದ ಹಿಂದಿ ಚಿತ್ರರಂಗ ಆಘಾತಕ್ಕೆ ಒಳಗಾಗಿರುವಾಗಲೇ ಎಲ್ಲರ ಅಚ್ಚುಮೆಚ್ಚಿನ ಅಭಿನೇತ್ರ ರಿಷಿ ಕಪೂರ್ ಅವರ ನಿಧನ ಬಾಲಿವುಡ್‌ನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದಿದ್ದ ರಿಷಿ ಕಪೂರ್ ನಿನ್ನೆ ತೀವ್ರ ಅನಾರೋಗ್ಯಕ್ಕೆ ಒಳಗಾದರು. ತಕ್ಷಣ ಅವರನ್ನು ಮುಂಬೈನ ಎಚ್.ಎನ್. ರಿಲಾಯನ್ಸ್ ಹಾಸ್ಪಿಟಲ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಕೊನೆಯುಸಿರೆಳೆದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಬಹುತೇಕ ಒಂದು ವರ್ಷ ಕಾಲ ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಕಳೆದ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಹಿಂದಿರುಗಿದ್ದರು. ಫೆಬ್ರವರಿಯಲ್ಲಿ ಮತ್ತೆ ಅಸ್ವಸ್ಥರಾಗಿದ್ದ ಅವರನ್ನು ಎರಡು ಬಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು.
ತಮ್ಮ ಪುತ್ರ ರಣಬೀರ್ ಕಪೂರ್ ಮತ್ತು ಖ್ಯಾತ ನಟಿ ಅಲಿಯಾ ಭಟ್ ಅವರ ವಿವಾಹ ನೆರವೇರಿಸಲು ಅವರು ಇಚ್ಚಿಸಿದ್ದರು. ಆದರೆ ಮಗನ ಮದುವೆ ನೋಡುವ ಭಾಗ್ಯ ಅವರಿಗೆ ಲಭಿಸಲಿಲ್ಲ.
ಮೋಸ್ಟ್ ಹ್ಯಾಂಡ್‌ಸಮ್ ನಟ: ರಿಷಿ ಕಪೂರ್ ಹಿಂದಿ ಚಿತ್ರರಂಗ ಕಂಡ ಅತ್ಯಂತ ಸ್ಫುರದ್ರೂಪಿ ನಟರಲ್ಲಿ ಒಬ್ಬರು. ಚಿತ್ರರಂಗದಲ್ಲೇ ಗಿನ್ನಿಸ್ ವಿಶ್ವ ದಾಖಲೆ ಸೃಷ್ಟಿಸಿರುವ ಕಪೂರ್ ಕುಟುಂಬದ ಅದ್ಭುತ ಪ್ರತಿಭೆ ರಿಷಿ.
೪ನೇ ಸೆಪ್ಟೆಂಬರ್ ೧೯೫೨ರಲ್ಲಿ ಜನಿಸಿದ ರಿಷಿಗೆ ಅಭಿನಯ ಮತ್ತು ಪ್ರತಿಭೆ ರಕ್ತಗತ ಬಳುವಳಿ, ಇವರು ೧೯೭೦ರಲ್ಲಿ ತಂದೆ ರಾಜ್‌ಕಪೂರ್ ನಿರ್ಮಿಸಿದ ಸೂಪರ್‌ಹಿಟ್ ಮೇರಾ ನಾಮ್ ಜೋಕರ್ ಚಿತ್ರದಲ್ಲಿ ಬಾಲ ನಟನಾಗಿ ಹಿಂದಿ ಚಿತ್ರರಂಗ ಪ್ರವೇಶಿಸಿದರು. ಮೊದಲ ಚಿತ್ರದಲ್ಲೇ ಉತ್ತಮ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಹೆಗ್ಗಳಿಕೆ ಇವರದು. ಅಲ್ಲಿಂದ ಅವರು ೫೦ ವರ್ಷಗಳ ಕಾಲ ಅಂದರೆ ೨೦೨೦ರವರೆಗೂ ಸಿನಿಮಾ ರಂಗದಲ್ಲಿ ಸಕ್ರಿಯವಾಗಿದ್ದರು.
೧೯೭೩ರಲ್ಲಿ ರಿಷಿ ಮತ್ತು ಡಿಂಪಲ್ ಕಪಾಡಿಯಾ ಅಭಿನಯದ ಬಾಬಿ ಸಿನಿಮಾ ರಿಷಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಈ ಚಿತ್ರದ ಅಭಿನಯಕ್ಕಾಗಿ ಫಿಲಂ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಹಿಂದಿ ಚಿತ್ರರಂಗದಲ್ಲಿ ರೊಮ್ಯಾಂಟಿಕ್ ಹೀರೋ ಎಂದೇ ಹೆಸರಾಗಿದ್ದ ಅವರು ಬಹುತೇಕ ಎಲ್ಲ ನಟ-ನಟಿಯ ರೊಂದಿಗೆ ಅಭಿನಯಿಸಿದ್ದಾರೆ. ಅಲ್ಲದೆ, ಅನೇಕ ಸಿನಿಮಾಗಳಿಗೆ ನಿರ್ಮಾಪಕ ನಿರ್ದೇಶಕರಾಗಿಯೂ ಕೆಲಸ ಮಾಡಿದ ಹೆಗ್ಗಳಿಕೆ ಇವರದ್ದು.
ಲೈಲಾ ಮಜ್ನು, ಕಬಿ ಕಬಿ, ಹಮ್ ಕಿಸಿಸೆ ಕಮ್ ನಹಿ, ಅಮರ್ ಅಕ್ಬರ್ ಆಂತೋನಿ, ಸರ್ಗಂ, ದೋ ಪ್ರೇಮಿ, ಕರ್ಝ್, ನಸೀಬ್, ಪ್ರೇಮ್ ರೋಗ್, ಸಾಗರ್, ದೋಸ್ತಿ- ದುಷ್ಮನ್, ನಗೀನಾ, ಚಾಂದಿನಿ, ದೀವಾನಾ, ದಾಮಿನಿ, ಯಾರಾನಾ ಸೇರಿದಂತೆ ೧೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಬಿಗ್-ಬಿ ಅಮಿತಾಬ್ ಬಚ್ಚನ್ ಜೊತೆ ಅನೇಕ ಸೂಪರ್‌ಹಿಟ್ ಸಿನಿಮಾಗಳಲ್ಲಿ ರಿಷಿ ನಟಿಸಿದ್ದರು.
ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿದ್ದ ರಿಷಿ ಕಪೂರ್ ಅವರ ನಿಧನಕ್ಕೆ ಪ್ರಧಾನಿ ಮೋದಿ, ಖ್ಯಾತ ನಟ ಅಮಿತಾಬ್ ಬಚ್ಚನ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು, ಚಿತ್ರ ತಾರೆಯರು, ನಿರ್ದೇಶಕರು, ನಿರ್ಮಾಪಕರು, ಮತ್ತು ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ.
ಹಿಂದಿ ಚಿತ್ರರಂಗದ ಪ್ರಖ್ಯಾತ ನಟ ರಾಜ್‌ಕಪೂರ್ ಅವರ ಪುತ್ರರಾದ ರಿಷಿ ಕಪೂರ್ ಅವರು ಹಿಂದಿ ಚಿತ್ರರಂಗದ ಪೃಥ್ವಿರಾಜ್ ಕಪೂರ್ ಅವರ ಮೊಮ್ಮಗ.