ಹಲ್ಲೆ ಆರೋಪಿಗಳನ್ನು ಗಡಿಪಾರಿಗೆ ವಿಹೆಚ್‌ಪಿ-ಬಜರಂಗದಳ ಆಗ್ರಹ

536

ಶಿವಮೊಗ್ಗ: ಬಜರಂಗದಳ ನಗರ ಸಹಸಂಚಾಲಕ ನಾಗೇಶ್ ಹಾಗೂ ಗೋಪಾಳದಲ್ಲಿ ನಡೆದ ಹಿಂದು ಯುವಕರ ಮೇಲೆ ಕೆಲ ಗೂಂಡಾಗಳು ನಡೆಸಿದ ಮಾರಣಾಂತಿಕ ಹಲ್ಲೆ ಖಂಡನೀಯ ಎಂದು ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ತಿಳಿಸಿದೆ.
ಡಿ.೩ರಂದು ಮುಂಜಾನೆ ಬಜರಂಗ ದಳದ ಸಹಸಂಚಾಲಕ ನಾಗೇಶ್ ಮೇಲೆ ಏಕಾಏಕಿ ನಾಲ್ಕು ಜನ ಮುಸುಕುಧಾರಿ ಗೂಂಡಾಗಳು ಮಾರಕಾಸ್ತ್ರ ಗಳಿಂದ ಹಲ್ಲೆ ಮಾಡಿದ್ದು ಪ್ರಾಯೋಜಿತ ಕೃತ್ಯವಾಗಿದೆ ಎಂದು ಬಜರಂಗದಳದ ದಕ್ಷಿಣ ಪ್ರಾಂತೀಯ ರಾಜ್ಯ ಸಂಚಾಲಕ ಕೆ.ಜೆ.ಸುನಿಲ್ ಇಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಪ್ರಾಯೋಜಿತ ಸಂಚಿನ ಮುಖಾಂತರ ಹಿಂದು ಸಂಘಟನೆ ಕಾರ್ಯಕರ್ತರನ್ನು ಗುರಿಮಾಡಿ ಹಿಂದುಗಳಲ್ಲಿ ಹಾಗೂ ಹಿಂದು ಸಂಘಟನೆ ಕಾರ್ಯಕರ್ತರನ್ನು ಅಸ್ತಿರ ಗೊಳಿಸಲು ನಡೆಸಿರುವ ದಾಳಿಯೇ ಒಂದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ ಎಂದರು.
ತಹಶೀಲ್ದಾರ್ ಬಿಂಬಿಸಿರುವಂತೆ ಇದು ಕೋಮುಗಲಭೆಯಲ್ಲ ಎಂದಿರುವ ಅವರು, ಜವಾಬ್ದಾರಿ ಯುತ ಸ್ಥಾನದಲ್ಲಿರುವ ಸರ್ಕಾರಿ ಅಧಿಕಾರಿಯೇ ಇಂತಹ ಹೇಳಿಕೆ ನೀಡಿದರೆ ನ್ಯಾಯಕ್ಕೆ ಭಂಗ ತರುತ್ತದೆ. ಆದ್ದರಿಂದ ಇವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಒಂದು ಕೋಮಿಗೆ ಸೇರಿದ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಆದರೆ ನಮ್ಮ ಕಾರ್ಯಕರ್ತರು ಯಾವುದೇ ಗಲಭೆಯಲ್ಲಿ ಭಾಗವಹಿ ಸಿಲ್ಲ ಎಂದರು. ಇಷ್ಟೆಲ್ಲ ಹೇಯ ಕೃತ್ಯ ಘಟನೆಗಳು ಹಿಂದು ಸಮಾಜದ ಮೇಲೆ ನಡೆದಿದ್ದರೂ ಜಿಲ್ಲಾಡಳಿತದ ಗಮನಕ್ಕೆ ಬಂದರೂ ಕಠಿಣ ಕಾನೂನುಕ್ರಮ ಜರುಗಿಸದೇ ಸಮಸ್ಯೆಯು ಇನ್ನು ಉಲ್ಬಣಗೊಳ್ಳಲು ಅಧಿಕಾರಿಗಳು ಕಾರಣಕರ್ತರಾಗಿದ್ದಾರೆ. ಈ ಹಿಂದೆಯೂ ಅನೇಕ ವರ್ಷಗಳಿಂದ ಈ ರೀತಿಯ ಘಟನೆಗಳು ಪುನರಾವರ್ತನೆಯಾಗದಂತೆ ಎಚ್ಚೆತ್ತುಕೊಂಡು ಜಿಲ್ಲಾಡಳಿತದ ಮೇಲೆ ವಿಶ್ವಾಸ ಬರುವಂತೆ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ನಾಗೇಶ್ ನಿಷ್ಠಾವಂತ ಬಜರಂಗದಳದ ಕಾರ್ಯಕರ್ತ ನಾಗಿದ್ದು, ಈತನ ಕೊಲೆಗೆ ಯತ್ನಿಸಿರುವುದು ಖಂಡನೀಯ. ಜಿಲ್ಲೆಯಲ್ಲಿ ವ್ಯವಸ್ಥಿತ ಸಂಚಿನಿಂದ ನಿರಂತರವಾಗಿ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಪೊಲೀಸ್ ಇಲಾಖೆ ಮೌನವಹಿಸಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ನಾಗೇಶ್ ಹಾಗೂ ಗೋಪಾಳದಲ್ಲಿ ಹಿಂದು ಯುವಕರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಗೂಂಡಾಕಾಯ್ದೆಯನ್ವಯ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಇಂತಹ ಘಟನೆಗಳು ನಡೆದರೆ ನಾವೇನು ಕೈಕಟ್ಟಿ ಕುಳಿತುಕೊಳ್ಳಲು ಆಗುವುದಿಲ್ಲ. ತಕ್ಕ ಪಾಠ ಕಲಿಸಬೇಕಾಗುತ್ತದೆ. ಪೊಲೀಸ್ ಇಲಾಖೆ ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಆರೋಪಿಗಳನ್ನು ಬಂಧಿಸದಿದ್ದಲ್ಲಿ ಹೋರಾಟವನ್ನು ರಾಜ್ಯಾದ್ಯಂತ ವಿಸ್ತರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಹೆಚ್‌ಪಿ ಜಿಲ್ಲಾಧ್ಯಕ್ಷ ರಮೇಶ್‌ಬಾಬು ಜಾದವ್, ನಗರ ಗೌರವಾಧ್ಯಕ್ಷ ವಿನೋದ್ ಕುಮಾರ್ ಜೈನ್, ನಗರಾಧ್ಯಕ್ಷ ಸತೀಶ್‌ಮುಂಚೆಮನೆ, ಬಜರಂಗದಳ ಜಿಲ್ಲಾ ಸಂಚಾಲಕ ನಾರಾಯಣ್ ಜಿ.ವರ್ಣೇಕರ್, ಸಹಸಂಚಾಲಕ ರಾಜೇಶ್‌ಗೌಡ ಇನ್ನಿತರರಿದ್ದರು.