ಹಾಲಿ- ಮಾಜಿ ಎಂಎಲ್‌ಸಿಗಳ ಹೆಗಲೇರಿದ ಕಿಲ್ಲರ್ ಕೊರೋನಾ

476

ಶಿವಮೊಗ್ಗ: ಕೊರೋನ ಆರ್ಭಟ ಜಿಲ್ಲೆಯಲ್ಲಿ ಮುಂದುವರೆದಿದ್ದು, ಪ್ರತಿಷ್ಠಿತ ವ್ಯಕ್ತಿಗಳಿಗೆ ಪಕ್ಷಾತೀತವಾಗಿ ಕರೋನ ಕಾಡುತ್ತಿದೆ. ಅಧಿಕಾರಿಗಳು ಕರೋನದಿಂದ ಬಾಧಿತರಾಗಿದ್ದಾರೆ.
ಪ್ರಮುಖವಾಗಿ ಶಿಕಾರಿಪುರ ಕ್ಷೇತ್ರದ ಶಾಸಕರು ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೋವಿಡ್‌ನಿಂದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆ ರಾತ್ರಿ ಮುಖ್ಯಮಂತ್ರಿಗಳಿಗೆ ಕರೋನ ಬಂದಿರುವುದು ಧೃಡವಾಗುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿದೆ. ಇವರೊಂದಿಗೆ ಮುಖ್ಯಮಂತ್ರಿಗಳ ಪುತ್ರಿ ಪದ್ಮಾವತಿ ಅವರಿಗೂ ಸಹ ಕರೋನ ಪಾಸಿಟಿವ್ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಜಿ ವಿಧಾನಪರಿಷತ್ ಸದಸ್ಯ ಮತ್ತೂರಿನ ಎಂ.ಬಿ. ಭಾನುಪ್ರಕಾಶ್ ಅವರಿಗೆ ಕರೋನ ಪಾಸಿಟಿವ್ ಬಂದಿದ್ದು, ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಅವರಿಗೆ ಸಹ ಕರೋನ ಪಾಸಿಟಿವ್ ಬಂದಿದ್ದು ಬಹುತೇಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಾಧ್ಯತೆ ಇದೆ.
ಯಾರಿಗಾದರೂ ಕರೋನ ಧೃಡಪಟ್ಟರೆ ಅವರು ಮೊದಲು ಜಿಲ್ಲೆಯ ಅಧಿಕೃತ ಕರೋನ ಆಸ್ಪತ್ರೆ ಯಲ್ಲಿ ಟ್ರಯಲ್ ಮಾಡಿಸಿ ನಂತರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿದೆ.
ಇದರಂತೆ ಈಗಾಗಲೇ ಮಹಾನಗರ ಪಾಲಿಕೆ ಆಯುಕ್ತರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.
ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೂ ಕೋವಿಡ್ ಬಂದಿದ್ದು, ಇವರಿಗೆ ಗಾಜನೂರಿನ ಕರೋನ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಡಿಡಿಪಿಯು ಅವರಿಗೆ ಕರೋನ ಬಂದ ಹಿನ್ನೆಲೆ ಡಿಡಿಪಿಯು ಕಛೇರಿ ಯನ್ನು ಸ್ಯಾನಿಟೈಜ್ ಮಾಡಿ ೨ ದಿನ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗುತ್ತಿದೆ.
ಜೆಡಿಎಸ್ ನಗರ ಕಾರ್ಯಾಧ್ಯಕ್ಷ ಸೀಗೆಹಟ್ಟಿಯ ಸಿದ್ದಪ್ಪ ಅವರಿಗೆ ಕರೋನ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ನಗರದ ಜೆಡಿಎಸ್ ಕಛೇರಿಯನ್ನು ಸ್ಯಾನಿಟೈಜ್ ಮಾಡಲಾಗುತ್ತಿದೆ. ೩ ದಿನಗಳವರೆಗೆ ಕಛೇರಿ ಪ್ರವೇಶ ನಿಷೇಧಿಸಲಾಗಿದೆ.ಜಿಲ್ಲೆಯಲ್ಲಿ ಕಳೆದ ೧ ವಾರದಿಂದ ಪ್ರತಿದಿನ ನೂರಕ್ಕೂ ಹೆಚ್ಚು ಕರೋನ ಪಾಸಿಟಿವ್ ಬರುತ್ತಿದ್ದು, ನಿನ್ನೆ ಮಾತ್ರ ೩೦ ಪಾಸಿಟಿವ್ ಇತ್ತು ಹಾಗೂ ೧ ಸಾವು ಸಹ ಸಂಭವಿಸಿದೆ.
ಪೊಲೀಸ್ ಅಧಿಕಾರಿಗಳು, ವೈದ್ಯರು ಹಾಗೂ ನರ್ಸಗಳು ಸೇರಿ ದಂತೆ ಜಿಲ್ಲೆಯ ಕರೋನ ವಾರಿಯರ್ಸ್ ಗಳಿಗೂ ಕರೋನ ಬಾಧಿಸಿದೆ. ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಮಾಸ್ಕ್ ಬಳಕೆಯೊಂದೆ ಇದರಿಂದ ದೂರ ಉಳಿಯುವ ಮದ್ದಾಗಿದೆ.