ಸ್ಮಾರ್ಟ್ ಸಿಟಿ: ಅವೈeನಿಕ ಕಾಮಗಾರಿ

432

ಶಿವಮೊಗ್ಗ: ಸ್ಮಾರ್ಟ್‌ಸಿಟಿ ವತಿಯಿಂದ ನಗರದ ಹಲವು ವಾರ್ಡ್‌ಗಳಲ್ಲಿ ಅವೈಜ್ಞಾನಿಕ ಮತ್ತು ಅಪಾಯಕಾರಿ ಕಾಮಗಾರಿಗಳ ಲೋಪದೋಷವನ್ನು ಸರಿಪಡಿಸಲು ಭ್ರಷ್ಟಾಚಾರ ವಿರುದ್ದ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಇಂದು ಅಣ್ಣಾಹಜಾರೆ ಹೋರಾಟ ಸಮಿತಿ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿತು.
ನಗರದ ಆದಿಚುಂಚನಗಿರಿ ಶಾಲೆ ಮುಂಭಾಗದಲ್ಲಿ ಸ್ಮಾರ್ಟ್‌ಸಿಟಿಯಿಂದ ಚರಂಡಿ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಇದು ದುರುದ್ದೇಶವಾಗಿ ಮಾಡಲಾಗಿದೆ. ಇದಕ್ಕೆ ನಮ್ಮ ಸಂಘಟನೆ ವಿರೋಧ ವ್ಯಕ್ತಪಡಿಸಿದ್ದರೂ ಸಹ ಶಾಲೆಯ ಕಾಂಪೌಂಡ್ ಪಕ್ಕದಲ್ಲಿ ವೈಜ್ಞಾನಿಕವಾಗಿ ಮಾಡುವ ಚರಂಡಿಯನ್ನು ೧೫ ಅಡಿಗಿಂತ ಹೆಚ್ಚು ಅಂತರದಲ್ಲಿ ರಸ್ತೆ ಪಕ್ಕದಲ್ಲಿ ಮಾಡಿ ಸಾರ್ವಜನಿಕರು ಓಡಾಡುವ ರಸ್ತೆಯನ್ನು ಕಿರಿದು ಮಾಡಲಾಗಿದೆ ಎಂದು ದೂರಿದ್ದಾರೆ.
ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಿ ಶಾಲೆಗೆ ಅನುಗುಣ ವಾಗಿ ಕಾರ್ಪೇಟ್ ಹಾಕುವ ರೀತಿ ಇಂಟರ್‌ಲಾಕ್ ಪೇವರ್‍ಸ್ ಹಾಕಿ ಅನುಕೂಲ ಮಾಡಲಾಗಿದೆ. ಇದನ್ನು ನಮ್ಮ ಸಮಿತಿ ಖಂಡಿಸುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಅನಾಹುತಕ್ಕೆ ಅವಕಾಶ ಕೊಡದ ರೀತಿ ಕಾಮಗಾರಿ ಮಾಡಬೇಕು ಎಂದು ಸಮಿತಿ ಸದಸ್ಯರು ಒತ್ತಾಯಿಸಿದರು.
ಅಲ್ಲದೇ ಲಕ್ಷ್ಮಿಚಿತ್ರಮಂದಿರದಿಂದ ಆಲ್ಕೊಳ ಸರ್ಕಲ್ ಮಾರ್ಗವಾಗಿ ಗೋಪಾಳದಿಂದ ಎನ್.ಟಿ.ರಸ್ತೆ ವರೆಗೂ ೯೦ ಕೋಟಿ ರೂ.ಗಳ ವೆಚ್ಚದಲ್ಲಿ ಚರಂಡಿ, ಫುಟ್‌ಪಾತ್ ಹಾಗೂ ಸೈಕಲ್ ಟ್ರ್ಯಾಕ್ ಕಾಮಗಾರಿ ನಡೆಯುತ್ತಿದೆ. ಈ ಬಗ್ಗೆ ಇರುವಂತಹ ಲೋಪಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದರೂ ಬೇಜವಾಬ್ದಾರಿ ತೋರಲಾಗುತ್ತಿದೆ. ಸೈಕಲ್ ಟ್ರ್ಯಾಕ್ ಮಾಡುವ ಬದಲು ವಾಹನಗಳ ಓಡಾಟ ಹಾಗೂ ರಾಜಮಾರ್ಗಗಳಲ್ಲಿ ವಾಹನ ನಿಲುಗಡೆಗೆ ಹೆಚ್ಚು ಮಹತ್ವ ನೀಡಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.
ಕರಿಯಣ್ಣ ಬಿಲ್ಡಿಂಗ್‌ನಿಂದ ಸವಿ ಬೇಕರಿಯವರೆಗೆ ಸೈಕಲ್ ಟ್ರ್ಯಾಕ್ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು, ಸಾರ್ವಜನಿಕರು ವಿಧಿಯಿಲ್ಲದೇ ಟ್ರ್ಯಾಕ್ ಮೇಲೆಯೇ ವಾಹನಗಳನ್ನು ನಿಲ್ಲಿಸಬೇಕಾದ ಅನಿವಾರ್ಯವಾಗಿದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದ್ದು ಈ ಕೂಡಲೇ ಸೈಕಲ್ ಟ್ರ್ಯಾಕ್ ಕಾಮಗಾರಿ ನಿಲ್ಲಿಸಿ ವಾಹನಗಳ ನಿಲುಗಡೆಗೆ ಒತ್ತು ಕೊಡುವಂತೆ ಒತ್ತಾಯಿಸಿದ್ದಾರೆ.
ಸಮಿತಿಯ ಪ್ರಮುಖರಾದ ಅಶೋಕ್ ಯಾದವ್, ಡಾ. ಎನ್.ಎಲ್. ನಾಯಕ್, ಡಾ. ಚಿಕ್ಕಸ್ವಾಮಿ, ಶಿವಕುಮಾರ್ ಕಸೆಟ್ಟಿ, ಎಂ.ಎನ್.ಸುಬ್ರಮಣ್ಯ, ಮನೋಹರ ಇನ್ನಿತರರಿದ್ದರು.